ಸಾಂಪ್ರದಾಯಿಕ ಪೂಜೆ-ಇಚ್ಛಾಪೂರ್ತಿಗೆ ಶಕ್ತಿಸ್ರೋತ ಅದರೊಂದಿಗೆ ನಿಮ್ಮ ಸಂಚಿತವನ್ನು ದಹಿಸಿರಿ....
This text was machine-transcribed from the printed book and may contain errors. Select the words and choose “Report a mistake”.
ಪೂಜೆ ಎಂಬುದು ಒಂದು ಸಂಪ್ರದಾಯದ ಆಚರಣೆ. ನಿಮಗೆ ಯಾವಾಗಲೇ ಆಗಲಿ, ಕಷ್ಟ ಬಂದಾಗ, ಆವಶ್ಯಕವಾದ 'ಕ್ಲಿಕ್' (ಸಾಫಲ್ಯ) ತಾನೇ ತಾನಾಗಿ ಬರಲು, ಇಂದಿನವರೆವಿಗೂ ನಿಮ್ಮಲ್ಲಿ ಉಂಟಾದ ಎಲ್ಲ 'ಕ್ಲಿಕ್'ಗಳನ್ನೂ ಪ್ರತಿದಿನವೂ ಸ್ಮರಿಸಿಕೊಳ್ಳುವುದೇ ಪೂಜೆಯಲ್ಲದೆ, ಇನ್ನೇನೂ ಅಲ್ಲ.
ಗುರುಗಳು ಬೋಧಿಸುವಾಗ ಅದು ಬೋಧನೆಯೊಂದೇ ಆಗಿರುವುದಿಲ್ಲ, ಅದೊಂದು ಗುರುತರವಾದ ಅನುಭವವಾಗಿರುತ್ತದೆ. ನೀವು ಅವರಿಂದ ಪಡೆದ ದೀಕ್ಷೆಯನ್ನು ಪ್ರಯೋಗಿಸದಿದ್ದರೆ, ಹಾಗೂ ಅವರಿಂದ ಪಡೆದ ಆ ಶಾಸ್ತ್ರ-ಶಸ್ತ್ರಗಳನ್ನು ಮತ್ತೆ ಮತ್ತೆ ಉಪಯೋಗಿಸದಿದ್ದರೆ ಅವುಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಅವುಗಳನ್ನು ಮತ್ತೆ ಸ್ಮರಿಸಿಕೊಳ್ಳಲೂ ಆಗಲಾರದು. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಇದು.
ಉದಾಹರಣೆಗೆ, ನಿಮ್ಮ ಬಳಿ ಒಂದು ಮಂಚವಿದೆ ಎನ್ನೋಣ. ನೀವು ಅದನ್ನು ಎರಡು ವರ್ಷ ಉಪಯೋಗಿಸದಿದ್ದರೆ, ಮಂಚವು ಉಪಯೋಗಕ್ಕೆ ಬಾರದೇ ಹೋಗುವುದಿಲ್ಲ ಅಥವಾ ಅದೃಶ್ಯವಾಗುವುದಿಲ್ಲ. ಆದರೆ, ನಿಮಗೆ ಅನುಗ್ರಹಿಸಿದ
ಜ್ಞಾನ ಹಾಗೂ ದೀಕ್ಷೆಗಳನ್ನು ನೀವು ಉಪಯೋಗಿಸದೇ ಹೋದರೆ ಅವು ನಿಮ್ಮ ಮಲಗುವ ಕೋಣೆಯಲ್ಲಿ ನಿಮ್ಮ ಉಪಯೋಗಕ್ಕಾಗಿ ಕುಳಿತಿರುವುದಿಲ್ಲ. ಇಲ್ಲ! ಅವು ಸುಮ್ಮನೆ ಮಾಯವಾಗುವುವು, ಅಷ್ಟೆ.
ಹಾಗಾದರೆ, ನಿಮ್ಮಲ್ಲಾದ ಎಲ್ಲಾ ಕ್ಲಿಕ್ಗಳನ್ನೂ ನೀವು ಪ್ರತಿದಿನವೂ ಹೇಗೆ ಸ್ಮರಿಸಿಕೊಳ್ಳುವಿರಿ? ಪ್ರತಿದಿನವೂ ಕುಳಿತುಕೊಂಡು, ನಿಮ್ಮಲ್ಲಾದ ಎಲ್ಲಾ ಕ್ಲಿಕ್ಗಳನ್ನೂ ಸ್ಮರಿಸಿಕೊಳ್ಳುವುದೇ ಪೂಜೆ ಅಥವಾ ಸಂಪ್ರದಾಯ ಎನ್ನುವುದು. ಈ ಲಕ್ಷ್ಯವನ್ನಿಟ್ಟುಕೊಂಡೇ ಪೂಜೆಗಳನ್ನು ರೂಪಿಸಿರುವುದು.
ಅಪ್ರಯತ್ನವಾಗಿ, ಪ್ರತಿದಿನವೂ, ನಿಮಗೆ ಬೇಕೋ ಬೇಡವೋ ನೀವು ಸಾಂಪ್ರದಾಯಿಕವಾಗಿ ಕುಳಿತಾಗ, ದೀಕ್ಷೆಯು, ಹಾಗೂ ಗುರುಗಳೊಂದಿಗಾದ ಅನುಭವಗಳನ್ನು ಸ್ಮರಿಸಿಕೊಳ್ಳುವಿರಿ. ಪ್ರತಿದಿನದ ಸಂಪ್ರದಾಯವು ನಿಮ್ಮನ್ನು ಪರಿಶುದ್ಧವಾದ ಪ್ರಜ್ಞೆಗೆ ಕೊಂಡೊಯ್ಯುತ್ತದೆ. ಸಂಸ್ಕಾರಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳಲಾರಂಭಿಸುತ್ತವೆ. ನಿಮ್ಮ ಹುಟ್ಟಿನೊಂದಿಗೆ ಬಂದ ಸಂಸ್ಕಾರಗಳು ಯಾವಾಗ ನಿಮ್ಮ ಮೇಲಿನ ಶಕ್ತಿಯನ್ನು ಕಳೆದುಕೊಳ್ಳಲಾರಂಭಿಸುತ್ತವೆಯೋ ಆಗ ಹೊಸ ಸಂಸ್ಕಾರಗಳ ಸೇರ್ಪಡೆ ನಿಲ್ಲುತ್ತದೆ. ಸೇರ್ಪಡೆಯೂ ನಿಂತು, ನಿಮ್ಮಲ್ಲಿ ಇರುವ ಕರ್ಮಗಳ ಶಕ್ತಿಯೂ ಇಲ್ಲದೇ ಹೋದಾಗ, ನಿಮ್ಮನ್ನು ಉನ್ನತ ಪ್ರಜ್ಞಾವಸ್ಥೆಯ ವಲಯಕ್ಕೆ ಪುನಃ ಪುನಃ ತರುವ ಗುರುವು ನೀವು ದೇಹವನ್ನು ಬಿಡುವಾಗ ಪ್ರತ್ಯಕ್ಷವಾಗಿ, ನಿಮ್ಮ ಸಂಚಿತವನ್ನೂ ದಹಿಸಿಬಿಡುತ್ತಾನೆ.
ನಿಮ್ಮ ಸಂಚಿತಕರ್ಮದ ಬ್ಯಾಂಕಿನೊಂದಿಗೆ ನೀವು ನೇರವಾಗಿ ವ್ಯವಹರಿಸಲಾರಿರಿ ಎಂಬುದನ್ನೂ ತಿಳಿಯಿರಿ. ಸಂಚಿತವು ದಹಿಸಿಹೋಗಲು, ಗುರುಕೃಪೆಯೊಂದೇ ದಾರಿ. ನಿಮ್ಮ ಸಂಚಿತವನ್ನು ದಹಿಸಲು ಗುರುಕೃಪೆಯು ಏನುಬೇಕಾದರೂ ಮಾಡಬಲ್ಲದು.
ಉದಾಹರಣೆಗೆ, ನಿಮ್ಮ ಮಗು ಒಂದು ಪುಟ್ಟ ಮನೆ ಕಟ್ಟಲು ಹೆಣಗಾಡುತ್ತಿರುವಾಗ ನೀವೇನು ಮಾಡುವಿರಿ? ‘ಸರಿ, ಒದ್ದಾಡಬೇಡ, ನಾನು ಕಟ್ಟಿಕೊಡುತ್ತೇನೆ’ ಎನ್ನುವಿರಿ. ಹಾಗೆಯೇ, ಒಬ್ಬ ಶಿಷ್ಯನು ತನ್ನ ಪ್ರಾರಬ್ಧ ಮತ್ತು ಆಗಾಮ್ಯ ಕರ್ಮಗಳನ್ನು ತೊರೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವಾಗ, ಗುರುಕೃಪೆಯು ತಾನೇ ತಾನಾಗಿ ನಡೆದು ಸಂಚಿತವೂ ಸಹ ತೊರೆದು ಹೋಗುತ್ತದೆ!
ಒಂದು ಬಹುಮುಖ್ಯವಾದ ಅಂಶವನ್ನು ತಿಳಿದುಕೊಳ್ಳಿರಿ, ಅದೇನೆಂದರೆ, ಇಲ್ಲಿ ಗುರುಕೃಪೆಯೆಂಬುದಾಗಿ ಮಾತನಾಡುತ್ತಿರುವುದು ನನ್ನ ಮೇಲೆ ಮಾತ್ರ ಆಧಾರಿತವಾಗಿಲ್ಲ. ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಸಾಧನೆ ಅಥವಾ ಧ್ಯಾನವನ್ನು ಯಾರೇ ಮಾಡಿದಾಗ್ಯೂ, ನನ್ನ ಹೊರತಾಗಿಯೂ, ಅವರ ಮೇಲೆ ಕೃಪೆಯಾಗುತ್ತದೆ! ಅದು ನನ್ನ ಮೇಲೆ ಆಧಾರಿತವಾಗಿಯೇ ಇಲ್ಲ, ಅದು ತನ್ನಷ್ಟಕ್ಕೆ ತಾನೇ ನಡೆಯುವ ಕೌಶಲ್ಯ.
ಅದು ಕೇವಲ ನಿಮ್ಮ ಗ್ರಹಿಕೆಯ ಮೇಲೆ ಆಧಾರಿತವಾಗಿದೆಯೇ ವಿನಃ ನನ್ನ ಮೇಲಲ್ಲವೆಂಬುದನ್ನು ಸ್ಪಷ್ಟವಾಗಿಸಿಕೊಳ್ಳಿರಿ. ನಾನೊಂದು ಸಾಗರದಂತೆ- ಯಾರು ಬೇಕಾದರೂ ಯಾವಗಾತ್ರದ ಪಾತ್ರೆಯಲ್ಲಿಯಾದರೂ ತುಂಬಿಸಿಕೊಂಡು ಹೋಗಲು ನಾನು ಸದಾ ಲಭ್ಯ. ನೀವು ಒಂದು ತೆಂಗಿನಚಿಪ್ಪನ್ನು ತಂದರೆ, ನನ್ನನ್ನು ಅಷ್ಟರಮಟ್ಟಿಗೆ ತೆಗೆದುಕೊಂಡು ಹೋಗಬಹುದು. ಇನ್ನು ಸ್ವಲ್ಪ ದೊಡ್ಡ ಪಾತ್ರೆಯನ್ನು ತಂದರೆ ಅದರಲ್ಲಿ ಹಿಡಿಸುವಷ್ಟು ತೆಗೆದುಕೊಂಡು ಹೋಗಬಹುದು. ಇನ್ನೂ ದೊಡ್ಡದಾದ ಪಾತ್ರೆಯನ್ನು ತಂದರೆ ಅದೂ ಹಿಡಿಸುವಷ್ಟು ತೆಗೆದುಕೊಂಡು ಹೋಗಬಹುದು. ಅದೇ, ನೀವು ಜಾಣರಾದರೆ, ಒಂದು ಕಾಲುವೆಯನ್ನೇ ತೋಡಿಕೊಳ್ಳಬಹುದು.
ಹೀಗೆ, ದೀಕ್ಷೆ ಅಥವಾ ಪೂಜೆ ಎಂದರೆ, ಎಲ್ಲಾ ದೀಕ್ಷೆಗಳ, ಗುರುಗಳೊಂದಿಗಾದ ಮಹಾನ್ ಅನುಭವಗಳ ಮತ್ತು ಅದೇ ಉನ್ನತವಾದ ಪ್ರಜ್ಞಾಸ್ಥಿತಿಗೆ ಮತ್ತೆ ಮತ್ತೆ ಹೋಗುವ ದೈನಂದಿನ ಸ್ಮರಣೆ. ಆ ಉನ್ನತವಾದ ಸ್ತರದಲ್ಲಿ ಪ್ರತಿದಿನವೂ ಇರಲು ತಯಾರಾದಾಗ, ಮುಂದಿನ 24 ಗಂಟೆಗಳ ಕಾಲ ನಡೆಯಲಿರುವ ಜೀವನದ ನಾಟಕಕ್ಕೆ ತಯಾರಾಗಿದ್ದೀರೆಂದೇ ಅರ್ಥ. ನಿಮಗೆ ಮುಂದಿನ 24 ಗಂಟೆಗಳಿಗೆ ಬೇಕಾಗುವ ಶಕ್ತಿ ಇರುತ್ತದೆ. ಪೂಜೆಯ ಹಿಂದಿರುವ ಕಾರಣವೇ ಇದು.