ಪರಿಚ್ಛೇದ - 2: ಜ್ಞಾನದ ಬೆಳವಣಿಗೆ
This text was machine-transcribed from the printed book and may contain errors. Select the words and choose “Report a mistake”.
ಆಧ್ಯಾತ್ಮಿಕ ಸಹಯೋಗ
ರಾಜಶೇಖರನು ಬೆಳೆಯುತ್ತಿದ್ದಂತೆ ಬಾಲ್ಯದಲ್ಲಿ ಆತನಲ್ಲಿದ್ದ ಸ್ವತಂತ್ರ ಮನೋಭಾವ, ತೀವ್ರವಾದ ಆಧ್ಯಾತ್ಮದ ದಾಹವಾಗಿ ಮಾರ್ಪಾಡಾಯಿತು. ಬಾಲಕನು ಸ್ವಭಾವತಃ ಒಂಟಿಯಾಗಿದ್ದರೂ ಯಾವಾಗಲೂ ಪಟ್ಟಣದ ಎಲ್ಲೆಯಿಂದ ದೂರವಿರುತ್ತಿದ್ದ ಪರಿಭ್ರಾಜಕ ಸಾಧು ಸತ್ಪುರುಷರೇ ಆತನ ಸಹಚರರಾಗಿದ್ದರು. ತಾನು ತಿನ್ನಲೆಂದು ತಂದಿದ್ದ ಆಹಾರವನ್ನು ಅವರೊಡನೆ ಹಂಚಿಕೊಂಡು ಗಂಟೆಗಟ್ಟಲೆ ಅವರ ಪರಿವ್ರಾಜಕ ಜೀವನದ ಅನುಭವಗಳನ್ನು ಕೇಳುತ್ತಾ ಕಾಲ ಕಳೆಯುತ್ತಿದ್ದನು. ಮನೆಯಲ್ಲಿ ಅಕ್ಕಿ ಮತ್ತು ಬೇಳೆ ಏನಾದರೂ ಇಲ್ಲದಿದ್ದಲ್ಲಿ ಕಾರಣ ಗೊತ್ತಿತ್ತು ಯಾರನ್ನು ದೂಷಿಸಬೇಕೆಂದು. ಈ ಸಾಧು ಸತ್ಪುರುಷರ ಸಹವಾಸ ಮತ್ತು ಅನುಭಾವಾಮೃತವನ್ನು ಸವಿದು ಮಧ್ಯರಾತ್ರಿ ಕಳೆದು ಮನೆಗೆ ಹಿಂತಿರುಗಿದ್ದರೂ ರಾಜಶೇಖರನ ತಂದೆ-ತಾಯಿಗಳು ಯಾವ ಒಂದು ಪ್ರಶ್ನೆಯನ್ನೂ ಕೇಳದೆ ಅವನ ದಾರಿಯಲ್ಲಿ ಅಡ್ಡಿ ಆತಂಕಪಡಿಸದೆ ಇದ್ದುದೇ ಅವರ ಒಂದು ವಿಶೇಷ ಗುಣ ಧರ್ಮ ಪ್ರಶಂಸನೀಯವಾದುದು.
ಈ ಸಾಧು ಸತ್ಪುರುಷರ ಆಧ್ಯಾತ್ಮಿಕ ಅನುಭವ, ಒಳನೋಟ, ಒಡನಾಟ, ರಾಜಶೇಖರನನ್ನು ಆಧ್ಯಾತ್ಮಿಕ ಪಿಪಾಸುವಾಗಿ ಪರಿವರ್ತನೆ ಮಾಡಿತು ಮತ್ತು ಆತನಲ್ಲಿ
ಮೊದಲೇ ಅಡಗಿದ್ದ ಆಧ್ಯಾತ್ಮಿಕ ಅಗ್ನಿಯನ್ನು ಪ್ರಜ್ವಲಿಸುವಂತೆ ಮಾಡಿತು. ಇದರ ಜೊತೆಗೆ ಆತ ಕೆಲವು ಪ್ರಾಪಂಚಿಕ ಪ್ರಚಲಿತ ವಿದ್ಯಮಾನಗಳನ್ನು ಆ ಸಾಧುಗಳಿಂದ ತಿಳಿದನು. ಭಾರತ ದೇಶದಲ್ಲಿ ಉತ್ತರ ರೈಲ್ವೆ ನಿಗಮವು ಸಾಧು ಸತ್ಪುರುಷರನ್ನು ಯಾವ ಹಣವಿಲ್ಲದೆಯೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೊಂಡೊಯ್ಯುವ ಸೇವೆಯನ್ನು ಮಾಡುತ್ತಿರುವುದನ್ನು ಅವರಿಂದ ಕೇಳಿ ತಿಳಿದುಕೊಂಡ. ಇದೇ ರಾಜಶೇಖರನಲ್ಲಿನ, ಪವಿತ್ರತಮ, ಆಧ್ಯಾತ್ಮಿಕ ಶಿಖರ ಪ್ರಾಯವೆನ್ನಿಸಿದ ಹಿಮಾಲಯದ ಕಡೆಗೆ ಹೊರಡುವ ಸಂಕಲ್ಪ ಮತ್ತು ದೃಢ ನಿರ್ಧಾರ ಮೂಡಿಸಿತು.
ಅಣ್ಣಾಮಲೈ ಸ್ವಾಮಿಗಳೊಡನೆ ಒಡನಾಟ
ಈ ಸಮಯದಲ್ಲಿ ರಮಣ ಮಹರ್ಷಿಗಳ ಶಿಷ್ಯರಾದ ಅಣ್ಣಾಮಲೈ ಸ್ವಾಮಿಗಳ ಸಂಪರ್ಕವಾಯಿತು. ರಾಜಶೇಖರನು ಅವರಿಂದ ಆಗಾಗ ಆಧ್ಯಾತ್ಮಿಕ ಜೀವನಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಮಾರ್ಗದರ್ಶನ ಹೊಂದುತ್ತಾ ರಮಣಾಶ್ರಮದಲ್ಲಿ ಧ್ಯಾನ ಮಾಡುತ್ತಿದ್ದನು. ಒಂದು ದಿನ ಅಣ್ಣಾಮಲೈ ಸ್ವಾಮಿಗಳು ತಮ್ಮ ಶಿಷ್ಯಂದಿರಿಗೆ ಈ ದೇಹ ಮಾತ್ರವೇ ನೋವನ್ನು ಅನುಭವಿಸುವುದು, ನೀವುಗಳು ದೇಹವಲ್ಲ; ಆತ್ಮ ನಿಮಗೆ ನೋವುಂಟಾಗುವುದಿಲ್ಲ ಎಂದು ಉಪದೇಶಿಸುತ್ತಿರುವುದನ್ನು ಕೇಳಿ ತಕ್ಷಣ ಮನೆಗೆ ಬಂದ ರಾಜಶೇಖರ ಅವರ ಉಪದೇಶದ ನಿಜಾರ್ಥ ತಿಳಿಯಲು ಒಂದು ಕ್ಷೌರದ ಕತ್ತಿಯನ್ನು ತೆಗೆದುಕೊಂಡು ತನ್ನ ಬಲದ ತೊಡೆಯನ್ನು ಸೀಳಿದ. ರಕ್ತದ ಬುಗ್ಗೆ ಚಿಮ್ಮಿತು. ತೀವ್ರವಾದ ನೋವನ್ನು ಅನುಭವಿಸುತ್ತಾ ದುಃಖವನ್ನು, ಸಂಕಟವನ್ನು ಪ್ರಕಟಪಡಿಸದೆ ಕುಸಿದು ಬಿದ್ದ. ವಿಷಯ ತಿಳಿದ ಆತನ ಕುಟುಂಬದವರು, ತೀವ್ರ ಆತಂಕಗೊಂಡು ಸ್ಥಳಕ್ಕೆ ಧಾವಿಸಿ ರಾಜಶೇಖರನನ್ನು ಮಧುರೈ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದರು. ಗಾಯವು ಮಾಯುತ್ತಿದ್ದಂತೆ, ರಾಜಶೇಖರ ಮನಸ್ಸಿನಲ್ಲಿರುವ ತೀವ್ರವಾದ ನೋವಿನಿಂದ ಮತ್ತು ಅಣ್ಣಾಮಲೈಸ್ವಾಮಿಗಳ ಮಾತಿನ ಅರ್ಥವನ್ನು ತಿಳಿಯಲೋಸುಗ, ದೇಹದ ಬಾಧೆಯಿದ್ದರೂ ಮತ್ತೆ ಸ್ವಾಮಿಗಳನ್ನು ಸಂದರ್ಶಿಸಿದ. ವಿಷಯ ತಿಳಿದ ಅಣ್ಣಾಮಲೈ ಸ್ವಾಮಿಗಳು ಗಹಗಹಿಸಿ ನಕ್ಕು, ಆತನಿಗೆ ತಮ್ಮ ಮಾತಿನ ಅರ್ಥವನ್ನು ವಿವರಿಸಿದರು. ಆತನಿಗೆ ಇದು ನಿನ್ನಲ್ಲಿ ನೀನು ಸ್ವತಃ ಅನುಭವಿಸುವುದಕ್ಕಾಗಿ ಇರುವ ವಿಚಾರ ಮಂಥನ. ಇದಕ್ಕಾಗಿ ನಿನಗೆ ಒಂದು ಧ್ಯಾನದೀಕ್ಷೆ ಕೊಡುವೆ. ಇದು ನಿನ್ನ ಮನಸ್ಸಿನ ಆಳ ಮತ್ತು ಆಲೋಚನೆಗಳ ಮೂಲವನ್ನು ತೋರ್ಪಡಿಸುತ್ತದೆ. ಇದನ್ನು ಅಭ್ಯಾಸ ಮಾಡುತ್ತಾ ಹೋದಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ ಎಂದು ಹೇಳಿ ಧ್ಯಾನದೀಕ್ಷೆಯನ್ನು ಇತ್ತರು. ಅತ್ಯಂತ ಶ್ರದ್ಧಾಭಕ್ತಿಗಳಿಂದ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ರಾಜಶೇಖರ ಧ್ಯಾನ ಮಾಡಿದ. ಶೀಘ್ರದಲ್ಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ತನ್ನಲ್ಲಿಯೇ ಕಂಡುಕೊಂಡ.
ದೈವದೊಡನೆ ಒಡನಾಟ - ಮೊದಲ ಆಧ್ಯಾತ್ಮಿಕ ಅನುಭವ
ಅದೊಂದು ದಿನ ವೈಶಾಖ ಮಾಸದಲ್ಲಿ ಪವಳಕುಂಡ್ರಂ ಗುಡ್ಡದ ಮೇಲ್ಬಾಗದಲ್ಲಿ ತನ್ನಲ್ಲೇ ತಾನು ತನ್ಮಯನಾಗಿ ಆಳವಾಗಿ ಧ್ಯಾನದಲ್ಲಿ ಮುಳುಗಿದ್ದ ರಾಜಶೇಖರ. ಆಗ ರಾಜಶೇಖರನಿಗೆ 12 ವರ್ಷ ಪ್ರಾಯ. ತಾನು ಅನುಸರಿಸುತ್ತಿರುವ ಧ್ಯಾನದ ಮಾರ್ಗ ಅದೆಷ್ಟು ಶಕ್ತಿಶಾಲಿ ಮತ್ತು ಫಲಕಾರಿ ಎಂದು ತಿಳಿಯದ ಮುಗ್ಧ. ಈ ಸಂದರ್ಭದಲ್ಲಿ ಆತನಿಗೆ ಆದ ಅನುಭವವನ್ನು ಅವನ ಮಾತಿನಿಂದಲೇ ತಿಳಿಯೋಣ. ಅದ್ಭುತವಾದ ಮುಸ್ಸಂಜೆಯು ಕರಗಿ, ಹುಣ್ಣಿಮೆಯ ಬೆಳದಿಂಗಳು ಮುತ್ತಿನಂತೆ ಎಲ್ಲೆಡೆಯೂ ಪಸರಿಸಿತ್ತು. ವೈಶಾಖಿ ನಕ್ಷತ್ರವು ಒಂದು ರತ್ನದಂತೆ ನೀಲಾಕಾಶದಲ್ಲಿ ಹೊಳೆಯುತ್ತಿತ್ತು. ಪ್ರಕೃತಿಯ ಗಾಂಭೀರ್ಯದಲ್ಲಿ ಮಹಾಮೌನದಲ್ಲಿ, ಶಾಂತವಾಗಿ ನಾನು ಧ್ಯಾನದಲ್ಲಿ ಆಳವಾಗಿ ಒಳಪ್ರವೇಶಿಸಿದೆ. ಸ್ವಲ್ಪ ಸಮಯದ ನಂತರ ಒಂದು ವಿಚಿತ್ರ ಅನುಭವ. ತಕ್ಷಣವೇ ನನ್ನಲ್ಲಿ ಏನೋ ಭೇಧನವಾದಂತೆ ಮಣ್ಣಿನ ಮಡಿಕೆಯೊಂದು ಭಗ್ನವಾದಂತೆ ಭಾಸವಾಯಿತು. ಅದೇ ಸಮಯದಲ್ಲಿ ನನ್ನೊಳಗಿನ ಸುಪ್ತವಾದ ಬಾಗಿಲೊಂದು ತೆರೆದಂತೆ ಅನುಭವವಾಯಿತು. ಆ ಕ್ಷಣದಲ್ಲಿ ಅತ್ಯದ್ಭುತವಾದ 360 ಡಿಗ್ರಿಗಳಲ್ಲೂ ಏಕಕಾಲದಲ್ಲಿ ನೋಡಬಲ್ಲ ದೃಷ್ಟಿಕೋನ ನನ್ನದಾಯಿತು. ನನ್ನ ಕಣ್ಣು ಮುಚ್ಚಿದ್ದರೂ ನನ್ನ ಮುಂದಿರುವ ಪರ್ವತ ಶಿಖರ, ಹಿಂದಿರುವ ದೇವಸ್ಥಾನ, ಎಡಗಡೆ ಇರುವ ಗುಡ್ಡಗಳು, ಬಲಗಡೆ ಇರುವ ಮರಗಳು, ಕುಳಿತಿರುವ ನೆಲೆ, ಮೇಲಿರುವ ನೀಲಾಕಾಶ, ನನ್ನ ಸುತ್ತಮುತ್ತ ಇರುವ ಎಲ್ಲವೂ ನಾನೇ ಮತ್ತು ಎಲ್ಲ ಸೃಷ್ಟಿಯನ್ನು ನಾನೇ ಆವರಿಸಿರುವೆ ಎಂಬ ಪರಮಾದ್ಭುತವಾದ ಅನುಭವ ನನ್ನದಾಯಿತು. ಈ ಆನಂದದಲ್ಲಿ ಕಾಲದ ಪರಿವಿಯೇ ಇರಲಿಲ್ಲ. (ಇದು ದೇಹದ ಪರಿಧಿಯನ್ನು ಕಳೆದುಕೊಂಡರೆ ಉಂಟಾಗುವ ಅನುಭವ ಎಂದು ಮುಂದೆ ತಿಳಿದೆನು).
ರಾಜಶೇಖರನು ತನ್ನ ಆನಂದತಾದ್ಭುತವನ್ನು ಕುಪ್ಪಮ್ಮಾಳ್ಗೆ ತಿಳಿಸಿದ. ಬಾಲಕನಲ್ಲಿದ್ದ ಆನಂದೋನ್ಮತೆಯ ನಿಜಲಕ್ಷಣಗಳನ್ನು ಬಲ್ಲ ಕುಪ್ಪಮ್ಮಾಳ್ ಹುಡುಗನನ್ನು ಕಣ್ಣಿನ ರೆಪ್ಪೆಯೋಪಾದಿಯಲ್ಲಿ ಆತ ಅನುಭವಿಸುತ್ತಿದ್ದ ಆನಂದಕ್ಕೆ ಕುಂದು ಬಾರದಂತೆ ರಕ್ಷಿಸುತ್ತಿದ್ದಳು. ಈ ಅನುಭವ ಮೂರು ದಿನಗಳವರೆಗೆ ಮಾತ್ರ ಇತ್ತು. ಆದರೆ, ಅದರ ಸವಿನೆನಪುಗಳು ರಾಜಶೇಖರನ ಆಧ್ಯಾತ್ಮಿಕ ಹಸಿವೆಯನ್ನು ಇಮ್ಮಡಿಯಾಗಿಸಿತು.
ಧ್ಯಾನ ರುದ್ರಭೂಮಿಯಲ್ಲಿ
ರಾಜಶೇಖರ ತನ್ನ ಧ್ಯಾನದಲ್ಲಿ ಅವಿರತವಾಗಿ ತೊಡಗಲು ಊರಹೊರಗಿನ ಸ್ಮಶಾನವನ್ನು (ರುದ್ರಭೂಮಿಯನ್ನು) ಆರಿಸಿಕೊಂಡನು. ರಾತ್ರಿಯ ನಿಗೂಢ ಮೌನದಲ್ಲಿ ರುದ್ರಭೂಮಿಯ ಪ್ರಳಯ ನೀರವತೆಯಲ್ಲಿ ಬಾಲಕ ರಾಜಶೇಖರ ಬೆಳಗಿನ ಝಾವದವರೆಗೂ ಧ್ಯಾನದಲ್ಲಿ ತನ್ಮಯನಾಗಿದ್ದು ಮನೆಗೆ ಹಿಂತಿರುಗುತ್ತಿದ್ದನು. ಇವನಲ್ಲಿರುವ ಈ ವಿಶೇಷತೆಗಳನ್ನು ಅರಿತು ಅವನ ವಿಧಿಯೇ ಆಧ್ಯಾತ್ಮ ಜೀವನವೆಂದರಿತ ರಾಜಶೇಖರನ ತಂದೆ-ತಾಯಂದಿರು ಭಗವಂತನ, ಸೃಷ್ಟಿಕರ್ತನ ಲೀಲಾ ವಿಭೂತಿಗೆ ಮಣಿದರು. ಯಾವ ವಿಧದಿಂದಲೂ ರಾಜಶೇಖರನ ಆಧ್ಯಾತ್ಮಿಕ ಜೀವನಕ್ಕೆ ತೊಂದರೆಯೊಡ್ಡಲಿಲ್ಲ ಅಥವಾ ಅವನ ಆಧ್ಯಾತ್ಮಿಕ ಜೀವನ ದಾರಿಯಿಂದ ಬಹಿರ್ಮುಖವಾಗುವಂತೆ ಪ್ರಯತ್ನ ಮಾಡಲಿಲ್ಲ.
ಮೃತ್ಯು - ಅತ್ಯದ್ಭುತ ಶಿಕ್ಷಕ/ಗುರು
ಜೀವನದಲ್ಲಿ ಇನ್ನೂ ಕೆಲವು ಪಾಠಗಳನ್ನು ಪ್ರಕೃತಿಯು ಕಲಿಸಲು ಸಿದ್ಧವಾಗಿತ್ತು. ಬಾಲಕ ರಾಜಶೇಖರನಿಗೆ ಹದಿನಾಲ್ಕು ವರ್ಷದವನಿದ್ದಾಗ ಆತನ ಮುತ್ತಜ್ಜಿ ಮಹಾ ಸಾಧ್ವಿ ರಾಜಶೇಖರನ ಮೊಟ್ಟಮೊದಲನೆಯ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿದ್ದವಳು ಅವನ ಕಣ್ಣೆದುರಿಗೆ ಉಸಿರೆಳೆದಳು. ಈ ಸಾವಿನ ನೋವು ಬಾಲಕನ ಮೇಲೆ ಅಸಾಧ್ಯ ಪರಿಣಾಮವುಂಟಾಯಿತು. ಇದರಿಂದ ರಾಜಶೇಖರ ಎಲ್ಲಾ ಜೀವಿಗಳ ಸಾವು-ಬದುಕಿನ ರಹಸ್ಯ, ಜೀವನದ ಮೂಲ, ಇವುಗಳನ್ನು ಎಷ್ಟು ಬೆಲೆ ತೆತ್ತಾದರೂ ಕಂಡು ಹಿಡಿಯಬೇಕೆಂದು ದೃಢ ನಿರ್ಧಾರ ಮಾಡಿದ.
ಕಾಲೇಜು ಜೀವನ - ವೃತ್ತಿ ಶಿಕ್ಷಣ
ಒಳಗೆ ಆಧ್ಯಾತ್ಮಿಕ ಹಸಿವು ಕಾಡಿದ್ದರೂ, ಜೀವನ ರಾಜಶೇಖರನನ್ನು ಹೊರಗಡೆ ಬೇರೇನೋ ಮಾರ್ಗದಲ್ಲಿ ಕೊಂಡೊಯ್ಯಿತು. ಶಾಲೆಯ ಶಿಕ್ಷಣ ಮುಗಿದೊಡನೆ ಬೇರೆ ಬೇರೆ ಸರಿಸಮನಾದ ವಯಸ್ಕ ಹುಡುಗರಂತೆ ರಾಜಶೇಖರ ತಾಂತ್ರಿಕ ಶಿಕ್ಷಣ ಪಡೆಯಲು ಹತ್ತಿರವಿರುವ ಗುಡಿಯಾಟ್ಟಂನ ಪಾಲಿಟೆಕ್ನಿಕ್ಗೆ ಸೇರಿದ. ಆತನಿಗೆ ಬೇರೆಯವರಂತೆ
ವಿನಾ ಗುರಿ ಇಲ್ಲದ ಕಾರಣವಿಲ್ಲದೆ ಕಾಲ ಕಳೆಯಲು ಪುರುಸೊತ್ತೇ ಇಲ್ಲವಾಯಿತು. ರಾಜಶೇಖರನಿಗೆ ಇತರರಂತೆ ಗಂಟೆಗಟ್ಟಲೆ ಪುಸ್ತಕ ಓದುವ ಹವ್ಯಾಸವಿರಲಿಲ್ಲ. ಆತನ ಏಕಾಗ್ರತೆ ಮಟ್ಟ ಎಷ್ಟಿತ್ತೆಂದರೆ, ಕೇವಲ ತರಗತಿಯಲ್ಲಿ ನಡೆದ ಪಾಠ-ಪ್ರವಚನಗಳನ್ನು ಒಮ್ಮೆ ಕೇಳಿ ಮನನ ಮಾಡಿದ್ದಾಯಿತು, ಪ್ರತಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ತೇರ್ಗಡೆಯಾಗುತ್ತಿದ್ದ. ಒಮ್ಮೆ ಸ್ನೇಹಿತನೊಬ್ಬ ರಾಜಶೇಖರನ ಈ ಸ್ವಭಾವದಿಂದ ಇರುಸು-ಮುರುಸುಗೊಂಡು ಲೇವಡಿ ಮಾಡಿದ. ಈ ರೀತಿ ಕಷ್ಟವಿಲ್ಲದೆ, ಪ್ರಯತ್ನವಿಲ್ಲದೆ ಓದುವುದರಿಂದ ಯಾವ ಪುಣ್ಯಪುರುಷಾರ್ಥ. ಜೀವನದಲ್ಲಿ ಸಾಧಿ ಸಬಹುದೆಂದ. ಅದಕ್ಕೆ ರಾಜಶೇಖರನು ಅವನ ಪ್ರಶ್ನೆಗೆ ಪ್ರಾಮುಖ್ಯತೆ ಕೊಡದೆ, ಶಾಂತವಾಗಿ ಉತ್ತರಿಸಿದ್ದು ಹೀಗಿತ್ತು, ಒಂದು ದಿನ ನೀನು ನನ್ನ ಆಶೀರ್ವಾದ ಪಡೆಯಲು ಸಾಲಿನಲ್ಲಿ ಬರಬೇಕಾಗುತ್ತೆ? ಆಗ ನಿನಗೆ ಅರಿವಾಗುತ್ತೆ ನಾನಾರೆಂದು ?
( ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಈ ಪುಸ್ತಕ ಬರೆಯುವ ಮೊದಲು ಮೇಲೆ ವಿವರಿಸಿದ ಸ್ನೇಹಿತ ಆಶ್ರಮಕ್ಕೆ ಬಂದು ಸ್ವಾಮೀಜಿಯವರ ಆಶೀರ್ವಾದ ಬೇಡಿದ ಘಟನೆ ಅಲ್ಲಿದ್ದವರಿಗಲ್ಲದೇ ಸ್ವಾಮೀಜಿಯವರಿಗೂ ಆಶ್ಚರ್ಯ ಉಂಟು ಮಾಡಿತ್ತು. )
ಗಿರಿವಲಂ - ಗಿರಿಪ್ರದಕ್ಷಿಣ ಹೈನಾಗಳೊಡನೆ ?
ಸ್ವಭಾವತಃ ಪ್ರಯೋಗ - ಅನುಭವ ಸಹಿತ ಪ್ರತಿಯೊಂದು ಧಾರ್ಮಿಕ ವಿಧಿ ವಿಧಾನಗಳನ್ನು ರಾಜಶೇಖರ ಆಚರಿಸುತ್ತಿದ್ದ. ಇಂತಹ ಧಾರ್ಮಿಕ ವಿಧಿಗಳಲ್ಲಿ ಒಂದಾದ ಗಿರಿವಲಂ ಅರ್ಥಾತ್ ಗಿರಿಯನ್ನು 108 ದಿನಗಳವರೆಗೆ ಪೂರ್ತಿಯಾಗಿ ಒಂದಾವರ್ತಿ ಯಾಗಿ ಪ್ರದಕ್ಷಿಣೆ ಹಾಕುವುದು. ಇಂತಹ ಒಂದು ಸುಸಂದರ್ಭದಲ್ಲಿ ಅತ್ಯಂತ ಭಕ್ತಿಯಿಂದ, ಸಂತೋಷದಿಂದ ತನಗೆ ತಾನೇ, ಜನಜನಿತವಾದ ಭಕ್ತಿಗೀತೆಗಳನ್ನು ಹಾಡುತ್ತಾ ಪ್ರದಕ್ಷಿಣೆ ಹಾಕುವಾಗ, ರಾಜಶೇಖರನ ಕಡೆಗೆ ರಕ್ತಪಿಪಾಸುಗಳಾದ ಹೈನಾ ಪ್ರಾಣಿಗಳ ಹಿಂಡೊಂದು ಉದ್ದೇಶಪೂರ್ವಕವಾಗಿ ಬರುತ್ತಿತ್ತು. ತನ್ನೊಳಗೆ ತಾನೇ ಅರಿವಿಲ್ಲದೆ ಉದಯಿಸಿದ ಒಂದು ಮುನ್ಸೂಚನೆಯಿಂದ ರಾಜಶೇಖರ ದೂರದಲ್ಲಿ ನಿಂತು ನೋಡಿದ. ಭಯಭೀತನಾಗಿ ನಿಂತಲ್ಲೇ ಬೇರುಬಿಟ್ಟ. ತಕ್ಷಣವೇ ಅರುಣಾಚಲ ಎಂಬ ಮಾದ೯ನಿ ಒಳಗಿನಿಂದ ಹೊರಹೊಮ್ಮಿ ಹೃದಯದಲ್ಲಿ ಪ್ರತಿಧ್ವನಿಸುತ್ತಿತ್ತು. ಆ ಕ್ಷಣವೇ ಓರ್ವ ವ್ಯಕ್ತಿಯೊಬ್ಬ ಎಲ್ಲಿಂದಲೋ ಬಂದು ಹೈನಾಗಳನ್ನು ಕೋಲಿನಿಂದ ಓಡಿಸಿದ. ಇದೊಂದು ಆಕಸ್ಮಿಕವೇ? ಅಥವಾ ಪ್ರಕೃತಿಯೇ? ತನ್ನ ಮುದ್ದು ಕುವರನನ್ನು ಉನ್ನತವಾದುದನ್ನು ಸಾಧಿಸಲು ರಕ್ಷಿಸಿತೇ?