ಜೀವನ್ಮುಕ್ತರಾಗಿ ಬಾಳುವುದೇ
This text was machine-transcribed from the printed book and may contain errors. Select the words and choose “Report a mistake”.
ಅಂತಿಮ ಧ್ಯಾನ ತಂತ್ರ
ನಿಶ್ಚಲ ಧ್ಯಾನಗಳು
1. ಮೂರನೆಯ ಕಣ್ಣಿನ ಧ್ಯಾನ
ಇಡೀ ಪ್ರಪಂಚವನ್ನು ಒಂದು ಕನಸೆಂಬಂತೆ ಕಂಡು, ನಿಮ್ಮೊಳಗಿನ ಉನ್ನತವಾದ ಬುದ್ಧಿವಂತಿಕೆಗೆ ಜಾಗೃತರಾಗಿರಿ.
ಕಾಲಾವಧಿ : ಅನ್ವಯಿಸುವುದಿಲ್ಲ.
ಈ ಧ್ಯಾನತಂತ್ರವು ನಿದ್ರಿಸುವ ಮೊದಲು ಮಾಡುವಂತಹದು.
ನಿಮ್ಮ ಹಾಸಿಗೆಯ ಮೇಲೆ ನೆಟ್ಟಗೆ ಕುಳಿತುಕೊಂಡು ಕಣ್ಣುಗಳನ್ನು ಮುಚ್ಚಿಕೊಳ್ಳಿರಿ. ನಿಮ್ಮ ಹುಬ್ಬುಗಳ ನಡುವೆ ಸೂಕ್ಷ್ಮವಾಗಿರುವ ಶಕ್ತಿಕೇಂದ್ರವಾದ ಆಜ್ಞಾಚಕ್ರ ಅಥವಾ ಮೂರನೆಯ ಕಣ್ಣಿನ ಮೇಲೆ ನಿಮ್ಮ ಅರಿವಿರಲಿ. ಏಕಾಗ್ರತೆಗಾಗಿ ಪ್ರಯತ್ನಿಸಬೇಡಿ, ಪ್ರಯಾಸ ಪಡದಿರಿ. ಒಂದು ನಿರಾಳವಾದ ರೀತಿಯಲ್ಲಿ ಸಂಪೂರ್ಣವಾದ ಅರಿವಿನಿಂದ ಕೂಡಿರಿ.
ಆಜ್ಞಾಚಕ್ರದ ಮೇಲೆ ಹಾಗೂ ಪ್ರಾಣಶಕ್ತಿಯ ಚಲನೆಯ ಮೇಲೆ ಅರಿವಿರಲಿ. ಪ್ರಾಣವು ನಿಮ್ಮ ದೇಹದೊಳಗೆ ಹೇಗೆ ಹರಿಯುತ್ತದೆಂದು, ಒಳಗೆ ತೆಗೆದುಕೊಳ್ಳುವ ಉಸಿರು ಹೇಗೆ ಹೆಚ್ಚು ಚೈತನ್ಯವನ್ನು ತರುತ್ತದೆಂದು ಹಾಗೂ ಹೊರಗೆ ಬಿಡುವ ಉಸಿರು ಹೇಗೆ ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆಂಬುದನ್ನು ಗಮನಿಸಿರಿ. ಅದನ್ನು ಕೇವಲ ಅನುಭವಿಸಿರಿ.
ಮತ್ತೆ ಹೇಳುವುದಾದರೆ ಕೇಂದ್ರೀಕರಿಸಲೇ ಬೇಡಿರಿ. ಸುಮ್ಮನೆ ನಿರಾಳವಾಗಿ ಆಜ್ಞಾಚಕ್ರದ ಮೇಲೆ ಅರಿವಿಟ್ಟುಕೊಂಡು ಉಚ್ಛ್ವಾಸ ನಿಶ್ವಾಸಗಳ ಚಲನೆಯ ಬಗ್ಗೆ ಗಮನವಿಟ್ಟುಕೊಳ್ಳಿ.
ಈಗ ನಿದ್ರಿಸುವ ಸ್ಥಿತಿಗೆ ಬನ್ನಿರಿ. ನಿದ್ರಾಸ್ಥಿತಿಗೆ ಬಂದಾಗ ನಿಮ್ಮ ಮೂರನೆಯ ಕಣ್ಣಿನ ಮೇಲೆ ಅರಿವಿರಲಿ. ಹಾಸಿಗೆಯ ಮೇಲೆ ಮಲಗಿದಾಗ, 'ಈಗ ನಾನು ನಿದ್ದೆ ಮಾಡುತ್ತೇನೆ' ಎಂದು ನಿರ್ಧರಿಸಿರಿ. ನಿಮ್ಮ ಪ್ರಜ್ಞೆಯು ಚದುರಿದಾಗ, ಆಳವಾದ ನಿದ್ದೆಯ ಇರುಳಿನೊಳಗೆ ಸುಮ್ಮನೆ ಮಾಯವಾಗುತ್ತಿರುವಾಗ ಅರಿವಿನಿಂದಿರಿ.
ನಿದ್ದೆ ಮಾಡುವ ಮೊದಲು, ನಿಮ್ಮ ಮೂರನೆಯ ಕಣ್ಣಿನ ಬಗ್ಗೆ ಅರಿವಿದ್ದರೆ ಅಷ್ಟೇ ಸಾಕು. ಏಕೆಂದರೆ, ಜಾಗ್ರತಸ್ಥಿತಿಯಲ್ಲಿ ನಿಮ್ಮ ಪ್ರಾಣವು ಅಲ್ಲಿಯೇ ಸುಳಿದಾಡುತ್ತಿರುತ್ತದೆ. ನೀವು ನಿದ್ರಿಸಿದಾಗ ಪ್ರಾಣವು ಮೂರನೇ ಕಣ್ಣಿನಿಂದ ಕೆಳಗಡೆಗೆ ಚಲಿಸಲಾರಂಭಿಸುತ್ತದೆ.
ನಂತರ, ಇಡೀ ದಿನ ನಿಮಗೆ ನೆನಪು ಬಂದಾಗಲೆಲ್ಲಾ, ಈ ಪ್ರಪಂಚವು ನಿಜವಾದುದಲ್ಲವೆಂದೂ, ನೀವು ಬರಿಯ ಕನಸು ಕಾಣುತ್ತಿದ್ದೀರೆಂದೂ, ನೀವು ನೋಡುತ್ತಿರುವುದೆಲ್ಲವೂ ಕೇವಲ ಒಂದು ಕನಸೆಂದೂ ತಿಳಿಯಿರಿ. ನೀವು ಏನೇ ಮಾಡುತ್ತಿದ್ದರೂ, ತಿನ್ನುವುದು, ನಿದ್ರಿಸುವುದು, ನಡೆಯುವುದು, ವಾಹನ ಚಾಲನೆ ಮಾಡುವುದು, ನಿಮ್ಮ ಕಾರ್ಯಾಲಯದಲ್ಲಿ ಕುಳಿತುಕೊಳ್ಳುವುದೆಲ್ಲವೂ, ಕೇವಲ ಒಂದು ಕನಸೆಂದು ಪ್ರಜ್ಞಾಪೂರಿತರಾಗಿ ನೆನಪಿಟ್ಟುಕೊಳ್ಳಿರಿ.
ಕೂಡಲೇ ನೀವು ನಿಮ್ಮನ್ನೇ ಕೇಳಿಕೊಳ್ಳುತ್ತೀರಿ, 'ಈ ಪ್ರಪಂಚವು ಒಂದು ಕನಸೆಂದು ಹೇಗೆ ತಿಳಿಯಲಿ? ವಾಸ್ತವವಾಗಿ ಈ ಪ್ರಪಂಚವು ಒಂದು ನಿಜವಲ್ಲವೇ' ಎಂದು. ದಯವಿಟ್ಟು ಸ್ಪಷ್ಟವಾಗಿ ತಿಳಿಯಿರಿ, ವಾಸ್ತವಾಂಶಕ್ಕೂ ಸತ್ಯಾಂಶಕ್ಕೂ ಒಂದು ಭೇದವಿದೆ. 'ಈ ಇಡೀ ಪ್ರಪಂಚವು ಒಂದು ಕನಸು' ಎಂಬುದು ನಿಮ್ಮ ಪ್ರಕಾರ ವಾಸ್ತವಾಂಶವಲ್ಲದಿರಬಹುದು. ಏಕೆಂದರೆ ಯಾವುದಾದರೊಂದು ವಿಷಯ ವಾಸ್ತವಾಂಶವೋ ಅಲ್ಲವೋ ಎಂದು ನೀವು ಅಳೆಯುವ ಮಾಪನವೇ ನಿಖರವಾದದ್ದಲ್ಲ!
ಈ ತಂತ್ರವನ್ನು ಅಭ್ಯಾಸಿಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ಈ ಮಾತಿನ ಹಿಂದಿರುವ ಸತ್ಯವನ್ನು ತಿಳಿಯುತ್ತೀರಿ. ಅದು ನಿಮ್ಮನ್ನು ಸತ್ಯದತ್ತ ಕೊಂಡೊಯ್ಯುತ್ತದೆ. ನಿಮ್ಮ ತರ್ಕಬದ್ಧ ಮನಸ್ಸಿಗೆ ಅದು ಒಂದು ವಾಸ್ತವಾಂಶವಲ್ಲದಿರಬಹುದು. ಆದರೆ ಒಂದು ಆಳವಾದ ಮಟ್ಟದಲ್ಲಿ ಅದು ಒಂದು ವಾಸ್ತವಾಂಶ ಹಾಗೂ ಸತ್ಯಾಂಶವೂ ಕೂಡ.
ಆದ್ದರಿಂದ, ಇಡೀ ದಿನ, ನಿಮಗೆ ನೆನಪಾದಾಗಲೆಲ್ಲಾ ನಿಮಗೆ ಹೇಳಿಕೊಳ್ಳಿರಿ, 'ಈ ಪ್ರಪಂಚವು ಒಂದು ಕನಸು, ನಾನು ಗ್ರಹಿಸುತ್ತಿರುವುದೆಲ್ಲವೂ ಒಂದು ಕನಸು' ಎಂದು. ಆಗ ಇಡೀ ಪ್ರಕ್ಷೇಪಣೆಯು ಸುಮ್ಮನೆ ಚದುರಿ ಹೋಗುತ್ತದೆ. ಆಗ ನೀವು ಈ ಇಡೀ ಕನಸು ನಡೆಯುತ್ತಿರುವ ಪರದೆಯನ್ನು ನೋಡುತ್ತೀರಿ!
ಮುಂದಿನ ಹನ್ನೊಂದು ದಿನಗಳು ಇದನ್ನು ಪ್ರಯತ್ನಿಸಿರಿ. ನಿಮ್ಮೆದುರು ಉಂಟಾಗುತ್ತಿರುವುದೆಲ್ಲವೂ, ನೀವು ಅನುಭವಿಸುತ್ತಿರುವುದೆಲ್ಲವೂ, ಒಂದು ಬದಲಾಗುತ್ತಿರುವ ಕನಸು. ಇದನ್ನು ಕೇವಲ ನೆನಪಿಗೆ ತಂದುಕೊಳ್ಳಿರಿ ಅಷ್ಟೇ.
ನೀವು ತಿಳಿಯಬೇಕಾದ ಒಂದು ಮುಖ್ಯವಾದ ವಿಷಯವೆಂದರೆ, ಹನ್ನೊಂದು ದಿನಗಳವರೆಗೆ ನೀವು ಸತತವಾಗಿ ಯಾವ ವಿಷಯವನ್ನಾದರೂ ಇಡೀ ದಿನವೂ ನೆನಪಿಟ್ಟುಕೊಂಡರೆ ಅದು ನಿಮ್ಮ ಕನಸಿನ ಸ್ಥಿತಿಯನ್ನು ಭೇದಿಸುತ್ತದೆ. ನೀವು ಕನಸು ಕಾಣುತ್ತಿರುವಾಗ, ನೀವು ಕನಸು ಕಾಣುತ್ತಿದ್ದೀರೆಂದು ನಿಮಗೆ ತಿಳಿಯುತ್ತದೆ. ಕನಸಿನಲ್ಲಿ, ನೀವು ಕನಸನ್ನು ಕಾಣುತ್ತಿದ್ದೀರೆಂದು ನೆನಪಾದಾಗ, ಅದರಿಂದ ಎಚ್ಚರಗೊಳ್ಳುತ್ತೀರಿ.
ವೃತ್ತಿಯಲ್ಲಿ ನೀವು ಒಬ್ಬ ವಕೀಲರೇ ಆಗಿದ್ದರೂ, ನೀವು ಒಬ್ಬ ವೈದ್ಯರೆಂದು ಸತತವಾಗಿ ಹನ್ನೊಂದು ದಿನಗಳ ಕಾಲ ಹೇಳಿಕೊಂಡರೆ, ನಿಮ್ಮ ಕನಸಿನಲ್ಲಿ ನೀವು ನಿಮ್ಮನ್ನೇ ಒಬ್ಬ ವೈದ್ಯನನ್ನಾಗಿ ಕಾಣುತ್ತೀರಿ. ನಿಮ್ಮ ಗುರುತನ್ನು ಬದಲಾಯಿಸಿಕೊಳ್ಳಲು ಹನ್ನೊಂದು ದಿನಗಳೇ ಸಾಕು. ಆ ಹೊಸ ಗುರುತನ್ನು ವ್ಯಕ್ತಪಡಿಸಲಾರಂಭಿಸುತ್ತೀರಿ.
ಈ ವಿಷಯವು ನಿಮ್ಮ ಕನಸಿನ ಸ್ಥಿತಿಯನ್ನು, ನಿಮ್ಮ ಅಂತರಂಗವನ್ನು ಭೇದಿಸಿದರೆ, ನಿಮ್ಮ ಇಡೀ ಅಸ್ತಿತ್ವದ ಮೇಲೆ ಒಂದು ಅಸಾಧಾರಣವಾದ ಉಪಶಮನದ ಪರಿಣಾಮವನ್ನು ಅನುಭವಿಸುತ್ತೀರಿ. ಈ ಒಂದು ಅನುಭವವೇ ಸಾಕು; ನಿಮ್ಮ ದಿನನಿತ್ಯದ ಜೀವನದಲ್ಲಿ ಅಸಾಧಾರಣವಾಗಿ ಸಮಚಿತ್ತರಾಗಿರುತ್ತೀರಿ. ಅಷ್ಟೇ ಅಲ್ಲದೆ, ನೀವು ಏನನ್ನು ನೈಜತೆಯೆಂದು ತಿಳಿದಿರುತ್ತೀರೋ ಅದನ್ನು ಬದಲಾಯಿಸಲು ನಿಮಗೆ ಚೈತನ್ಯವಿರುವುದನ್ನು ಇದ್ದಕ್ಕಿದ್ದಂತೆ ತಿಳಿಯುತ್ತೀರಿ. ನಿಮ್ಮಿಂದ ಬದಲಾಯಿಸಲು ಸಾಧ್ಯವಿಲ್ಲವೆಂದುಕೊಂಡಿದ್ದ ಸಂದರ್ಭಗಳು ಬದಲಾಗಲು ಆರಂಭಿಸುತ್ತವೆ. ಈ ಇಡೀ ಕನಸನ್ನು ಪ್ರಕ್ಷೇಪಿಸಿ ನೋಡುವ ಪರದೆಯನ್ನೇ ನಾನು ಪ್ರಜ್ಞೆ ಅಥವಾ ಪ್ರಾಣವೆನ್ನುತ್ತೇನೆ. ಈ ಇಡೀ ಕನಸನ್ನು ಪ್ರಕ್ಷೇಪಿಸುವ ಪರದೆಯನ್ನು ನೋಡಲಾರಂಭಿಸಿದಾಗ ಕನಸು ಕಾಣುವಾಗಲೂ ಅದೇ ಪರದೆಯನ್ನು ಅರಿವಿನಿಂದ ನೋಡುತ್ತೀರಿ.
ನಿಮ್ಮ ಮನಸ್ಸು ಮುಂದಿನ ಪ್ರಶ್ನೆಯನ್ನು ಕೇಳುತ್ತದೆ, ‘ನಾನು ಕನಸು ಕಾಣುತ್ತಿರುವುದಾದರೆ, ನಾನೇಕೆ ಏನನ್ನಾದರೂ ಮಾಡಬೇಕು?’ ಎಂದು. ಅದೆಲ್ಲವೂ ಒಂದು ಕನಸಾದರೂ ನೀವು ಮಾಡುತ್ತಿರುವುದನ್ನು ಮುಂದುವರೆಸಬಹುದು; ಅದರಲ್ಲಿ ತಪ್ಪೇನೂ ಇಲ್ಲ. ನೀವು ಹಾಗೆಯೇ ಮುಂದುವರೆಸಿಕೊಂಡು ಹೋಗುವುದು ನಿಮಗೆ ಬೇಕಾಗುವುದಿಲ್ಲ, ಏಕೆಂದರೆ ನೀವು ನಿಮ್ಮನ್ನೇ ಗಂಭೀರವಾಗಿ ತೆಗೆದುಕೊಳ್ಳುತ್ತೀರಿ. ನೀವು ಕನಸು ಕಾಣುತ್ತಿದ್ದೀರೆಂದು ನೆನಪಿಟ್ಟುಕೊಂಡರೆ, ಕನಸು ಕಾಣುವುದು ಅಥವಾ ಕಾಣದಿರುವುದು, ಎರಡೂ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಆಗ ನೀವು ನೆಮ್ಮದಿಯಿಂದಿದ್ದು, ಜೀವನವು ಅದರ ಪಾಡಿಗೆ ಅದು ನಡೆಯಲು ಬಿಡುತ್ತೀರಿ. ನೀವು ಜೀವನದ ಹರಿವಿನೊಂದಿಗೆ ಪ್ರವಹಿಸುತ್ತೀರಿ. ಇದ್ದಕ್ಕಿದ್ದಂತೆ ನಿಮ್ಮ ಬುದ್ಧಿವಂತಿಕೆ ಜಾಗೃತವಾಗುತ್ತದೆ. ಸಕಲವೂ ನಿಮ್ಮ ಪ್ರಕ್ಷೇಪಣೆಯೆಂಬ ಸತ್ಯಕ್ಕೆ ಜಾಗೃತರಾಗುತ್ತೀರಿ. ಆಗ ಇನ್ನೆಂದಿಗೂ ನೀವು ಅದೇ ವ್ಯಕ್ತಿಯಾಗಿರುವುದಿಲ್ಲ ಏಕೆಂದರೆ ನೀವು ಸತ್ಯವನ್ನು ಕಾಣುತ್ತೀರಿ.
2. ಎಲ್ಲವನ್ನೂ ನಿಮ್ಮೊಳಗೆ ಸೇರಿಸಿಕೊಳ್ಳಿರಿ
ನಿಮ್ಮ ಪ್ರಜ್ಞೆಯನ್ನು ವಿಸ್ತರಿಸಿರಿ
ಕಾಲಾವಧಿ : 21 ನಿಮಿಷಗಳು
ಹಂತ 1 : ಕಾಲಾವಧಿ 2 ನಿಮಿಷಗಳು
ನೆಟ್ಟಗೆ ಕುಳಿತುಕೊಳ್ಳಿರಿ. ಈಗ ನಿಮ್ಮ ದೇಹದ ಸೀಮೆಯನ್ನು ಸ್ಪಷ್ಟವಾಗಿ ಭಾವಿಸಿರಿ. ನೀವು ಕುಳಿತಿರುವ ಕೊಠಡಿಯನ್ನು ನೋಡಿರಿ.

ಹಂತ 2 : ಕಾಲಾವಧಿ 5 ನಿಮಿಷಗಳು
ಈಗ ನಿಮ್ಮ ಕಣ್ಣುಗಳನ್ನು ಮುಚ್ಚಿ, ಕೊಠಡಿಯು ನಿಮ್ಮೊಳಗೆ ನಿಮ್ಮ ಒಂದು ಭಾಗವೆಂಬಂತೆ ಭಾವಿಸಿರಿ. ನಿಮ್ಮ ಅಂತಃಸ್ಥಳವು ನಿಮ್ಮ ದೇಹದ ಸೀಮೆಯನ್ನು ಮೀರಿ ಇಡೀ ಕೊಠಡಿಯನ್ನು ಒಳಸೇರಿಸಿಕೊಳ್ಳುವಷ್ಟು ವಿಸ್ತಾರಗೊಂಡಿದೆ.
ಹಂತ 3 : ಕಾಲಾವಧಿ: 2 ನಿಮಿಷಗಳು
ಕಣ್ಣುಗಳನ್ನು ಬಿಡಿರಿ, ಹೊರಗೆ ಹೋಗಿ ನಿಮ್ಮ ಸುತ್ತಲಿರುವ ಮರಗಳು ಹಾಗೂ ಕಟ್ಟಡಗಳನ್ನು ನೋಡಿರಿ.
ಹಂತ 4 : ಕಾಲಾವಧಿ: 5 ನಿಮಿಷಗಳು
ಈಗ ನಿಮ್ಮ ಕಣ್ಣುಗಳನ್ನು ಮುಚ್ಚಿ, ನಿಮ್ಮ ಸುತ್ತಲಿರುವ ಮರಗಳು ಹಾಗೂ ಕಟ್ಟಡಗಳನ್ನು ಸೇರಿಸಿಕೊಳ್ಳುವಷ್ಟು ನೀವೇ ವಿಸ್ತಾರವಾಗಿರುವಂತೆ ಭಾವಿಸಿರಿ.
ಹಂತ 5 : ಕಾಲಾವಧಿ: 2 ನಿಮಿಷಗಳು
ಕಣ್ಣುಗಳನ್ನು ಬಿಟ್ಟು, ಆಕಾಶವನ್ನು ನೋಡಿರಿ.
ಹಂತ 6 : ಕಾಲಾವಧಿ: 5 ನಿಮಿಷಗಳು
ಈಗ ನಿಮ್ಮ ಕಣ್ಣುಗಳನ್ನು ಮುಚ್ಚಿ ಇಡೀ ಆಕಾಶವೇ ನಿಮ್ಮೊಳಗಿರುವುದಾಗಿ ಭಾವಿಸಿರಿ.
ನಿಮ್ಮ ಸುತ್ತಲಿರುವ ಎಲ್ಲವನ್ನೂ, ಎಲ್ಲರನ್ನೂ, ನಿಮ್ಮ ಭಾಗವಾಗಿ ಸೇರಿಸಿಕೊಳ್ಳುವ, ದಿನನಿತ್ಯ ಜೀವನದ ಒಂದು ಭಾಗವಾಗಬಹುದಾದ, ಅತಿ ಪ್ರಬಲವಾದ, ಒಂದು ಧ್ಯಾನತಂತ್ರವಿದು.
ಉದಾಹರಣೆಗೆ, ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿರುವಾಗ ನಿಮ್ಮ ಕೆಲಸದ ಸಲಕರಣೆಯನ್ನು ನಿಮ್ಮ ಒಂದು ಭಾಗವಾಗಿ ಸೇರಿಸಿಕೊಳ್ಳಿರಿ. ನಿಮ್ಮ ಅರಿವಿನ ಗೋಳವನ್ನು ವಿಸ್ತರಿಸಿರಿ. ನೀವು ನಿಮ್ಮ ಕಂಪ್ಯೂಟರ್ ಮುಂದೆ ಒಂದು ಕುರ್ಚಿಯ ಮೇಲೆ ಕುಳಿತುಕೊಂಡಿದ್ದೀರೆಂದು ಇಟ್ಟುಕೊಳ್ಳೋಣ. ಕಂಪ್ಯೂಟರ್ನ್ನು, ಮೇಜನ್ನು, ಕುರ್ಚಿಯನ್ನು, ಕಛೇರಿಯ ಸ್ಥಳವನ್ನೂ ನಿಮ್ಮ ಒಂದು ಭಾಗದಂತೆ ಸೇರಿಸಿಕೊಳ್ಳಿರಿ. ನಿಮ್ಮ ಕಣ್ಣುಗಳನ್ನು ಮುಚ್ಚಿ ಅವೆಲ್ಲವನ್ನೂ ನಿಮ್ಮ ಒಂದು ಭಾಗದಂತೆ ಭಾವಿಸಿರಿ.
ನಿಮ್ಮ ಸುತ್ತಲಿರುವ ಜನರನ್ನು, ನಿಮ್ಮ ಸಹೋದ್ಯೋಗಿಗಳು ಹಾಗೂ ನಿಮ್ಮ ಗುಂಪಿನಲ್ಲಿರುವ ಜನರೆಲ್ಲರನ್ನೂ ನಿಮ್ಮ ಒಂದು ಭಾಗವಾಗಿ ಸೇರಿಸಿಕೊಳ್ಳಿರಿ. ನಿಮ್ಮ ವೈಯಕ್ತಿಕ ಪ್ರಜ್ಞೆಯು ಒಂದು ಸಮೂಹ ಪ್ರಜ್ಞೆಯಾಗಿ ವಿಸ್ತರಿಸುವುದನ್ನು ಕಂಡು ಆನಂದಿಸಿರಿ. ನಿಮ್ಮ ಇಡೀ ಗುಂಪು ಈ ಧ್ಯಾನವನ್ನು ಅಭ್ಯಾಸಿದರೆ, ಆಗ ವೈಯಕ್ತಿಕ ವ್ಯಕ್ತಿತ್ವಗಳು ಸುಂದರವಾಗಿ ಕರಗಿ, ಅಹಂಕಾರದ ಕದನಗಳು ತಾವಾಗಿಯೇ ಪರಿಹಾರವಾಗುತ್ತವೆ.
3. ಮೂಲವನ್ನು ಕಂಡುಕೊಳ್ಳಿರಿ
ನಿಮ್ಮ ಆಲೋಚನೆಗಳ ಮೂಲವನ್ನು ಕಂಡುಕೊಳ್ಳಿರಿ ಮತ್ತು ಅಂತಿಮ ಮೂಲವಾದ ವಿಶ್ವಶಕ್ತಿಗೆ ಜಾಗೃತರಾಗಿರಿ.
ಕಾಲಾವಧಿ : ಅನ್ವಯಿಸುವುದಿಲ್ಲ
ನೀವು ಸುಮ್ಮನೆ ಕುಳಿತಾಗ ಸ್ವಾಭಾವಿಕವಾಗಿ ಯಾವುದಾದರೂ ಆಲೋಚನೆಯು ನಿಮ್ಮಲ್ಲಿ ಉಂಟಾಗುತ್ತದೆ. ಆಲೋಚನೆಯು ಎಲ್ಲಿಂದ ಉಂಟಾಗುತ್ತಿದೆಯೆಂದು ನೋಡಿರಿ ಅಥವಾ ಆ ಆಲೋಚನೆಯಿಂದ ದೇಹದ ಯಾವ ಭಾಗದಲ್ಲಿ ಚಲನೆ ಅಥವಾ ಭಾವನೆ ಉಂಟಾಯಿತೆಂದು ನೋಡಿರಿ.
ಒಂದು ಆಲೋಚನೆಯ ನಂತರ ಮತ್ತೊಂದರಂತೆ ಪ್ರತಿಯೊಂದು ಆಲೋಚನೆಯೂ ನಿಮ್ಮ ದೇಹದ ಯಾವುದಾದರೂ ಒಳಗಿನ ಅಂಗದಲ್ಲಿ ಸ್ವಲ್ಪ ಸಂವೇದನೆಯನ್ನುಂಟುಮಾಡುವುದನ್ನು ತಿಳಿಯುತ್ತೀರಿ. ನಿಮ್ಮ ದೇಹದಲ್ಲಿ ಯಾವ ಆಲೋಚನೆಯು ಯಾವ ಸಂವೇದನೆಗೆ ಸಂಬಂಧಿಸಿದೆಯೆಂದು ಕಾಣಲು ಪ್ರಯತ್ನಿಸಿರಿ. ನಿಮ್ಮ ಮನಸ್ಸಿನೊಳಗೆ ಬಂದ ಆಲೋಚನೆಯನ್ನು ಉತ್ಪಾದಿಸಿದ ಸಂವೇದನೆಯನ್ನೊಳಗೊಂಡ ಒಳಗಿನ ಅಂಗವನ್ನು ಪತ್ತೆಹಚ್ಚಲು ಪ್ರಯತ್ನಿಸಿರಿ. ಇದನ್ನು ಪ್ರತಿಯೊಂದು ಆಲೋಚನೆಗೂ ಮಾಡಿರಿ.
ಈ ತಂತ್ರವನ್ನು ಪ್ರಯೋಗಿಸಿದಾಗ 24 ಘಂಟೆಗಳಲ್ಲಿ ನಿಮಗೆ ಇದರಿಂದ 'ಕ್ಲಿಕ್' ದೊರೆತರೆ ಈ ತಂತ್ರವು ನಿಮಗಾಗಿಯೇ ಎಂದು ತಿಳಿಯಿರಿ. ಅಲ್ಲದಿದ್ದರೆ ಇತರ ತಂತ್ರಗಳೊಡನೆ ಪ್ರಯತ್ನವನ್ನು ಮುಂದುವರೆಸಿರಿ. ಈ ತಂತ್ರವು ಜ್ಞಾನೋದಯದ ಅನುಭವವನ್ನು ನೇರವಾಗಿ ನಿಮಗೆ ನೀಡಬಲ್ಲದು.
4. ಕಣ್ಣಿನ ರೆಪ್ಪೆಗಳನ್ನು ಒಂದು ಗರಿಯಂತೆ ಸ್ಪರ್ಶಿಸಿ

ನಿಮ್ಮೊಳಗೆ ನೀವು ಹೊತ್ತಿರುವ ವಿಭವ ಶಕ್ತಿಯಾದ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಲು ಇದು ಪ್ರಬಲವಾದ ಧ್ಯಾನತಂತ್ರಗಳಲ್ಲೊಂದು. ದೇಹದಲ್ಲಿ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಲು ಇದೊಂದು ಸುಂದರವಾದ ತಂತ್ರ.
ಕಾಲಾವಧಿ : 30 ನಿಮಿಷಗಳು
ನಿಮ್ಮ ಕಣ್ಣುಗಳನ್ನು ಮುಚ್ಚಿ, ನಿಮ್ಮ ಕಣ್ಣುರೆಪ್ಪೆಗಳನ್ನು ಒಂದು ಗರಿಯಿಂದ ಸ್ಪರ್ಶಿಸಿದಂತೆ ಮೃದುವಾಗಿ ನಿಮ್ಮ ತೋರು ಬೆರಳುಗಳಿಂದ ಸ್ಪರ್ಶಿಸಿರಿ. ಒಂದು ನಿಜವಾದ ಗರಿಯನ್ನೇ ಬೇಕಾದರೂ ಬಳಸಬಹುದು. ನಿಮ್ಮ ಕಣ್ಣನ್ನು ಸ್ಪರ್ಶಿಸುವಾಗ ಗರಿಯು ಬಾಗಬಾರದು. ಅದು ಬಾಗಿದರೆ, ನೀವು ರೆಪ್ಪೆಗಳ ಮೇಲೆ ಅತಿಯಾದ ಒತ್ತಡವನ್ನು ಹಾಕುತ್ತಿದ್ದೀರೆಂದರ್ಥ. ಅತಿಯಾದ ಒತ್ತಡವು ಈ ತಂತ್ರಕ್ಕೆ ಸಹಾಯಕರಿಯಾಗುವುದಿಲ್ಲ. ಕೇವಲ ಗರಿಯ ಮೃದುಸ್ಪರ್ಶವನ್ನು ಮಾಡಬೇಕು.

ಅದು ಸ್ಪರ್ಶಿಸಿಯೂ ಸ್ಪರ್ಶಿಸದಂತಿರಬೇಕು. ನಿಮ್ಮ ಬೆರಳುಗಳು ಕಣ್ಣಿನ ರೆಪ್ಪೆಗಳ ಮೇಲಿದ್ದರೂ ಒತ್ತದಂತಿರಬೇಕು. ಎರಡು ಕೈಗಳನ್ನೂ ಸಮತೋಲನಗೊಳಿಸಿ, ತೋರುಬೆರಳುಗಳಿಂದ ಕಣ್ಣಿನ ರೆಪ್ಪೆಗಳನ್ನು ಸ್ಪರ್ಶಿಸಿರಿ. ಆರಂಭದಲ್ಲಿ ನಿಮ್ಮ ಕೈಗಳು ನಡುಗಬಹುದು ಮತ್ತು ನೀವು ಅತಿ ಜೋರಾಗಿಯೋ ಅಥವಾ ಅತಿ ಮೃದುವಾಗಿಯೋ ಸ್ಪರ್ಶಿಸಬಹುದು ಅಥವಾ ನಿಮ್ಮ ಕಣ್ಣುರೆಪ್ಪೆಗಳನ್ನು ಸ್ಪರ್ಶಿಸದೇ ಇರಬಹುದು.
ನಿಮ್ಮ ಕಣ್ಣುರೆಪ್ಪೆಗಳನ್ನು ಒಂದು ಗರಿಯಂತೆ ಸ್ಪರ್ಶಿಸಲು ಸಾಧ್ಯವಾದಾಗ ನಿಮ್ಮ ಬೆರಳುಗಳ ಹಾಗೂ ಕಣ್ಣುಗಳ ನಡುವೆ ಒಂದು ಘನವಾದ ಚೈತನ್ಯದ ಸಂಪರ್ಕವು ನಿರ್ಮಾಣವಾಗುತ್ತಿರುವುದನ್ನು ನೋಡುತ್ತೀರಿ. ನಿಧಾನವಾಗಿ ನಿಮ್ಮ ಬೆರಳುಗಳು ಹಾಗೂ ಕೈಗಳು ನಿಮ್ಮ ಕಣ್ಣುಗಳ ಒಂದು ಭಾಗವಾಗಿರುವುದನ್ನು ತಿಳಿಯುತ್ತೀರಿ.
ಈಗಲಾದರೂ ನಿಮ್ಮ ಕಣ್ಣುಗಳನ್ನು ಮುಚ್ಚಿದಾಗ ನಿಮ್ಮ ಸೀಮೆಯು ನಿಮ್ಮ ಕಣ್ಣುರೆಪ್ಪೆಗಳೊಳಗೆ ಕೊನೆಗೊಂಡಂತೆ ಭಾವಿಸುತ್ತೀರಿ. ಆದರೆ ನಿಮ್ಮ ಮೃದುಸ್ಪರ್ಶದಿಂದ ನಿಮ್ಮ ಕಣ್ಣುಗಳು ವಿಸ್ತಾರಗೊಂಡಂತೆ ಭಾವಿಸುತ್ತವೆ! ನೀವು ಹಾಕುವ ಒತ್ತಡವು ಸರಿಯಾಗಿದ್ದಲ್ಲಿ ನಿಮಗೆ ಈ ಅನುಭವವಾಗುತ್ತದೆ. ನಿಮ್ಮ ಕಣ್ಣುಗಳು ಹಾಗೂ ಬೆರಳುಗಳು ನಿಮ್ಮೊಳಗೆ ಉಂಟಾಗುವ ಸೂಕ್ಷ್ಮತೆಯನ್ನೇ ಹೊರಗೂ ಅನುಭವಿಸಬೇಕು.
ಒಮ್ಮೆ ಈ ತಂತ್ರವನ್ನು ತೀವ್ರವಾಗಿ ಅಭ್ಯಾಸಿಸಲಾರಂಭಿಸಿದರೆ, ಚೈತನ್ಯವು ಸಾಮಾನ್ಯವಾಗಿ ಕಣ್ಣುಗಳಿಂದ ಹೋಗುವ ಬದಲು ನಿಮ್ಮೊಳಗೇ ಸುತ್ತುವುದನ್ನು ನೋಡುತ್ತೀರಿ. ತಿಳಿಯಿರಿ, ನಿಮ್ಮ ಕಣ್ಣುಗಳನ್ನು ಮುಚ್ಚಿದರೆ, ಹೊರಗಿನ ದೃಶ್ಯಗಳು ನಿಲ್ಲಬಹುದು ಹಾಗೂ ಹೊರಹೋಗುತ್ತಿರುವ ಚೈತನ್ಯವು ನಿಲ್ಲಬಹುದು. ಆದರೂ ನಿಮ್ಮೊಳಗೆ ಕೆಲವು ದೃಶ್ಯಗಳು ಚಲಿಸುತ್ತಿರುತ್ತವೆ ಹಾಗೂ ಚೈತನ್ಯದ ವ್ಯಯ ಮುಂದುವರೆಯುತ್ತದೆ. ಒಳಗಿನ ಹಾಗೂ ಹೊರಗಿನ ದೃಶ್ಯಗಳೆರಡನ್ನೂ ನಿಲ್ಲಿಸಿದಾಗ ಮಾತ್ರವೇ ಜ್ಞಾನೋದಯ ಉಂಟಾಗುವುದು.
ಈ ತಂತ್ರವು ಒಮ್ಮೆಯಾದರೂ ಸಮತೋಲನವಾಗಲು ಕನಿಷ್ಠಪಕ್ಷ ಅರ್ಧಘಂಟೆ ತೆಗೆದುಕೊಳ್ಳುತ್ತದೆ. ಈ ಮೃದುಸ್ಪರ್ಶದ ತಂತ್ರವನ್ನು ಬಳಸಿ ಸಂಪೂರ್ಣವಾಗಿ ಸಮತೋಲನವಾಗಲು ಕಡೆಯಪಕ್ಷ ಒಂದು ತಿಂಗಳ ಪ್ರತಿದಿನದ ಅಭ್ಯಾಸವಾದರೂ ಬೇಕಾಗಬಹುದು.
ಚಲನಾತ್ಮಕ ಧ್ಯಾನಗಳು
1. ಆನಂದ ನರ್ತನ
ನಿಮ್ಮೊಳಗಿರುವ ಅಸಾಧಾರಣ ಚೈತನ್ಯವನ್ನು ಪುನಶ್ಚೇತನಗೊಳಿಸಿಕೊಳ್ಳಿ. ನಿಮ್ಮೊಳಗಿನ ಆಳವಾದ ಶಾಂತಿಯೊಂದಿಗೆ ವಿರಮಿಸಿರಿ.
ಕಾಲಾವಧಿ : 31 ನಿಮಿಷಗಳು
ಮುಕ್ತ ನರ್ತನವೆಂದರೆ ನಿರ್ದಿಷ್ಟವಾದ ಹೆಜ್ಜೆಗಳಾಗಲೀ, ನಿಯಮಗಳಾಗಲೀ ಇಲ್ಲದಿರುವ ನರ್ತನ; ನಿಮ್ಮ ದೇಹವನ್ನು ಅದರ ಇಚ್ಛೆಯಂತೆ ಚಲಿಸಲು ಬಿಡುತ್ತಾ; ಆಟವಾಡುವಂತೆ, ಆನಂದದಿಂದ ಅಗಾಧವಾದ
ನೃತ್ಯ ಚೈತನ್ಯದ ಒಂದು ಭಾಗವಾಗುವುದು.
ಮುಕ್ತ ನರ್ತನದಲ್ಲಿ ಎರಡು ಹಂತಗಳಿವೆ: ನರ್ತಿಸುವುದು ಹಾಗೂ ವಿರಮಿಸುವುದು.
ಹಂತ 1 : ಕಾಲಾವಧಿ: 21 ನಿಮಿಷಗಳು
ಕಣ್ಣುಗಳನ್ನು ಮುಚ್ಚಿ ನರ್ತಿಸಲು ಆರಂಭಿಸಿರಿ. ಹೆಜ್ಜೆಗಳ ಬಗ್ಗೆ ಚಿಂತಿಸದಿರಿ. ನಿಮ್ಮ ದೇಹವು ಇಚ್ಛಿಸಿದಂತೆ ಚಲಿಸಲು ಬಿಡಿರಿ. ನೀವು ಹೇಗೆ ಕಾಣುತ್ತೀರೆಂದಾಗಲೀ, ನಿಮ್ಮ ಬಟ್ಟೆಯು ಹೇಗೆ ಕಾಣುತ್ತದೆಂದಾಗಲೀ ಕಳವಳಪಡದಿರಿ. ನಿಮ್ಮನ್ನು ಯಾರೂ ಗಮನಿಸುತ್ತಿರುವುದಿಲ್ಲ; ಇದು ಒಂದು ಪ್ರದರ್ಶನವಲ್ಲ.
ಈ ರೀತಿಯ ನೃತ್ಯವನ್ನು ಮಾಡುತ್ತಿದ್ದಾಗ, ನಿಮ್ಮೊಳಗೆ ಚೈತನ್ಯವು ಹೆಚ್ಚು ಹೆಚ್ಚಾಗಿ ಉಕ್ಕುತ್ತದೆ ಹಾಗೂ ನೀವು ನರ್ತಿಸುವುದನ್ನು ಮುಂದುವರೆಸುತ್ತೀರಿ. ಹೆಚ್ಚು ನರ್ತಿಸಿದಷ್ಟೂ ಹೆಚ್ಚು ಚೈತನ್ಯಗೊಳ್ಳುತ್ತೀರಿ! ನಿಮಗೆ ಆಯಾಸವೇ ಆಗುವುದಿಲ್ಲ.
ನರ್ತನದೊಳಗೆ ಆಳವಾಗಿ ಇಳಿಯಿರಿ. ಸಾಧ್ಯವಾದಷ್ಟೂ ವೇಗವಾಗಿ, ಸಾಧ್ಯವಾದಷ್ಟೂ ಮುಕ್ತವಾಗಿ ನರ್ತಿಸಿ. ನಿಮ್ಮನ್ನು ನೀವೇ ಸಂಪೂರ್ಣವಾಗಿ ಮರೆತುಬಿಡಿ. ಸುಮ್ಮನೆ ನೃತ್ಯವೇ ನೀವಾಗಿಬಿಡಿ.
ಹಂತ 2 : ಕಾಲಾವಧಿ: 10 ನಿಮಿಷಗಳು
21 ನಿಮಿಷಗಳ ನಂತರ, ನೀವು ಇರುವಲ್ಲಿಯೇ, ಇರುವ ಸ್ಥಿತಿಯಲ್ಲಿಯೇ, ನೆಲದ ಮೇಲೆ ಸುಮ್ಮನೆ ಕುಸಿದು ವಿಶ್ರಮಿಸಿ. ನಿಶ್ಚಲವಾಗಿ ಮೌನದಿಂದಿರಿ.
ಉದ್ರಿಕ್ತ ಚಲನೆಯಿಂದ ಹಠಾತ್ತಾದ ನಿಶ್ಚಲತೆಯ ಹಠಾತ್ತಾದ ಬದಲಾವಣೆಯಲ್ಲಿ ಒಂದು ಶೂನ್ಯತ್ವದ ಕ್ಷಣವನ್ನು ಅನುಭವಿಸುತ್ತೀರಿ. ಅಲ್ಲಿ ಯಾವ ಆಲೋಚನೆಗಳೂ ಇರುವುದಿಲ್ಲ; ನೀವು ಒಂದು ಆಳವಾದ ಮೌನವನ್ನು ಅನುಭವಿಸುತ್ತೀರಿ.
ಕೆಲವು ಕ್ಷಣಗಳಲ್ಲಿ, ಆಲೋಚನೆಗಳು ಮತ್ತೆ ಬರುತ್ತವೆ. ಆಲೋಚನೆಗಳನ್ನು ಶಾಂತವಾಗಿ ಗಮನಿಸಿರಿ. ಅವುಗಳೊಂದಿಗೆ ಹೋರಾಡದಿರಿ, ಅವುಗಳ ಮಧ್ಯೆ ಕಳೆದುಹೋಗದಿರಿ. ಕೇವಲ ಅರಿವಿನಿಂದಿರಿ. ಆಲೋಚನೆಗಳು ಮತ್ತೆ ಬಂದಾಗಲೂ ಒಂದು ಆಳವಾದ ಮೌನವು ಉಳಿದಿರುವುದಾಗಿ, ನಿಮ್ಮೊಳಗೆ ಒಂದು ಶಾಶ್ವತ ಶಾಂತಿ ಇರುವುದರ ಅರಿವಿನಿಂದಿರುತ್ತೀರಿ. ಈ ಶಾಂತಿಯನ್ನು, ಈ ಮೌನವನ್ನು ಇಡೀ ದಿನ ಭರಿಸಿರಿ. ಮೌನವನ್ನು ನಿಮ್ಮ ನಿದ್ರೆಗೂ ಒಯ್ಯಿರಿ, ಎದ್ದಾಗ ನವೋಲ್ಲಾಸದಿಂದ ಎಚ್ಚರಗೊಳ್ಳುತ್ತೀರಿ.
2. ತಿರುಗುವುಸು
ನಿಮ್ಮ ಇರುವಿಕೆಯಲ್ಲಿ ನಿಶ್ಚಲವಾದ ಕೇಂದ್ರವನ್ನು ಕಂಡುಕೊಳ್ಳಿರಿ. ಇಡೀ ವಿಶ್ವಶಕ್ತಿಯೊಂದಿಗೆ ಲೀನವಾಗಿರಿ.
ಕಾಲಾವಧಿ : 31 ನಿಮಿಷಗಳು
ನಿಮ್ಮನ್ನು ಕೇಂದ್ರೀಕರಿಸಿಕೊಳ್ಳಲು ಇದೊಂದು ಸುಂದರವಾದ ಸಹಜವಾದ ಧ್ಯಾನ.
ಈ ಧ್ಯಾನಕ್ಕೆ ಕನಿಷ್ಠ ಮೂರು ಗಂಟೆಗಳ ಮುಂಚೆ ಯಾವುದೇ ಆಹಾರವನ್ನಾಗಲೀ ಪಾನೀಯವನ್ನಾಗಲೀ ಸೇವಿಸಬೇಡಿರಿ. ಈ ಧ್ಯಾನದಲ್ಲಿ ಎರಡು ಹಂತಗಳಿವೆ : ತಿರುಗುವುಸು ಹಾಗೂ ವಿಶ್ರಮಿಸುವುದು.
ತಿರುಗುವುಸು
ಸಾಮಾನ್ಯವಾಗಿ ತಿರುಗುವುದನ್ನು ಅಪ್ರದಕ್ಷಿಣವಾಗಿ ಮಾಡಲಾಗುತ್ತದೆ. ಬಲಗೈಯನ್ನು ಮೇಲಕ್ಕೆ ಎತ್ತಿಹಿಡಿದು, ಅಂಗೈಯನ್ನು ಮೇಲ್ಮುಖವಾಗಿರಿಸಿ, ಎಡಗೈಯನ್ನು ಕೆಳಗಿಳಿಸಿ, ಅಂಗೈಯನ್ನು ಕೆಳಮುಖವಾಗಿರಿಸಿ ಮಾಡಬೇಕು.
ನಿಮಗೆ ಅಪ್ರದಕ್ಷಿಣವಾಗಿ ತಿರುಗುವುದು ಅಹಿತಕರವಾಗಿದ್ದಲ್ಲಿ ಪ್ರದಕ್ಷಿಣವಾದ ಚಲನೆಗೆ ಬದಲಾಯಿಸಿಕೊಳ್ಳಿರಿ.
ನಿಧಾನವಾಗಿ ತಿರುಗಲು ಆರಂಭಿಸಿರಿ. ನಿಮ್ಮ ಇಡೀ ದೇಹವು ಹಾಯಾಗಿ ಹಾಗೂ ಯಾವ ತಡೆಯೂ ಇಲ್ಲದಂತಿರಲಿ. ತಿರುಗುತ್ತಿದ್ದಂತೆ ನೀವು ಕಾಣುವ ದೃಶ್ಯಗಳು ಮಬ್ಬಾಗುತ್ತವೆ. ಅವು ಹಾಗೆಯೇ ಹಾದುಹೋಗಲಿ. ಯಾವೊಂದರ ಮೇಲೆಯೂ ಕೇಂದ್ರೀಕರಿಸಬೇಡಿ. ಕೇಂದ್ರೀಕರಿಸಿದರೆ ತಲೆ ಸುತ್ತುತ್ತದೆ ಅಥವಾ ಹೊಟ್ಟೆ ತೊಳಸುತ್ತದೆ.
ನಿಧಾನವಾಗಿ ವೇಗವನ್ನು ಹೆಚ್ಚಿಸಿರಿ ಹಾಗೂ ತಿರುಗುವುದೇ ನೀವಾಗಿರಿ. ಚಕ್ರದ ಹೊರವಲಯದಲ್ಲಿ ಕ್ರಿಯೆ ಹಾಗೂ ಚಲನೆ ಇದ್ದರೂ ಕೇಂದ್ರ ಮಧ್ಯದಲ್ಲಿ ನಿಶ್ಚಲತೆಯನ್ನು ಅನುಭವಿಸುತ್ತೀರಿ. ತಿರುಗುತ್ತಿರುವುದಕ್ಕೆ ನೀವು ಒಬ್ಬ ಸಾಕ್ಷಿಯೆಂಬಂತೆ ಅನುಭವವಾಗುವುದು.
ವಿಶ್ರಾಂತಿ ಪಡೆಯುವುದು
ನೀವು ನೆಟ್ಟಗಿರಲು ಸಾಧ್ಯವಿಲ್ಲದಷ್ಟು ವೇಗವಾಗಿ ತಿರುಗುತ್ತಿರುವಾಗ, ನಿಮ್ಮ ದೇಹವು ತಾನಾಗಿಯೇ ಬೀಳುತ್ತದೆ. ಬೀಳುವ ಯೋಜನೆ ಮಾಡಬೇಡಿ.
ಬಿದ್ದಕೂಡಲೇ ಬೆನ್ನು ಮೇಲಾಗಿ ನಿಮ್ಮ ಹೊಟ್ಟೆಯು ಕೆಳಗಿರುವಂತೆ ಮಲಗಿರಿ. ನಿಮ್ಮ ಹೊಕ್ಕಳು ಭೂಮಿಯನ್ನು ಸ್ಪರ್ಶಿಸಲಿ. ನಿಮ್ಮ ದೇಹವು ಭೂಮಿಯೊಂದಿಗೆ ಒಂದಾಗುವುದನ್ನು ಭಾವಿಸಿ.
ಕಣ್ಣುಗಳನ್ನು ಮುಚ್ಚಿಕೊಂಡಿರಿ. ಕನಿಷ್ಠಪಕ್ಷ 15 ನಿಮಿಷಗಳವರೆಗಾದರೂ ಅದೇ ಸ್ಥಾನದಲ್ಲಿ ನಿಷ್ಕ್ರಿಯರಾಗಿ, ಮೌನವಾಗಿರಿ.
ಈ ಧ್ಯಾನದ ನಂತರವೂ ಕೆಲವು ಘಂಟೆಗಳ ಕಾಲ ಮೌನದಿಂದ ಧ್ಯಾನಸ್ಥರಾಗಿರಿ.
ಶ್ವಾಸ-ಸಂಬಂಧಿತ ಧ್ಯಾನತಂತ್ರಗಳು
ಉಸಿರಾಟವನ್ನು ಸತತವಾಗಿ ಗಮನಿಸುವುದು ಒಂದು ಪ್ರಬಲವಾದ ಹಾಗೂ ಪರಿಣಾಮಕಾರೀ ಧ್ಯಾನತಂತ್ರ. ಇತರ ಧ್ಯಾನಗಳಿಗಿಂತ ಈ ತಂತ್ರವು ಹೆಚ್ಚು ಜನರನ್ನು ಜ್ಞಾನೋದಯಕ್ಕೆ ಕೊಂಡೊಯ್ದಿದೆ. ಉಸಿರಾಟವನ್ನು ಗಮನಿಸುವುದು ಅರಿವನ್ನು ಅಸಾಧಾರಣವಾಗಿ ಹೆಚ್ಚಿಸುತ್ತದೆ. ಅರಿವು ಹೆಚ್ಚಾದಂತೆ ಆಂತರಿಕ ಜಾಗೃತಿ ಉಂಟಾಗಿ ಆನಂದವು ಪರಿಣಮಿಸುತ್ತದೆ.
1. ಉಚ್ಛ್ವಾಸ ನಿಶ್ವಾಸಗಳು ಹಾಗೂ ಅವುಗಳ ಅಂತರದ ಅರಿವು
ಪೂರ್ಣ ಕಾಲಾವಧಿ : 35 ನಿಮಿಷಗಳು
ಸಂಪೂರ್ಣವಾದ ವಿಶ್ರಾಂತಿಯಿಂದ ಕುಳಿತುಕೊಳ್ಳಿರಿ. ನಿಮ್ಮ ದೇಹವು ಸಂಪೂರ್ಣವಾಗಿ ಆರಾಮವಾಗಿರಲಿ.
ಹಂತ 1 : ಕಾಲಾವಧಿ : 5 ನಿಮಿಷಗಳು
ನಿಮ್ಮ ಉಸಿರಾಟವನ್ನು ಗಮನಿಸಲಾರಂಭಿಸಿ. ನಿಮ್ಮ ಉಸಿರಾಟವನ್ನು ವೀಕ್ಷಿಸಲಾರಂಭಿಸಿ. ನಿಮ್ಮ ಉಸಿರಾಟದ ಅವಧಿಯನ್ನು ಹೆಚ್ಚಿಸದಿರಿ. ನಿಮ್ಮ ಸಾಧಾರಣವಾದ ಉಚ್ಛ್ವಾಸ-ನಿಶ್ವಾಸಕ್ಕೆ ಸುಮ್ಮನೆ ಸಾಕ್ಷಿಯಾಗಿರಿ.
ಹಂತ 2 : ಕಾಲಾವಧಿ: 5 ನಿಮಿಷಗಳು
ನಂತರ, ಉಚ್ಛ್ವಾಸವನ್ನು ಮಾತ್ರ ಗಮನಿಸಿರಿ. ನಿಶ್ವಾಸದ ಬಗ್ಗೆ ಯೋಚಿಸದಿರಿ. ಉಚ್ಛ್ವಾಸಕ್ಕೆ ಮಾತ್ರ ಸಾಕ್ಷಿಯಾಗಿರಿ.
ಹಂತ 3 : ಕಾಲಾವಧಿ: 5 ನಿಮಿಷಗಳು
ಈಗ ಉಚ್ಛ್ವಾಸದ ಬಗ್ಗೆ ಚಿಂತಿಸದೆ, ನಿಶ್ವಾಸಕ್ಕೆ ಮಾತ್ರ ಸಾಕ್ಷಿಯಾಗಿರಿ. ನಿಶ್ವಾಸವನ್ನು ಮಾತ್ರ ಸಂಪೂರ್ಣವಾದ ಅರಿವಿನಿಂದ ಗಮನಿಸಿರಿ.
ಹಂತ 4 : ಕಾಲಾವಧಿ: 5 ನಿಮಿಷಗಳು
ಈಗ ಉಳಿದುದೆಲ್ಲವನ್ನೂ ಬಿಟ್ಟು ಉಚ್ಛ್ವಾಸದ ಹಾಗೂ ನಿಶ್ವಾಸದ ಮಧ್ಯವಿರುವ ಅಂತರವನ್ನು ಗಮನಿಸಿರಿ. ಶ್ವಾಸವು ಉಚ್ಛ್ವಾಸದಿಂದ ನಿಶ್ವಾಸಕ್ಕೆ ಬದಲಾಗುವುದರ ಅರಿವಿರಲಿ. ಉಚ್ಛ್ವಾಸ-ನಿಶ್ವಾಸಗಳ ನಡುವಿನ ಅಂತರದ ಮೇಲೆ ಅರಿವಿರಲಿ.
ಹಂತ 5 : ಕಾಲಾವಧಿ: 5 ನಿಮಿಷಗಳು
ಈಗ ಉಚ್ಛ್ವಾಸ, ನಿಶ್ವಾಸ ಹಾಗೂ ಅಂತರಗಳ ಬಗ್ಗೆ ಅರಿವಿರಲಿ. ಮೂರರ ಮೇಲೂ ಅರಿವಿರಲಿ. ನಿಮ್ಮ ಇಡೀ ದೇಹವು ಪುನಶ್ಚೇತನಗೊಂಡು ಹುಮ್ಮಸ್ಸಿನಿಂದ ಕೂಡಿದಂತೆ ಭಾವಿಸಿರಿ. ನೀವು ಒಂದು ಸಜೀವ ಹಾಗೂ ಸಚೇತನಗೊಳಿಸುವ ಮೌನದಲ್ಲಿದ್ದೀರಿ. ನೀವು ಉನ್ನತವಾದ ಚೈತನ್ಯದಿಂದ ಕಂಪಿಸುತ್ತಿದ್ದೀರಿ.
ಹಂತ 6 : ಕಾಲಾವಧಿ: 5 ನಿಮಿಷಗಳು
ಈಗ ಉಚ್ಛ್ವಾಸ-ನಿಶ್ವಾಸಗಳ ನಡುವಿನ ಅಂತರವನ್ನು ವೀಕ್ಷಿಸಿರಿ. ಅಂತರದ ಮೇಲೆ ಮಾತ್ರ ಅರಿವಿರಲಿ. ನೀವು ಉಸಿರೇ ಆಡುತ್ತಿಲ್ಲವೆಂಬಂತೆ ಭಾಸವಾಗಬಹುದು. ಆ ಭಾವನೆಯನ್ನೂ ವೀಕ್ಷಿಸಿರಿ.
ಹಂತ 7 : ಕಾಲಾವಧಿ: 5 ನಿಮಿಷಗಳು
ಕಣ್ಣುಗಳನ್ನು ಮುಚ್ಚಿ ವಿರಮಿಸಿರಿ. ಧ್ಯಾನಿಸದಿರಿ. ಕೇವಲ ವಿಶ್ರಾಂತರಾಗಿರಿ. ಕ್ರಿಯಾತ್ಮಕವಾಗಿ ಏನನ್ನೂ ಯೋಚಿಸದೆ, ನಿಮ್ಮ ಮನಸ್ಸು ನೆಲೆಗೊಳ್ಳಲು ಬಿಡಿ.
ವಿಶ್ರಾಂತರಾಗಿರಿ ಹಾಗೂ ಉನ್ನತ ಚೈತನ್ಯ ಪರಿಧಿಯಿಂದ ನಿಧಾನವಾಗಿ ಹೊರಬನ್ನಿರಿ. 5 ನಿಮಿಷಗಳ ನಂತರ ಕಣ್ಣುಗಳನ್ನು ಬಹಳ ನಿಧಾನವಾಗಿ ತೆರೆಯಿರಿ.
2. ವಿಪಾಸನಾ
ವಿಪಾಸನಾ ಎಂದರೆ ಸತ್ಯವನ್ನು ಹಂತ ಹಂತವಾಗಿ ತಿಳಿಯುವುದು ಎಂದು. ವಿಪಾಸನವನ್ನು ಮೂರು ರೀತಿಗಳಲ್ಲಿ ಮಾಡಬಹುದು.
ಕಾಲಾವಧಿ : ಯಾವಾಗಲಾದರೂ ಸರಿ, ಎಲ್ಲಿಯಾದರೂ ಸರಿ.
ನೀವು ನಡೆದಾಗ, ನಿಮ್ಮ ಕೈಯನ್ನು ಚಲಿಸಿದಾಗ, ಮುಗುಳ್ನಕ್ಕಾಗ, ಎಲ್ಲವನ್ನೂ ಅರಿವಿನಿಂದ ಮಾಡಿರಿ. ಆ ಕ್ರಿಯೆಯನ್ನು ಮಾಡುತ್ತಿರುವುದು ನೀವೇ ಎಂದು ನಿಖರವಾಗಿ ತಿಳಿಯಿರಿ. ಎಚ್ಚರದಿಂದಿರಿ. ಒಂದೇ ಒಂದು ಕ್ಷಣ ಕಳೆಯುವುದಾಗಲೀ ಅಥವಾ ಒಂದೇ ಒಂದು ಚಲನೆಯಾಗಲೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಗಬಾರದು. ನಿಮ್ಮ ಅರಿವಿಲ್ಲದೆ ನಿಮ್ಮ ದೇಹದಲ್ಲಿ ಒಂದೇ ಒಂದು ಕ್ರಿಯೆಯೂ ಆಗಬಾರದು.
ನಿಮ್ಮ ದೇಹದಂತೆಯೇ ನಿಮ್ಮ ಹೃದಯ ಹಾಗೂ ಮನಸ್ಸನ್ನೂ ಗಮನಿಸಿರಿ. ನಿಮ್ಮ ಹೃದಯದಲ್ಲಿ ಉಂಟಾಗುವ ಪ್ರತಿಯೊಂದು ಭಾವನೆಯ ಮೇಲೂ ಅರಿವನ್ನು ಹೊಂದಿರಿ. ನಿಮ್ಮ ಮನಸ್ಸಿನ ಒಳಗ್ಕೂ ಹೊರಕ್ಕೂ ಹಾದುಹೋಗುತ್ತಿರುವ ಪ್ರತಿಯೊಂದು ಆಲೋಚನೆಯ ಬಗ್ಗೆಯೂ ಅರಿವನ್ನು ಹೊಂದಿರಿ. ಯಾವುದರ ಬಗ್ಗೆಯೂ ಅಭಿಪ್ರಾಯಗಳನ್ನು ಹೊಂದದಿರಿ, ಯಾವುದರ ಯೋಗ್ಯತೆಯನ್ನೂ ನಿರ್ಧರಿಸದಿರಿ - ಸುಮ್ಮನೆ ಸಾಕ್ಷಿಯಾಗಿರಿ.
ಉಸಿರಾಟವನ್ನು ಗಮನಿಸಿರಿ
ಕಾಲಾವಧಿ : ಯಾವಾಗಲಾದರೂ ಸರಿ, ಎಲ್ಲಿಯಾದರೂ ಸರಿ.
ಪ್ರತಿಯೊಂದು ಉಚ್ಛ್ವಾಸ-ನಿಶ್ವಾಸದೊಂದಿಗೂ ನಿಮ್ಮ ಹೊಟ್ಟೆಯು ಉಬ್ಬಿ, ತಗ್ಗುವುದನ್ನು ಗಮನಿಸಿರಿ. ನಿಮ್ಮ ಜೀವಶಕ್ತಿಯ ಮೂಲವಾದ ನಾಭಿಯು ಹೊಟ್ಟೆಯ ಪ್ರದೇಶದಲ್ಲಿದೆ. ಆದ್ದರಿಂದ ನಾಭಿಯನ್ನು ಗಮನಿಸಿದಾಗ, ನಿಮ್ಮ ದೇಹದ ಜೀವಶಕ್ತಿಯ ಸಂಚಾರದ ಬಗ್ಗೆ ಅರಿವನ್ನು ಹೊಂದುತ್ತೀರಿ. ಹೊಟ್ಟೆಯ ಮೇಲೆ ಹೆಚ್ಚು ಅರಿವನ್ನು ಹೊಂದಿದಾಗ, ನಿಮ್ಮ ಹೃದಯ ಹಾಗೂ ಮನಸ್ಸು ಮೌನತೆಗೆ ಬೀಳುವುದನ್ನು ಕಾಣುತ್ತೀರಿ!
ಮೂಗಿನ ಹೊಳ್ಳೆಗಳಿಂದ ಶ್ವಾಸವು ನಿಮ್ಮ ದೇಹವನ್ನು ಪ್ರವೇಶಿಸುವುದನ್ನು ಗಮನಿಸಿರಿ.
ಕಾಲಾವಧಿ : ಯಾವಾಗಲಾದರೂ ಸರಿ, ಎಲ್ಲಾದರೂ ಸರಿ. ಮೂಗಿನ ಹೊಳ್ಳೆಗಳಲ್ಲಿರುವ ತಂಪಾದ ಗಾಳಿಯ ಬಗ್ಗೆ ಅರಿವನ್ನು ಹೊಂದಿ. ಮೂಗಿನ ಹೊಳ್ಳೆಗಳಿಂದ ಉಸಿರು ಹಾಯಾಗಿ ಪ್ರವೇಶಿಸಿ, ನಿರ್ಗಮಿಸುವುದನ್ನು ಗಮನಿಸಿ.
ವಿಪಾಸನವನ್ನು ಕುಳಿತುಕೊಂಡಾದರೂ, ನಡೆಯುತ್ತಲಾದರೂ ಅಭ್ಯಾಸಿಸಬಹುದು.
ಕುಳಿತುಕೊಳ್ಳುವುದು
ಪೂರ್ಣ ಕಾಲಾವಧಿ : 60 ನಿಮಿಷಗಳು
ಒಂದು ಆರಾಮದ ಭಂಗಿಯಲ್ಲಿ, ಬೆನ್ನು ನೆಟ್ಟಗೆ ಮಾಡಿ, ನೇರವಾಗಿ ಮುಖ ಮಾಡಿ ಕುಳಿತುಕೊಳ್ಳಿ. ಕಣ್ಣುಗಳನ್ನು ಮುಚ್ಚಿ, ಸಾಧಾರಣವಾಗಿ ಉಸಿರಾಡಿ. ಕುಳಿತಿರುವ ಸ್ಥಿತಿಯಲ್ಲಿ ಬದಲಾವಣೆ ಮಾಡದೆ, ನಿಶ್ಚಲರಾಗಿರಿ.
ಉಸಿರನ್ನು ಒಳಕ್ಕೆ ತೆಗೆದುಕೊಂಡು ಹೊರಗೆ ಬಿಟ್ಟಾಗ ಹೊಟ್ಟೆಯು ಉಬ್ಬಿ ತಗ್ಗುವುದನ್ನು ಗಮನಿಸಿ. ಉಸಿರಿನ ಮೇಲೆ ಗಮನವನ್ನು ಕೇಂದ್ರೀಕರಿಸಬೇಡಿ. ಆದರೆ ಪ್ರಶಾಂತತೆಯಿಂದ ಅದನ್ನು ಗಮನಿಸಿ. ಇತರ ಆಲೋಚನೆಗಳು, ಭಾವನೆಗಳು ಅಥವಾ ದೈಹಿಕ ಸಂವೇದನೆಗಳು ಉಂಟಾದರೆ, ಅವು ಉಂಟಾಗಲು ಬಿಡಿ. ಅವುಗಳನ್ನೂ ಕ್ಷಣಕಾಲ ಗಮನಿಸಿ, ಮತ್ತೆ ಉಸಿರನ್ನು ಗಮನಿಸುವುದಕ್ಕೆ ಹಿಂದಿರುಗಿ. ಗಮನಿಸುವ ಪ್ರಕ್ರಿಯೆಯು ಮುಖ್ಯವೇ ಹೊರತು, ಏನನ್ನು ಗಮನಿಸುತ್ತಿದ್ದೀರೆಂಬುದಲ್ಲ. ಇದನ್ನು 45 ನಿಮಿಷಗಳವರೆಗೆ ಮಾಡಿ 15 ನಿಮಿಷಗಳ ಕಾಲ ವಿರಮಿಸಿರಿ.

ನಡೆಯುವುದು
ಪೂರ್ಣ ಕಾಲಾವಧಿ : 30 ನಿಮಿಷಗಳು
ಇಲ್ಲಿ ನಿಮ್ಮ ಅರಿವು ಸಂಪೂರ್ಣವಾಗಿ ನೆಲವನ್ನು ಸ್ಪರ್ಶಿಸುತ್ತಿರುವ ನಿಮ್ಮ ಪಾದಗಳ ಮೇಲಿರಲಿ.
ನೀವು ವೃತ್ತಾಕಾರವಾಗಿ ನಡೆಯಬಹುದು ಅಥವಾ ಸುಮಾರು 15 ಹೆಜ್ಜೆಗಳಷ್ಟು ಮುಂದಕ್ಕೆ ಅಥವಾ ಹಿಂದಕ್ಕೆ ನಡೆಯಬಹುದು. ಈ ಧ್ಯಾನವನ್ನು ನಿಮ್ಮ ಮನೆಯ ಒಂದು ಕೊಠಡಿಯಿಂದ ಇನ್ನೊಂದು ಕೊಠಡಿಗೆ ಹೋಗುತ್ತಾ ಅಥವಾ ನಿಮ್ಮ ಮನೆಯ ಹೊರಗಿನ ತೋಟದಲ್ಲಿ ಅಭ್ಯಸಿಸಬಹುದು.
ನಿಮ್ಮ ದೃಷ್ಟಿಯನ್ನು ತಗ್ಗಿಸಿ ನೆಲದ ಮೇಲೆ, ಪಾದಗಳ ಮೇಲೆ, ಕೇಂದ್ರೀಕರಿಸಬೇಕು. ಕುಳಿತುಕೊಂಡು ಮಾಡುವ ಧ್ಯಾನದಲ್ಲಿ ಹೊಟ್ಟೆಯನ್ನು ಗಮನಿಸುವಂತೆ, ಇಲ್ಲಿ ನೆಲವನ್ನು ಸ್ಪರ್ಶಿಸುತ್ತಿರುವ ನಿಮ್ಮ ಪಾದದ ಮೇಲೆ ಅರಿವನ್ನು ಇಟ್ಟಿರಬೇಕು. ಇತರ ಆಲೋಚನೆಗಳೂ, ಸಂವೇದನೆಯೂ ಉಂಟಾದರೆ ಉಂಟಾಗಲಿ. ಯಾವುದನ್ನೂ ಒಂದು ಅಡ್ಡಿಯೆಂಬಂತೆ ತಿಳಿಯಬೇಡಿರಿ. ಆಲೋಚನೆಯನ್ನು ಅಥವಾ ಸಂವೇದನೆಯನ್ನು ವೀಕ್ಷಿಸಿದ ನಂತರ, ಮತ್ತೆ ನಿಮ್ಮ ಗಮನವನ್ನು ಪಾದಗಳ ಮೇಲಿಡಿರಿ.
ಇದನ್ನು 20 ನಿಮಿಷಗಳ ಕಾಲ ಮಾಡಿ 10 ನಿಮಿಷಗಳವರೆಗೆ ವಿಶ್ರಮಿಸಿರಿ.
