ಪ್ರೀತಿಯಲ್ಲಿ ಪ್ರವಹಿಸಿ
This text was machine-transcribed from the printed book and may contain errors. Select the words and choose “Report a mistake”.
ಆಲೋಚನೆಗಳು ಮೆದುಳಿನಲ್ಲಿಯೂ,
ಭಾವನೆಗಳು ಹೃದಯದಲ್ಲಿಯೂ
ಹುಟ್ಟುತ್ತವೆಂದು ಮನಶ್ಶಾಸ್ತ್ರದ ವಿವರಣೆಯಿದೆ.
ಅವು ಎಲ್ಲಿಂದಲಾದರೂ ಹುಟ್ಟಲಿ, ಯೋಚನೆಗಳು
ಮತ್ತು ಭಾವನೆಗಳು ಬೇರ್ಪಡಿಸಲೇ
ಆಗದಂತಹವುಗಳು. ಯೋಚನೆಗಳು ನಮ್ಮನ್ನು
ಸೃಷ್ಟಿಸುತ್ತವೆಂದು ಪುರಾತನ ಧಾರ್ಮಿಕ
ಗ್ರಂಥಗಳು ಹೇಳುತ್ತವೆ. ಭಾವನೆಗಳೂ ಹಾಗೆಯೇ.
ನಮ್ಮ ಭಾವನೆಗಳೇನೋ, ನಾವೂ ಅದೇ ಆಗುತ್ತೇವೆ.
ನಮ್ಮ ಜೀವನವನ್ನು ಪರಿವರ್ತಿಸುವಲ್ಲಿ, ಭಾವನೆಗಳ
ನಿರ್ವಹಣೆ ಅತ್ಯಾವಶ್ಯಕ.
ಪ್ರೀತಿ ಎಂದರೇನು?
ನಾವು ಏನನ್ನಾದರೂ ನೋಡಿದಾಗ
ನಮಗದ್ದರಿಂದೇನು ಸಿಗುತ್ತದೆಂದು ಅಳೆದು
ನೋಡುತ್ತೇವೆ. ಅದು ಒಂದು ವಸ್ತುವಾಗಿರಬಹುದು
ಅಥವಾ ಒಬ್ಬ ವ್ಯಕ್ತಿಯಾಗಿರಬಹುದು, ಅದೇನೂ
ಮುಖ್ಯವಲ್ಲ. ಒಂದು ಸನ್ನಿವೇಶದಲ್ಲಿ ನಮಗೇನು
ದೊರಕುತ್ತದೆ ಎಂದು ಅಳೆಯಲು ಭಯದಿಂದಾಗಲೀ
ದುರಾಸೆಯಿಂದಾಗಲೀ ನಾವು ಯೋಚಿಸಲು
ತೊಡಗುತ್ತೇವೆ. ನಮ್ಮ ಗಮನ ಆ ವಸ್ತು ಅಥವಾ
ವ್ಯಕ್ತಿಯ ಮೇಲೆ ಕೇಂದ್ರೀಕರಿಸಿರುತ್ತದೆ.
ನಮ್ಮ ಗಮನವನ್ನು ನಮ್ಮ ಅಂತರಂಗಕ್ಕೆ ತಿರುಗಿಸಿ, 'ನಾನೇನು ಕೊಡಬಲ್ಲೆ? ಇತರರನ್ನು ಹೇಗೆ ಉತ್ತಮಗೊಳಿಸಬಲ್ಲೆ?' ಎಂದು ಕೇಳಲು ಸಾಧ್ಯ. ನಾವು ಯೋಚಿಸುವ ರೀತಿಯು, 'ಅದರಿಂದ ನಾನೇನು ಪಡೆಯಬಲ್ಲೆ?' ಎಂದು ಕೇಳುವುದು ಮಾತ್ರವೇ ಆದರೆ, ಅದು ಕಾಮವಾಗುತ್ತದೆ, ಇನ್ನೊಂದೆಡೆ, 'ನಾನು ಅದನ್ನು ಹೇಗೆ ಉತ್ತಮಗೊಳಿಸಬಲ್ಲೆ?' ಎಂದು ಕೇಳುವುದಾದರೆ, ಅದು ಪ್ರೀತಿಯಾಗುತ್ತದೆ! ಕಾಮವು ಕೋರುವ ಚೈತನ್ಯ. ಪ್ರೀತಿಯು ನೀಡುವ ಚೈತನ್ಯ.
ಪ್ರೀತಿಯು ಅಂತರಂಗದ ಒಂದು ತೀವ್ರ
ಅನುಭವ. ನಮ್ಮಲ್ಲನೇಕರು ಪ್ರೀತಿಯು ಒಂದು ಆಯ್ಕೆ
ಎಂದುಕೊಳ್ಳುತ್ತೇವೆ. ಪ್ರೇಮದ ಅನುಭವ ಮತ್ತು
ಅಭಿವ್ಯಕ್ತಿ ಒಂದು ಆಯ್ಕೆ ಎಂದುಕೊಳ್ಳುತ್ತೇವೆ.
ಬೇಕಾದಾಗ ಪ್ರೀತಿಯನ್ನು ನಿಭಾಯಿಸಬಲ್ಲೆವು;
ಬೇಡವಾದಾಗ ಬಿಡಬಲ್ಲೆವು ಎಂದುಕೊಳ್ಳುತ್ತೇವೆ.
ಇಲ್ಲ! ನಾವೆಂದುಕೊಳ್ಳುವಂತೆ ಅದು ಒಂದು
ಆಯ್ಕೆಯಲ್ಲ. ಅದು ಜೀವನದ ಮೂಲಭೂತ ಅವಶ್ಯಕತೆ.
ನಾನು ಜೀವನ ಎಂದಾಗ ಅದು ಕೇವಲ ಉಸಿರಾಡಿಕೊಂಡು ಬದುಕಿರುವುದು ಎಂದಲ್ಲ. ಜೀವಿಸುವುದೆಂದರೆ, ಜೀವಂತ ಪ್ರಜ್ಞೆಯಾಗಿ ಅಸ್ತಿತ್ವದ ಸ್ತರದಲ್ಲಿ ಬದುಕಿರುವುದು ಎಂದು ನನ್ನ ಅರ್ಥ. ನೀವು ಪ್ರೀತಿಯನ್ನು ವ್ಯಕ್ತಪಡಿಸುವಂತಹವರಾದರೆ, ಪ್ರೀತಿಯನ್ನು ಅನುಭವಿಸುವಂತಹವರಾದರೆ, ಅದೇ ಪ್ರಜ್ಞಾಪೂರ್ವಕವಾಗಿ ಜೀವಿಸಲು ಇರುವ ಒಂದೇ ದಾರಿ. ನೀವು ಪ್ರೀತಿಯನ್ನನುಭವಿಸದಿದ್ದಲ್ಲಿ ಹಾಗೂ ವ್ಯಕ್ತಪಡಿಸದಿದ್ದಲ್ಲಿ, ಉಸಿರಾಡುತ್ತಿದ್ದರೂ ಬದುಕಿದ್ದೀರೆಂದು ಹೇಳಿಕೊಳ್ಳಲಾಗುವುದಿಲ್ಲ. ಹಗಲೂ ರಾತ್ರೀ ಉಸಿರಾಡುತ್ತಿರುವ ಪ್ರಾಣಿಗಳು, ಸಸ್ಯಗಳು ಮತ್ತು ಬೇರೆ ವಸ್ತುಗಳೂ ಬೇಕಾದಷ್ಟಿವೆ. ನೀವೂ ಅವುಗಳಂತೆಯೇ ಇರುತ್ತೀರಿ, ಅಷ್ಟೇ.
ಒಂದು ಸಣ್ಣ ಕಥೆ:
ಒಬ್ಬ ಶಿಷ್ಯನು ತನ್ನ ಝೆನ್ ಗುರುಗಳನ್ನು,
‘ಜ್ಞಾನಿಯಾದ ಗುರುವು ಮಾತನಾಡುವನೆ?’ ಎಂದು
ಕೇಳಿದನು.
ಗುರುಗಳು, ‘ಇಲ್ಲ, ಜ್ಞಾನಿಗಳು ಮಾತನಾಡುವುದೇ
ಇಲ್ಲ. ಆತ್ಮಜ್ಞಾನದ ಬಗ್ಗೆ ಯಾರಿಗೆ ತಿಳಿಯದೋ
ಅವನು ಮಾತ್ರವೇ ಮಾತನಾಡುವುದು’ ಎಂದು
ಹೇಳಿದರು.
ನಂತರ ಶಿಷ್ಯನು, ‘ಹಾಗಾದರೆ, ಜ್ಞಾನಿಯಾದ
ಗುರುವು ಸುಮ್ಮನಿರುತ್ತಾನೆಯೋ?’ ಎಂದು
ಕೇಳಿದನು.
ಗುರುಗಳು, ‘ಇಲ್ಲ, ಒಬ್ಬ ಜ್ಞಾನಿಯು ಸುಮ್ಮನಿರುವುದೇ ಇಲ್ಲ. ಆತನು ಸುಮ್ಮನಿದ್ದುಬಿಟ್ಟರೆ ಆತನು ಜ್ಞಾನಿಯಲ್ಲ’ ಎಂದು ಹೇಳಿದರು.
ಶಿಷ್ಯನಿಗೆ ತಬ್ಬಿಬ್ಬಾಯಿತು, ‘ಆತನು
ಮಾತನಾಡುವುದೂ ಇಲ್ಲ, ಸುಮ್ಮನಿರುವುದೂ ಇಲ್ಲ
ಎನ್ನುತ್ತೀರಿ. ಆತನೇನು ಮಾಡುತ್ತಾನೆ?’ ಎಂದು
ಕೇಳಿದನು.
ಗುರುಗಳು, ‘ಆತನು ಹಾಡುತ್ತಾನೆ! ಆತನ ಅಸ್ತಿತ್ವವು ಹಾಡುತ್ತದೆ. ಆತನು ಮಾತನಾಡುವುದೂ ಇಲ್ಲ, ಸುಮ್ಮನಿರುವುದೂ ಇಲ್ಲ. ಆತನ ಅಸ್ತಿತ್ವವೇ ಹಾಡುತ್ತದೆ’ ಎಂದುತ್ತರಿಸಿದರು.
ಪ್ರೀತಿಯು ಮಾನವನ ಪರಮಾನುಭವ.
ಅನುಭವವಾದಾಗ ಅದನ್ನು ಹಿಡಿದಿಡಲಾಗುವುದಿಲ್ಲ.
ಅದೇ ನಮ್ಮನ್ನು ಹಿಡಿದಿಡುತ್ತದೆ! ಅದೇ ಗುರುಗಳ
ಮಾತಿನ ಅರ್ಥ. ಅನುಭವವು ಯಾವಾಗ ನಮ್ಮನ್ನು
ಹಿಡಿದಿಡುತ್ತದೆಯೋ, ಆಗ ನಾವೇನೇ ಮಾಡಿದರೂ
ಅದೊಂದು ಸುಶ್ರಾವ್ಯ ಗಾನವಾಗುತ್ತದೆ. ಯಾವುದೇ
ಪದವು ಹೊರಬಂದಾಗ ಕವನವಾಗುತ್ತದೆ. ನಮ್ಮ
ಅಸ್ತಿತ್ವವು ಅಷ್ಟು ಹಗುರವಾಗಿರುತ್ತದೆ. ನಾವು
ಹಾಯಾಗಿ ತೇಲಾಡುತ್ತೇವೆ. ನಮ್ಮ ನಡಿಗೆ
ನೃತ್ಯವಾಗಿರುತ್ತದೆ. ನಮ್ಮ ಹಾವಭಾವಗಳು
ಲಾವಣ್ಯವನ್ನು ಸೂಸುತ್ತವೆ. ನಾವು ಮಾಡುವ
ಎಲ್ಲವೂ ಮಾನವಕುಲಕ್ಕೆ ಮಹತ್ತರವಾದ
ಸೇವೆಯಾಗುತ್ತವೆ.
ಮನುಷ್ಯರೆಲ್ಲರೂ ಪ್ರೀತಿಸುವಂತಹ
ಜೀವಿಗಳಾಗಿಯೇ ಹುಟ್ಟುವುದು. ಈಗಿನ್ನೂ ಹುಟ್ಟಿದ
ಮಗುವೂ ಕಾರಣವೇ ಇಲ್ಲದ ಪ್ರೀತಿಯನ್ನು
ಹೊರಸೂಸುತ್ತದೆ. ಹುಟ್ಟಿದಾಗ ಅದಕ್ಕೆ
ಸುತ್ತಮುತ್ತಲಿನವರ ಪರಿಚಯವಿರುತ್ತದೆಯೇ? ಇಲ್ಲ! ನಿಷ್ಕಾರಣವಾದ ಪ್ರೀತಿಯೇ ಮಗುವಿನ ಚೈತನ್ಯ. ನಾವು ಬೆಳೆದಹಾಗೆಲ್ಲಾ ಸಮಾಜವು ನಮ್ಮಲ್ಲಿ ಭಯ ಮತ್ತು ದುರಾಸೆಗಳನ್ನು ತುಂಬುತ್ತದೆ ಹಾಗೂ ದುರಾಸೆ ಮತ್ತು ಹೆದರಿಕೆಯಿಂದ ಪ್ರೀತಿಯನ್ನು ತೋರುತ್ತೇವೆ. ಆಗ ಅದು ಕಾರಣವಿಲ್ಲದ ಪ್ರೀತಿಯಾಗಲಾರದು. ಅದು ಕಾರಣದಿಂದೊಡಗೂಡಿದ ಪ್ರೀತಿಯಾಗುತ್ತದೆ. ಅದು ಉಸಿರುಗಟ್ಟಿಸುತ್ತದೆ. ಆಗ ಅಸೂಯೆ, ಭಯ ಮತ್ತು ಕೋಪಗಳಂತಹ ಭಾವನೆಗಳನ್ನು ಅನುಭವಿಸಲಾರಂಭಿಸುತ್ತೇವೆ. ಯಾವುದೋ ಒಂದು ಕಾರಣಕ್ಕಾಗಿ ಮಾತ್ರ ಪ್ರೀತಿಸುತ್ತೇವೆ. ಸ್ವಲ್ಪ ಅರಿವು ಹಾಗೂ ಎಚ್ಚರದಿಂದ ನಮ್ಮ ಸಹಜ ಗುಣವಾದ ಪ್ರೀತಿಯನ್ನು ಪುನಃ ಪಡೆದುಕೊಳ್ಳಬಹುದು.
ಪ್ರೀತಿಯನ್ನು ಸೃಷ್ಟಿಸಲಾಗುವುದಿಲ್ಲ
ಕೇವಲ ನಿಮ್ಮ ತಾರ್ಕಿಕ ನಿರ್ಧಾರದಿಂದ ಪ್ರೀತಿಯು ಸಂಭವಿಸುವುದಿಲ್ಲ. ನಿಮ್ಮ ಮನಸ್ಥಿತಿಯನ್ನು ಹೇಗೆ ರೂಪಿಸಬೇಕೆಂದರೆ, ನೀವೇ ಪ್ರೀತಿಯಾಗಿಬಿಡಬೇಕು ಮತ್ತು ನಿಮ್ಮ ಕೆಲಸ ಕಾರ್ಯಗಳು ಪ್ರೀತಿಯನ್ನು ನುಡಿಯಬೇಕು. ನಿಮ್ಮ ತರ್ಕವು ತರ್ಕಕ್ಕೆ ಅತೀತವಾದ ಪ್ರೀತಿಯನ್ನು ಹೊರಸೂಸಲಾರಂಭಿಸಬೇಕು.
ಪ್ರೀತಿಯನ್ನು ಸೃಷ್ಟಿಸಲು ಪ್ರಯತ್ನಿಸಿದರೆ, ಮೊಗ್ಗಿನ ರೇಕುಗಳನ್ನು ಅರಳಿಸಲು ಬಲವಂತ ಮಾಡಿದಂತೆ. ಅದನ್ನು ಅರಳುವಿಕೆ ಎನ್ನಲಾದೀತೇ? ಇಲ್ಲ, ಪ್ರೀತಿಯು ನಿಮ್ಮ ಅಸ್ತಿತ್ವದ ಅಂತರಾಳದಲ್ಲಿ ಅರಳುವ ಒಂದು ಹೂವು ಮತ್ತು ಅದು ಇತರರೊಡನೆ ಹಂಚಿಕೊಳ್ಳಬಹುದಾದಂತಹ ಸುವಾಸನೆಯನ್ನು ಹೊರಸೂಸುತ್ತದೆ.
ಪ್ರೀಮವನ್ನು
ಸೃಷ್ಟಿಸಲು
ಪ್ರಯತ್ನಿಸಿದರೆ,
ಮೊಗ್ಗಿನ
ರೇಕುಗಳನ್ನು
ಅರಳಿಸಲು
ಬಲವಂತ
ಮಾಡಿದಂತೆ.
ಪ್ರೀತಿಯು ಮಹಾ ಧೈರ್ಯವನ್ನು ತರುತ್ತದೆ
ರಾಮಾನುಜಾಚಾರ್ಯರ ಜೀವನದಲ್ಲಿ
ಸುಂದರವಾದ ಘಟನೆಯೊಂದು ನಡೆಯಿತು. ನೀವು
ರಾಮಾನುಜಾಚಾರ್ಯರ ಜೀವನಚರಿತ್ರೆಯನ್ನು
ಓದಿದರೆ, ಅವರು ತಮ್ಮ ಜೀವನದ ಪ್ರತಿಯೊಂದು
ಹೆಜ್ಜೆಯನ್ನೂ ಜ್ಞಾನೋದಯದ ಕಡೆಗೇ
ಇಟ್ಟರೆಂಬುದು ತಿಳಿಯುತ್ತದೆ.
ರಾಮಾನುಜಾಚಾರ್ಯರಿಗೆ ತಮ್ಮ ಗುರುಗಳಿಂದ
ದೀಕ್ಷೆಯು ದೊರೆತಾಗ, ಅವರ ಗುರುಗಳು ಅವರಿಗೆ
ವಿಶೇಷ ಮಂತ್ರವನ್ನು ಉಪದೇಶಿಸಿದರು. ಗುರುಗಳು
ಆ ಮಂತ್ರವನ್ನು ಮತ್ತಾರಿಗೂ
ಹೇಳಿಕೊಡಬಾರದೆಂದು ಹೇಳಿ, ಒಂದು ವೇಳೆ ಹಾಗೆ
ಮಾಡಿದ್ದೇ ಆದರೆ ನರಕಕ್ಕೆ ಹೋಗಬೇಕಾಗುತ್ತದೆ
ಎಂದು ಹೇಳಿದರು. ಅದನ್ನು ಒಂದು ವೇಳೆ
ಬೇರೆಯವರಿಗೆ ಹೇಳಿಬಿಟ್ಟರೆ ಅವರಿಗೆಲ್ಲಾ
ಏನಾಗುವುದೆಂದು ರಾಮಾನುಜರು ಕೇಳಿದರು.
ಕೇಳಿಸಿಕೊಂಡವರಿಗೆ ಮುಕ್ತಿ ಲಭಿಸುವುದೆಂದು ಗುರುಗಳು ಹೇಳಿದರು.
ನಾವಾಗಿದ್ದರೆ ಏನು ಮಾಡುತ್ತಿದ್ದೆವು?
ಸ್ವಾಭಾವಿಕವಾಗಿಯೇ, ‘ವಿನಾಕಾರಣ ನರಕಕ್ಕೇಕೆ
ಹೋಗಬೇಕು?’ ಎಂದು ಸುಮ್ಮನಿರುತ್ತಿದ್ದೆವು.
ಆದರೆ ರಾಮಾನುಜರು ತಕ್ಷಣವೇ ಒಂದು ದೇವಸ್ಥಾನದ ಕಟ್ಟೆಯ ಮೇಲೆ ನಿಂತು ಹಳ್ಳಿಯವರನ್ನೆಲ್ಲರನ್ನೂ ಕರೆದರು. ತಮ್ಮ ಗುರುಗಳು ಕೊಟ್ಟ ಮಂತ್ರವನ್ನು ಗಟ್ಟಿಯಾಗಿ ಉಚ್ಚರಿಸಿದರು ಮತ್ತು ‘ನೀವೆಲ್ಲರೂ ಸ್ವರ್ಗಕ್ಕೆ ಹೋಗುವಂತಾಗಲಿ. ನಾನು ನರಕಕ್ಕೆ ಹೋಗುವ ಬಗ್ಗೆ ನನಗೆ ಚಿಂತೆ ಇಲ್ಲ. ನೀವೆಲ್ಲರೂ ಸ್ವರ್ಗವನ್ನು ಸೇರುವಂತಾಗಲಿ!’ ಎಂದು ಅಲ್ಲಿದ್ದವರಿಗೆಲ್ಲ ಹೇಳಿದರು.
ನೀವು ಪ್ರೀತಿಯಲ್ಲಿ ಆಳವಾಗಿ ಮುಳುಗಿದಾಗ, ನಿಮ್ಮ ಅಸ್ತಿತ್ವವು ಸಂಪೂರ್ಣವಾಗಿ ಅರಳಿದ ಅನುಭವ ಪಡೆಯುತ್ತೀರಿ ಹಾಗೂ ತುಟ್ಟತುದಿಗೆ ಹೋಗಿ, ಯಾರಿಗೆ ಏನು ಬೇಕಾದರೂ ಮಾಡಲು ಸಿದ್ಧರಾಗುತ್ತೀರಿ. ನಿಮ್ಮ ಅಸ್ತಿತ್ವದಲ್ಲಿ ಕಾಪಾಡಿಕೊಳ್ಳಲು ಏನೂ ಇಲ್ಲವಾಗಿ ನೀವು ಯಾವ ಮಿತಿಗಾದರೂ ಹೋಗಲು ಸಿದ್ಧರಾಗಿಬಿಡುತ್ತೀರಿ, ಏಕೆಂದರೆ ನಿಮ್ಮ ಅಸ್ತಿತ್ವವು ಸಂಪೂರ್ಣವಾಗಿ ತೆರೆದಿರುತ್ತದೆ. ಅತಿಯಾದ ಪ್ರೀತಿಯುಂಟಾದಾಗ ಅಭದ್ರತೆಯ ಭಾವನೆ ಇರುವುದಿಲ್ಲ. ಆದುದರಿಂದಲೇ ಪ್ರೇಮಿಗಳು ಯಾವಾಗಲೂ ಸಾಹಸಕಾರ್ಯಗಳನ್ನು ಮಾಡುವುದು. ಅವರಿಗೆ ಕಳೆದುಕೊಳ್ಳಲೇನೂ ಇಲ್ಲವೆನಿಸುವುದರಿಂದ ಸಾಹಸಕಾರ್ಯಗಳನ್ನು ಮಾಡಿ ಗಂಡಾಂತರಗಳನ್ನು ಎದುರಿಸುತ್ತಾರೆ. ಯಾವುದರ ಬಗ್ಗೆಯೂ ಭಯವಿರುವುದಿಲ್ಲ. ಅವರು ಬಹಳ ವೈಶಾಲ್ಯತೆಯನ್ನು ಅನುಭವಿಸುತ್ತಾರೆ. ಪ್ರೀತಿಯು ಅಗಾಧವಾದ ಧೈರ್ಯ ಹಾಗೂ ಶಕ್ತಿಗಳನ್ನು ಕೊಡುತ್ತದೆ. ಅದು ನಿಮ್ಮ ಅಸ್ತಿತ್ವವನ್ನರಳಿಸುತ್ತದೆ. ಅದು ನಿಮಗೆ ನೀವೇ ಲಭ್ಯವಾಗುವಂತೆ ಮಾಡುತ್ತದೆ. ಈಗಲಾದರೋ ನಿಮಗೆ ನೀವೇ ಲಭ್ಯವಿಲ್ಲ. ಪ್ರೀತಿಯು ನಿಮಗೆ ನೀವು ಲಭ್ಯವಾಗುವಂತೆ ಮಾಡಬಲ್ಲುದು.
ರಾಮಾನುಜರು ಮಾಡಿದುದನ್ನು ಗುರುಗಳು
ಕಂಡಾಗ, ತಮ್ಮ ಶಿಷ್ಯನಿಂದ ಪಾಠ ಕಲಿತೆನೆಂದು
ಒಪ್ಪಿಕೊಂಡರು ಮತ್ತು ರಾಮಾನುಜರು
ತಮಗಿಂತಲೂ ಉನ್ನತಮಟ್ಟಗಳನ್ನು
ತಲುಪಿರುವರೆಂದು ಪ್ರಕಟಿಸಿದರು. ‘ನೀನೀಗ
ಬೇರೆಯೇ ವಲಯದಲ್ಲಿರುವೆ’ ಎಂದು
ರಾಮಾನುಜರಿಗೆ ಹೇಳಿದರು.
ತೆರೆದ ಹೃದಯದವರಾಗಿ – ವೇದಾಂತಿಗಳಂತೆ ವರ್ತಿಸಬೇಡಿರಿ
ಸಮಸ್ಯೆಯೆಂದರೆ, ನಾವೆಲ್ಲರೂ ನಿಜವಾಗಿಯೂ
ವೇದಾಂತಿಗಳಾಗಿಬಿಟ್ಟಿದ್ದೇವೆ. ಜೀವನವು
ವೇದಾಂತವಲ್ಲವೆಂದು ನಾವು ತಿಳಿದೆ ಇಲ್ಲ. ಅದು
ತಾನಾಗಿಯೇ ಹರಿಯುತ್ತಿರುವ ಚೈತನ್ಯ. ಅದು
ಪ್ರತಿಕ್ಷಣವೂ ಹೊಸದು. ವೇದಾಂತವು ಹಳೆಯ
ವಿಚಾರಗಳನ್ನೇ ಬೇರೆ ಬೇರೆ ರೀತಿಯಲ್ಲಿ
ಪುನರುಚ್ಚರಿಸುವುದೇ ಆಗಿದೆ, ಅಷ್ಟೇ. ಅದರಲ್ಲಿ
ಹೊಸದೇನೂ ಇಲ್ಲ. ಜೀವನವು ಪ್ರತಿಕ್ಷಣವೂ
ನವೀನತೆಯನ್ನು ತಳೆಯುತ್ತದೆ. ವೇದಾಂತವು ಜೀವನದ ಈ ಹೊಸತನವನ್ನು ಕಸಿದುಬಿಡುತ್ತದೆ.
ಒಂದು ಸಣ್ಣ ಕಥೆ:
ಒಂದು ದೇಶದಲ್ಲಿ ಹತ್ತು ಮಂದಿ ವೇದಾಂತಿಗಳನ್ನು
ಕಾರಾಗೃಹದಲ್ಲಿದಲಾಯಿತು. ಅವರೆಲ್ಲರನ್ನೂ ಒಂದೇ
ಕೋಣೆಯಲ್ಲಿದಲಾಗಿತ್ತು. ಹೇಗಾದರೂ ಮಾಡಿ
ಕಾರಾಗೃಹದಿಂದ ತಪ್ಪಿಸಿಕೊಂಡು ಹೋಗಬೇಕೆಂದು
ಅವರು ತೀರ್ಮಾನಿಸಿದರು. ಅವರೆಲ್ಲರೂ ಕುಳಿತು
ಒಂದು ದೊಡ್ಡ ಯೋಜನೆಯನ್ನು ಹಾಕಿದರು. ಅವರು
ಸೆರೆಮನೆಯ ಬೀಗದ ಕೈಯ ಅಚ್ಚನ್ನು ಪಡೆದು
ಹೇಗೋ ಒಂದು ನಕಲು ಬೀಗದ ಕೈಯನ್ನು
ಮಾಡಿಕೊಂಡರು.
ಕೊನೆಗೆ ಅವರು ತಪ್ಪಿಸಿಕೊಂಡು ಹೋಗುವ ದಿನಾಂಕವನ್ನು ಗೊತ್ತುಪಡಿಸಿಕೊಂಡರು. ಯೋಜನೆಯನ್ನು ಸಂಪೂರ್ಣವಾಗಿ ರೂಪಿಸಲಾಯಿತು. ನಿರ್ಧರಿಸಲ್ಪಟ್ಟ ರಾತ್ರಿ, ಅವರಲ್ಲಿ ಇಬ್ಬರು ಸೆರೆಮನೆಯ ಬಾಗಿಲನ್ನು ನಕಲು ಬೀಗದ ಕೈಯಿಂದ ತೆಗೆಯಬೇಕೆಂದೂ, ಬೇರೆಯವರಿಗೆ ಸನ್ನೆ ಮಾಡಬೇಕೆಂದೂ ತೀರ್ಮಾನಿಸಿದರು. ಉಳಿದವರೆಲ್ಲರೂ ತಪ್ಪಿಸಿಕೊಂಡು ಹೋದ ನಂತರ ಅವರಿಬ್ಬರೂ ಬಾಗಿಲಿಗೆ ಬೀಗ ಹಾಕಿ ಇತರರನ್ನು ಹಿಂಬಾಲಿಸಬೇಕೆಂದಾಯಿತು.
ತಪ್ಪಿಸಿಕೊಳ್ಳುವ ದಿನ ಬಂದಿತು ಮತ್ತು ಬಾಗಿಲನ್ನು ತೆಗೆಯಲು ಅವರಲ್ಲಿ ಇಬ್ಬರು ಹೋದರು. ಉಳಿದವರು ಇವರ ಸನ್ನೆಗಾಗಿ ಕಾಯುತ್ತಿದ್ದರು. ಅವರು ಕಾಯುತ್ತಾ, ಕಾಯುತ್ತಲೇ ಇದ್ದರು. ಆದರೆ ಯಾವ ಸನ್ನೆಯೂ ಬರಲೇ ಇಲ್ಲ. ಮೂರು ಗಂಟೆಗಳು ಕಳೆದವು. ಇದ್ದಕ್ಕಿದ್ದಂತೆಯೇ ಬಾಗಿಲು ತೆಗೆಯಲು ಹೋಗಿದ್ದ ಆ ಇಬ್ಬರೂ ಬಂದು, 'ನಾವು ತಪ್ಪಿಸಿಕೊಳ್ಳುವ ನಮ್ಮ ಯೋಜನೆಯನ್ನು ಕೈಬಿಡಬೇಕಾಗಿಬಂದಿದೆ. ಅದು ಈ ದಿನ ಸಾಧ್ಯವಿಲ್ಲ. ನಾವು ಅದನ್ನು ಇನ್ನೊಂದಾದರೂ ಮಾಡಬೇಕು. ನಾವು ತಪ್ಪಿಸಿಕೊಳ್ಳುವುದನ್ನು ಮತ್ತೆ ಯೋಜಿಸಬೇಕು' ಎಂದರು.
ಉಳಿದವರೆಲ್ಲರೂ, 'ಏಕೆ, ಏನಾಯಿತು?' ಎಂದು ಕೇಳಿದರು.
ಅವರು, 'ಏನು ಮಾಡುವುದು? ಮೂರ್ಖರಾದ
ರಕ್ಷಕರು ಬೀಗ ಹಾಕುವುದನ್ನೇ ಮರೆತಿದ್ದಾರೆ!'
ಎಂದು ಉತ್ತರಿಸಿದರು.
ವೇದಾಂತಿಗಳಂತೆ ವರ್ತಿಸುವವರು
ಹೊಸದೇನನ್ನೂ ಯೋಚಿಸಲಾರರು. ಅವರು
ಯೋಚಿಸುವ ರೀತಿಯು ಮತ್ತೆ ಹಳೆಯದೇ.
ಏನಾದರೂ ಸ್ವಲ್ಪ ಬದಲಾವಣೆ ಆದರೆ ಅಥವಾ
ಹೊಸ ಸಂದರ್ಭ ಒದಗಿದಲ್ಲಿ, ಕಲ್ಪನಾಶಕ್ತಿಯಿಂದ
ಅವರು ಅದನ್ನೆದುರಿಸಲಾರರು, ಏಕೆಂದರೆ ಅವರು
ತೆರೆದ ಮನಸ್ಸಿನವರಾಗಿರುವುದಿಲ್ಲ.
ನಮ್ಮ ಜೀವನದಲ್ಲಿ ವ್ಯವಹರಿಸುವಾಗ ನಾವೂ ವೇದಾಂತಿಗಳಂತಾಗುತ್ತೇವೆ. ಹಳೆಯ ಮಾದರಿಗಳಲ್ಲಿಯೇ ಸಿಕ್ಕಿಹಾಕಿಕೊಂಡುಬಿಟ್ಟಿದ್ದೇವೆ. ನಾವು ಈ ಕ್ಷಣದಲ್ಲಿರುವುದೇ ಇಲ್ಲ. ಹೊಸದೇನಾದರೂ ಆಯಿತೆಂದರೆ ನಮಗೆ ಏನು ಮಾಡಬೇಕೆಂಬುದೇ ತೋಚುವುದಿಲ್ಲ.
ವೇದಾಂತದಿಂದ ನಿಮಗೆ ನಿರ್ದಿಷ್ಟವಾದ
ಯೋಚನೆಗಳುಂಟಾಗುತ್ತವೆ ಮತ್ತು ಬಹಳವಾಗಿ
ಪ್ರತಿಪಾದಿಸುತ್ತೀರಿ. ಪ್ರತಿಪಾದನೆ ಅತಿಯಾದಾಗ
ನೀವು ಪ್ರೀತಿಸಲಾರಿರಿ. ಪ್ರತಿಪಾದನೆಯು ಒಂದು
ನಿರ್ದಿಷ್ಟವಾದ ಆಕ್ರಮಣಕಾರಿ ಪ್ರವೃತ್ತಿಯಾಗಿದ್ದು, ಅದು ಪ್ರೀತಿಯು ಪ್ರವೇಶಿಸಲು ಅವಕಾಶ ಕೊಡುವುದಿಲ್ಲ. ನೀವು ಅತಿ ನಿಶ್ಚಿತಮನಸ್ಕರಾಗಿ ಪೂರ್ವಭಾವಿಯಾದ ಭಾವನೆಗಳಿಂದ ತುಂಬಿದ್ದರೆ, ಪ್ರೀತಿ ಪ್ರವೇಶಿಸಲು ಅವಕಾಶವೆಲ್ಲಿದೆ? ಪ್ರೀತಿಯು ಅರಳಲು ಸುಂದರವಾದ ಅವಕಾಶಬೇಕು.
ವೇದಾಂತದೊಂದಿಗೆ ಪ್ರೀತಿಯು ಸಹಜವಾಗಿ ನೆಲೆಗೊಳ್ಳಲು ಎಡೆಯಿಲ್ಲ. ಅದು ಹೀಗೆ: ನಿಜವಾಗಿಯೂ ನೀವು ಅಮೃತದ ಸವಿಯನ್ನು ಸವಿಯಬೇಕಾದರೆ, ಅದರ ಬಗ್ಗೆ ನಿಮಗಿರುವ ಕೇವಲ ಕೆಲವು ಕಲ್ಪನೆಗಳಿಂದ ಸಾಧ್ಯವೇ? ಇಲ್ಲ! ನೀವೇ ಅಮೃತವನ್ನು ಸವಿದು ನೋಡಬೇಕಾಗುತ್ತದೆ. ಅದಕ್ಕೆ ಸ್ವಲ್ಪ ಅವಕಾಶಕೊಡಿರಿ. ಅದನ್ನು ನಿಮ್ಮೊಳಗೆ ತುಂಬಿಕೊಳ್ಳಿರಿ ಮತ್ತು ವಿಸ್ತಾರವಾಗಿ ವ್ಯಾಪಿಸಲು ಅದನ್ನು ಬಿಡಿರಿ; ಆಗ ನಿಮಗದರ ರುಚಿಯ ಅರಿವಾಗುತ್ತದೆ. ಅದೇ ರೀತಿ, ಪ್ರೀತಿಯನ್ನನುಭವಿಸಬೇಕಾದರೆ ಪ್ರೀತಿಯ ಬಗ್ಗೆ ಕೇವಲ ಕೆಲವೇ ಕಲ್ಪನೆಗಳು ಮಾತ್ರ ಸಹಾಯಮಾಡಲಾರವು. ನೀವು ನಿಮ್ಮ ಅಂತರಾಳದಲ್ಲಿ ಅದನ್ನು ವಿಸ್ತಾರವಾಗಿ ಬೆಳೆಯಲು ಬಿಡಬೇಕಾಗುತ್ತದೆ. ಆಗ ನಿಮಗೆ ಅದು ತಿಳಿಯುತ್ತದೆ. ನಿಮ್ಮ ಹೃದಯದಲ್ಲಿ ಅದನ್ನು ಸಂಭವಿಸಲು ಬಿಡಿರಿ, ತಲೆಯಲ್ಲಲ್ಲ. ಹೃದಯದೊಡನಿರಲು ನಿಶ್ಚಯಿಸಿರಿ, ಆಗ ಅದು ವರ್ಧಿಸಿ, ಸಂಭವಿಸುತ್ತದೆ.
ಯಾವುದು ಒಂದು ಬಾರಿ ತಲೆಯಲ್ಲಿ
ಸೋಲನ್ನೊಪ್ಪಿಕೊಂಡಿತ್ತೋ ಅದು
ಹೃದಯಾಂತರಾಳದಲ್ಲಿ ಜಯಗಳಿಸಲು ಸಾಧ್ಯ!
ಪ್ರೀತಿಯೆಂಬುದು ಪ್ರತಿ ವ್ಯಕ್ತಿಯೂ ಹೃದಯದಲ್ಲಿ
ಅನುಭವಿಸಲೇ ಬೇಕಾದ ಒಂದು ಗೆಲುವು. ಅದು
ತಲೆಯಲ್ಲಿ ಉಳಿಯುವುದು ಸುಲಭ; ಎಷ್ಟೇ ಆದರೂ
ಅದು ನಮಗೆ ತಿಳಿದಿರುವ ಪರಿಚಿತವಾದ
ವಿಚಾರಮಾಡುವ ಶಕ್ತಿ. ಹೃದಯಕ್ಕಿಳಿಯಬೇಕಾದರೆ
ಅದಕ್ಕೆ ಧೈರ್ಯ ಬೇಕಾಗುತ್ತದೆ. ಏಕೆಂದರೆ
ಹೃದಯಕ್ಕೆ ಯಾವುದೂ ಪರಿಚಿತವಲ್ಲ. ಎಲ್ಲವೂ
ನೂತನ. ಬುದ್ಧಿಯ ಮಟ್ಟದಲ್ಲಿ ಭದ್ರವಾದ ಸಾಮ್ಯತೆ
ಮತ್ತು ಪರಿಚಿತವೇ ಆದ ನಮೂನೆಗಳು
ಕಂಡುಬರುತ್ತವೆ. ಹೃದಯದ ಮಟ್ಟದಲ್ಲಿ
ಸಾಮ್ಯತೆಯೂ ಕಂಡುಬರುವುದಿಲ್ಲ, ನಮೂನೆಯೂ
ಇಲ್ಲ. ಅದೊಂದು ತೆರೆದ ಸ್ಥಳದಂತೆ. ಅದರೊಳಗೆ
ಪ್ರವೇಶಿಸಲು ಮಹತ್ತರವಾದ ಧೈರ್ಯಬೇಕಾಗುತ್ತದೆ.
ಅದಕ್ಕೋಸ್ಕರವೇ ಕೆಲವರಿಗೆ ಪ್ರೀತಿಯು ಭಯಾನಕ.
ಅದೊಂದು ಅಪರಿಚಿತ ವಲಯ. ಬುದ್ಧಿಮಟ್ಟದಲ್ಲಿ
ಹಿತಕರವಾದ ಪರಿಚಯವಿರುತ್ತದೆ.
ಅಹಂಕಾರ ಅಗಲಿಸುತ್ತದೆ - ಪ್ರೀತಿ ಒಂದುಗೂಡಿಸುತ್ತದೆ
ವಿಶ್ವವು ಒಂದು ಮಹಾಸಾಗರವಾದರೆ
ನಾವೆಲ್ಲರೂ ಅದರ ಅಂಶ. ನಾವು ಸಾಗರದೊಡನೆ
ಒಂದಾಗಿದ್ದೇವೆ. ವೈಯಕ್ತಿಕ ಹನಿಗಳಲ್ಲ. ನಾವು
ನಮ್ಮನ್ನು ಪ್ರತ್ಯೇಕ ಹನಿಗಳು ಎಂದುಕೊಂಡಾಗ ನಮ್ಮ
ಭಾವನೆಗಳಲ್ಲೂ ಎಲ್ಲೆಗಳಲ್ಲೂ ಬೇರೆಯಾಗಿದ್ದೇವೆ
ಎನಿಸುತ್ತದೆ. ಇದನ್ನೇ ಅಹಂಕಾರ ಎನ್ನುವುದು.
ಅಹಂಕಾರ ಮಮಕಾರಗಳು ನಮ್ಮ ಪ್ರಚೋದಕ
ಶಕ್ತಿಗಳಾಗುತ್ತವೆ. ಎಲ್ಲಿಯವರೆಗೆ ಈ ಬೇರ್ಪಡೆ
ಇರುತ್ತದೆಯೋ ಅಲ್ಲಿಯವರೆಗೂ ಪ್ರೀತಿಯೇ
ಆಗಿರುವ ಈ ಸಾಗರದ ಶಕ್ತಿಯ ಅನುಭವವು
ನಮಗಾಗದು. ಕಾರಣವಿಲ್ಲದ ಮತ್ತು ಉಕ್ಕಿಬರುವ
ಆ ಪ್ರೀತಿಯ ಅನುಭವವು ನಮಗಾಗುವುದೇ ಇಲ್ಲ.
ನಾವು ಎಲ್ಲಿಯವರೆಗೆ ಸಾಗರದ ಒಂದು
ಹನಿಯಾಗಿ ಉಳಿಯುತ್ತೇವೆಯೋ ಅಲ್ಲಿಯವರೆಗೂ
ನಾವು ಜೀವನಕ್ಕೆ 'ನಕಾರ' ಹೇಳುತ್ತೇವೆ. ನಾವು
ಪ್ರೀತಿಸುವುದೂ ಇಲ್ಲ, ನಂಬುವುದೂ ಇಲ್ಲ.
ಆನಂದದ ಸುಖವೂ ನಮಗಾಗದು, ಏಕೆಂದರೆ
ಯಾರು ಪ್ರೀತಿ ಹಾಗೂ ನಂಬಿಕೆಯನ್ನರಿತಿರುವರೋ
ಅವರಿಗೆ ಮಾತ್ರ ಪರಮಸುಖದ ಅರಿವಾಗಲು ಸಾಧ್ಯ.
ತಾವು ಸಾಗರದ ಭಾಗವೆಂದು ತಿಳಿದಿರುವವರೆಗೆ
ಮಾತ್ರ ಅದು ಸಾಧ್ಯ. ನಮ್ಮ ಹೃದಯ 'ಹೌದು'
ಎಂದಾಗ, 'ನ'ಕಾರವು ಆಗ ನಮ್ಮ ಅಸ್ತಿತ್ವದಿಂದ
ಸಂಪೂರ್ಣವಾಗಿ ಕಣ್ಮರೆಯಾದಾಗ ಮಾತ್ರ
ಆನಂದದಲ್ಲಿರಲು ಸಾಧ್ಯ. 'ನ'ಕಾರವು ಕತ್ತಲೆ,
'ಹೌದು' ಎಂಬುದು ಪ್ರಕಾಶ. 'ನ'ಕಾರವು ಅಹಂಕಾರ,
'ಹೌದು' ಎಂಬುದು ಅಹಂಕಾರ ಇಲ್ಲದಿರುವಿಕೆ.
'ಇಲ್ಲ'ವೆನ್ನುವುದು ಪ್ರಜ್ಞಾಹೀನನ ಮಾರ್ಗ. 'ಹೌದು' ಎನ್ನುವುದು ಪ್ರಜ್ಞಾವಂತನ ಮಾರ್ಗ. ನಮ್ಮ ಜೀವನದ ಎಲ್ಲಾ ಹೊಯ್ದಾಟಗಳೂ, ದುಃಖಗಳೂ ನಾವು 'ಇಲ್ಲ' ಎನ್ನುವುದರಿಂದಲೇ. 'ಇಲ್ಲ' ಎನ್ನುವುದು ಅಸ್ತಿತ್ವದೊಡನೆ ಯುದ್ಧ. 'ಹೌದು' ಎನ್ನುವುದು ಅಸ್ತಿತ್ವದೊಡನೆ ಶಾಂತಿ ಮತ್ತು ಪ್ರೀತಿ. 'ಹೌದು' ಎನ್ನುವುದು ಮಹಾಸಾಗರದೊಡನೆ ಎಂದರೆ ನಾವು ಏನಾಗಿರುವೆವೋ ಅದರೊಡನೆ ಹೊಂದಿಕೆಯಂದಿರುವುದು. ಪರಮ ಆನಂದ ಅಥವಾ ಬ್ರಹ್ಮಾನಂದವೆಂಬುದು ಆ ಹೊಂದಿಕೆಗೆ, ಆ ಸಾಮರಸ್ಯಕ್ಕೆ ಮತ್ತೊಂದು ಹೆಸರು.
ಸಮುದ್ರದೊಳಗೆ ಕರಗುವುದೇ ಪರಮ ಸುಖದಲ್ಲಿರಲು ದಾರಿ, ಒಂದು ಹನಿಯಾಗಿರುವುದಲ್ಲ. ಸಮುದ್ರದಲ್ಲಿ ಐಕ್ಯವಾಗುವುದು, ಹನಿಯಾಗಿ ಉಳಿಯುವುದು, ಒಂದಾ ಅಡೆತಡೆಯಂತೆಯೇ. ಹನಿಯಾಗಿರುವುದು ಅಹಂಕಾರದೊಂದಿಗೆ ಇದ್ದಂತೆಯೇ. ಅಹಂಕಾರ ಎನ್ನುವುದು ಎಲ್ಲಾ ದುಃಖಗಳ ಮೂಲ. ಅಹಂಕಾರ ಇಲ್ಲದಿದ್ದಾಗ ಅಹಂಕಾರ ಮಾಯವಾಗಿಬಿಡಲೆಂದು ಅದು ಕಾಯುತ್ತಿತ್ತೇನೋ ಎಂಬಂತೆ, ಆನಂದವು ಅಸ್ತಿತ್ವದ ಮಹಾಸಾಗರದ ಮೂಲೆ ಮೂಲೆಗಳಿಂದಲೂ ಬಂದು ನಮ್ಮನ್ನಾವರಿಸುತ್ತದೆ.
ಅಹಂಕಾರ ಎಂಬುದು ಮುಚ್ಚಲ್ಪಟ್ಟ ಒಂದು ಪ್ರಜ್ಞಾಸ್ಥಿತಿ. ಎಲ್ಲಾ ಕಿಟಕಿಗಳೂ ಬಾಗಿಲುಗಳೂ ಮುಚ್ಚಲ್ಪಟ್ಟಿರುತ್ತವೆ. ಜೀವನವು ಒಂದು ದ್ವೀಪವಾಗಿ, ಅದನ್ನು ಪೊರೆಯಚೀಲ ಮುಚ್ಚಿಬಿಡುತ್ತದೆ. ನಮ್ಮ ಅಹಂಕಾರ ಪೊರೆಯ ಚೀಲದಂತೆ, ನಮ್ಮನ್ನು ಆವರಿಸಿಬಿಟ್ಟಿರುತ್ತದೆ. ನಮ್ಮ ಅಹಂಕಾರವು ಮೊಹರು ಮಾಡಿದ ಪೊರೆಯ ಚೀಲದಂತೆ, ಒಳಹೋಗಲು ಒಂದು ಸಣ್ಣ ತೆರವು ಕೂಡ ಇರುವುದಿಲ್ಲ. ಭಯದಿಂದ ತನ್ನೊಳಗೇ ಮುಚ್ಚಿಕೊಳ್ಳುತ್ತದೆ ಮತ್ತು ತನ್ನೊಳಗೇ ಕುಗ್ಗಿಬಿಡುತ್ತದೆ. ಇದರಿಂದಲೇ ನಮಗೆ ನಾವೇ ಕ್ಲೇಶವನ್ನು ತಂದುಕೊಳ್ಳುವುದು.
ಪ್ರೀತಿಯೆಂದರೆ ಸಂಪೂರ್ಣವಾಗಿ ವಿಶ್ವಶಕ್ತಿಯೊಡನಿದ್ದು ಅದರ ಜೊತೆಯಲ್ಲಿಯೇ ಹರಿಯುವುದೇ ಆಗಿದೆ. ಅಹಂಕಾರ ಎಂಬುದು
ಗಟ್ಟಿಯಾದ ಮಂಜುಗಡ್ಡೆಯಂತೆ. ಪ್ರೀತಿಯು
ನೀರಿನಂತೆ ದ್ರವ. ನಾವು ದ್ರವವಾದಾಗ ಮಾತ್ರ
ಸಾಗರದ ಭಾಗವಾಗುವುದು. ಆಗ ನಮಗೆ
ಸ್ವಂತವಾದ ಗುರಿ ಅಥವಾ ಗಮ್ಯಸ್ಥಾನ ಇರುವುದಿಲ್ಲ.
ಪ್ರತಿಕ್ಷಣವೂ ಆನಂದದಿಂದ ತುಂಬಿ ನಂಬಲಾರದಷ್ಟು
ಭಾವೋದ್ರೇಕದಿಂದ ಕೂಡಿ ವಿಶ್ವದ
ಯೋಜನೆಯೊಂದಿಗೆ ಬೆರೆತುಬಿಡುವಂತಾಗುತ್ತದೆ.
ಸುಮ್ಮನೆ ಇದ್ದು ವಿಶ್ವಶಕ್ತಿಯೊಂದಿಗೆ ಹರಿಯುವುದು ಅತ್ಯಂತ ಸಂತೋಷಕರ. ಕೇವಲ 'ಇರುವುದು' ಸಾಕು. ನಮ್ಮ ಅಸ್ತಿತ್ವದ ಆನಂದವನ್ನು ಅನುಭವಿಸಲು ನಾವು ಸೂಕ್ಷ್ಮ ಸಂವೇದಿಯಾಗಿರಬೇಕಾಗುತ್ತದೆ. ನಾವು ಸಂವೇದಿಕೆಗಳನ್ನು ಬೆಳೆಸಬೇಕಾಗುತ್ತದೆ. ಆ ಸಂವೇದಿಕೆ ಅಥವಾ ಭಾವವನ್ನೇ ನಾವು ಪ್ರೀತಿ ಎನ್ನುವುದು. ಪ್ರೀತಿಯು ಕೇವಲ ಅಸ್ತಿತ್ವದ ಸುಖವನ್ನು ಅನುಭವಿಸುತ್ತದೆ. ಆ ಭಾವನೆಗಳನ್ನು ಬೆಳೆಸಿಕೊಂಡಾಗ, ಜೀವನವು ಸ್ವಂತ ಆಲೋಚನೆಗಳಿಂದ ಕೂಡಿರುವುದಿಲ್ಲ, ಬದಲಾಗಿ ನಿರಂತರವಾದ ಅನುಭವವಾಗುತ್ತದೆ. ಆಗ ಅಹಂಕಾರವು ಕರಗಲಾರಂಭಿಸುತ್ತದೆ. ಒಮ್ಮೆ ಯೋಚನೆಯಿಂದ ಅನುಭೂತಿಗೆ ಜರುಗಿದಾಗ ಅಲ್ಲಿಂದ ಅಸ್ತಿತ್ವಕ್ಕೆ ಒಂದೇ ಹೆಜ್ಜೆ ಮತ್ತು ಅದು ಬಹಳ ಸುಲಭ.
ಮೊದಲ ಹೆಜ್ಜೆ ಕಷ್ಟ : ಯೋಚನೆಯಿಂದ
ಅನುಭವಕ್ಕೆ ಸರಿಯುವುದು; ಕಾರಣ, ಅಹಂಕಾರವು
ಮಾನಸ್ಸಿಗೆ ಯೋಚಿಸುವ ತರಬೇತಿ ಸಾಕಷ್ಟ
ಕೊಟ್ಟಿರುತ್ತದೆ. ಎರಡನೆಯ ಹೆಜ್ಜೆ ತಾನಾಗಿಯೇ
ಬಂದುಬಿಡುತ್ತದೆ. ಅದು ಸಂಭವಿಸಲು ನಾವು
ಮಾಡಬೇಕಾದುದೇನೂ ಇಲ್ಲ. ಅನುಭವದಿಂದ
ಅಸ್ತಿತ್ವಕ್ಕೆ ಬರಲು ದೂರವೇ ಇಲ್ಲ. ಯಾವ
ಕ್ಷಣದಲ್ಲಾದರೂ ಅದು ಆಗಬಹುದು. ಕವಿಯು
ಯಾವ ಕ್ಷಣದಲ್ಲಾದರೂ ಯೋಗಿಯಾಗಿಬಿಡಬಲ್ಲ.
ಆತನು ಬಳಿಯೇ ಇರುವನು. ನಿಜವಾದ
ಸಮಸ್ಯೆಯೆಂದರೆ ಯೋಚನೆಯನ್ನು ದಾಟಿ
ಹೊರಬಂದು ಅನುಭೂತಿಯೊಳಕ್ಕೆ ಇಳಿಯುವುದು
ಹೇಗೆ ಎಂಬುದು.
ಸುಮ್ಮನೆ ಹೃದಯವನ್ನು ಅನುಸರಿಸಿ. ಹೆಚ್ಚಾಗಿ ಪ್ರೀತಿಸಿರಿ, ಅಷ್ಟೇ. ನಿಮ್ಮ ಹೃದಯಕ್ಕೆ ಆಹಾರವಾಗುವ ಹಾಗೆ ಇನ್ನೂ ಬಹಳವಾಗಿ ಆನಂದಿಸಿರಿ. ಸೂರ್ಯೋದಯವನ್ನು ವೀಕ್ಷಿಸಿರಿ. ಹಾಗೆಯೇ ಸೂರ್ಯಾಸ್ತಮಾನ, ಮೋಡಗಳು, ಕಾಮನಬಿಲ್ಲು, ಪಕ್ಷಿಗಳು, ಪುಷ್ಪಗಳು, ಪ್ರಾಣಿಗಳು, ಬಂಡೆಗಳು ಮತ್ತು ಜನರನ್ನು; ಅವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ವೀಕ್ಷಿಸಿರಿ. ವಿಶ್ವಶಕ್ತಿಯೆಂಬುದು ಅದೆಷ್ಟು ಆಯಾಮಗಳುಳ್ಳದ್ದು! ಒಬ್ಬ ಕವಿಯಂತೆ ಪ್ರತಿಯೊಂದು ಆಯಾಮವನ್ನೂ ವೀಕ್ಷಿಸಿರಿ, ಹೊಗಳಿರಿ, ಅನುಭವಿಸಿರಿ, ಆನಂದಾತಿಶಯದಲ್ಲಿರಿ! ನಿಮ್ಮ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಿರಿ ಮತ್ತು ಪ್ರೀತಿಯಿಂದ ವಿಶ್ವಶಕ್ತಿಯ ಪ್ರತಿಯೊಂದು ವಿವರವನ್ನೂ ಅನುಭವಿಸಿರಿ. ಸಾವಕಾಶವಾಗಿ ಅಹಂಕಾರ ಎಂಬುದು ತನ್ನ ಹಿಡಿತವನ್ನು ಸಡಿಲಗೊಳಿಸಿಕೊಂಡು ಮಾಯವಾಗುವುದು.
ಪ್ರೀತಿಗೆ ಒಂದೇ ಅಡೆತಡೆ, ಅದು ಭಯ.
ಆಗುಹೋಗುಗಳು ಪ್ರಾರಂಭವಾದಾಗ ನಾವು
ಭಯಕ್ಕೊಳಗಾಗುತ್ತೇವೆ. ಏಕೆಂದರೆ ಪ್ರೀತಿಯಿಂದ
ಐಕ್ಯತೆಯೊಳಗೆ ಪ್ರವೇಶಿಸುತ್ತೇವೆ. ನಮ್ಮ
ಅಹಂಕಾರದ ತಳಪಾಯವನ್ನೇ ಇದು ಬೆದರಿಸುತ್ತದೆ. ಅಹಂಕಾರ ಎಂಬುದು ಬೇರ್ಪಡಿಸುವಿಕೆ, ಪ್ರೀತಿಯೆಂಬುದು ಐಕ್ಯತೆ. ನಾವು ಅನುಭವಿಸುವ ಆ ಹೆದರಿಕೆಯು ಅಹಂಕಾರವು ಎಲ್ಲಿ ಮಾಯವಾಗಿಬಿಡುವುದೋ ಎಂಬ ಭಯ ಅಷ್ಟೇ, ಮತ್ತೇನಲ್ಲ. ಭಯವಿರಲಿ. ಅದು ಸ್ವಲ್ಪಕಾಲ ಸುತ್ತಾಡುತ್ತದೆ. ಅದನ್ನು ನಾವು ಸುಮ್ಮನೆ ಕಡೆಗಣಿಸಿದರೆ, ಅಹಂಕಾರವು ನಮ್ಮನ್ನು ಬಿಡುತ್ತದೆ. ಅಹಂಕಾರವನ್ನು ಕಳಚಿಕೊಳ್ಳುವ ಹೆದರಿಕೆಯನ್ನು ಬಿಟ್ಟ ದಿನವೇ ಸುದಿನ. ಅಂದಿನಿಂದ ಅಭಿವೃದ್ಧಿಯು ಸರಳವೂ ಸುಲಭವೂ ಮತ್ತು ಸ್ವಯಂ ಪ್ರೇರಿತವೂ ಆಗುತ್ತದೆ. ಆಮೇಲೆ ನಾವಿರುವುದೇ ಇಲ್ಲ, ಪ್ರೇಮವೊಂದೇ ಇರುವುದು.
ಪ್ರತಿಕ್ಷಣವೂ ಪ್ರೀತಿಸುವವರಾಗಿರಿ
ಜೀವನದ ಯಾವುದೇ ಸಂದರ್ಭವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿರಿ. ಕೂಡಲೇ ನೀವು ಅಪ್ಪಟ ಪ್ರೀತಿಯೇ ಆಗಿಬಿಡುತ್ತೀರಿ. ಅದು ವ್ಯಕ್ತಿಯಾಗಿರಬಹುದು, ನಿಮ್ಮ ಕೆಲಸವಾಗಿರಬಹುದು, ಹೋಗಿಬರುವವರಾಗಿರಬಹುದು, ದೇವರೋ ಅಥವಾ ಬೇರೆ ಏನೇ ಆಗಿರಬಹುದು. ಪ್ರೀತಿಗೋಸ್ಕರವೇ ಅದನ್ನು ಅತ್ಯಂತ ಪ್ರೀತಿಯಿಂದಲೇ ಆದರಿಸಿ. ನೀವು ಚಿತ್ರಕಾರರಾಗಿದ್ದರೆ ಚಿತ್ರಬಿಡಿಸುವುದರಲ್ಲೇ ಸಂಪೂರ್ಣ ಪ್ರೀತಿಯಿರಲಿ. ನೀವು ನೃತ್ಯಗಾರರಾಗಿದ್ದರೆ ನೃತ್ಯವನ್ನು ತುಂಬು ಮನಸ್ಸಿನಿಂದ ಪ್ರೀತಿಸಿರಿ. ನಿಮ್ಮ ಕಂಪ್ಯೂಟರ್ನಲ್ಲಿ ನೀವು ಕೆಲಸ ಮಾಡುತ್ತಿದ್ದರೆ ಅತ್ಯಂತ ಪ್ರೀತಿಯಿಂದ ಅದನ್ನು ಕಾಣಿರಿ ಮತ್ತು ಅದರೊಡನೆ ಮೈಮರೆಯಿರಿ. ಪ್ರತಿಕ್ಷಣವೂ ಸಂಪೂರ್ಣವಾಗಿ ಪ್ರಾಮಾಣಿಕರಾಗಿರಿ ಮತ್ತು ಸಂಪೂರ್ಣವಾಗಿ ಪ್ರೀತಿಮಯರಾಗಿರಿ.
ನೀವು ಒಂದು ಚಿತ್ರವನ್ನು ರಚಿಸುತ್ತಿರುವಾಗ ಚಿತ್ರವನ್ನು ಯಾವ ಚಿತ್ರಶಾಲೆಯಲ್ಲಿ ಪ್ರದರ್ಶಿಸಲಿ ಎಂದೋ ಅಥವಾ ಅದನ್ನು ಎಷ್ಟಕ್ಕೆ ಮಾರಲಿ ಎಂದೋ ಯೋಚಿಸುತ್ತಾ ಇದ್ದಲ್ಲಿ, ನೀವು ಪ್ರೀತಿಯಲ್ಲಿ ಲೀನವಾಗಿಲ್ಲವೆಂದು ಸರಿಯಾಗಿ ಅರ್ಥ ಮಾಡಿಕೊಳ್ಳಿರಿ. ನೀವು ಒಂದು ನಿರ್ದಿಷ್ಟವಾದ ವಿಚಾರವನ್ನು ಮಾತ್ರ ಪ್ರೀತಿಸುತ್ತಿರುತ್ತೀರಿ. ಈ ಉದಾಹರಣೆಯಲ್ಲಿ ‘ಹಣ’ವನ್ನು ಎಂದುಕೊಳ್ಳೋಣ. ನೀವು ನರ್ತಿಸುವಾಗ, ನರ್ತನ ಮುಗಿದಾಗ ನಿಮಗೇನು ಸಿಗಬಹುದೆಂದು ಲೆಕ್ಕಹಾಕುತ್ತಿದ್ದರೆ, ಆಗ ನೀವು ಪ್ರೇಮದಲ್ಲಿ ಲೀನವಾಗಿಲ್ಲವೆಂದು ತಿಳಿಯಿರಿ. ಹೀಗೆ ಮಾಡುವುದರಿಂದ ಇನ್ನೂ ಹೆಚ್ಚು ಹೆಚ್ಚು ಬಂಧನಕ್ಕೊಳಗಾಗುವಿರಿ.
ಪ್ರತಿಕ್ಷಣದಲ್ಲೂ ನೀವು ಮೈಮರೆತರೆ ನೀವೇ ಪ್ರೀತಿಯಾಗುತ್ತೀರಿ. ಆಮೇಲೆ ನೀವು ಕೆಲಸ ಮಾಡಿದಾಗ, ಅತ್ಯಂತ ಕೇಂದ್ರೀಕೃತ ಮನಸ್ಕರಾಗಿ ಕೆಲಸ ಮಾಡುವಿರಿ. ಏಕೆಂದರೆ ನೀವು ಅದರೊಡನೆ ತೀವ್ರ ಪ್ರೀತಿಯನ್ನು ತಳೆದಿದ್ದೀರಿ. ಹೀಗೆ ನಿಮ್ಮ ಜೀವನವೇ ಆಳವಾದ ಧ್ಯಾನೀಯ ಪ್ರೀತಿಯಾಗಿಬಿಡುತ್ತದೆ.
ನಿಮ್ಮಂತೆಯೇ ಪ್ರತಿಯೊಂದೂ ಕೂಡ ಒಂದು
ಜೀವಿಯೆಂದು ಭಾವಿಸಿ ಅವುಗಳೊಡನೆ ಸಂಬಂಧ
ಕಲ್ಪಿಸಿ ಅವುಗಳನ್ನು ಗೌರವಿಸುವಿರಿ. ಬೇರೊಬ್ಬರ
ಯೋಚನೆಗಳ ಅನುಭೂತಿ
ನಿಮಗಾಗಲಾರಂಭಿಸುತ್ತದೆ. ಬೇರೊಬ್ಬರು
ನಿಮಗೇನೂ ಹೇಳದೆಯೇ ನೀವು ಅವರೊಂದಿಗೆ ಸ್ಪಂದಿಸುತ್ತೀರಿ. ವಿಶ್ವವು ಪ್ರಕಾಶಭೇದ್ಯವಾದುದೆನಿಸುತ್ತದೆ, ಶಾಶ್ವತವಾದ ಅಸ್ತಿತ್ವ ಎನಿಸುತ್ತದೆ. ನೀವು ಮಹತ್ತರವಾದ ಬುದ್ಧಿಶಕ್ತಿಯನ್ನು ಪಡೆಯುವಿರಿ. ನೀವು ಜಗತ್ತಿನೊಡನೆ ಹೇಗೆ ಸಂಬಂಧ ಕಲ್ಪಿಸಬೇಕೆಂಬುದನ್ನು ಅರಿಯುವಿರಿ. ಇದೇ ಪ್ರೇಮದ ಶಕ್ತಿ.
ಸೂಫಿ ಸಂತರಾದ ಜಲಾಲುದ್ದೀನ್ ರೂಮಿ ಹೇಳುತ್ತಾರೆ, 'ನೀವೆಲ್ಲೇ ಇರಿ, ಯಾವ ಸ್ಥಿತಿಯಲ್ಲೇ ಇರಿ, ಯಾವಾಗಲೂ ಒಬ್ಬ ಪ್ರೀತಿಸುವವರಾಗಿರಲು ಪ್ರಯತ್ನಿಸಿರಿ!' ಎಂದು. ಇಡೀ ವಿಶ್ವಶಕ್ತಿಯು ತನ್ನನ್ನು ತಾನೇ ಗಾಢವಾಗಿ ಪ್ರೀತಿಸುತ್ತಿರುತ್ತದೆ. ನೀವೂ ಅದರ ಒಂದು ಭಾಗ. ಆದ್ದರಿಂದ ನೀವೂ ಪ್ರತಿ ನಿಮಿಷವೂ ಪ್ರೀತಿಸುವವರಾಗಿರುವುದು ನಿಮ್ಮ ಸ್ವಭಾವ. ಹಾಗಿದ್ದರೆ ಮಾತ್ರ ನೀವು ನಿಮ್ಮ ಮೂಲಭೂತ ಸ್ವಭಾವದ, ನಿಜವಾದ ಪರಿಪೂರ್ಣತೆಯನ್ನು ಅನುಭವಿಸಲು ಸಾಧ್ಯ.
ಮೊದಲು ನಿಮ್ಮನ್ನು ನೀವು ಪ್ರೀತಿಸಿರಿ
ಇಂದಿನ ಒಂದು ದೊಡ್ಡ ಸಮಸ್ಯೆ ಏನೆಂದರೆ, ಬಹಳ ಜನರು ತಮ್ಮನ್ನೇ ತಾವು ಪ್ರೀತಿಸದೇ ಇರುವುದು. ನಮ್ಮನ್ನು ನಾವೇ ಪ್ರೀತಿಸಿಕೊಳ್ಳಲು ಸಾಧ್ಯವೆಂಬುದನ್ನು ಸಮಾಜವು ಬೋಧಿಸುವುದೇ ಇಲ್ಲ. ತಿಳಿಯಿರಿ, ನಿಮ್ಮನ್ನು ನೀವು ಪ್ರೀತಿಸದ ಹೊರತು ಬೇರೊಬ್ಬರನ್ನು ಪ್ರೀತಿಸಲು ಸಾಧ್ಯವೇ ಇಲ್ಲ. ನಿಮ್ಮನ್ನು ನೀವು ಪ್ರೀತಿಸಿಕೊಳ್ಳದಿದ್ದರೆ ಬೇರೆಯವರು ನಿಮ್ಮನ್ನು ಪ್ರೀತಿಸಲಾರರು. ನಮ್ಮನ್ನು ನಾವು ಪ್ರೀತಿಸಿಕೊಳ್ಳಲು ಕೂಡ ಒಂದು ಕಾರಣ ಬೇಕೆಂದು ನಮಗೆ ಬೋಧಿಸಲಾಗಿದೆ. ನಾವು ಸಫಲರಾದಾಗ ನಮ್ಮನ್ನು ಪ್ರೀತಿಸಿಕೊಳ್ಳುತ್ತೇವೆ. ವಿಫಲರಾದಾಗ ನಮ್ಮನ್ನು ದ್ವೇಷಿಸುತ್ತೇವೆ. ಅದೇ ತರ್ಕವನ್ನು ಬೇರೆಯವರಿಗೂ ಅನ್ವಯಿಸುತ್ತೇವೆ. ಇತರರನ್ನು ಅವರಲ್ಲೇನೋ ಇದೆ ಎಂಬ ಕಾರಣಕ್ಕಾಗಿ ಪ್ರೀತಿಸುತ್ತೇವೆ. ವಿನಾಕಾರಣ ಅಲ್ಲ, ನಿಮಿತ್ತವಿಲ್ಲದೆಯೂ ಅಲ್ಲ.
ನಿಮ್ಮನ್ನು ನೀವು ಪ್ರೀತಿಸದಿದ್ದಾಗ ನೀವು
ಸಿಡುಕರಾಗುತ್ತೀರಿ ಮತ್ತು ಜೀವನದ ಬಗ್ಗೆ
ನಕಾರಾತ್ಮಕ ಭಾವನೆಯುಂಟುಮಾಡಿಕೊಳ್ಳುತ್ತೀರಿ.
ಪ್ರತಿನಿತ್ಯವೂ ಕೆಲವು ನಿಮಿಷಗಳು ಏಕಾಂತದಲ್ಲಿ ಸುಮ್ಮನೇ ಕುಳಿತುಕೊಳ್ಳಿರಿ ಮತ್ತು ನಿಮ್ಮೆಡೆಗೆ ಉಕ್ಕಿಬರುತ್ತಿರುವ ಪ್ರೀತಿಯನ್ನು ಅನುಭವಿಸಿರಿ. ನೀವು ಎಂತಹ ಅದ್ಭುತ ವ್ಯಕ್ತಿ ಎಂದು ಮನಗಾಣಿರಿ. ಎಷ್ಟರಮಟ್ಟಿಗೆ ನಿಮ್ಮನ್ನು ನೀವು ಹೇಗಿದ್ದರೂ ಇದ್ದೇ ಇದ್ದೀರಲ್ಲ ಎಂಬ ಭಾವನೆಯಿಂದಿದ್ದೀರೆಂದು ನೋಡಿಕೊಳ್ಳಿರಿ. ನೀವು ಸೃಷ್ಟಿಯ ಒಂದು ಭಾಗವಾಗಿರುವುದನ್ನು ಅರಿತುಕೊಂಡು ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿರಿ. ನಿಮ್ಮ ಮೇಲಿನ ಪ್ರೀತಿಯಿಂದ ಕರಗಿಹೋಗಿರಿ. ಇದನ್ನು ಪ್ರತಿದಿನವೂ ಅಭ್ಯಾಸಿಸಿದರೆ ಒರಟಾಗಿದ್ದ ನೀವು ಈಗ ಮೃದು ಸ್ವಭಾವದವರಾಗಿ ವಿಶ್ವಾಸಪರರಾಗಿರುವುದನ್ನು ಕಾಣುತ್ತೀರಿ.
ನಂತರ, ಜನರು ನಿಮ್ಮನ್ನು ಪ್ರೀತಿಸಿದಾಗ ನಿಮಗೆ
ತಪ್ಪಿತಸ್ಥತೆ ಅಥವಾ ಅನರ್ಹತೆಯ ಭಾವನೆ
ಬರುವುದಿಲ್ಲ, ಏಕೆಂದರೆ ಅವರು ನಿಮ್ಮನ್ನು
ಪ್ರೀತಿಸಿದಂತೆ ನಿಮ್ಮನ್ನೇ ನೀವು ಪ್ರೀತಿಸುತ್ತಿರುವಿರಿ. ನೀವು ಬೇರೆಯವರಿಂದ ಪ್ರೀತಿಯನ್ನು ಪಡೆಯಲು ಸಿದ್ಧರಾಗುತ್ತೀರಿ. ಸಾಧಾರಣವಾಗಿ ಇತರರು ನಿಮಗೆ ಪ್ರೀತಿ ತೋರಿದಾಗ ನಿಮಗೆ ತಪ್ಪಿತಸ್ಥ ಅಥವಾ ಅಯೋಗ್ಯ ಭಾವನೆ ಉಂಟಾಗುತ್ತದೆ ಏಕೆಂದರೆ ಪ್ರೀತಿಗೊಳಗಾಗಲು ನಿಮಗೆ ಯೋಗ್ಯತೆಯಿಲ್ಲ ಎನಿಸಿಬಿಡುತ್ತದೆ. ನಿಮ್ಮಲ್ಲಿ ನೀವು ಒಮ್ಮೆ ತೀವ್ರ ಪ್ರೀತಿಯಿಂದ ನೆಲೆಸಿದಿರೆಂದರೆ ನೀವು ಇತರರ ಪ್ರೀತಿಯನ್ನು ಸಂತಸದಿಂದ ಸ್ವೀಕರಿಸುವಿರಿ.
ವಿಶ್ವಶಕ್ತಿಯನ್ನು ಪ್ರೀತಿಸಿರಿ ಮತ್ತು ಅದರ ಪ್ರೀತಿಯನ್ನು ಅನುಭವಿಸಿರಿ
ವಿಶ್ವಶಕ್ತಿಯು ಒಂದು ವಸ್ತುವಲ್ಲ. ಅದೊಂದು
ಸಜೀವ ಶಕ್ತಿಯ ಚೈತನ್ಯ. ಪ್ರತಿಯೊಂದು ಮರ,
ಪ್ರತಿಯೊಂದು ಕಾಂಡವೂ ಮಾನವನ ಪ್ರೀತಿ ಮತ್ತು
ದ್ವೇಷಕ್ಕೆ ಸ್ಪಂದಿಸುತ್ತದೆ.
ಕ್ಲೀವ್ ಬ್ಯಾಕ್ಸ್ಟರ್ನೆಂಬ ಪಾಲಿಗ್ರಾಫ್ ವಿಜ್ಞಾನಿಯು ಮನುಷ್ಯರ ಭಾವನೆಗಳು ಹಾಗೂ ಯೋಚನೆಗಳಿಗೆ ಗಿಡಗಳು ಹೇಗೆ ಸ್ಪಂದಿಸುತ್ತವೆಂದು ಪರೀಕ್ಷಿಸಲು ಪ್ರಯೋಗಗಳನ್ನು ಮಾಡಿದ್ದಾನೆ. ಆತನು ಮಾನವನ ಯೋಚನೆಗಳಿಗೆ ಮಾನವನು ಹೇಗೆ ಸ್ಪಂದಿಸುತ್ತಾನೆಯೋ, ಹಾಗೆಯೇ ಮರಗಿಡಗಳೂ ಸ್ಪಂದಿಸುತ್ತವೆಂಬುದನ್ನು ಕಂಡುಹಿಡಿದನು. ಒಬ್ಬ ವ್ಯಕ್ತಿಗೆ ಗಿಡದ ಎಲೆಗಳನ್ನು ಸುಡುವ ಬಗ್ಗೆ ಒಂದು ಸರಳವಾದ ಯೋಚನೆ ಬಂದರೆ, ಅದು ಆ ಗಿಡದ ಪಾಲಿಗ್ರಾಫ್ ದಾಖಲೆಯಲ್ಲಿ ಏರುಪೇರಾಗಿ ಕಾಣುತ್ತದೆ. ಬ್ಯಾಕ್ಸ್ಟರನು ಈ ಪ್ರತಿಕ್ರಿಯೆಯನ್ನು ‘ಪ್ರಾಥಮಿಕ ಅನುಭವ’ - ಸಸ್ಯದ, ಪ್ರಾಣಿಯ ಹಾಗೂ ಮಾನವನ ಕಣಗಳು ಯಾವ ಯೋಚನೆಗಾದರೂ ಗ್ರಹಿಸುವ ಮತ್ತು ಸ್ಪಂದಿಸುವ ಸಾಮರ್ಥ್ಯ-ಎಂದು ಕರೆದಿದ್ದಾನೆ.
ಒಮ್ಮೆ ಬ್ಯಾಕ್ಸ್ಟರನು ಆಘಾತಕ್ಕೊಳಗಾದ
ಗಿಡಗಳ ಸ್ಥಿತಿಯನ್ನು ನಮೂದಿಸುವ ಒಂದು
ನೇರವಾದ ಗೆರೆಯನ್ನು ಕಂಡನು. ಅದು ಗಿಡಗಳ
ಆಘಾತದ ಸ್ಥಿತಿಯಾಗಿತ್ತು. ಗಿಡದ ಮಾಲೀಕಳನ್ನು
ಆಕೆಯು ಗಿಡಗಳಿಗೆ ಆಘಾತವಾಗುವಂಥದ್ದೇನಾದರೂ
ಮಾಡಿದ್ದಳೇ? ಎಂದು ಕೇಳಿದನು. ಆಕೆ ‘ನಾನು
ಅವುಗಳ ಒಣತೂಕವನ್ನು ತಿಳಿಯಲು ಕೆಲವನ್ನು
ಹುರಿದಿನು!’ ಎಂದಳು.
ವಿಶ್ವಶಕ್ತಿಯನ್ನು ನೀವು ಪ್ರೇಮಿಸಲಾರಂಭಿಸಿದರೆ
ಅದು ಸುಂದರವಾದ ರೀತಿಗಳಲ್ಲಿ ಸ್ಪಂದಿಸುತ್ತದೆ.
ನೀವು ನಿಮ್ಮ ಸುತ್ತಲಿರುವ ಎಲ್ಲಾ ಭೇದಭಾವಗಳನ್ನು
ಕಡೆಗೊತ್ತಿ ಮೇಲೇಳುವಿರಿ - ಮನುಷ್ಯರ ನಡುವಿನ
ಭೇದಭಾವ, ಸಂದರ್ಭಗಳು, ಭಾವನೆಗಳು ಇತ್ಯಾದಿ.
ಎಲ್ಲವೂ ಅಖಂಡತೆಯಲ್ಲಿ ಲೀನವಾಗುತ್ತದೆ ಮತ್ತು
ಅದೇ ಸತ್ಯ. ಎಲ್ಲವೂ ಅಖಂಡತೆಯ ಒಂದು ಭಾಗ.
ಪ್ರೇಮವೊಂದರಿಂದಲೇ ಈ ಸತ್ಯದ ಅರಿವಾಗುವುದು.
ಭಾರತದಲ್ಲಿ ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಿಂದ ಆಧ್ಯಾತ್ಮಿಕ ಅಲೆದಾಟಮಾಡುತ್ತಾ ದೇವಾಲಯಗಳಿಗೂ, ಯಾತ್ರಾ ಸ್ಥಳಗಳಿಗೂ ಭೇಟಿಕೊಡುವ ಒಂದು ಸಂಪ್ರದಾಯವಿದೆ. ಅವರು ಹಾಗೆ ಮಾಡಲು ಹೇಗೆ ಸಾಧ್ಯವೆಂದು ನನಗೆ ಆಶ್ಚರ್ಯವಾಗುತ್ತಿತ್ತು. ಅದರಲ್ಲೂ - ಕಾಡುಗಳಲ್ಲಿ ಸಂಚರಿಸುವುದು, ಕಾಡುಪ್ರಾಣಿಗಳ ಜೊತೆ ನಿದ್ರಿಸುವುದು ಮತ್ತು ಆಹಾರಕ್ಕಾಗಿ ಭಿಕ್ಷೆ ಬೇಡುವುದು. ಇದರ ಗುಟ್ಟೇನೆಂದರೆ, ಅವರು ಎಷ್ಟು ಸಂಪೂರ್ಣತೆಯಿಂದ ಪ್ರಕೃತಿಯೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುತ್ತಾರೆಯೋ, ಪ್ರಕೃತಿಯೂ ಅವರನ್ನು ಅಷ್ಟೇ ಸುಂದರವಾಗಿ ಕಾಪಾಡುತ್ತದೆ. ಮಳೆಯೇ ಸುರಿಯಲಿ, ಬಿಸಿಲೇ ಬೀಳಲಿ, ಪ್ರಾಣಿಗಳು ಮತ್ತು ಮರಗಳು ಎಲ್ಲವೂ ಅವರನ್ನು ಕಾಪಾಡುತ್ತವೆ. ಇದು ತರ್ಕಬದ್ಧವಾಗಿ ಅರ್ಥಮಾಡಿಕೊಳ್ಳಲು ಕಷ್ಟವೆನಿಸಿದರೂ ಅದೇ ಸತ್ಯ.
ನೀವು ವಿಶ್ವಶಕ್ತಿ ಹಾಗೂ ಅದರ ಎಲ್ಲ ಸೃಷ್ಟಿಗಳಿಗೆ ಕಿಂಚಿತ್ತಾದರೂ ಗೌರವ ಕೊಡಲು ಪ್ರಾರಂಭಿಸಿದರೆ ನಿಮ್ಮ ಸ್ವಂತ ಜೀವನದಲ್ಲಿ ಇವೆಲ್ಲಾ ಆಗುವುದನ್ನು ಕಾಣುತ್ತೀರಿ. ಪ್ರಕೃತಿಯು ಸುಮ್ಮನೆ ನಿಮ್ಮ ಪ್ರೀತಿಯನ್ನು ಅನೇಕ ಸುಂದರವಾದ ರೀತಿಗಳಲ್ಲಿ ಸ್ಪಂದಿಸುತ್ತದೆ.
ಪ್ರೀತಿಗೂ ಗೌರವಕ್ಕೂ ವ್ಯತ್ಯಾಸವಿದೆ
ಅನೇಕ ಸಲ ಪ್ರೀತಿಯನ್ನು ಗೌರವವೆಂದು ತಪ್ಪಾಗಿ
ತಿಳಿಯುತ್ತಾರೆ. ಚಿಕ್ಕಂದಿನಿಂದಲೇ ಯಾವಾಗಲೂ
ಮಕ್ಕಳಿಗೆ ಗೌರವಿಸುವುದು ಹೇಗೆಂದು
ಹೇಳಿಕೊಡುತ್ತಾರೆಯೇ ವಿನಃ ಪ್ರೀತಿಸುವುದನ್ನಲ್ಲ.
'ನಿಮ್ಮ ಹಿರಿಯರನ್ನು ಗೌರವದಿಂದ ಕಾಣಬೇಕು'
ಎಂದು ಮಕ್ಕಳಿಗೆ ಹೇಳಿಕೊಡುವುದನ್ನು ನೀವು
ಕೇಳಿರಬೇಕು. 'ನಿಮ್ಮ ಹಿರಿಯರನ್ನು ನೀವು
ಪ್ರೀತಿಸಬೇಕು' ಎಂಬುದನ್ನು ಮಕ್ಕಳು ಕೇಳಿಯೇ
ಇರುವುದಿಲ್ಲ. ಸಮಸ್ಯೆ ಇರುವುದು ಇಲ್ಲಿಯೇ.
ಗೌರವವು ನಿಮ್ಮಲ್ಲಿ ನೀವು ಸ್ವಲ್ಪ ಕೀಳೇನೋ
ಎಂಬ ಮೊದಲ ಅಪರಾಧ ಭಾವವನ್ನು ಬಿತ್ತುತ್ತದೆ.
ನೀವು ಗೌರವಿಸುವ ವ್ಯಕ್ತಿಯೂ ನೀವು ಬೇರೆ ಎಂಬ
ಭಾವನೆ ಬರುವಂತೆ ಮಾಡುತ್ತದೆ. ಅಲ್ಲದೆ ಪ್ರೇಮವು
ನಿಮ್ಮಲ್ಲಿ ಸಂತೋಷ ಹಾಗೂ ಐಕ್ಯತೆಯ ಬೀಜಗಳನ್ನು
ಬಿತ್ತುತ್ತದೆ. ಬೇರೆಯವರೊಂದಿಗೂ ವಿಶ್ವಶಕ್ತಿಯ
ಎಲ್ಲದರೊಂದಿಗೂ ಸಂಬಂಧವಿರುವ
ಭಾವನೆಯನ್ನುಂಟುಮಾಡುತ್ತದೆ. ಗೌರವದ
ಜೊತೆಯಲ್ಲಿ ಭಯವೂ ಇರುತ್ತದೆ. ಪ್ರೀತಿಯೊಂದಿಗೆ
ವಿಶ್ವಾಸಾರ್ಹವಾದ ಗೌರವ ಹಾಗೂ ಗಹನವಾದ
ಅರಿವನ್ನು ಪಡೆಯುವ ಅವಕಾಶವಿದೆ. ಬರಿಯ
ಗೌರವದಿಂದ ಹೆಚ್ಚು ತಿಳಿವಳಿಕೆ ಸಾಧ್ಯವಿಲ್ಲ.
ಗೌರವವೆಂಬುದು ಹೆಚ್ಚು ಕಡಿಮೆ ಕುರುಡುತನ.
ಪ್ರೇಮದೊಂದಿಗಾದರೆ ವಿಪರೀತವಾದ ತಿಳಿವಳಿಕೆ
ಮತ್ತು ಪರಿವರ್ತನೆಯಾಗುವ ಸಾಧ್ಯತೆ ಇದೆ.
ಪ್ರೀತಿಯು ತನ್ನ ಸ್ವಭಾವದಿಂದಲೇ
ಪರಿವರ್ತಿಸುವಂತಹದು. ಅದು ನಿಮ್ಮನ್ನು
ಮೃದುವಾಗಿಸಿ ಕರಗಿಸುತ್ತದೆ.
ಗೌರವವು ನಿಮ್ಮ ಮತ್ತು ನಿಮ್ಮೆದುರಿನವರ
ನಡುವೆ ಅಂತರವನ್ನುಂಟು ಮಾಡುತ್ತದೆ. ಪ್ರೀತಿಯು
ನಿಮ್ಮ ಮತ್ತು ಅವರ ನಡುವೆ ಸೇತುವೆಯಾಗುತ್ತದೆ.
ಜನರು ಪ್ರೀತಿಯನ್ನನುಭವಿಸುವುದನ್ನು
ತಿಳಿಯದಿರುವುದರಿಂದಲೇ ಶಿಷ್ಟಾಚಾರಕ್ಕಾಗಿ
ಗೌರವವನ್ನು ತೋರುತ್ತಾರೆ ಮತ್ತು ಅದನ್ನು
ಸಜ್ಜನಿಕೆಯ ನಿಯಮವೆಂದು ಭಾವಿಸುತ್ತಾರೆ.
ಗೌರವವೆಂಬುದು ಸುಲಭವೇ ಆದರೂ
ನಿಜವಾದುದ್ದಲ್ಲ. ಅನೇಕರಿಗೆ ಪ್ರೀತಿಸುವ ರೀತಿಯೇ
ತಿಳಿಯದೆ ಅದು ಕಷ್ಟಕರವೆನಿಸಬಹುದು, ಆದರೆ ಅದು
ನಿಜವಾದುದು. ಪ್ರೀತಿಯಿಂದ ಗೌರವವು ಸಹಜವೂ
ವಿಶ್ವಾಸಾರ್ಹವೂ ಆಗುತ್ತದೆ. ಶುದ್ಧ ಗೌರವದಿಂದ
ಪ್ರೀತಿಯು ಬಲವಂತ ಹಾಗೂ ವಿಶ್ವಾಸಾರ್ಹವಲ್ಲದ್ದೇ
ಆಗಿರಬಹುದು ಎನಿಸುತ್ತದೆ.
ಪ್ರೀತಿಯು ಎಲ್ಲ ಮತಗಳ ಮೂಲ
ಪ್ರೀತಿಯು ಮೂಲಭೂತ ಮತ. ಅದೇ ಎಲ್ಲಾ
ಆಧ್ಯಾತ್ಮಕ್ಕೂ ಬೇರು. ಬೇರೆಲ್ಲಾ ಮತಗಳೂ ಅದರ
ಕುಡಿಗಳು. ಪ್ರೀತಿಯು ಮತದ ಬೇರಿದ್ದಂತೆ, ಮತ್ತು
ಎಲ್ಲಾ ಮತಗಳೂ ಎಲೆಗಳು ಅಥವಾ
ಕೊಂಬೆಗಳಂತೆ. ಪ್ರೀತಿಯೆಂಬ ಮತಕ್ಕೆ ಹೋಲಿಸಿದಾಗ
ಅತಿದೊಡ್ಡ ಮತಗಳೂ ಸಹ ಕೇವಲ
ದೊಡ್ಡಕೊಂಬೆಗಳು ಮಾತ್ರ!
ಪ್ರೀತಿಗೆ ದೇವಾಲಯಗಳೂ ಇಲ್ಲ, ಧರ್ಮಗ್ರಂಥಗಳೂ ಇಲ್ಲ. ಆದರೆ, ಅದು ನೆಲದ ಕೆಳಗಿನ ಬೇರುಗಳಿದ್ದಂತೆ, ಜೀವನಕ್ಕೆ ಪೋಷಣೆಯನ್ನು ಒದಗಿಸುತ್ತದೆ. ಅದಿಲ್ಲದೆ ಇಡೀ ಮರವು ಸಾವನ್ನಪ್ಪುತ್ತದೆ. ಪ್ರೀತಿಯಿಂದ ಅನೇಕ ಕೊಂಬೆಗಳು ಮತ್ತು ಎಲೆಗಳು ಸೃಷ್ಟಿಯಾಗುತ್ತವೆ. ಆದರೆ ನಾವೇನು ಮಾಡುತ್ತೇವೆ? ಬೇರಿನ ಬದಲಿಗೆ ನಾವು ಕೊಂಬೆಗಳಿಗೂ ಎಲೆಗಳಿಗೂ ಅಂಟಿಕೊಳ್ಳುತ್ತೇವೆ. ನಾವು ಬೇರಿಗೆ ಅಂಟಿಕೊಂಡಾಗ ನಮಗೆ ನೇರವಾದ ಪೋಷಣೆ ದೊರಕುತ್ತದೆ. ನಾವು ಕೊಂಬೆಗಳಿಗಂಟಿಕೊಂಡಾಗ ಪೋಷಣೆಯ ಒಂದು ಆಯಾಮವನ್ನು ಮಾತ್ರ ಆನಂದಿಸುತ್ತೇವೆ. ನೀವು ಇನ್ನೂ ಹೆಚ್ಚು ಪ್ರೀತಿಸುವವರಾದಾಗ ಅಗೋಚರ ಪ್ರೇಮ ದೇಗುಲವನ್ನು ಪ್ರವೇಶಿಸುವಿರಿ.
ಒಂದು ಸಣ್ಣ ಕಥೆ:
ಒಬ್ಬ ಗುರುವು ತನ್ನ ಶಿಷ್ಯರನ್ನು, 'ರಾತ್ರಿ ಯಾವಾಗ ಮುಗಿಯಿತು ಮತ್ತು ಬೆಳಕು ಯಾವಾಗ ಹರಿಯಿತು ಎಂಬುದನ್ನು ಹೇಗೆ ಹೇಳುವಿರಿ?' ಎಂದು ಕೇಳಿದನು.
ಒಬ್ಬ ಶಿಷ್ಯನು, 'ದೂರದಿಂದ ನೋಡಿ, ಒಂದು
ಪ್ರಾಣಿಯು ಹಸುವೋ ಅಥವಾ ಕುದುರೆಯೋ ಎಂದು
ಗುರುತಿಸಲಾದಾಗ' ಎಂದು ಹೇಳಿದನು. ಗುರುಗಳು
'ಅಲ್ಲ' ಎಂದರು.
ಇನ್ನೊಬ್ಬ ಶಿಷ್ಯನು, 'ದೂರದಿಂದ ನೋಡಿ ಅದು ಪೈನ್ ಮರವೋ ಮಾವಿನ ಮರವೋ ಎಂದು ಗುರುತಿಸಿದಾಗ' ಎನ್ನಲು, ಗುರುಗಳು ಮತ್ತೆ 'ಅಲ್ಲ' ಎಂದರು.
ಅವರು, 'ಹಾಗಾದರೆ ಅದು ಹೇಗೆ?' ಎಂದು ಗುರುಗಳನ್ನು ಕೇಳಿದರು.
ಗುರುಗಳು, 'ನೀವು ಯಾವುದೇ ಮನುಷ್ಯನನ್ನು
ನೋಡಿ ಅವನಲ್ಲಿ ನಿಮ್ಮ ಸಹೋದರನನ್ನು ಕಂಡಾಗ,
ನೀವು ಯಾವುದೇ ಹೆಂಗಸನ್ನು ನೋಡಿ ನಿಮ್ಮ
ಸಹೋದರಿಯನ್ನು ಅವಳಲ್ಲಿ ಕಂಡಾಗ. ಇದನ್ನು
ನೀವು ಮಾಡಲಾಗದಿದ್ದಲ್ಲಿ, ಅದು ದಿನದ
ಯಾವುದೇ ಹೊತ್ತಾಗಿರಲಿ, ಅದು ಕೇವಲ
ರಾತ್ರಿಯೇ' ಎಂದು ಉತ್ತರಿಸಿದರು.
ಗುರುಗಳು ಅಲ್ಲಿ ಇಲ್ಲಿ ಕೆಲವು ಸಲಹೆಗಳನ್ನು ಕೊಡಬಹುದು, ಅಷ್ಟೇ. ಆಮೇಲೆ ನಾವು ನಮ್ಮದೇ
ಆದ ದಾರಿಯನ್ನು ಜೋಪಾನವಾಗಿ, ಎಚ್ಚರಿಕೆಯಿಂದ
ಕಂಡುಕೊಳ್ಳಬೇಕು. ಪ್ರೀತಿಯು ಒಂದು ಸೂಚನೆ
ಮಾತ್ರ. ಆದರೆ ನಾವು ಪ್ರೀತಿಯನ್ನು ಸಾವಕಾಶವಾಗಿ,
ಬಹಳ ಸಾವಕಾಶವಾಗಿ ಹಿಂಬಾಲಿಸಿದಲ್ಲಿ ನಮಗೆ
ಆಶ್ಚರ್ಯವಾಗುತ್ತದೆ; ದೇವರು ಬರುಬರುತ್ತಾ
ಸತ್ಯವಾಗುತ್ತಾನೆ. ಆತನು ಕೇವಲ ಯೋಚನೆಯಲ್ಲ,
ಒಂದು ಕಲ್ಪನೆಯೂ ಅಲ್ಲ, ಆದರೆ
ಅನುಭವಿಸುವಂತಹವನಾಗುತ್ತಾನೆ.
ಪ್ರೀತಿಯ ಆಳಕ್ಕೆ ಹೋದಂತೆಲ್ಲಾ ಆ ಭಾವನೆಗೆ ಹತ್ತಿರವಾಗುತ್ತೇವೆ. ಪ್ರೀತಿಯಲ್ಲಿ ಕರಗಿಹೋದ ದಿನ ಅದರೊಳಗೆ ಬೆರೆತುಬಿಡುತ್ತೇವೆ.
ಪ್ರಾಚೀನ ಕಾಲದಿಂದಲೂ ಅನೇಕ ಮುಮುಕ್ಷುಗಳ ತೀರ್ಮಾನವೇನೆಂದರೆ, ವಸ್ತುಗಳು ಪರಸ್ಪರ ಪ್ರೇಮದಿಂದ ಸ್ವಲ್ಪ ಅಂಟಿಕೊಂಡಿರುತ್ತವೆ ಎಂದು. ಒಂದು ಅಗೋಚರ ಶಕ್ತಿಯು ಕಣಗಳನ್ನೂ, ಅಣುಗಳನ್ನೂ ಒಟ್ಟಾಗಿ ಹಿಡಿದಿಡುತ್ತದೆ. ಈ ಅಗೋಚರ ಶಕ್ತಿಯಿಂದಾಗಿ ಅವು ಬೇರೆಬೇರೆಯಾಗುವುದಿಲ್ಲ. ಈ ಅಂತಿಮ ಚೈತನ್ಯವನ್ನು ವಿಜ್ಞಾನವು ಇನ್ನೂ ಕಂಡುಹಿಡಿಯಬೇಕಾಗಿದೆ. ಅದು ಗುರುತ್ವಾಕರ್ಷಣೆ ಮತ್ತು ವಿದ್ಯುತ್ತುಗಳಂತಹ ಕೆಲವು ಪ್ರಕಟಣೆಗಳನ್ನು ಕಂಡು ಹಿಡಿದಿದೆಯಾದರೂ ಅವು ಕೇವಲ ಸ್ಥೂಲ ತೋರಿಕೆಗಳು ಮಾತ್ರ. ವಿಜ್ಞಾನವು ಪ್ರೀತಿಯನ್ನು ಕಂಡುಹಿಡಿಯುವ ಆ ದಿನವು ಧರ್ಮ ಮತ್ತು ವಿಜ್ಞಾನಗಳು ಪರಸ್ಪರ ಒಂದೇ ಭಾಷೆಯಲ್ಲಿ ಸಂವಾದ ಮಾಡುವ ದಿನವಾಗುತ್ತದೆ.
ಸದ್ಯಕ್ಕೆ ಪ್ರೀತಿಸುವುದು ಸಾಧ್ಯವೆಂದು ಸಂತೋಷಪಡಿರಿ. ಪ್ರೀತಿಯು ನಿಮ್ಮ ಅಂತಃಶಕ್ತಿಯೆಂದು ಆನಂದಿಸಿರಿ. ನೀವು ಪ್ರೀತಿಯಿಂದ ತುಟ್ಟತುದಿಗೆ ಏರಬಲ್ಲಿರಿ. ಪ್ರೀತಿಯಿಂದ ಅಸಾಧ್ಯವೆಂಬುದೇ ಇಲ್ಲ. ಏಕೆಂದರೆ ಪ್ರೀತಿಯೆಂಬುದು ತಾನಾಗಿಯೇ ದೇವರಾಗಬಲ್ಲುದು!
ಮೂರು ವಿಧವಾದ ಪ್ರೀತಿ ಮತ್ತು ಅವುಗಳ ಅನುಕಲನ
ಅನೇಕರು ಪ್ರೀತಿ ಮತ್ತು ಕಾಮಗಳ ಅರ್ಥದ ಬಗ್ಗೆ ಗೊಂದಲಗೊಳಿಸಿಕೊಳ್ಳುತ್ತಾರೆ. ಇದು ಅತ್ಯಂತ ಶೋಚನೀಯ ದುರಂತಗಳಲ್ಲೊಂದು. ಕಾಮವನ್ನು ಪ್ರೇಮವೆಂದುಕೊಳ್ಳುವವನು ದೈಹಿಕ ಮಟ್ಟದೊಳಗೇ ಇರುತ್ತಾನೆ. ಅದಕ್ಕಿಂತ மேலேರುವುದೇ ಇಲ್ಲ. ಅದಕ್ಕಿಂತಲೂ ಮೇಲ್ಮಟ್ಟದ ಸ್ತರವಿರುವುದೇ ಆತನಿಗೆ ತಿಳಿಯದು. ಆತನು ತನ್ನ ಮನೆಯ ನೆಲಮಾಳಿಗೆಯಲ್ಲೇ ಇದ್ದುಬಿಡುತ್ತಾನೆ. ದೈಹಿಕ ಭೋಗವೇ (ಲೈಂಗಿಕತೆ) ಕೆಳಮನೆಯಷ್ಟೆ. ಬಾಳಲು ಅದು ಸ್ಥಳವಲ್ಲ. ಅದನ್ನು ಬೇರೆ ಕೆಲಸಗಳಿಗೆ ಬಳಸಬಹುದು. ಆದರೆ ಅದೇ ಮನೆಯಾಗಲು ಸಾಧ್ಯವಿಲ್ಲ. ನಿಮ್ಮ ಮನೆಯು ಅದನ್ನು ಮೀರಿದುದು.
ಮಾನವನ ಇರವಿಕೆಗೆ ಮೂರು ಸ್ತರಗಳಿವೆ. ಪಶು,
ಮಾನವ ಮತ್ತು ದೈವ. ಮೊದಲನೆಯದು
ಕಾಮದಿಂದೊಡಗೂಡಿದ ಹಂತ. ಅದು ಪಶುವಿನ
ಹಂತ. ಅದು ಒರಟಾದ ಪ್ರೀತಿ. ಅಲ್ಲಿ ಪ್ರೀತಿಯಿಲ್ಲ
ಎಂಬಂತಿಲ್ಲ; ಪ್ರೀತಿಯು ಸ್ಥಾಲವಾದ ಹಾಗೂ
ಕಲ್ಮಷಭರಿತವಾದ ಆಸೆಯಿಂದ ಕೂಡಿರುತ್ತದೆ,
ಅಷ್ಟೇ.
ನಮ್ಮ ಇರುವಿಕೆಯು ಇನ್ನೂ ಪರಿಶುದ್ಧವಾದಾಗ
ನಾವು ಸಾಧಾರಣವಾದ ಮಾನವಪ್ರೀತಿಯೆಂಬ
ಎರಡನೇ ಸ್ತರವನ್ನು ಪ್ರವೇಶಿಸುತ್ತೇವೆ. ಮಾನವ
ಪ್ರೀತಿಯು ಒಡೆತನ ಹಾಗೂ ಅಸೂಯೆಯ
ಕುರುಹುಗಳನ್ನೊಳಗೊಂಡಿದೆ. ಮಾನವಪ್ರೀತಿಯು
ಪಶುಪ್ರೀತಿಗಿಂತಲೂ ಆಳವಾದ ತಿಳಿವಳಿಕೆಯನ್ನು
ಹೊಂದಿರುವುದರಿಂದ, ಒಬ್ಬ ವ್ಯಕ್ತಿಯು
ಇನ್ನೊಬ್ಬನನ್ನು ತನ್ನ ಲಾಭಕ್ಕೋಸ್ಕರವೇ
ಉಪಯೋಗಿಸಿಕೊಳ್ಳುವುದಿಲ್ಲ. ಮಾನವ ಪ್ರೀತಿಯು
ಬೇರೆಯವನನ್ನು ಒಂದು ಸ್ವತಂತ್ರ ಅಸ್ತಿತ್ವವೆಂದು
ನೋಡಬಲ್ಲದು.
ಪ್ರೀತಿಯ ಮೂರನೆಯ ಮಾದರಿಯು ದೈವಿಕಪ್ರೀತಿ. ಬಹುಪಾಲು ಪ್ರಾರ್ಥನೆಯಂತೆ ಅದು ಅತ್ಯಂತ ಉನ್ನತ ಮಟ್ಟದ ಪ್ರೀತಿ. ಅಲ್ಲಿ ಒಡೆತನವೆಂಬುದಿಲ್ಲ. ಅಲ್ಲಿ ಐಹಿಕವೆಂಬುದಿಲ್ಲ. ಅದು ಅದೃಶ್ಯವಾದ ಆದರೆ ಶಕ್ತಿಯುತವಾದ ಒಂದು ಬಲ. ಪ್ರೀತಿಯು ಪ್ರಾರ್ಥನೆಯಾದಾಗ ಹೀಗಾಗುತ್ತದೆ ಮತ್ತು ಶಾಂತಿ ತುಂಬಿದ ಸಮಾಧಾನವು ನಮಗೆ ಪ್ರಪ್ರಥಮವಾಗಿ ಉಂಟಾಗುತ್ತದೆ. ಶಾಂತಿ ತುಂಬಿದ ಸಮಾಧಾನ ಎಂದು ನಾನು ಏಕೆ ಹೇಳುತ್ತೇನಂದರೆ ಇನ್ನೆರಡು ವಿಧವಾದ ಪ್ರೀತಿಗಳಲ್ಲಿ ಏನನ್ನಾದರೂ ಹೊಂದುವ ಅಥವಾ ಕಳೆದುಕೊಳ್ಳುವ ಭಯವಿರುತ್ತದೆ. ಅವುಗಳಲ್ಲಿ ಶಾಂತತೆ ಇರುವುದಿಲ್ಲ. ಮೂರನೆಯ ವಿಧದ ಪ್ರೀತಿ ಉಂಟಾದಾಗ ಲೈಂಗಿಕಾಕರ್ಷಣೆ ಸಹ ಕೇವಲ ಭೌತಿಕ ಆನಂದವನ್ನು ಮೀರಿ ಒಂದು ಗಾಢವಾದ ದೈವಿಕಾರ್ಯವಾಗುತ್ತದೆ.
ಕಾರಣರಹಿತ ಪ್ರೀತಿಯೊಳಗೆ ಪ್ರವೇಶಿಸಿರಿ
ಸಂಬಂಧಗಳು
ಯಾವ ಕಾರಣವೂ
ಇಲ್ಲದೆ ಏರ್ಪಡುತ್ತವೆ
ಎಂಬುದನ್ನು ಮೊಟ್ಟಮೊದಲಿಗೆ ನಾವು
ತಿಳಿಯಲೇಬೇಕಾಗಿದೆ. ಅದಾದ ಮೇಲೆ ಮಾತ್ರ
ನಮಗೆ ಅರಿವಾಗುವುದು - ಪ್ರೀತಿಸುವ ವಸ್ತುವಿಗಿಂತ
ಪ್ರೀತಿಯ ಅನುಭವವು ಇನ್ನೂ ಹೆಚ್ಚಿನದು ಎಂದು.
ನಿಮ್ಮ ಜೀವನದಲ್ಲಿ ಕಾರಣವೇ ಇಲ್ಲದ ಒಂದೇ
ಒಂದಾದರೂ ಸಂಬಂಧ ಇರಲೇಬೇಕು. ಅಂತಹ
ಸಂಬಂಧವಿಲ್ಲದಿದ್ದಲ್ಲಿ, ಚೆನ್ನಾಗಿ ತಿಳಿಯಿರಿ -
ನಿಮ್ಮಲ್ಲಿ ಹಣವಿದ್ದರೂ ನೀವು ಇನ್ನೂ ಬಡವರೇ.
ಇಂದಿನಿಂದ ಮುಂದೆ ಕಾರಣವೇ ಇಲ್ಲದೆ
ಒಬ್ಬರೊಡನೆ ಸಂಬಂಧ ಪ್ರಾರಂಭಿಸಿರಿ. ಆ
ಸಂಬಂಧದಿಂದ ಯಾವುದೇ ಆರ್ಥಿಕ ಅಥವಾ
ಭೌತಿಕವಾದ ಲಾಭಗಳಿರಬಾರದು. ಕಾರಣರಹಿತ
ಪ್ರೀತಿಯನ್ನು ಒಮ್ಮೆ ನೀವು ಅನುಭವಿಸಿದಿರೆಂದರೆ
ಅದಾದ ಮೇಲೆ ಹಣವು ಭಾಗವಾದರೂ, ಶರೀರವು
ಪಾಲಾದರೂ ಅದು ಸರಿಯೇ. ಅದರ ಗುಣಮಟ್ಟವೇ
ಬೇರೆಯಾದುದು. ನಾನು ಹಣ ಅಥವಾ
ಮದುವೆಯನ್ನು ವಿರೋಧಿಸುತ್ತಿಲ್ಲ. ನಾನು ಭೌತಿಕ
ಸಂಬಂಧವನ್ನು ವಿರೋಧಿಸುತ್ತಿಲ್ಲ. ಆದರೆ ಅದೇ
ನಿಮ್ಮ ಜೀವನದ ಕೇಂದ್ರವಾಗಿಬಿಟ್ಟರೆ
ಮುಖ್ಯವಾದದ್ದೇನೋ ಒಂದನ್ನು ನೀವು
ಕಳೆದುಕೊಂಡುಬಿಡುವಿರಿ. ಅದನ್ನೇ ನಾನು ನಿಮಗೆ
ಇಲ್ಲಿ ತಿಳಿಸಲುಬಯಸುತ್ತೇನೆ. ನೀವು ನಿಮ್ಮ
ಇರುವಿಕೆಯ ದೊಡ್ಡದೊಂದು ಆಯಾಮ ಅಥವಾ
ಶಕ್ತಿಯ ಕೇಂದ್ರವನ್ನು ಕಳೆದುಕೊಳ್ಳುವಿರಿ.
ನಾನು ಯಾವಾಗಲೂ ಜನರಿಗೆ ಹೇಳುತ್ತಿರುತ್ತೇನೆ, ಹಣ, ಹೆಸರು ಮತ್ತು ಕೀರ್ತಿಗಳನ್ನು ತರದಿರುವ ಯಾವುದಾದರೊಂದು ಕೆಲಸವನ್ನು ಪ್ರತಿದಿನ ಅರ್ಧಗಂಟೆ ಮಾಡಿ, ಎಂದು. ಕೇವಲ ಅರ್ಧಗಂಟೆ ಹೊತ್ತು ಯಾವುದಾದರೂ ದೇವಾಲಯಕ್ಕೋ, ಚರ್ಚಿಗೋ ಹೋಗಿ. ನೆಲವನ್ನು ಶುಭ್ರಗೊಳಿಸಿ. ಗುಡಿಸಿ. ಸ್ವಲ್ಪ ಸೇವೆಯನ್ನು ಸಲ್ಲಿಸಿ. ಅಲ್ಲಿ ಆ ಸಂಘದ ಒಬ್ಬ ಸದಸ್ಯರೇನೂ ಆಗಬೇಡಿ. ಅದು ಸ್ವರ್ಗದಲ್ಲಿ ನಿಮಗೆ ಒಳ್ಳೆಯ ಯಶಸ್ಸು ಮತ್ತು ಒಂದು ಸ್ಥಾನವನ್ನು ಕೊಡುತ್ತದೆಂದು ಯೋಚಿಸಬೇಡಿ, ಇಲ್ಲ. ಆ ಅರ್ಧಗಂಟೆ ಕಾಲದ ಕೆಲಸವನ್ನು ಬಿಟ್ಟು, ಮತ್ತೇನನ್ನೂ ಮಾಡಬೇಡಿ.
ಈ ಅರ್ಧಗಂಟೆ ವ್ಯರ್ಥ ಎಂದು ಆರಂಭದಲ್ಲಿ
ನಿಮಗನಿಸಬಹುದು. ಹಲವು ದಿನಗಳ ನಂತರ ಆ
ಅರ್ಧಗಂಟೆಯಲ್ಲೇ ನೀವು ನಿಜವಾಗಿ ಬಾಳಿದುದು
ಎಂದು ನಿಮಗರಿವಾಗುತ್ತದೆ! ನೀವು ಭಯ ಹಾಗೂ
ದುರಾಸೆಯ ಒತ್ತಡಕ್ಕೊಳಗಾಗದಿದ್ದುದು ಆ
ಅರ್ಧಗಂಟೆ ಮಾತ್ರ. ನೀವು ನಿಮ್ಮ
ಸುತ್ತಲಿನವರೊಂದಿಗೆ ಯಾವ ಲೆಕ್ಕಾಚಾರಗಳಿಗೂ
ಒಳಪಡದೆ ಹಸನ್ಮುಖಿಯಾಗಿರುತ್ತೀರಿ. ನೀವು
ಹಿಂದೆಂದೂ ಅನುಭವಿಸದ ಒಂದು
ಆಶ್ಚರ್ಯಕರವಾದ ಪ್ರಾಮಾಣಿಕತೆಯನ್ನು
ಅನುಭವಿಸುವಿರಿ.
ಬೇರೆ ವೇಳೆಗಳಲ್ಲಿ ನಿಮ್ಮನ್ನು ನೀವು ಗಮನಿಸಿ ನೋಡಿದಾಗ ನೀವು ಮಾನಸಿಕವಾಗಿ ಲೆಕ್ಕ ಹಾಕಿದ ಮೇಲೆಯೇ ನಗುವುದೂ ಸಹ. ನಗುವ ಮುನ್ನ ನಿಮ್ಮ ಪಕ್ಕದಲ್ಲಿ ಯಾರಿದ್ದಾರೆಂದು ನೀವು ನೋಡುತ್ತೀರಿ. ಅದನ್ನನುಸರಿಸಿ ನೀವು ಎಷ್ಟು ಅಂಗುಲ ಬಾಯಿ ತೆರೆಯಬೇಕು, ಎಷ್ಟು ವಿನಯ ತೋರಬೇಕು, ನಿಮ್ಮನ್ನು ನೀವು ಹೇಗೆ ತೋರಿಸಿಕೊಳ್ಳಬೇಕೆಂದೂ ಸಹ ನಿರ್ಧರಿಸುವಿರಿ. ಈಗಿರುವ ಸ್ಥಿತಿಯಲ್ಲಿ ನಿಮ್ಮ ಪ್ರತಿಯೊಂದು ಕೆಲಸವೂ ಭಯ ಅಥವಾ ದುರಾಸೆಯಿಂದ ಪ್ರೇರಿತವಾಗಿದೆ. ನಿಮ್ಮ ಇಂಧನವೆಂದರೆ ಭಯ ಮತ್ತು ದುರಾಸೆ. ಅದರಿಂದಾಗಿಯೇ ನಿಮಗೆ ಏಕಾಕಿತನ ಮತ್ತು ಬಳಲಿಕೆಗಳುಂಟಾಗುತ್ತವೆ.
ಈ ಪ್ರಯೋಗವನ್ನು ನೀವು ಪ್ರಯತ್ನಿಸಿದ್ದೇ ಆದರೆ
ನಿಮ್ಮ ಶರೀರ ಹಾಗೂ ಮನಸ್ಸುಗಳು ಭಯ ಮತ್ತು
ದುರಾಸೆಗಳ ಅವಶ್ಯಕತೆಯಿಲ್ಲದೆಯೇ ಕಾರ್ಯಾರಂಭ
ಮಾಡುತ್ತವೆ ಎಂಬುದನ್ನು ತಕ್ಷಣವೇ ಕಾಣುವಿರಿ.
ದೇಹವನ್ನು ಹೆದರಿಕೆ ಮತ್ತು ದುರಾಸೆಗಳಿಂದ ಬೇರ್ಪಡಿಸಿ ಕೆಲಸ ಮಾಡುವ ಸರಳವಾದ ಚಾಕಚಕ್ಯತೆಯನ್ನು ನೀವು ಒಮ್ಮೆ ಕಲಿತಿರೆಂದರೆ, ಸ್ಪಷ್ಟವಾಗಿ ತಿಳಿಯಿರಿ, ನೀವು ಪ್ರೀತಿಯನ್ನು ಪ್ರವೇಶಿಸಬಲ್ಲಿರಿ. ಪ್ರೀತಿಯ ಚೈತನ್ಯವನ್ನು ಹೇಗೆ ಅನುಭವಿಸುವುದೆಂಬುದನ್ನು ಕಲಿಯುವಿರಿ. ಆ ಸುಂದರವಾದ ಪ್ರೀತಿಯ ಚೈತನ್ಯದ ಮೇಲೆ ಜೀವನವನ್ನು ಹೇಗೆ ನಡೆಸಬೇಕೆಂದು ಕಲಿಯುವಿರಿ. ಆಗ ಮಾತ್ರವೇ ಪ್ರೀತಿಯೆಂಬ ಪದದ ಅರ್ಥವನ್ನು ತಿಳಿಯಲಾಗುವುದು. ನಿಮ್ಮಲ್ಲಿ ಹೊಸ ಕೇಂದ್ರವೊಂದು ಜಾಗೃತವಾಗುತ್ತದೆ. ಒಂದು ಹೊಸ ಚೈತನ್ಯವು ನಿಮ್ಮಲ್ಲಿ ಪ್ರಕಾಶಿಸಲಾರಂಭಿಸುತ್ತದೆ. ಆಗ ನಿಮಗೆ ಕಾರಣವಿಲ್ಲದ ಆಪ್ತ ಸಂಬಂಧಗಳು ಹೇಗೆ ಸಾಧ್ಯವೆಂಬುದು ನಿಮಗೇ ತಿಳಿಯುತ್ತದೆ.
ಪ್ರೀತಿ, ದ್ವೇಷ ಮತ್ತು ಗಮನದ ಅವಶ್ಯಕತೆ
ಪ್ರೀತಿಯು ಒಂದು ಷರತ್ತಿಗೊಳಪಟ್ಟಿರುವವರೆಗೂ ಪ್ರೀತಿ ಮತ್ತು ದ್ವೇಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿರುತ್ತವೆ. ನಮ್ಮ ನಿರೀಕ್ಷೆಗಳಿಗೆ ಧಕ್ಕೆ ಬಂದೊಡನೆಯೇ ಪ್ರೀತಿಯೆಂಬುದು ದ್ವೇಷವಾಗಿ ಮಾರ್ಪಡಬಹುದು. ಈ ರೀತಿಯ ಪ್ರೀತಿಯಲ್ಲಿ ನಾವು ನಿರೀಕ್ಷಿಸಿದ ಷರತ್ತುಗಳಿರುವವರೆಗೆ ಮಾತ್ರ ಅದು ಪ್ರೀತಿಯಾಗಿ ಉಳಿಯುತ್ತದೆ. ಪರಿಸ್ಥಿತಿಗಳು ಬದಲಾದಲ್ಲಿ, ಪ್ರೀತಿಯೂ ಬದಲಾಗುತ್ತದೆ.
ಹಲವು ಬಾರಿ ನಾವು ಪ್ರೀತಿಯೆಂದು ಭಾವಿಸಿರುವುದು ವಾಸ್ತವವಾಗಿ ಕಾಲ ಮತ್ತು ದೇಶಗಳಿಗೆ ಸಂಬಂಧಿಸಿರುತ್ತದೆ. ಪ್ರೇಮಿಗಳ ಅಂತರ ಹೆಚ್ಚಾಗಿದ್ದು, ಸಂಧಿಸುವ ವೇಳೆ ಕಡಿಮೆಯಾದಾಗ ಪರಸ್ಪರ ಪ್ರೀತಿಯಿರುತ್ತದೆ. ಆದರೆ ಅವರು ಹತ್ತಿರ ಬಂದು ಹೆಚ್ಚು ಕಾಲ ಒಟ್ಟಿಗೆ ಕಳೆದಾಗ, ತಮ್ಮಿಬ್ಬರ ನಡುವೆ ಅಷ್ಟೇನೂ ಪ್ರೀತಿಯಿಲ್ಲವೇನೋ ಎಂಬ ಭಾವನೆ ಬರುತ್ತದೆ! ಆದುದರಿಂದಲೇ ‘ಪರಿಚಯವು ತಿರಸ್ಕಾರವನ್ನುಂಟುಮಾಡುತ್ತದೆ’ ಎನ್ನುವುದು. ಪರಿಚಯವು ಪ್ರೀತಿಯನ್ನು ದ್ವೇಷವಾಗಿಂಯೂ ಪರಿವರ್ತಿಸಬಲ್ಲದು. ಪ್ರೀತಿ ದ್ವೇಷಗಳೆರಡನ್ನೂ ಮೀರಬೇಕಾದರೆ ನಾವು ಮೊದಲು ನಿರೀಕ್ಷೆಗಳನ್ನು ಬಿಡಬೇಕು. ನಿರೀಕ್ಷೆಯು ಪ್ರೀತಿಯ ಮೊದಲ ಶತ್ರು.
ನಮ್ಮ
ನಿರೀಕ್ಷೆಗಳಿಗೆ ಧಕ್ಕೆ
ಬಂದೊಡನೆಯೇ
ಪ್ರೇಮವೆಂಬುದು
ದ್ವೇಷವಾಗಿ
ಮಾರ್ಪಡಬಹುದು.
ನಮ್ಮ ಜೀವನದಲ್ಲಿ ನಾವು ಅನೇಕ ಸ್ತರಗಳ ಸಂಬಂಧಗಳಲ್ಲಿ ಹಾದುಹೋಗುತ್ತೇವೆ. ನೀವು ಬಹಳ ಹತ್ತಿರದಿಂದ ನೋಡಿದಾಗ ನಾವು ಯಾವ ಹಂತದಲ್ಲೇ ಇರಲಿ, ಪ್ರೀತಿಯನ್ನು ಬಯಸಿದಾಗ ನಾವು ಬಯಸುತ್ತಿರುವುದು ಕೇವಲ ಇನ್ನೊಬ್ಬರ ಗಮನವನ್ನು. ಒಬ್ಬ ವ್ಯಕ್ತಿ ನಮ್ಮನ್ನು ಪ್ರೀತಿಸುತ್ತಿಲ್ಲವೆಂದರೆ ಆ ವ್ಯಕ್ತಿಯು ನಮಗೆ ಸಾಕಷ್ಟು ಗಮನವನ್ನು ಕೊಡುತ್ತಿಲ್ಲವೆಂದು ವಾಸ್ತವವಾಗಿ ಅದರ ಅರ್ಥ. ಯಾವುದೇ ಮನುಷ್ಯನ ಮೂಲಭೂತ ಅವಶ್ಯಕತೆಯು ಬೇರೆಯವರ ಗಮನವೇ ಆಗಿದೆ. ಇತರರ ಗಮನದ ಅವಶ್ಯಕತೆ, ಜೀವಿಸಲು ಬೇರೆಯವರ ಮೇಲೆ ಅವಲಂಬನೆ, ಇವನ್ನು ನಾವು ಪ್ರೀತಿಯೆಂದು ತಿಳಿಯುತ್ತೇವೆ.
ಪರಾವಲಂಬನೆ ಮಾನಸಿಕ, ದೈಹಿಕ ಅಥವಾ
ಆಧ್ಯಾತ್ಮಿಕವಾಗಿರಬಹುದು. ಉದಾಹರಣೆಗೆ,
ದುಃಖತೋಡಿಕೊಳ್ಳಲು ಯಾರ ಮೇಲಾದರೂ
ಆಧಾರಪಟ್ಟರೆ ನೀವು ಮಾನಸಿಕವಾಗಿ
ಅವರನ್ನವಲಂಬಿಸುವಿರಿ. ನೀವು ನಿಮ್ಮ ದೈಹಿಕ
ಅವಶ್ಯಕತೆಗಳಿಗಾಗಿ ಅಥವಾ ಹಣಕ್ಕಾಗಿ
ಇತರರನ್ನವಲಂಬಿಸಿದರೆ, ನಿಮ್ಮದು ದೈಹಿಕ
ಅವಲಂಬನೆ. ಯಾವುದೇ ರೀತಿಯಲ್ಲಿ ಜನರು ಈ
ಅವಲಂಬನೆಯನ್ನು ಪೂರೈಸಿದರೂ ನಿಜವಾಗಿ
ನೋಡಿದಾಗ ಅದು ನಿಮಗೆ ಅವರು ಕೊಡುವ
ಗಮನಕ್ಕೇ ಇಂಗುತ್ತದೆ! ಪ್ರೀತಿಯ ವಿಚಾರವೆಲ್ಲವೂ
ಬೇರೆಯವರು ಯಾವುದಾದರೂ ರೀತಿಯಲ್ಲಿ
ಗಮನಕೊಡಲಿ ಎಂಬುದಲ್ಲದೆ ಬೇರೆಯಲ್ಲ.
ನಮ್ಮ ಧ್ಯಾನದ ಮೊದಲ ಅಧಿವೇಶನದಲ್ಲಿ
'ನಿಮ್ಮನ್ನು ನಿಜವಾಗಿ ಪ್ರೀತಿಸುವ ಒಂದೆರಡು
ಹೆಸರುಗಳ ಪಟ್ಟಿಯನ್ನು ಪ್ರಾಮಾಣಿಕವಾಗಿ
ಮಾಡಿರೆಂದು ಜನರನ್ನು ನಾನು ಕೇಳುತ್ತೇನೆ.
ಸಾಧಾರಣವಾಗಿ ಮೊದಮೊದಲಲ್ಲಿ ಜನರು ಒಂದು
ದೊಡ್ಡ ಪಟ್ಟಿಯನ್ನೇ ತರುತ್ತಾರೆ; ಗಂಡ, ಹೆಂಡತಿ,
ತಂದೆ, ತಾಯಿ, ಸಹೋದರ, ಸಹೋದರಿ, ಮುಂತಾಗಿ
- ತಮ್ಮ ಸಂತೋಷಕ್ಕಾಗಿ ಸಂತೋಷಪಡಿಸಬೇಕಾಗಿರುವ ಜನರನ್ನೇ ಸೇರಿಸುತ್ತಾರೆ. ನಾನು ನಿಜ ಪ್ರೀತಿಯ ವಿಚಾರವನ್ನು ಮಾತಾಡುವುದನ್ನು ಕೇಳಿದಾಗ, ಅವರು ಪಟ್ಟಿಯ ಹೆಸರುಗಳನ್ನು ಒಂದಾದರ ಮೇಲೊಂದರಂತೆ ತೆಗೆದುಹಾಕಲಾರಂಭಿಸುತ್ತಾರೆ! ತಿಳಿಯಿರಿ, ನೀವೇನನ್ನಾದರೂ ಹೊಡೆದು ಹಾಕಿದರೆ, ಅದು ಮೊದಲಿಗೆ ಇರಲೇ ಇಲ್ಲ ಎಂದರ್ಥ.
ಅನೇಕರು ಕೆಲವರನ್ನು ತಮ್ಮ ಪ್ರೀತಿಯ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಾರೆ. ಏಕೆಂದರೆ ಅವರು ಇವರಿಗೆ 'ಆಹ್ಲಾದಕರ' ಎಂಬ ಭಾವನೆಯನ್ನು ತೋರಿಸುತ್ತಾರೆ. 'ಆಹ್ಲಾದಕರ' ಎಂದಾಗ ನಾನು ಏನನ್ನು ಅರ್ಥೈಸುತ್ತೇನೆ? ನೀವು ಒಳ್ಳೆಯವನೆಂದು, ನೀನು ಹಾಗೆ, ನೀನು ಹೀಗೆ ಮುಂತಾಗಿ ಹೇಳುವ ಅದೊಂದು ಪ್ರಮಾಣಪತ್ರ. ನಮ್ಮನ್ನು ಯಾರು ಹೊಗಳಿದರೋ ಅವರನ್ನು ಪ್ರೀತಿಸುತ್ತೇವೆ, ಅಲ್ಲವೆ? ಅವರೊಡನೆ ವಾದ ಮಾಡುವ ಮೊದಲು ಎರಡು ಸಲ ಆಲೋಚಿಸುತ್ತೇವೆ. ಪ್ರೀತಿ ಎಂಬ ಹೆಸರಿನಲ್ಲಿ ನಾವು ಗುಟ್ಟಾಗಿ ನಮ್ಮ ಒಳ್ಳೆಯ ಹೆಸರನ್ನು ಪೋಷಿಸುತ್ತಿರುತ್ತೇವೆ. ಅವರೇನಾದರೂ ನಮ್ಮನ್ನು ಸಮ್ಮತಿಸುವುದರಲ್ಲಿ ಹಿಂಜರಿದರೆ, ನಾವು ದುಃಖಕ್ಕೆ ಒಳಗಾಗುತ್ತೇವೆ. ಆ ಕಾರಣಕ್ಕೇ ಅವರನ್ನು ಸಂತೋಷಪಡಿಸುವುದನ್ನು ಮತ್ತು ಪ್ರೀತಿಸುವುದನ್ನು ಮುಂದುವರೆಸುತ್ತೇವೆ. ಹೀಗೆ, ಯಾವಾಗಲೂ ನಮ್ಮ ಪ್ರೀತಿಯ ಮರೆಯಲ್ಲಿ ಏನೋ ಒಂದು ಕಾರಣವಿರುತ್ತದೆ.
ಕೆಲವರು ನನಗೆ ಹೇಳುತ್ತಾರೆ, 'ಇಲ್ಲ ಸ್ವಾಮೀಜೀ, ನಾನು ಈ ಯಾವ ಕಾರಣಕ್ಕಾಗಿಯೂ ನನ್ನ ಮಗ ಅಥವಾ ಮಗಳನ್ನು ಪ್ರೀತಿಸುವುದಿಲ್ಲ' ಎಂದು. ನಾನು ಅವರನ್ನು ಕೇಳುತ್ತೇನೆ, 'ಸರಿ, ಒಂದು ವೇಳೆ ನಿಮ್ಮ ಮಗನು ಇದ್ದಕ್ಕಿದ್ದಂತೆ ತನ್ನ ನಿರ್ಧಾರಗಳನ್ನು ತಾನೇ ಕೈಗೊಂಡರೆ, ನಿಮ್ಮ ಚೌಕಟ್ಟಿನೊಳಗೆ ಅವನು ಹೊಂದಿಕೊಳ್ಳದಿದ್ದರೆ ಮತ್ತು ಅವನು ನಿಮ್ಮ ಮಾರ್ಗದರ್ಶನವನ್ನು ಅನುಸರಿಸದಿದ್ದರೆ, ನಿಮ್ಮ ನಿಬಂಧನೆಗಳನ್ನು ಅವನು ಪಾಲಿಸದಿದ್ದರೆ, ಅವನ ಮೇಲಿನ ನಿಮ್ಮ ಪ್ರೀತಿ ಇದ್ದಹಾಗೇ ಇರುತ್ತದೆಯೋ?' ಎಂದು.
ಅವರು, 'ಇಲ್ಲ, ಅದು ಹಾಗಿರುವುದಿಲ್ಲ - ನನ್ನ
ಪ್ರೀತಿ ಸ್ವಲ್ಪ ಕಡಿಮೆಯಾಗುತ್ತದೆ' ಎಂದು
ಹೇಳುತ್ತಾರೆ!
ಇದರರ್ಥವೇನು? ನಾವು ನಮ್ಮ ಮುಂದಿನ
ಪೀಳಿಗೆಯನ್ನು ಅವು ನಮ್ಮ ಜೀವನದ
ಮುಂದುವರಿಕೆಗಳಾಗಿರುವವರೆಗೆ ಪ್ರೀತಿಸುತ್ತೇವೆ.
ಎಲ್ಲಿಯವರೆಗೆ ಅವರು ನಮ್ಮ ಯೋಚನಾಶೈಲಿಯ ಪ್ರಕಾರ ಇರುತ್ತಾರೋ, ಎಲ್ಲಿಯವರೆಗೆ ನಮ್ಮ ನಿಯಮಗಳನ್ನೊಪ್ಪಿಕೊಂಡು ಬರುತ್ತಾರೋ, ಆವರೆಗೆ ಅವರನ್ನು ಪ್ರೀತಿಸುತ್ತೇವೆ. ನಮ್ಮ ಆಸೆಗಳನ್ನು ಅವರ ಮೂಲಕ ಪೂರೈಸಿಕೊಳ್ಳುತ್ತೇವೆ. ಅವರಿಂದ ನಮ್ಮ ಜೀವನವನ್ನು ಪೂರೈಸಿಕೊಳ್ಳುತ್ತೇವೆ. ನಮ್ಮ ಯೌವನದಲ್ಲಿ ಏನೇನು ಕೈಗೊಳ್ಳಲಾಗಲಿಲ್ಲವೋ ಅದನ್ನು ಅವರ ಮೂಲಕ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಮಗೆ ವೈದ್ಯರಾಗಬೇಕೆಂದಿದ್ದು, ಯಾವುದೋ ಕಾರಣಕ್ಕಾಗಿ ಆಗಿರದಿದ್ದರೆ, ಅವರನ್ನು ವೈದ್ಯರಾಗಿರೆಂದು ಉತ್ತೇಜಿಸುತ್ತೇವೆ. ಎಲ್ಲಿಯವರೆಗೆ ಅವರು ನಮ್ಮ ಬದುಕಿನ ಬದಲಾವಣೆಯೊಳಗೆ ಜೀವಿಸುತ್ತಾರೋ, ಅಲ್ಲಿಯವರೆಗೆ ಸಂಬಂಧವು ಸುಂದರವಾಗಿರುತ್ತದೆ. ಆದರೆ ಅವರು ಸ್ವಂತ ನಿರ್ಧಾರ ಕೈಗೊಳ್ಳುವ ನಿಮಿಷದಿಂದಲೇ, ನಾವು ಅವರಿಗೆ ಒತ್ತಡ ತರುತ್ತಿದ್ದೇವೆ ಎನಿಸಿದ ನಿಮಿಷದಿಂದಲೇ, ಅವರು ಎದ್ದುನಿಂತು 'ಇಲ್ಲ' ಎಂದು ಹೇಳಿದ ನಿಮಿಷದಿಂದಲೇ, ಸಂಬಂಧವೂ ಬೇರೆ ತಿರುವನ್ನು ತೆಗೆದುಕೊಳ್ಳುತ್ತದೆ.
ಪ್ರೀತಿಸಿರಿ ಮತ್ತು ಬಿಡುಗಡೆ ಮಾಡಿರಿ, ಮತ್ತೊಬ್ಬರನ್ನು ನಿಮ್ಮ ಸ್ವತ್ತನ್ನಾಗಿಸಬೇಡಿ
ನಮ್ಮ ಪ್ರೀತಿಯು ಒಂದು ವಸ್ತುವನ್ನು ಕುರಿತು ಇದ್ದಾಗ ಆ ವಸ್ತುವು ಒಂದು ವ್ಯಕ್ತಿಯೇ ಇರಬಹುದು, ನಾವು ಆ ವ್ಯಕ್ತಿಯನ್ನು ಕೇವಲ ಒಂದು ವಸ್ತುವಿನ ಮಟ್ಟಕ್ಕೆ ಇಳಿಸಿಬಿಡುತ್ತೇವೆ. ಇನ್ನೊಬ್ಬ ವ್ಯಕ್ತಿಯು ನಮ್ಮ ಸ್ವತ್ತೆಂದು ಭಾವಿಸಿದಾಗ ಅಥವಾ ವ್ಯಾಮೋಹವೋ ನಮ್ಮಲ್ಲುಂಟಾದಾಗ, ಸರಿಯಾಗಿ ಇದನ್ನೇ ನಾವು ಮಾಡುವುದು. ನಾವು ಪೀಠೋಪಕರಣಗಳನ್ನೋ, ಮನೆಯನ್ನೋ ಅಥವಾ ಯಾವುದಾದರೂ ವಸ್ತುವನ್ನೋ ಹೊಂದುವಾಗ ಮಾಡುವಂತೆ, ಆ ವ್ಯಕ್ತಿಯನ್ನೂ ಸಹ ಅಧೀನದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಆ ವ್ಯಕ್ತಿ ನಮಗೆ ಹೇಗೆ ಬೇಕೋ ಹಾಗೆ ವರ್ತಿಸಲೆಂದು ಇಚ್ಛಿಸುತ್ತೇವೆ. ಅಂದರೆ ಆ ವ್ಯಕ್ತಿಯನ್ನು ಕೇವಲ ಒಂದು ವಸ್ತುವಿನ ಮಟ್ಟಕ್ಕೆ ಇಳಿಸಿಬಿಡುತ್ತೇವೆ.
ಆದ್ದರಿಂದ ತಿಳಿಯಿರಿ, ನಮ್ಮ ಗಮನ ಅಥವಾ ಪ್ರೀತಿ ಒಂದು ನಿರ್ದಿಷ್ಟವಾದ ಕಡೆಗೆ ಕೇಂದ್ರೀಕೃತವಾದಾಗ ನಮಗೂ ಇತರರಿಗೂ ತೊಂದರೆಕೊಡುತ್ತಾ ಕೇವಲ ಪ್ರಾಪಂಚಿಕವಾಗಿರುತ್ತೇವೆ. ಆ ವಸ್ತು ಅಥವಾ ವ್ಯಕ್ತಿಯನ್ನು ಉಸಿರುಗಟ್ಟಿಸುತ್ತೇವೆ. ಬದಲಾಗಿ ನಮ್ಮ ಗಮನವನ್ನು ಪ್ರೀತಿಯ ಅನುಭವದ ಕಡೆಗೇ ತಿರುಗಿಸಿದಲ್ಲಿ ನಾವು ಆ ವಸ್ತುವನ್ನು ಬಿಡುಗಡೆ ಮಾಡುತ್ತೇವೆ. ಆ ವಸ್ತುವಿನಿಂದ ನಾವೂ ಸಹ ಬಿಡುಗಡೆ ಹೊಂದುತ್ತೇವೆ. ಪ್ರೀತಿಯು ಯಾವುದೋ ವಸ್ತುವಿಗಾಗಿ ಅಲ್ಲದೆ, ಪ್ರೀತಿಯಾಗಿಯೇ ಮತ್ತು ಪ್ರೀತಿಗಾಗಿಯೇ ಅರಳುವುದರ ಸೊಗಸೇ ಅದು.
ನೀವು ಯಾರನ್ನಾದರೂ ಸ್ವಾಧೀನ ಪಡಿಸಿಕೊಳ್ಳಲು ಆರಂಭಿಸಿದರೆ, ನೀವೂ ಸಹ ಬಂಧನಕ್ಕೊಳಗಾಗುವಿರಿ. ನಿಮ್ಮ ನಾಯಿಯ ಕೊರಳ ಪಟ್ಟಿಯನ್ನು ಹಿಡಿದು ನಡೆಯುತ್ತಿದ್ದರೆ, ಚೆನ್ನಾಗಿ
ತಿಳಿಯಿರಿ, ನೀವೂ ಸಹ ಬಂಧಿಸಲ್ಪಟ್ಟಿರುತ್ತೀರಿ.
ನಾಯಿಯು ಮಾತ್ರ ಬಂಧಿಸಲ್ಪಟ್ಟಿರುವುದಿಲ್ಲ, ನೀವೂ
ಸಹ ಬಂಧಿಸಲ್ಪಟ್ಟಿರುತ್ತೀರಿ. ನಾಯಿಯು ಮಾತ್ರ
ಓಡಿಹೋಗಲಾರದೆಂದು ಭಾವಿಸಬೇಡಿರಿ, ನೀವೂ
ಸಹ ಓಡಿಹೋಗಲಾರಿರಿ! ನಾನು ಹಗ್ಗವನ್ನು
ಹಿಡಿದುಕೊಂಡಿದ್ದೇನೆಂದು ನೀವು ಭಾವಿಸಿರಬಹುದು;
ತಾನು ಹಗ್ಗವನ್ನು ಹಿಡಿದುಕೊಂಡಿದ್ದೇನೆಂದು
ನಾಯಿಯೂ ಭಾವಿಸಿರಬಹುದು, ಯಾರಿಗೆ ಗೊತ್ತು?
ಮುಂದೆ ನೀವು ಯಾರ ಜೊತೆಯಲ್ಲಾದರೂ
ಇದ್ದಾಗ, ಯಾರ ಜೊತೆಯಲ್ಲಿ ಸಂಪೂರ್ಣ ಬಿಚ್ಚು
ಮನಸ್ಸಿನಿಂದಿರುತ್ತೀರೋ ಅವರೊಡನೆ ಇದ್ದಾಗ ಈ
ತಂತ್ರವನ್ನು ಬಳಸಿ ನೋಡಿರಿ.
ಕೇವಲ ಆಕೆಯ ಅಥವಾ ಆತನ ಪಕ್ಕದಲ್ಲಿ ಕುಳಿತುಕೊಳ್ಳಿರಿ. ನೀವು ಏನು ಮಾಡಬೇಕು ಅಥವಾ ಏನು ಹೇಳಬೇಕೆಂಬುದರ ಬಗ್ಗೆ ಚಿಂತಿಸಬೇಡಿರಿ. ಸುಮ್ಮನೆ ಕುಳಿತಿರಿ, ಅಷ್ಟೇ! ಅದೇ ತಂತ್ರ! ವಾಸ್ತವವಾಗಿ ಮಾತನಾಡುವುದು ಎಂದರೆ ಆ ವ್ಯಕ್ತಿಯಿಂದ ತಪ್ಪಿಸಿಕೊಳ್ಳುವುದಲ್ಲದೆ ಬೇರೇನಲ್ಲ. ನೀವು ಆ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕಾಗದುದರಿಂದ ನೀವು ಮಾತನಾಡುತ್ತಲೇ ಇರುವಿರಿ, ನಿಜಾಂಶ ಇದು. ಆ ವ್ಯಕ್ತಿಯು ಏಕೆ ಕೇಳಿಸಿಕೊಳ್ಳುತ್ತಾರೆ ಎಂದರೆ, ನೀವು ನಿಲ್ಲಿಸಿದಾಗ ತಾನು ಮಾತನಾಡಬಹುದೆಂದು! ಒಬ್ಬ ವ್ಯಕ್ತಿ ನಿಮ್ಮ ಮಾತನ್ನು ಕೇಳಿಸಿಕೊಳ್ಳುವುದರ ಅರ್ಥವೇನೆಂದರೆ, ಆತನು ಇನ್ನೇನನ್ನೋ ಯೋಚಿಸುತ್ತಿರುತ್ತಾನೆ ಅಥವಾ ತನ್ನ ಸರದಿಗಾಗಿ ತಯಾರಿ ನಡೆಸುತ್ತಿರುತ್ತಾನೆ, ಎಂದು. ನೀವು ಮುಗಿಸಿದ ಕೂಡಲೇ ತಾನು ಪ್ರಾರಂಭಿಸಬಹುದೆಂದು ಆತನು ಅಲ್ಲಿ ಕುಳಿತಿರುತ್ತಾನೆ.
ಈಗ ನೀವು ಈ ತಂತ್ರವನ್ನು ಪ್ರಯತ್ನಿಸಿದಿರೆಂದರೆ ಅದು ನಿಮ್ಮನ್ನು ಬೇರೆಯೇ ಆದ ಒಂದು ಸ್ತರಕ್ಕೆ ಒಯ್ಯಬಹುದು. ನೀವು ಗುರುಗಳ ಜೊತೆಯಲ್ಲಿಯೋ ಅಥವಾ ಸ್ನೇಹಿತರೊಡನೆಯೋ ಅಥವಾ ಪ್ರೀತಿಸುತ್ತಿರುವವರೊಡನೆಯೋ, ಯಾರು ಬಿಚ್ಚು ಮನಸ್ಸಿನಿಂದಿರುತ್ತಾರೋ, ಅವರೊಡನೆ ಈ ತಂತ್ರವನ್ನು ಪ್ರಯತ್ನಿಸಬಹುದು. ಅದು ನೇರವಾಗಿ ಜ್ಞಾನೋದಯದ ಕಡೆಗೇ ನಿಮ್ಮನ್ನು ಒಯ್ಯುತ್ತದೆ. ಚೆನ್ನಾಗಿ ಕೇಳಿರಿ, ನಾನು ನಿಮಗೆ ಇನ್ನೂ ಉತ್ತಮ ಸಂಬಂಧಗಳನ್ನು ಹೊಂದಲೆಂದಾಗಲೀ ಅಥವಾ ನಿಮ್ಮ ಸ್ವಭಾವವನ್ನು ಉತ್ತಮಗೊಳಿಸಲಾಗಲೀ ಈ ತಂತ್ರವನ್ನು ಬೋಧಿಸುತ್ತಿಲ್ಲ. ಇಲ್ಲ! ಜೀವನ್ಮುಕ್ತಿಗೇ ನೇರವಾಗಿ ಒಯ್ಯುವಂತಹ ಶುದ್ಧ ಪ್ರೇಮವನ್ನು ನೀವು ಅನುಭವಿಸಲೆಂದು ನಾನು ನಿಮಗೆ ಹೇಳುತ್ತಿದ್ದೇನೆ.
ಈ ತಂತ್ರವು ನಿಮ್ಮನ್ನು ಸಾಕಾರದಿಂದ
ನಿರಾಕಾರಕ್ಕೂ, ಸ್ವಾರ್ಥ ಪ್ರೀತಿಯಿಂದ ಕಾರಣರಹಿತ
ಪ್ರೀತಿಗೂ ಒಂದು ಮಹತ್ತರವಾದ ಜಿಗಿತದ ಮೂಲಕ
ಹೋಗುವಂತೆ ಮಾಡುತ್ತದೆ.
ಕಾರಣವಿಲ್ಲದ ಪ್ರೀತಿಯು ಉಕ್ಕಿ ಹರಿದಾಗ,
ನೀವು ನಿಮ್ಮಿಂದಲೇ ಬಿಡುಗಡೆ ಹೊಂದುವಿರಿ ಮತ್ತು
ಇನ್ನೊಬ್ಬ ವ್ಯಕ್ತಿಯಿಂದ ನಿಮ್ಮ ವ್ಯಾಮೋಹ ಮತ್ತು
ಅಧೀನತ್ವಗಳಿಂದ ಬಿಡುಗಡೆ ಮಾಡುವಿರಿ. ಏಕೆಂದರೆ
ಅಧೀನತ್ವವು ಆ ವ್ಯಕ್ತಿಯನ್ನು ಮಾತ್ರವಲ್ಲದೆ,
ನಿಮ್ಮನ್ನೂ ಸಹ ಬಂಧನಕ್ಕೊಳಪಡಿಸುತ್ತದೆ. ಅದು
ಆ ವ್ಯಕ್ತಿಯನ್ನಷ್ಟೇ ಅಲ್ಲದೆ ನಿಮ್ಮನ್ನೂ ಸಹ
ಹಿಂಸಿಸುತ್ತದೆ. ನಿಜವಾದ ಪ್ರೀತಿಯು ಸುಲಭವಾಗಿ
ನಿಮ್ಮಿಬ್ಬರನ್ನೂ ಬಿಡುಗಡೆಗೊಳಿಸುತ್ತದೆ. ಅದು ಆ ವ್ಯಕ್ತಿ ಹಾಗೂ ನೀವು, ಇಬ್ಬರಿಗೂ ಸ್ವಾತಂತ್ರ್ಯವನ್ನು ನೀಡುತ್ತದೆ.
ನಾನು ವಿಶ್ವಪರ್ಯಟನೆಯಲ್ಲಿರುವಾಗ ಜನರು, 'ಸ್ವಾಮೀಜೀ, ನೆನ್ನೆ ರಾತ್ರಿ ನಿದ್ರೆ ಚೆನ್ನಾಗಿ ಬಂತೇ? ಇದು ನಿಮಗೆ ಹೊಸ ಜಾಗ' ಎಂದು ನನ್ನನ್ನು ಕೇಳುತ್ತಾರೆ. ನಾನವರಿಗೆ ಹೇಳುತ್ತೇನೆ 'ಒಂದು ನಿರ್ದಿಷ್ಟವಾದ ಮನೆಗೆ ವ್ಯಾಮೋಹವಂಟಿಕೊಂಡಾಗ ಮಾತ್ರ ಮತ್ತೊಂದು ಮನೆಯು ನಿಮಗೆ ಹೊಸದಾಗುತ್ತದೆ ಮತ್ತು ನೀವು ಒದ್ದಾಡುತ್ತೀರಿ. ನಿಮಗೆ ಯಾವ ಮನೆಯ ಮೇಲೂ ವ್ಯಾಮೋಹವೇ ಇಲ್ಲದಾಗ, ಎಲ್ಲೇ ಹೋದರೂ ಅದು ನಿಮ್ಮ ಮನೆಯೇ ಆಗಿಬಿಡುತ್ತದೆ!' ಎಂದು.
ಯಾವುದೇ ಜಾಗವು 'ನನ್ನದು' ಅಥವಾ 'ನನ್ನದಲ್ಲ' ಎಂದು ನನಗನಿಸುವುದೇ ಇಲ್ಲ. ಎಲ್ಲಿ ಬೇಕಾದರೂ ನಾನು ಹಾಯಾಗಿರಬಲ್ಲೆ. ನೆಮ್ಮದಿ ಎಂಬುದು ಯಾವಾಗಲೂ ನಮ್ಮೊಳಗಿರುವಂತಹದು. ಹೊರಗಲ್ಲವೇ ಅಲ್ಲ. ನಮ್ಮಲ್ಲಿ ನೆಮ್ಮದಿ ಇಲ್ಲದಿದ್ದಾಗ ಅದನ್ನು ಹೊರಗೆ ಹುಡುಕುತ್ತೇವೆ. ನಮ್ಮಲ್ಲಿಯೇ ವಿಶ್ರಾಂತರಾಗಿರುವುದು ಕಾರಣವಿಲ್ಲದ ಪ್ರೀತಿಯಶಕ್ತಿಯ ಪ್ರತಿಫಲ. ನಾವು ಒಂದೇ ಮನೆಗೆ ಮನಸ್ಸನ್ನು ಅಂಟಿಸದಿದ್ದಲ್ಲಿ ಇಡೀ ವಿಶ್ವವೇ ನಮಗೆ ಮನೆ ಎನಿಸಿಬಿಡುತ್ತದೆ. ಪ್ರಪಂಚದ ಯಾವ ಜಾಗವೇ ಆಗಲಿ, ನಮಗೆ ಪೂರ್ಣವಾಗಿ ಆರಾಮದಾಯಕವಾಗಿರುತ್ತದೆ.
ಸಂಬಂಧಗಳಲ್ಲಿ ಪ್ರೀತಿ
ನಿಜವಾದ
ಪ್ರೀತಿಯು
ಒಂದು
'ಭಾವೈಕ್ಯ'ದಂತೆ.
ಅದು ಇಬ್ಬರ
ನಡುವಿನ
ಅನುರಣಿಕೆಯಂತೆ.
ನಿಜಜೀವನದಲ್ಲಿ
ಇತರರಿಗೆ ಪ್ರೀತಿ
ತೋರಿಸಬೇಕೆಂದಾಗ
ನಾವದನ್ನು ಗಮನಿಸ-
ಬಹುದಾದ ಅಥವಾ ಎದ್ದು ಕಾಣುವ ರೀತಿಯಲ್ಲಿ
ತೋರಬಯಸುತ್ತೇವೆ. ಈಗಿನ ದಿನಗಳಲ್ಲಿ
ಗಮನಿಸಬಹುದಾದ ರೀತಿಯಲ್ಲಿ ಪ್ರೀತಿಯನ್ನು
ವ್ಯಕ್ತಪಡಿಸಿದಾಗ ಮಾತ್ರ ಅದನ್ನು ಪ್ರೀತಿಯೆಂದು
ಗುರುತಿಸುತ್ತಾರೆ. ಒಂದು ವಿಚಾರ: ನಿಜವಾದ
ಪ್ರೀತಿಯು ಒಂದು 'ಭಾವೈಕ್ಯ'ದಂತೆ. ಅದು ಇಬ್ಬರ
ನಡುವಿನ ಅನುರಣಿಕೆಯಂತೆ ಹೇಳದೆಯೇ ಅದನ್ನು
ಅನುಭವಿಸಬಹುದು. ಅದು ಆಗಲೇ
ಅನುರಣಿಕೆಯಾಗಿಬಿಟ್ಟಿರುವುದರಿಂದ ತಿಳಿಸುವ
ಅವಶ್ಯಕತೆ ಇಲ್ಲ.
ನೀವು ನಿಜವಾಗಿ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರೆ, ನಿಮ್ಮ ಹಾವಭಾವಗಳೂ ಅದನ್ನು ತೋರಿಸುತ್ತದೆ. ಪದಗಳಲ್ಲಿ ಹೇಳಲು ಅದು ಅತಿಶಯವೆನಿಸುತ್ತದೆ. ಎಷ್ಟೇ ಪದಗಳಾದರೂ ಅದು ನಿಮಗೆ ಕಡಿಮೆ ಎನಿಸುತ್ತದೆ ಮತ್ತು ನೀವು ಆ ಪ್ರೀತಿಯ ಅನುಭವವನ್ನು ಕೆಳಮಟ್ಟಕ್ಕೆ ತರುವಿರಷ್ಟೆ. ಆದರೆ ನೀವು ಪದಗಳನ್ನು ಬಳಸಿದರೆ ಎಲ್ಲೋ ಒಂದು ಕಡೆ ಪ್ರೀತಿಯು ನಿಜವಾಗಿ ಉಂಟಾದುದಾಗಿರುವುದಿಲ್ಲ. ಪ್ರೀತಿಯನ್ನು ವ್ಯಕ್ತಪಡಿಸಲು ನೀವು ಮಾತಾಡಬೇಕಾದರೆ, ಅದರರ್ಥ ಅದರಲ್ಲೇನೋ ಒಂದು ಕಡೆ ಸುಳ್ಳು ಇದೆ ಎಂದು. ಸುಳ್ಳನ್ನು ಶೃಂಗಾರ ಮಾಡಲು ನೀವು ಪದಗಳನ್ನು ಉಪಯೋಗಿಸುವಿರಿ.
ನೈಜಪ್ರೇಮ ಬಿಡುಗಡೆಗೊಳಿಸುತ್ತದೆ, ಏಕೆಂದರೆ
ಅದು ಸದಾ ವ್ಯಕ್ತಪಡಿಸಿರೆಂದು ನಿಮ್ಮನ್ನು
ಬಲವಂತಪಡಿಸುವುದಿಲ್ಲ. ಅದು ಇದೆಯಷ್ಟೇ.
ನಿಮಗೇನು ಹೇಳಬೇಕೆನಿಸುತ್ತದೆಯೋ ಅದನ್ನು
ಸ್ವತಂತ್ರವಾಗಿ ಹೇಳಲು ಅದು ಸ್ವಾತಂತ್ರ್ಯವನ್ನು
ಕೊಡುತ್ತದೆ. ನೀವು ಅಸಮಾಧಾನವನ್ನೋ,
ಕೋಪವನ್ನೋ, ಏನು ಬೇಕಾದರೂ ವ್ಯಕ್ತ
ಪಡಿಸಬಹುದು. ಅದು ಕಡಿಮೆಯಾದ ಪ್ರೇಮವೆಂದು
ತಪ್ಪಾಗಿ ಪರಿಗಣಿಸಲ್ಪಡುವುದಿಲ್ಲ.
ಅಷ್ಟೇ ಅಲ್ಲ. ನೈಜಪ್ರೀತಿಯಿಂದ ಸಂಬಂಧಗಳಲ್ಲಿ ಅಧಿಕಾರ ಅಥವಾ ಬಲದ ಒತ್ತಡಗಳಿರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ, ತನ್ನ ವಿಶಿಷ್ಟ ಸುವಾಸನೆಯನ್ನು ಹೊರಸೂಸಲು ಅರಳಿರುವ ಸುಂದರವಾದ ಪುಷ್ಪದಂತಿರುತ್ತಾನೆ, ಅಷ್ಟೇ.
ನೈಜಪ್ರೀತಿಯಲ್ಲಿ ಭಯವಾಗಲೀ,
ಅಭದ್ರತೆಯಾಗಲೀ ಇರುವುದಿಲ್ಲ. ಸಾಧಾರಣ
ಪ್ರೀತಿಯಲ್ಲಿಯಾದರೋ ಇಬ್ಬರ ನಡುವಿನ ಅಂತರವು
ಅಪಾರವಾದ ಅಭ್ಯಢತೆ ಹಾಗೂ ಅಪನಂಬಿಕೆಯನ್ನು
ಹುಟ್ಟಿಸುತ್ತದೆ.
ಒಂದು ಚಿಕ್ಕ ಕಥೆ:
ಒಬ್ಬ ಯುವ ಸೈನಿಕನು ತನ್ನ ಮೇಲಧಿಕಾರಿಯನ್ನು,
‘ನನ್ನ ಸ್ನೇಹಿತನು ಯುದ್ಧ ಭೂಮಿಯಿಂದ ಇನ್ನೂ
ಮರಳಿಬಂದಿಲ್ಲ. ಹೋಗಿ ಅವನನ್ನು ಕರೆತರಲು
ನನಗೆ ಅನುಮತಿ ಕೊಡಿರಿ' ಎಂದು ಕೇಳಿದನು.
ಅಧಿಕಾರಿಯು, ‘ಅನುಮತಿ ಕೊಡುವುದಿಲ್ಲ. ನಿನ್ನ
ಸ್ನೇಹಿತನು ಬಹುಶಃ ಮರಣಹೊಂದಿರುತ್ತಾನೆ. ನೀನು
ಅಲ್ಲಿ ಹೋಗಿ ನಿನ್ನ ಜೀವವನ್ನೂ
ಅಪಾಯದಲ್ಲಿರಿಸುವುದು ನನಗೆ ಇಷ್ಟವಿಲ್ಲ' ಎಂದು
ಹೇಳಿದನು.
ಆದರೂ ಯುವ ಸೈನಿಕನು ಹೋಗಿ,
ಪ್ರಾಣಾಂತಿಕವಾಗಿ ಗಾಯಗೊಂಡು
ಮರಣಹೊಂದಿದ್ದ ತನ್ನ ಸ್ನೇಹಿತನ ಶವವನ್ನು
ಹೊತ್ತುಕೊಂಡು ಬಂದನು.
ಅಧಿಕಾರಿಗೆ ವಿಪರೀತ ಕೋಪ ಬಂದಿತು. ಆತನು,
‘ಅವನು ಸಾವನ್ನಪ್ಪಿರುತ್ತಾನೆಂದು ನಾನು ನಿನಗೆ
ಹೇಳಿದೆ. ಈಗ ನಾನು ನಿಮ್ಮಿಬ್ಬರನ್ನೂ
ಕಳೆದುಕೊಂಡೆ. ಒಂದು ಹೆಣವನ್ನು ತರಲು ಅಲ್ಲಿಗೆ
ಹೋದದ್ದು ಅವಶ್ಯಕವಾಗಿತ್ತೇ? ಹೇಳು' ಎಂದು
ಕೂಗಾಡಿದನು.
ಇನ್ನೇನು ಸಾಯುವುದರಲ್ಲಿದ್ದ ಸೈನಿಕನು, ‘ಹೌದು
ಸ್ವಾಮೀ, ನಾನು ಅಲ್ಲಿಗೆ ಹೋದಾಗ ಈತನಿನ್ನೂ
ಬದುಕಿದ್ದನು. ನನ್ನನ್ನು ನೋಡಿ, ನೀನು ಬಂದೇ
ಬರುತ್ತೀಯೆಂದು ನನಗೆ ಗೊತ್ತಿತ್ತು ಎಂದನು'
ಎಂದು ಹೇಳಿದನು.
ನಿಜವಾದ ಪ್ರೀತಿಯೆಂಬುದು ಉಪಯೋಗವನ್ನು
ಹುಡುಕುವುದಿಲ್ಲ. ಅದು ಕೇವಲ ವಿಶ್ವಾಸದ ಮೇಲೆ
ಕೆಲಸ ಮಾಡುತ್ತದೆ. ಅದು ದೇಶಕಾಲಗಳನ್ನು
ಮೀರಿದುದು.
ಈಚಿನ ದಿನಗಳಲ್ಲಿ ಜನರು ತಮ್ಮ ಪ್ರೀತಿಯನ್ನು
ತೋರಿಸುವ ಸಲುವಾಗಿ ಅನೇಕ ನಮೂನೆಯ
ವಸ್ತುಗಳನ್ನು ಉಡುಗೊರೆಯಾಗಿ ಕೊಡುವುದನ್ನು
ನಾನು ನೋಡಿದ್ದೇನೆ. ಉಡುಗೊರೆ ಕೊಡುವುದು
ಪ್ರೀತಿಯ ಸಂಕೇತವಾಗಿಬಿಟ್ಟಿದೆ. ಉಡುಗೊರೆ
ಕೊಡುವುದು ಕಾರಣವಿಲ್ಲದೆ ಉಕ್ಕಿ ಹರಿಯುವ
ಪ್ರಕ್ರಿಯೆಯಾದರೆ ಅದು ಸರಿಯೇ ಆದರೂ ಇದು
ನೆರವೇರಿಸಲೇಬೇಕಾದ ನಿರ್ಬಂಧವಾದರೆ
ಅದೊಂದು ಸಮಸ್ಯೆಯಾಗುತ್ತದೆ. ಆಗ ಅದು
ನಿಜಪ್ರೀತಿಯ ಒಂದು ಬಡಪ್ರತಿಯಾಗುತ್ತದೆ.
ಎಲ್ಲಿಯವರೆಗೆ ನಿಜಪ್ರೀತಿಯಿರುತ್ತದೆಯೋ ಅಲ್ಲಿಯವರೆಗೂ ಯಾವ ಸಂಬಂಧವೂ ಬೇಸರ ತರುವುದಿಲ್ಲ. ಆಶ್ರಮವಾಸಿಯೊಬ್ಬರು ಒಂದು ದಿನ, ‘ಸ್ವಾಮೀಜಿ, ಪ್ರತಿದಿನವೂ ನೀವು ನಮ್ಮನ್ನೂ, ನಮ್ಮ ತಪ್ಪುಗಳನ್ನೂ, ಅವ್ಯವಸ್ಥೆಯನ್ನೂ ನೋಡುತ್ತೀರಿ. ಪ್ರತಿದಿನವೂ ನಿಮಗೆ ಅದೇ ಆಗಿರುತ್ತದೆ, ನಮ್ಮಿಂದ ನಿಮಗೆ ಬೇಸರವಿಲ್ಲವೇ?’ ಎಂದು ನನ್ನನ್ನು ಕೇಳಿದರು. ಅದು ಒಂದು ಪ್ರಾಮಾಣಿಕ ಪ್ರಶ್ನೆಯಾಗಿತ್ತು! ನಾನು ಅವರಿಗೆ, ‘ಜ್ಞಾನಿಗಳಿಗೆ ತಮ್ಮ ಆತ್ಮೀಯ ಪ್ರೀತಿಯಿಂದಲೇ ಪ್ರತಿಯೊಬ್ಬರೂ ಸಹ ಒಬ್ಬ ಅನನ್ಯ ವ್ಯಕ್ತಿ ಎನಿಸುತ್ತದೆ. ಅವರು ವ್ಯಕ್ತಿಗಳನ್ನು ಕೇವಲ ಸಂಖ್ಯೆಗಳಂತೆ ಕಾಣುವುದಿಲ್ಲ. ಪ್ರತಿಯೊಬ್ಬರನ್ನೂ ಅನನ್ಯ ವ್ಯಕ್ತಿಗಳಂತೆ ಕಾಣುತ್ತಾರೆ’ ಎಂದು ಹೇಳಿದೆ.
ಆದ್ದರಿಂದಲೇ ಗುರುಗಳು ಅಷ್ಟೊಂದು ಸಹನೆಯಿಂದ ಪ್ರತಿಯೊಬ್ಬರ ವಿಕಸನಕ್ಕೂ ಕೆಲಸ ಮಾಡುತ್ತಲೇ ಇರುತ್ತಾರೆ. ಅದು ಬರೀ ಅಂಕಿ ಅಂಶಗಳ ವಿಚಾರವಾಗಿದ್ದರೆ, ಅದೇ ಬೇರೆಯಾಗಿರುತ್ತಿತ್ತು. ಈ ಪ್ರೀತಿಯಿದ್ದಾಗ ನಿಮ್ಮ ಅಂತರಂಗವು ಹೇಗಿರುತ್ತದೆಂದರೆ ನಿಮ್ಮ ಕ್ರಿಯೆಗಳ ಹಿಂದೆ ತಾರ್ಕಿಕವಾದ ಕಾರಣವೇನೂ ಇರದು. ನೀವು ಪ್ರೀತಿಯನ್ನು ಬೀರುತ್ತೀರಿ, ಅಷ್ಟೇ!
ಅಷ್ಟೇ ಅಲ್ಲ. ಕಾರಣವಿಲ್ಲದ ಉಕ್ಕಿಹರಿಯುವ ಪ್ರೀತಿಯು ತನ್ನ ಅಭಿವ್ಯಕ್ತಿಯನ್ನು ಯಾವಾಗಲೂ ಸಂಪೂರ್ಣತೆಯಿಂದ ಕೂಡಿರುತ್ತದೆ. ಅದು ಸಾಮಾನ್ಯವಾದ ನಿಸ್ಸಾರವಾದ ದುರಾಸೆ ಮತ್ತು ಭಯಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ನೀವು ಯಾವ ವ್ಯಕ್ತಿಯನ್ನೇ ಪ್ರೀತಿಸಲಿ, ಯಾವ ತಡೆಗಳನ್ನೂ ಒಳಗೊಂಡಿರದೆ ಸಂಪೂರ್ಣವಾಗಿ ಪ್ರೀತಿಸುವಿರಿ. ಆತನು ಹೇಗೆ ಇರಲಿ, ಆತನನ್ನು ಪ್ರೀತಿಸುವಿರಿ. ಈ ರೀತಿ ಪ್ರೀತಿಸಿದಾಗ, ನಿಮ್ಮ ಜೀವನದಿಂದ ಆತನು ದೂರ ಸರಿದರೂ ನಿಮಗೆ ದುಃಖವಾಗುವುದಿಲ್ಲ. ಒಬ್ಬ ವ್ಯಕ್ತಿ ಮರಣಹೊಂದಿದಾಗ ಆತನನ್ನು ಸಂಪೂರ್ಣವಾಗಿ ಪ್ರೀತಿಸಿರದ ಕಾರಣಕ್ಕಾಗಿ ನೀವು ದುಃಖಿಸುತ್ತೀರಿ ಮತ್ತು ನಿಮ್ಮ ಪ್ರೀತಿಯು ಸಂಪೂರ್ಣತೆಯನ್ನು ಹೊಂದಿದಾಗ ಮಾತ್ರ ನೀವು ಆತನನ್ನು ಸಂಪೂರ್ಣವಾಗಿ ಪ್ರೀತಿಸಲು ಸಾಧ್ಯ. ಆತನು ಮಾಡಬೇಕಾದದ್ದು ಏನೂ ಇರುವುದಿಲ್ಲ. ಆತನು ಎಂತಹ ವ್ಯಕ್ತಿಯೇ ಆಗಿರಬಹುದು, ಪರವಾಗಿಲ್ಲ. ನಿಜ ಪ್ರೀತಿಯ ಪೂರ್ಣ ಸವಿಯೇ ಅದು. ಅದು ಪ್ರೀತಿಗೋಸ್ಕರ ಪ್ರೀತಿ. ಇನ್ನೊಬ್ಬ ವ್ಯಕ್ತಿಗೋಸ್ಕರವಲ್ಲ.
ನೀವು ಒಬ್ಬ ವ್ಯಕ್ತಿಯನ್ನು ಕಳೆದುಕೊಂಡು ದುಃಖಿಸುತ್ತಿದ್ದರೆ, ಚೆನ್ನಾಗಿ ತಿಳಿಯಿರಿ, ಅವರನ್ನು ಸಂಪೂರ್ಣವಾಗಿ ಪ್ರೀತಿಸಿರದ ಕಾರಣಕ್ಕಾಗಿಯೇ ದುಃಖಿಸುತ್ತೀರಿ. ನೀವು ಅವರನ್ನು ಸಂಪೂರ್ಣವಾಗಿ ಪ್ರೀತಿಸುತ್ತಿದ್ದರೆ, ಸುಸೂತ್ರವಾಗಿ ಅವರಿಗೆ ವಿದಾಯ ಹೇಳಿಬಿಡುತ್ತಿದ್ದಿರಿ, ದುಃಖದಿಂದಲ್ಲ. ನೀವು ದುಃಖಿಸುವುದು ಎಲ್ಲೋ ಏನೋ ಕಳೆದುಕೊಂಡಿರೆಂದಷ್ಟೆ. ಆತನು ನಿಮ್ಮ ತಂದೆಯೋ, ಗಂಡನೋ, ಹೆಂಡತಿಯೋ ಆಗಿದ್ದರೂ ಅದು ಅದೇ
ರೀತಿಯೇ. ಅವರು ಬದುಕಿದ್ದಾಗ ನೀವು ಅವರಿಗೆ
ಕಾರಣವಿಲ್ಲದ ಪ್ರೀತಿಯನ್ನು ತೋರಿಸಿದ್ದರೆ, ಅವರು
ಹೋದಾಗ ಪಶ್ಚಾತ್ತಾಪ ಪಡಬೇಕಾಗಿಲ್ಲ. ಆದರೆ
ಸಮನ್ವಯಿಸಿ ಹೊಂದಿಕೊಂಡು ಅವರನ್ನು ನೀವು
ಪ್ರೀತಿಸಿದ್ದರೆ, ಆಗ ಅವರು ಅಗಲಿದಾಗ ಅವರ
ಮೇಲಿನ ನಿಮ್ಮ ಪ್ರೀತಿಯ ಒಂದು ಅಪೂರ್ಣತೆ
ಸತತವಾಗಿ ಕೊರೆಯುತ್ತಿರುತ್ತದೆ. ಅದನ್ನೇ ನೀವು
ದುಃಖವೆಂಬುದಾಗಿ ಅನುಭವಿಸುವುದು.
ಧ್ಯಾನ - ಪ್ರೀತಿಯು ನಿಮ್ಮೊಳಗೆ
ಉಕ್ಕಿಹರಿಯುವುದನ್ನು ಕಾಣಿರಿ
ಸುಖವಾಗಿ ಕುಳಿತುಕೊಳ್ಳಿರಿ ಮತ್ತು ನಿಮ್ಮ ಕಣ್ಣುಗಳನ್ನು ಮುಚ್ಚಿರಿ.
ಹೃದಯ ಪ್ರದೇಶದ ಮೇಲೆ ಕೇಂದ್ರೀಕರಿಸಿರಿ.
ಬೇರೆಲ್ಲವನ್ನೂ ಬಿಟ್ಟು ಹೃದಯದ ಮೇಲೆಯೇ
ಕೇಂದ್ರೀಕರಿಸಿರಿ.
ಹೃದಯವನ್ನು ಅನುಗ್ರಹಗಳು ಹರಿದು ಬರುವ ಅನಂತ ಜಲಾಶಯವೆಂದು ಭಾವಿಸಿರಿ.
ಪ್ರತಿಯೊಂದು ಹೃದಯ ಬಡಿತವನ್ನೂ
ಗಮನಿಸಿರಿ. ಪ್ರತಿಯೊಂದು ಬಡಿತವೂ ನಿಮ್ಮಲ್ಲಿ
ಸಂಪೂರ್ಣವಾಗಿ ಪ್ರತಿಧ್ವನಿಸಲಿ.
ಹೃದಯದ ಬಡಿತಗಳ ಮಧ್ಯದಲ್ಲಿ ಪ್ರೇಮಶಕ್ತಿ ಉಂಟಾಗುವುದನ್ನು ಅನುಭವಿಸಿರಿ.
ನಿಮ್ಮ ದೇಹ, ಮನಸ್ಸು ಮತ್ತು ಆತ್ಮಗಳ
ಗಹನವಾದ ಭಾಗಗಳಲ್ಲಿ ಪ್ರೀತಿಯ ಶಕ್ತಿಯು
ಹರಿಯಲು ಕಾದಿದೆ.
ಹೃದಯದ ಪ್ರೀತಿಯ ಶಕ್ತಿಯನ್ನು ಹರಿಯಲು
ಆಹ್ವಾನಿಸಿರಿ ಹಾಗೂ ನಿಮ್ಮ ದೇಹ, ಮನಸ್ಸು ಮತ್ತು
ಆತ್ಮಗಳ ಗಹನವಾದ ಭಾಗಗಳನ್ನು ತುಂಬಿಸಿಕೊಳ್ಳಿರಿ.
ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ.