ಧ್ಯಾನವೇತಕ್ಕೆ?
This text was machine-transcribed from the printed book and may contain errors. Select the words and choose “Report a mistake”.
ಈ ಮುಂದಿನ ನಾಲ್ಕು ಅಧ್ಯಾಯಗಳಲ್ಲಿ ಹಾಗೂ ಮುಂದಿನ ವಿಭಾಗಗಳಲ್ಲಿ ಬರುವ ಧ್ಯಾನ ತಂತ್ರಗಳಲ್ಲಿ, ನಾವು ಇದುವರೆಗೂ ಪ್ರಸ್ತಾಪಿಸಿರುವ ಸತ್ಯಗಳನ್ನು ಅನುಭವಗಳನ್ನಾಗಿ ಮಾರ್ಪಡಿಸಿಕೊಳ್ಳುವ ಮಾರ್ಗಗಳನ್ನು ತಿಳಿಯಪಡಿಸುತ್ತೇನೆ. ಈ ವೇಳೆಗೆ ನಿಮಗೆ ‘ಏನನ್ನು’ ಮಾಡಬೇಕು ಮತ್ತು ‘ಏಕೆ?’ ಎಂಬ ತಿಳಿವಳಿಕೆ ಬಂದಿರುತ್ತದೆ.
ಈಗ, ‘ಹೇಗೆ’ ಎಂಬ ವಿಚಾರಕ್ಕೆ ಬರೋಣ.
ನಮಗೆ ತಿಳಿದಿರುವುದನ್ನು ಅನುಭವವನ್ನಾಗಿ
ಮಾರ್ಪಡಿಸಿಕೊಳ್ಳದಿದ್ದರೆ ಅದು ಬರೀ
ಸಿದ್ಧಾಂತವಾಗಿಯೇ ಉಳಿದುಬಿಡುತ್ತದೆ.
ಜೀವನದ ನಿಜವಾದ
ಉದ್ದೇಶವೇನು?
ಜೀವನದಲ್ಲಿ ನಿಮ್ಮ ಅಂತಿಮ ಗುರಿ ಏನು?
ಹೆಚ್ಚಾಗಿ ಸಂಪಾದಿಸುವುದೇ...? ಎಂದೆಂದಿಗೂ
ಯೌವನದಿಂದಲೂ ಆರೋಗ್ಯದಿಂದಲೂ,
ಸುಂದರವಾಗಿಯೂ ಇರುವುದೇ...? ಸೊಗಸಾದ,
ದೀರ್ಘಕಾಲ ಉಳಿಯುವ ಸಂಬಂಧಗಳನ್ನು
ಹೊಂದುವುದೇ . . . ? ನಿಮ್ಮ ವ್ಯಕ್ತಿತ್ವವನ್ನು
ಉತ್ತಮಗೊಳಿಸಿಕೊಳ್ಳುವುದೇ?
ನಮ್ಮಲ್ಲಿ ಪ್ರತಿಯೊಬ್ಬರೂ ನಿಜವಾಗಿಯೂ
ಹುಡುಕುತ್ತಿರುವುದು ಆನಂದವನ್ನು. ಆದರೆ, ಅದನ್ನು
ಅನೇಕ ರೀತಿಗಳಲ್ಲಿ ಹುಡುಕುತ್ತೇವೆ. ಅಲ್ಲದೆ,
ನಮ್ಮಲ್ಲಿ ಶೇಕಡ ತೊಂಬತ್ತೊಂಬತ್ತು ಜನರಿಗೆ ನಮ್ಮ
ನಿಜವಾದ ಧೈಯವು ಆನಂದವೆಂಬುದೇ ತಿಳಿಯದು.
ನಮ್ಮೊಳಗೇ ಇರುವಂತಹುದನ್ನು, ಪತ್ತೆಹಚ್ಚಲೆಂದು
ಕಾದುಕೊಂಡಿರುವುದನ್ನು ನಾವು ಹೊರಪ್ರಪಂಚದ
ಎಲ್ಲೆಡೆಯೂ ಹುಡುಕುತ್ತೇವೆ.
ಒಂದು ಚಿಕ್ಕ ಕಥೆ:
ಒಂದು ಸಂಜೆ ಒಬ್ಬಾತನು ತನ್ನ ಮನೆಯಂಗಳದಲ್ಲಿ
ಏನನ್ನೋ ಬಹಳವಾಗಿ ಹುಡುಕುತ್ತಿದ್ದನು. ಆತನ
ಹೆಂಡತಿಯು ಅದೇನೆಂದು ಕೇಳಿದಳು. ಆತನು
ಒಂದು ಚಿನ್ನದ ನಾಣ್ಯವನ್ನು
ಬೀಳಿಸಿಕೊಂಡಿದ್ದೇನೆಂದು ಹೇಳಿದನು. ಹೆಂಡತಿಯೂ
ಹುಡುಕುವುದರಲ್ಲಿ ನೆರವಾದಳು. ಅಷ್ಟರಲ್ಲಿ
ಇತರರೂ ಬಂದು ಸೇರಿ, ನೆರೆಹೊರೆಯವರೆಲ್ಲರೂ
ಆ ಕಳೆದುಹೋದ ನಾಣ್ಯವನ್ನು ಹುಡುಕುತ್ತಿದ್ದರು.
ಇದ್ದಕ್ಕಿದ್ದಂತೆ ಅವರಲ್ಲೊಬ್ಬನು ಆತನನ್ನು, 'ಆ ನಾಣ್ಯವನ್ನು ನಿಜವಾಗಿಯೂ ಎಲ್ಲಿ ಬೀಳಿಸಿಕೊಂಡಿರಿ? ಅದು ನಮಗಿನ್ನೂ ಸಿಕ್ಕಿಲ್ಲವಲ್ಲಾ, ಅದು ಹೇಗೆ?' ಎಂದು ಕೇಳಿದನು. ಆತನು, 'ಓ, ನಾನದನ್ನು ಕಳೆದುಕೊಂಡಿದ್ದು ಮನೆಯೊಳಗೆ' ಎಂದನು. ಹುಡುಕುತ್ತಿದ್ದವರೆಲ್ಲಾ ಕೋಪಗೊಂಡು, 'ಹಾಗಾದರೆ ನಾವಿಲ್ಲೇಕೆ ಹುಡುಕುತ್ತಿದ್ದೇವೆ?' ಎಂದು ಕೇಳಿದರು.
ಆತನು, ಸಮಸ್ಯೆ ಏನೆಂದರೆ 'ನಮ್ಮ ಮನೆಯೊಳಗೆ
ದೀಪಗಳಿಲ್ಲ. ಆದುದರಿಂದ ಈ ಬೀದಿ ದೀಪದ
ಕೆಳಗೆ ಹುಡುಕಲಾರಂಭಿಸಿದೆ!' ಎಂದನು.
ನಿಜವಾಗಿ ನಮ್ಮ ಜೀವನದಲ್ಲಿ ನಾವು
ಮಾಡುವುದೂ ಇದನ್ನೇ. ಅಲ್ಲದ ಸ್ಥಳಗಳಲ್ಲಿ
ಉತ್ತರಗಳಿಗಾಗಿ ಹುಡುಕುವುದರಲ್ಲಿ ನಾವೆಲ್ಲರೂ
ನಿಪುಣರು. ಆನಂದಕ್ಕಾಗಿ ಎಲ್ಲೆಡೆಗಳಲ್ಲಿಯೂ
ಹುಡುಕುತ್ತೇವೆ - ಹಣದಲ್ಲಿ, ಅಧಿಕಾರದಲ್ಲಿ,
ಸಂಬಂಧಗಳಲ್ಲಿ ಹಾಗೂ ವಿಚಾರಗಳಲ್ಲಿ. ಆದರೆ
ಬಲು ಸುಲಭವಾದ ಒಂದು ದಿಕ್ಕಿನಲ್ಲಿ ಅಂದರೆ
ಅಂತರ್ಮುಖಿದ ದಿಕ್ಕಿನಲ್ಲಿ ಮಾತ್ರ ನಾವು
ಚಲಿಸುತ್ತಿಲ್ಲ.
ಆನಂದವೆಂದರೇನು?
ಜೀವನದಲ್ಲಿ ಪ್ರತಿಯೊಬ್ಬರೂ ಕೆಲವು ಕ್ಷಣಗಳ ಪರಮ ಸಂತೋಷವನ್ನು ಅನುಭವಿಸಿರುತ್ತಾರೆ. ಆದರೆ ಅದು ಯಾವಾಗಲೂ ಒಂದು ಕಾರಣಕ್ಕಾಗಿಯೇ ಆಗಿರುತ್ತದೆ. ಸಂತೋಷದ ಆ ಸ್ಥಿತಿಯು ಎಂದೆಂದಿಗೂ ಉಳಿಯುವುದಿಲ್ಲ. ಅದು ತಾತ್ಕಾಲಿಕವಾಗಿದ್ದು, ನಂತರ ಅದು ಬದಲಾದಾಗ ಅಥವಾ ಹೋಗಿ ಬಿಟ್ಟಾಗ, ಮತ್ತೊಮ್ಮೆ ವ್ಯಸನಕ್ಕೀಡಾಗುತ್ತೀರಿ. ಯಾವ ಕಾರಣವೂ ಇಲ್ಲದೆಯೇ ಪಡುವ ಸಂತೋಷ, ಯಾವ ಕಾರಣಕ್ಕೂ ನಶಿಸಿಹೋಗದಂತಹ ಸಂತೋಷ ಮಾತ್ರವೇ, ನಿಜವಾದ ಹಾಗೂ ಶಾಶ್ವತವಾದ ಸಂತೋಷ. ಇದನ್ನೇ ಆನಂದ ಎನ್ನುವುದು. ಇಂತಹ ಸಂತೋಷವು ಬಾಹ್ಯದ ಯಾವುದರ ಮೇಲೆಯೂ ಅವಲಂಬಿಸಿರುವುದಿಲ್ಲ.
ಆನಂದ ಎಂಬ ಪದದ ಅರ್ಥವೇ ಕಡಿಮೆ
ಮಾಡಲು ಆಗದೆ ಇರುವುದು, ಕಳೆದುಕೊಳ್ಳಲು ಆಗದೆ
ಇರುವುದು ಎಂದು. ಆನಂದ ಎಂಬುದನ್ನು ಸಂತೋಷ
ಎಂದು ಅನುವಾದ ಮಾಡಲಾಗುವುದಿಲ್ಲ.
ಯಾವುದನ್ನು ಕಡಿಮೆ ಮಾಡಲಾಗುವುದಿಲ್ಲವೋ
ಅಥವಾ ಕಳೆದುಕೊಳ್ಳಲಾಗುವುದಿಲ್ಲವೋ, ಅದೇ
ಆನಂದದ ಅರ್ಥವೆಂದರೆ ನಿಮಗೆ
ಆಶ್ಚರ್ಯವಾಗಬಹುದು. ಜೊತೆಗೆ,
ಆನಂದವೆಂಬುದು ಯಾವ ಕಾರಣಕ್ಕೂ
ಕಡಿಮೆಯಾಗುವುದಲ್ಲ.
ಧ್ಯಾನವೆಂದರೇನು?
ಪ್ರಜ್ಞೆಯನ್ನು ಉನ್ನತಮಟ್ಟಕ್ಕೇರಿಸುವ ತಂತ್ರ
ನಿಮ್ಮ ಪ್ರಜ್ಞೆಯನ್ನು ಉನ್ನತಮಟ್ಟಕ್ಕೇರಿಸುವ
ಯಾವುದೇ ತಂತ್ರ ಅಥವಾ ವಿಧಾನವು
ಧ್ಯಾನವಾಗುತ್ತದೆ.
ಒಂದು ಸರಳವಾದ ಉಸಿರಾಟದ ತಂತ್ರವೂ
ಧ್ಯಾನವಾಗಬಲ್ಲುದು. ಅದು ಸುಲಭವಾದ ಒಂದು
ಪದದ ಪುನರುಚ್ಚಾರಣೆಯೂ ಆಗಬಲ್ಲುದು ಅಥವಾ
ಸುಮ್ಮನೆ ಕುಳಿತುಕೊಳ್ಳುವುದೂ ಆಗಬಲ್ಲುದು. ಝೆನ್
ಸಂಪ್ರದಾಯದಲ್ಲಿ ಸುಮ್ಮನೆ ಕುಳಿತುಕೊಳ್ಳುವುದೇ
ಧ್ಯಾನ. ನಿಮಗೆ ಇದು ಅತಿ ಸುಲಭ ಎನಿಸಬಹುದು.
ಆದರೆ ನಿಜಕ್ಕೂ ಸುಮ್ಮನೆ ಕುಳಿತುಕೊಳ್ಳುವುದು
ಅತ್ಯಂತ ಕಷ್ಟದ ಧ್ಯಾನ. ಪ್ರಜ್ಞೆಯನ್ನು
ಉನ್ನತಮಟ್ಟಕ್ಕೇರಿಸುವ ಯಾವುದೇ ಆದರೂ ಅದು
ಧ್ಯಾನವಾಗಬಲ್ಲುದು.
ವರ್ತಮಾನದಲ್ಲಿ ತೀವ್ರ ಆನಂದ
ಈ ಕ್ಷಣದಲ್ಲಿ ಆನಂದದಿಂದಿರುವುದೇ ಧ್ಯಾನ.
ಈ ಕ್ಷಣದಲ್ಲಿ ನೀವು ಸಂಪೂರ್ಣ ಶಾಂತಿಯಿಂದ
ಇದ್ದೀರೆಂದರೆ, ನೀವಾಗಲೇ ಧ್ಯಾನಾವಸ್ಥೆ-
ಯಲ್ಲಿದ್ದಂತೆಯೇ.
ನೀವು ಅತ್ಯಂತ ಸೌಂದರ್ಯವನ್ನು ಆಹ್ಲಾದಿಸಿದ
ನಿಮ್ಮ ಜೀವನದ ಯಾವುದೇ ಕ್ಷಣವನ್ನು
ನೆನಪುಮಾಡಿಕೊಳ್ಳಿರಿ. ಅದು ಒಂದು ಪರ್ವತದ
ಹಿಂಬದಿಯಿಂದ ದಿಗ್ಗನೆ ಸೂರ್ಯೋದಯವಾದ
ದೃಶ್ಯವೋ ಅಥವಾ ಮೊದಲಬಾರಿಗೆ ಆಲಿಸಿದ
ಸುಶ್ರಾವ್ಯ ಸಂಗೀತವೋ ಆಗಿರಬಹುದು. ತಕ್ಷಣವೇ
ನೀವು ಸಂಪೂರ್ಣ ಸ್ತಬ್ಧರಾಗಿದ್ದಿರಿ,
ಮೂಕವಿಸ್ಮಿತರಾಗಿದ್ದಿರಿ, ಆ ಸೌಂದರ್ಯದ
ಎದುರಿನಲ್ಲಿ ಇನ್ನೇನನ್ನೂ ಯೋಚಿಸಲಾಗಿರಲಿಲ್ಲ.
ನೀವು ಸುಮ್ಮನೆ ಮೌನವಾಗಿದ್ದು, ವಿರಮಿಸಿ,
ಯೋಚನಾರಹಿತ ಅರಿವಿನಿಂದಿದ್ದಿರಿ. ಆ
ಸೌಂದರ್ಯದಲ್ಲಿ ಸಂಪೂರ್ಣವಾಗಿ ಕರಗಿ
ಹೋಗಿದ್ದಿರಿ. ಆ ಕ್ಷಣದಲ್ಲಾದುದೇ ಧ್ಯಾನ!
ಕೆಲವು ನಿಮಿಷಗಳಾದನಂತರ, ನಿಮ್ಮ ಒಳ
ಹರಟೆ ಮತ್ತೆ ಪ್ರಾರಂಭವಾಯಿತು. ನಿಮ್ಮ ಮನಸ್ಸು,
'ಎಷ್ಟು ಸುಂದರವಾದ ಸೂರ್ಯೋದಯ!' ಎಂದಿತು.
ಈ ಪದಗಳು ಹೊರಬೀಳುತ್ತಿದ್ದಂತೆಯೇ ನೀವು
ಧ್ಯಾನದಿಂದ ಹೊರಬಂದಿರಿ. ನೀವು
ಆಲೋಚಿಸಬಹುದು, ಇಲ್ಲವೇ ಧ್ಯಾನಿಸಬಹುದು.
ಎರಡನ್ನೂ ಒಟ್ಟಿಗೆ ಎಂದಿಗೂ ಮಾಡಲಾಗುವುದಿಲ್ಲ.
ಧ್ಯಾನವೆಂದರೆ 'ಕೇವಲ ಇರುವುದು'. ಅದು
ವಿರೋಧಿಸದೆಯೇ ವರ್ತಮಾನ ಕ್ಷಣವನ್ನು
ಅನುಭವಿಸುವುದು.
ಧ್ಯಾನವನ್ನು ಮಾಡಲು ಸರಿಯಾದ ರೀತಿ ಯಾವುದು?
ಮೊದಲನೆಯದಾಗಿ, ಪ್ರಾಮಾಣಿಕರಾಗಿರಿ. ತೆರೆದ ಮನಸ್ಕರಾಗಿರಿ. ಪ್ರಯೋಗಿಸಲು ತೆರೆದ ಮನಸ್ಕರಾಗಿರಿ. ಉತ್ಸಾಹಿಗಳಾಗಿರಿ.
ಝೆನ್ ಸಂಪ್ರದಾಯದಲ್ಲಿ ಮನೋಭಾವವನ್ನು
ವಿವರಿಸುವ ಒಂದು ಸುಂದರವಾದ ಪದವಿದೆ-
ಪ್ರಾರಂಭಿಸುವವನ ಮನ, ಎಂಬುದಾಗಿ. ಜೀವನದ
ಪ್ರತಿಯೊಂದು ವಿಷಯವನ್ನೂ ಹೊಸದೆಂಬಂತೆ
ನೋಡುವುದು ಎಂದರ್ಥ. ಅದರಿಂದಾಗಿ ಜೀವನದ
ಎಲ್ಲವೂ ಉತ್ಸಾಹದಿಂದ ಕೂಡಿರುತ್ತದೆ.
ಎರಡನೆಯದಾಗಿ, ಆಶಾವಾದಿಗಳಾಗಿರಿ. ಧ್ಯಾನದ ಬಗ್ಗೆ ನಿಮಗೆ ಏನೂ ತಿಳಿಯದಿದ್ದರೂ,
ಮಾನವರಲ್ಲಿ ಮಾತ್ರವೇ ಭಿನ್ನವಾದ ಪ್ರಜ್ಞಾವಂತ ಜೀವಿಯಾಗುವ ಸಾಧ್ಯತೆ ಇರುವುದು.
ಆ ನ ೦ ದ ವೆ ೦ ಬ ದು ಖ ೦ ಡಿ ತ ವಾ ಗಿ ಯ ತ ಸಾಧಿಸಬಹುದಾದಂತಹ ಧೈಯ.
ಒಮ್ಮೆ ಒಬ್ಬಾತನು ಪರಮ ಜ್ಞಾನಿಗಳಾದ ರಮಣ ಮಹರ್ಷಿಗಳ ಬಳಿ ಬಂದು, 'ಭಗವಾನರೇ, ಆಧ್ಯಾತ್ಮಿಕ ಜೀವನಕ್ಕೆ ನನಗೆ ಅರ್ಹತೆ ಇದೆಯೇ?' ಎಂದು ಕೇಳಿದನು.
ರಮಣರು, 'ನೀನು ಜೀವಂತವಾಗಿರುವೆಯಾ?' ಎಂಬ ಒಂದು ಮರು ಪ್ರಶ್ನೆಯ ಮೂಲಕ ಉತ್ತರಿಸಿದರು. ಆತನು ದಿಗ್ಧಮೆಗೊಂಡು, 'ಹೌದು, ನಿಶ್ಚಯವಾಗಿಯೂ' ಎಂದನು.
ರಮಣರು, 'ಅಷ್ಟು ಸಾಕು, ಆಧ್ಯಾತ್ಮಿಕತೆಗೆ ಬೇಕಾದ ಅರ್ಹತೆಗಳೆಲ್ಲವೂ ನಿನ್ನಲ್ಲಿ ಈಗಾಗಲೇ ಇವೆ', ಎಂದುತ್ತರಿಸಿದರು.
ಮಾನವನ ಜೀವನದ ಗುರಿಯೇ ಜೀವನ್ಮುಕ್ತಿ. ಪ್ರತಿಯೊಬ್ಬ ಮಾನವನ ಶರೀರದಲ್ಲಿಯೂ, ಜೀವನ್ಮುಕ್ತಿಯ ಸಾಧ್ಯತೆಯ ಅಸಾಧಾರಣವಾದ ಸಾಮರ್ಥ್ಯದ ಶಕ್ತಿಯು ಕುಂಡಲಿನಿ ಶಕ್ತಿಯಲ್ಲಡಗಿದೆ. ಅದನ್ನು ಜಾಗೃತಗೊಳಿಸಿಕೊಳ್ಳಲಾದರೆ, ಅದು ನಿಮ್ಮನ್ನು ಪ್ರಜ್ಞೆಯ ಬೇರೆಯ ಸ್ತರಕ್ಕೂ, ಅಸ್ತಿತ್ವದ ಬೇರೆ ಸ್ತರಕ್ಕೂ ಕೊಂಡೊಯ್ಯುತ್ತದೆ. ಮಾನವರಲ್ಲಿ ಮಾತ್ರವೇ ಭಿನ್ನವಾದ ಪ್ರಜ್ಞಾ ಸ್ತರದ ಜೀವಿಯಾಗುವ ಸಾಧ್ಯತೆ ಇರುವುದು. ಪ್ರಾಣಿಗಳಿಗೆ, ಜೀವನ್ಮುಕ್ತಿಯನ್ನು ಹೊಂದುವ ಚೈತನ್ಯವಾಗಲೀ, ಬೇರೆ ರೀತಿಯ ಪ್ರಜ್ಞೆಯುಳ್ಳ ಜೀವಿಗಳಾಗುವ ಸಾಮರ್ಥ್ಯವಾಗಲೀ, ಇರುವುದಿಲ್ಲ.
ಮೂರನೆಯದಾಗಿ, ವಿನೋದವಾಗಿರಿ! ಧ್ಯಾನವು ಒಂದು ಮಹಾ ಸಾಹಸ. ಧ್ಯಾನದ ಬಗ್ಗೆ ಗಂಭೀರವಾಗಿರುವುದೆಂದರೆ, ಇಡೀ ವಿಷಯವನ್ನೇ ಕಳೆದುಕೊಂಡಂತೆ. ಧ್ಯಾನವನ್ನು ಹಬ್ಬವನ್ನಾಗಿ ಆಚರಿಸಿರಿ, ಅದನ್ನು ಕೇವಲ ಸವಿಯಿರಿ!
ನಾಲ್ಕನೆಯದಾಗಿ, ಸಹನೆ ಇರಬೇಕು. ಧ್ಯಾನವನ್ನು ಪ್ರಾರಂಭಿಸಿದ ಕೂಡಲೇ ಪರಿಣಾಮದ ಬಗ್ಗೆ ಚಿಂತಿಸಲಾರಂಭಿಸಬೇಡಿರಿ.
ಒಂದು ಪುಟ್ಟ ಕಥೆ:
ಒಮ್ಮೆ ಮೂರು ಕೋತಿಗಳಿಗೆ ಒಂದು ರಸಭರಿತವಾದ ಮಾವಿನಹಣ್ಣು ದೊರಕಿತು. ಎಲ್ಲ ಕೋತಿಗಳಂತೆಯೇ ಅವೂ ಸ್ವಲ್ಪ ಹೊತ್ತು ಆ ಹಣ್ಣಿಗಾಗಿ ಕಾದಾಡಿದವು. ಅಷ್ಟರಲ್ಲಿ, ಅದು ಹೇಗೋ ಅವುಗಳಿಗೆ ಒಂದು ಕ್ಷಣದ ಸ್ಪಷ್ಟತೆ, ಒಂದು ಕ್ಷಣದ ಬುದ್ಧಿವಂತಿಕೆ ಬಂದುಬಿಟ್ಟಿತು.
ಮಾವಿನ ಹಣ್ಣನ್ನು ನೇರವಾಗಿ ತಿಂದುಬಿಡುವ ಬದಲು ಅದನ್ನು ಬಿತ್ತಿ ಬಿಡೋಣವೆಂದು ತೀರ್ಮಾನಿಸಿದವು. ಒಮ್ಮೆ ಮಾವಿನ ವಾಟೆಯು ಮೊಳೆತು ಮರವಾಗಿ ಬೆಳೆಯಿತೆಂದರೆ, ಆ ಮೂರು ಕೋತಿಗಳಿಗೂ ಬೇಕಾಗುವುದಕ್ಕಿಂತಲೂ ಹೆಚ್ಚು ಹಣ್ಣುಗಳು ದೊರೆಯುತ್ತವೆಂಬುದು ಅವುಗಳಿಗೆ ತಿಳಿದಿತ್ತು.
ಪ್ರತಿಯೊಂದು ಕೋತಿಯೂ ಮಾವಿನ ಗಿಡವನ್ನು ನೋಡಿಕೊಳ್ಳುವ ಒಂದೊಂದು ಕೆಲಸಗಳನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿತು. ಮೊದಲನೆಯ ಕೋತಿ ಹೇಳಿತು, 'ನಾನು ಪ್ರತಿದಿನವೂ ಗಿಡಕ್ಕೆ ನೀರು ಹಾಕುತ್ತೇನೆ' ಎಂದು. ಎರಡನೆಯ
ಕೋತಿಯು, 'ನಾನು ಗಿಡದ ಉತ್ತಮ ಬೆಳವಣಿಗೆಗೆ
ಬೇಕಾದ ಮಣ್ಣು ಚೆನ್ನಾಗಿಯೂ ಪುಷ್ಟಿಕರವಾಗಿಯೂ
ಇರುವಂತೆ, ಗೊಬ್ಬರ ಹಾಕಿ ನೋಡಿಕೊಳ್ಳುತ್ತೇನೆ'
ಎಂದಿತು. ಮೂರನೇ ಕೋತಿಯು, 'ನಾನು ಗಿಡವನ್ನು
ಜೋಪಾನವಾಗಿ ಕಾಯುತ್ತೇನೆ ಹಾಗೂ ಗಡುಸಾದ
ವಾತಾವರಣದಿಂದಲೂ, ಇತರ ಪ್ರಾಣಿಗಳಿಂದಲೂ
ರಕ್ಷಿಸುತ್ತೇನೆ' ಎಂದಿತು.
ಒಂದು ತಿಂಗಳು ಕಳೆಯಿತು. ಎರಡು ತಿಂಗಳುಗಳಾದವು, ಮೂರು ತಿಂಗಳುಗಳೂ ಕಳೆದವು. ನೆಲದಿಂದ ಮೇಲಕ್ಕೆ ಗಿಡವು ಬರುವ ಯಾವ ಸೂಚನೆಗಳೂ ಇರಲಿಲ್ಲ. ಈ ವಿಷಯವನ್ನು ಚರ್ಚಿಸಲು ಮೂರು ಕೋತಿಗಳೂ ಒಂದು ತುರ್ತುಸಭೆಯನ್ನು ಕರೆದುವು. ಮೊದಲನೆಯ ಕೋತಿಯು, 'ನಾನು ಆಶ್ವಾಸನೆಕೊಟ್ಟಂತೆಯೇ ಪ್ರತಿದಿನವೂ ಬೀಜಕ್ಕೆ ನೀರು ಹಾಕುತ್ತಿದ್ದೇನೆ' ಎಂದು ಘೋಷಿಸಿತು. ಎರಡನೆಯ ಕೋತಿಯು, 'ನಾನು ಆಶ್ವಾಸನೆ ಕೊಟ್ಟಂತೆಯೇ ಗೊಬ್ಬರ ಹಾಕಿ, ಮಣ್ಣನ್ನು ಚೆನ್ನಾಗಿರುವಂತೆ ನೋಡಿಕೊಳ್ಳುತ್ತಿದ್ದೇನೆ' ಎಂದು ಕಿರಿಚಿತು. ಮೂರನೆಯ ಕೋತಿಯು, 'ನಾನು ಭಾಷೆಕೊಟ್ಟಂತೆ ಬೀಜವನ್ನು ಬಹಳ ಜಾಗರೂಕತೆಯಿಂದ ಕಾಪಾಡುತ್ತಿದ್ದೇನೆ. ಅಷ್ಟೇ ಅಲ್ಲ, ಪ್ರತಿಯೊಂದು ದಿನವೂ ಬೀಜವನ್ನು ಹೊರತೆಗೆದು, ಅದು ಮೊಳೆತಿದೆಯೋ ಇಲ್ಲವೋ ಎಂದು ಪರಿಶೀಲಿಸಿ ನೋಡುತ್ತಿದ್ದೇನೆ!' ಎಂದು ಹೇಳಿತು.
ನೀವು ತಕ್ಷಣದ ಫಲಿತಾಂಶಕ್ಕಾಗಿ ದುರಾಸೆ ಪಟ್ಟರೆ, ವಾಸ್ತವವಾಗಿ ಆ ಕಾರ್ಯವಿಧಾನವು ನಿಮ್ಮಲ್ಲಿ ನೆಲೆಗೊಳ್ಳುವುದನ್ನು ತಪ್ಪಿಸುತ್ತೀರಿ; ಇಡೀ ಕಾರ್ಯವಿಧಾನವನ್ನು ನೀವೇ ತಡೆಗಟ್ಟುತ್ತೀರಿ.
ಐದನೆಯದಾಗಿ, ಏಕಾಂತವನ್ನು ಸವಿಯಿರಿ. ನಿಮ್ಮ
ಅಂತರಂಗವನ್ನು ಅನುಭವಿಸಲು ನಿಮಗೆ ಒಂದು
ಅವಕಾಶವನ್ನು ಕೊಡಿರಿ. ಧ್ಯಾನವು ನಿಮ್ಮ ಒಂದು
ಭಾಗವಾದಾಗ, ಸಹಜವಾಗಿಯೇ ಆನಂದವು
ಅರಳುತ್ತದೆ.
ಧ್ಯಾನವೇತಕ್ಕೆ?
ನಮ್ಮ ಜೀವನದಲ್ಲಿ ನಾವು ಯಾವಾಗಲೂ ಅನುಭವಿಸುವ ಮೂರು ಸ್ಥಿತಿಗಳಿವೆ. ಎಚ್ಚರದ ಸ್ಥಿತಿ, ಕನಸಿನ ಸ್ಥಿತಿ ಮತ್ತು ಗಾಢ ನಿದ್ರಾ ಸ್ಥಿತಿ. ಆದರೆ ನಾವು ಅನುಭವಿಸದೇ ಇರುವ ನಾಲ್ಕನೆಯ ಒಂದು ಸ್ಥಿತಿಯೂ ಇದೆ. ಅದಕ್ಕೆ ತುರೀಯಾ ಎಂದು ಹೆಸರು. ಈ ಸ್ಥಿತಿಯಲ್ಲಿ ನಾನು ಎಂಬ ಪ್ರಜ್ಞೆ ಇರುತ್ತದೆ. ಆದರೆ ಆಲೋಚನೆಗಳಿರುವುದಿಲ್ಲ. ಅದನ್ನು ಆಲೋಚನಾರಹಿತ ಪ್ರಜ್ಞೆ ಎಂದು ಕರೆಯುತ್ತಾರೆ. ಕೆಲವೇ ಕೆಲವರು ಮಾತ್ರ ತಮ್ಮ ಜೀವನದಲ್ಲಿ ಇದನ್ನು ಅನುಭವಿಸುತ್ತಾರೆ. ಕೆಲವರು ಇದನ್ನು ಕೆಲವು
| ಪ್ರಜ್ಞೆಯ ವಿವಿಧ ಸ್ಥಿತಿಗಳು | ||
|---|---|---|
| ಆಲೋಚನಾ ಸಹಿತ | ಆಲೋಚನಾ ರಹಿತ | |
| 'ನಾನು' ಎಂಬ ಪ್ರಜ್ಞೆಯೊಂದಿಗೆ | ಜಾಗೃತ ಎಚ್ಚರದ ಸ್ಥಿತಿ ಯೋಚನೆಗಳಿರುವ ಸ್ಥಿತಿ | ತುರೀಯ ಆನಂದದ ಸ್ಥಿತಿ ಪೂರ್ಣ ಅರಿವಿನ ಸ್ಥಿತಿ |
| 'ನಾನು' ಎಂಬ ಪ್ರಜ್ಞೆಯಿಲ್ಲದೆ | ಸ್ವಪ್ನ ಕನಸಿನ ಸ್ಥಿತಿ ಕನಸು ಕಾಣುವ ಸ್ಥಿತಿ | ಸುಷುಪ್ತಿ ಪ್ರಜ್ಞಾಶೂನ್ಯ ಸ್ಥಿತಿ ಗಾಢ ನಿದ್ರೆಯ ಸ್ಥಿತಿ |
ನಮ್ಮ ಎಲ್ಲಾ
ದೈಹಿಕ ಹಾಗೂ
ಮಾನಸಿಕ
ಖಾಯಿಲೆಗಳೂ
ಕನಸಿನ
ಸ್ಥಿತಿಯಲ್ಲಿ
ಹುಟ್ಟುತ್ತವೆ.
ಕ್ಷಣಗಳು ಅನುಭವಿಸಿ,
ನಂತರ ತಮ್ಮ ಹಿಂದಿನ
ಎಚ್ಚರದ ಸ್ಥಿತಿಗೆ
ಮರಳುತ್ತಾರೆ.
ಇದ್ದಕ್ಕಿದ್ದಂತೆ ಒಂದು ಆಘಾತವಾದರೆ ಅಥವಾ ಪರಿಪೂರ್ಣ ವಿಶ್ರಾಂತ ಸ್ಥಿತಿಯಲ್ಲಿ ಹಾಗೂ ಗಾಢ ಮೌನದಲ್ಲಿ ನಿಸರ್ಗದೊಡನೆ ಕುಳಿತಿದ್ದರೆ, ಈ ಆಲೋಚನಾರಹಿತ ಪ್ರಜ್ಞೆಯನ್ನು ಕೆಲವು ಕ್ಷಣಗಳು ಅನುಭವಿಸಲು ಸಾಧ್ಯ. ನಮ್ಮ ಗುರುತು ಜೀವಂತವಾಗಿರುತ್ತದೆ, 'ನಾನು' ಎಂಬ ಭಾವ ಜೀವಂತವಾಗಿರುತ್ತದೆ, ಆದರೆ ಆಲೋಚನೆಗಳಿರುವುದಿಲ್ಲ. ಇದೇ ನಾಲ್ಕನೆಯ ಸ್ಥಿತಿಯಾದ ತುರೀಯಾ.
ನಮ್ಮ ಎಲ್ಲಾ ದೈಹಿಕ ಹಾಗೂ ಮಾನಸಿಕ ಖಾಯಿಲೆಗಳೂ ಕನಸಿನ ಸ್ಥಿತಿಯಲ್ಲಿ ಹುಟ್ಟುತ್ತವೆ. ಕನಸಿನ ಸ್ಥಿತಿಯು ಗಾಢ ನಿದ್ರೆಯ ಹಾಗೂ ಎಚ್ಚರದ ಸ್ಥಿತಿಗಳನ್ನು ಒಳಹೊಕ್ಕು ಅತಿಕ್ರಮಿಸಲು ಪ್ರಾರಂಭಿಸುತ್ತದೆ. ನಮ್ಮ ಎಚ್ಚರದ ಸ್ಥಿತಿಯನ್ನು ಕನಸಿನ ಸ್ಥಿತಿಯು ಭೇದಿಸಿದರೆ, ಅದನ್ನು ಹಗಲುಗನಸು ಎನ್ನುತ್ತೇವೆ. ಆ ಸ್ಥಿತಿಯಲ್ಲಿ ನಾವು ಮಾಡಲಿಚ್ಛಿಸುವ ಕೊನೆಯಿಲ್ಲದ ವಿಷಯಗಳನ್ನು ಕಲ್ಪಿಸಿಕೊಳ್ಳುತ್ತೇವೆ, ಭ್ರಮಿಸುತ್ತೇವೆ. ನಮ್ಮ ಗಾಢ ನಿದ್ರೆಯನ್ನು ಕನಸು ಅತಿಕ್ರಮಿಸಿದರೆ ಅದನ್ನು ಶೋಭೆಗೊಂಡ ನಿದ್ರೆ ಎನ್ನುತ್ತೇವೆ.
ಹಗಲಿನಲ್ಲಾಗಲೀ, ಇರುಳಿನಲ್ಲಾಗಲೀ ನಮ್ಮ
ಕನಸಿನ ಸ್ಥಿತಿಯು ನಮ್ಮನ್ನು ಒಂದೇ ಸಮನೆ
ಕ್ಷೋಭೆಗೊಳಪಡಿಸುತ್ತದೆ. ನಮ್ಮ ಗಾಢ ನಿದ್ರೆಯು
ಕನಸುಗಳಿಂದ ಕ್ಷೋಭೆಗೊಂಡಾಗ, ಅದು
ದೀರ್ಘಕಾಲದ ಆಯಾಸ ಹಾಗೂ ನಿದ್ರಾರಹಿತ
ಖಾಯಿಲೆಗಳಂತಹ ಸಮಸ್ಯೆಗಳಾಗಿ ಪರಿಣಮಿಸುತ್ತದೆ.
ನಮ್ಮ ಎಚ್ಚರದ ಸ್ಥಿತಿಯು ಕನಸುಗಳಿಂದ
ಕ್ಷೋಭೆಗೊಂಡಾಗ, ನಮ್ಮ ಸುತ್ತಲಿನ ಜಗತ್ತಿನ
ಅರಿವು ಕಡಿಮೆಯಾಗಿ, ಹಗಲುಗನಸು
ಕಾಣುತ್ತಿರುತ್ತೇವೆ.
ಕನಸಿನ ಸ್ಥಿತಿಯು ಎಚ್ಚರದ ಸ್ಥಿತಿಯನ್ನು ಹೆಚ್ಚು
ಒಳಹೊಕ್ಕಂತೆ, ನಮ್ಮ ಪ್ರಜ್ಞೆಯ ಕಂಪನವು ತುಂಬಾ
ಕಡಿಮೆಯಾಗುತ್ತಾ ಬರುತ್ತದೆ. ನಾವು ನಮ್ಮ ಮಾನವ
ದೇಹದಲ್ಲಿಯೇ ಜೀವಿಸುತ್ತಿದ್ದರೂ, ನಿಜವಾದ
ಮಾನವ ಜೀವನವನ್ನು ಜೀವಿಸುತ್ತಿರುವುದಿಲ್ಲ.
ಪ್ರಜ್ಞೆಯ ಕಂಪನವು ಕಡಿಮೆಯಾದಾಗ, ನಾವು
ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ನಮಗೆ
ಪೂರ್ಣ ಅರಿವಿರುವುದಿಲ್ಲ. ನಾವು ಯಾವ ರೀತಿಯ
ಪದಗಳನ್ನು ಆಲೋಚಿಸುವೆವೋ ಅದರ ಅರಿವೂ
ಇರುವುದಿಲ್ಲ. ನಮ್ಮೊಳಗೆ ಏನು ನಡೆಯುತ್ತಿದೆ
ಎಂಬುದರ ಅರಿವೂ ನಮಗೆ ಇರುವುದಿಲ್ಲ. ಅದು
ಹೇಗೆಂದರೆ ನಾವು ಒಂದು ಮನೆಯೊಳಗೆ
ವಾಸವಿದ್ದರೂ ಆ ಮನೆಯಲ್ಲಾಗುತ್ತಿರುವ ಎಲ್ಲದರ
ಅರಿವು ನಮಗಿಲ್ಲದಿರುವಂತೆ.
'ನಾನು ಏಕೆ ಧ್ಯಾನ ಮಾಡಬೇಕು?' ಎಂದು ಕೇಳುತ್ತೀರಿ. ಧ್ಯಾನವು ನಿಮ್ಮ ಎಚ್ಚರದ ಸ್ಥಿತಿಗೂ, ಗಾಢ ನಿದ್ರೆಯ ಸ್ಥಿತಿಗೂ, ಆಳವಾದ ಅರಿವನ್ನು ತುಂಬಲು ಅವಶ್ಯಕವಾದುದು. ಕನಸಿನ ಸ್ಥಿತಿಯು ಜಾಗೃತ ಸ್ಥಿತಿ ಹಾಗೂ ಗಾಢ ನಿದ್ರಾ ಸ್ಥಿತಿಗಳನ್ನು ಭೇದಿಸುವ ಬದಲು, ಧ್ಯಾನದಿಂದ ತುರೀಯಾ ಅಥವಾ ಆನಂದದ ಸ್ಥಿತಿಯು, ಜಾಗೃತ ಸ್ಥಿತಿಯನ್ನು ಹಾಗೂ ಗಾಢ ನಿದ್ರಾ ಸ್ಥಿತಿಯನ್ನೂ ಭೇದಿಸಲಾರಂಭಿಸುತ್ತದೆ.
ಜೀವನದಲ್ಲಿ ಒಂದು ಬಾರಿಯಾದರೂ ಈ
ನಾಲ್ಕನೆಯ ಸ್ಥಿತಿಯನ್ನು ಅನುಭವಿಸಬೇಕೆಂಬುದೇ
ಧ್ಯಾನದ ಉದ್ದೇಶ. ಒಂದು ಸಲ ಈ ನಾಲ್ಕನೆಯ
ಸ್ಥಿತಿಯನ್ನು ಅನುಭವಿಸಿದರೆ, ಅದರ ಪ್ರಭಾವವನ್ನು
ಹೆಚ್ಚು ಹೆಚ್ಚಾಗಿ ನಮ್ಮ ಜಾಗೃತ ಮತ್ತು ಗಾಢ
ನಿದ್ರಾವಸ್ಥೆಗಳಿಗೆ ತರಲು ಸಾಧ್ಯ. ನಮ್ಮ ಜಾಗೃತ
ಮತ್ತು ಗಾಢ ನಿದ್ರಾವಸ್ಥೆಗಳು ಸಂಪೂರ್ಣವಾಗಿ
ನಾಲ್ಕನೆಯ ಸ್ಥಿತಿಯಾದ ತುರೀಯಾದಿಂದ
ಪ್ರಭಾವಿತವಾದರೆ, ಅದನ್ನೇ ನಾವು ಜೀವನ್ಮುಕ್ತಿ
ಎಂದು ಕರೆಯುವುದು.
ಧ್ಯಾನದಿಂದಾಗುವ ಪ್ರಯೋಜನಗಳು
ದೈಹಿಕ ಆರೋಗ್ಯ
ನಿಮ್ಮನ್ನು ದೈಹಿಕವಾಗಿಯೂ,
ಮಾನಸಿಕವಾಗಿಯೂ, ಭಾವನಾತ್ಮಕವಾಗಿಯೂ,
ಹಾಗೂ ಆಧ್ಯಾತ್ಮಿಕವಾಗಿಯೂ ಪರಿವರ್ತಿಸುವ
ಶಕ್ತಿಯು ಧ್ಯಾನಕ್ಕೆ ಇದೆ.
ನೋಡಿ, ದೈಹಿಕ ಆರೋಗ್ಯವೆಂದರೆ, ನೀವು
ಸೇವಿಸುವ ಆಹಾರವೆಲ್ಲವೂ ಜೀರ್ಣವಾಗಿ, ಆ
ಆಹಾರವು ನಿಮ್ಮ ದೇಹದ ಒಂದು ಭಾಗವಾಗುವುದು.
ಮಾನಸಿಕ ಆರೋಗ್ಯವೆಂದರೆ, ನೀವೆದುರಿಸುವ ಎಲ್ಲಾ
ಆಲೋಚನೆಗಳನ್ನೂ, ಸಮಸ್ಯೆಗಳನ್ನೂ,
ಜೀರ್ಣಿಸಿಕೊಂಡು, ಒಂದು ನಿಶ್ಚಳವಾದ
ಪರಿಹಾರವನ್ನು ಕಂಡುಕೊಳ್ಳುವುದು; ಎಂದರೆ
ಘರ್ಷಣೆಯಿಲ್ಲದೆ ಜೀವಿಸುವುದು. ಆಧ್ಯಾತ್ಮಿಕ
ಆರೋಗ್ಯವೆಂದರೆ, ಎಲ್ಲಾ ಪವಿತ್ರವಾದ
ಬೋಧನೆಗಳನ್ನೂ ಚೈತನ್ಯವನ್ನೂ ಪಡೆದು,
ಜೀರ್ಣಿಸಿಕೊಂಡು ಬಂಧಮುಕ್ತ ಜೀವನವನ್ನು
ನಡೆಸುವುದು. ಈ ಮೂರನ್ನೂ ಹೊಂದಿರುವುದೇ
ಪೂರ್ಣ ಆರೋಗ್ಯ.
ಧ್ಯಾನವು ಔಷಧೋಪಚಾರಕ್ಕೆ ಪೂರಕವೂ ಕೂಡ.
ಧ್ಯಾನದ ಮೂಲಕ ರಕ್ತದೊತ್ತಡವನ್ನೂ, ರಕ್ತದ
ಸಕ್ಕರೆಯ ಅಂಶವನ್ನೂ ನಿಯಂತ್ರಿಸಿಕೊಳ್ಳಬಹುದು,
ದೇಹದ ರೋಗನಿರೋಧಕ ಶಕ್ತಿಯನ್ನು
ಹೆಚ್ಚಿಸಿಕೊಳ್ಳಬಹುದು. ಧ್ಯಾನದ ಮೂಲಕ
ದೀರ್ಘಕಾಲದ ಸಮಸ್ಯೆಗಳಾದ
ಚರ್ಮವ್ಯಾಧಿಗಳನ್ನೂ, ಆಸ್ತಮಾ ಮತ್ತು
ಸಂಧಿವಾತಗಳನ್ನೂ ಗುಣಪಡಿಸಬಹುದು. ಧ್ಯಾನದ
ಶಕ್ತಿಯಿಂದ ಯಾವ ಖಾಯಿಲೆಯೂ
ತಪ್ಪಿಸಿಕೊಳ್ಳಲಾರದು.
ಮಾನಸಿಕ ಆರೋಗ್ಯ – ಬುದ್ಧಿ ಶಕ್ತಿಯ ಜಾಗೃತಿ ಹಾಗೂ ಅಂತಃಸ್ಫೂರ್ತಿಯ ವಿಕಸನ
ಮಾನಸಿಕ ಮಟ್ಟದಲ್ಲಿ ಧ್ಯಾನವು ಆಲೋಚನೆಯ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ಏಕಾಗ್ರತೆಯನ್ನೂ, ಜ್ಞಾಪಕ ಶಕ್ತಿಯನ್ನೂ ಉತ್ತಮಗೊಳಿಸಲು ಧ್ಯಾನವು ಸಮರ್ಥವಾದ ಮಾರ್ಗವೆಂಬುದು ಸಾಬೀತಾಗಿದೆ.
ಎಲ್ಲಕ್ಕಿಂತಲೂ ಮಿಗಿಲಾಗಿ, ಧ್ಯಾನವು ನಿಮ್ಮನ್ನು
ವಿಚಾರ ಮಾಡುವ ಮನಸ್ಸಿನಿಂದ ಬುದ್ಧಿಶಕ್ತಿಗೆ,
ಬುದ್ಧಿಯಿಂದ ಅಂತಃಸ್ಫೂರ್ತಿಯ ಮಟ್ಟಕ್ಕೆ
ಕೊಂಡೊಯ್ಯುತ್ತದೆ.
ಧ್ಯಾನದಿಂದ ಮನಸ್ಸನ್ನು ದಾಟಿ, ಅಸ್ತಿತ್ವದೊಳಗೆ ಹೋಗುವಿರಿ. ಅಸ್ತಿತ್ವದಲ್ಲಿ ಯಾವ ನಿಬಂಧನೆಗಳೂ ಇರುವುದಿಲ್ಲ. ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಸ್ವತಂತ್ರರಾಗುತ್ತೀರಿ. ಆದ ಕಾರಣವೇ, ಧ್ಯಾನದಿಂದ ನಿಮ್ಮ ಪರಿಸರದಲ್ಲಿ ಸುಲಭವಾಗಿ ವರ್ತಿಸುತ್ತೀರಿ ಹಾಗೂ ಹೊಸ ಸನ್ನಿವೇಶಗಳಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತೀರಿ. ನಿಮ್ಮ ಸ್ವಯಂಸ್ಫೂರ್ತಿಯನ್ನು ಪುನಃ ಕಂಡುಕೊಳ್ಳುತ್ತೀರಿ.
ಸ್ವಯಂ ಗುಣಕಾರಕ ಚಿಂತನೆಗಳು
ನಿಮಗೆ ವೈದ್ಯಕೀಯ ದೃಷ್ಟಿಯಿಂದ
ಯೋಗ್ಯವಾದ ದೇಹವಿರಬಹುದು, ಎಂದಮಾತ್ರಕ್ಕೆ
ನೀವು ಸಂಪೂರ್ಣ ಆರೋಗ್ಯವಂತರೆಂದು
ಹೇಳಲಾಗುವುದಿಲ್ಲ. ನನ್ನ ಅನುಭವದ ಪ್ರಕಾರ,
ನಾನು ನೋಡಿದ ಲಕ್ಷಾಂತರ ಜನರಲ್ಲಿ ಶೇಕಡಾ
ತೊಂಬತ್ತೊಂಬತ್ತರಷ್ಟು ಜನರು ತಮ್ಮಲ್ಲಿ 'ಸ್ವಯಂ
ಗುಣಕಾರದ ಸ್ಪಷ್ಟತೆ' ಇಲ್ಲದೆ ದೈಹಿಕ
ಆರೋಗ್ಯವನ್ನು ಸಹ ಉಳಿಸಿಕೊಳ್ಳಲಾರರು. ನಾನು
ಹೇಳುವ 'ಸ್ವಯಂ ಗುಣಕಾರಕ ಸ್ಪಷ್ಟತೆ' ಎಂದರೆ,
ಖಿನ್ನತೆಯು ನಿಮ್ಮ ಪ್ರಜ್ಞೆಯನ್ನು ಗಟ್ಟಿಯಾಗಿ
ಹಿಡಿಯಲು ಪ್ರಯತ್ನಿಸಿದಾಗಲೆಲ್ಲಾ, ಅದರಿಂದ
ಹೊರಬರಲು ಬೇಕಾಗಿರುವ ಸ್ಪಷ್ಟತೆ ಹಾಗೂ
ತಿಳಿವಳಿಕೆ.
ಕೇವಲ ಒಂದು ವರ್ಷದ ಹಿಂದೆ, ನಾನೊಂದು ಚಿಕ್ಕ ಸಂಶೋಧನೆ ಮಾಡಿದೆ. ಕೆಲವು ಧ್ಯಾನ ಕಾರ್ಯಕ್ರಮಗಳನ್ನು ಮಾಡಿದ ಹಾಗೂ ಸ್ವಲ್ಪ ಆಧ್ಯಾತ್ಮಿಕ ಅಧ್ಯಯನ ಮಾಡಿರುವವರ ಒಂದು ಗುಂಪನ್ನು ಆರಿಸಿಕೊಂಡೆ. ಇಪ್ಪತ್ತು ನಿಮಿಷಗಳ ಕಾಲ ಅವರ ಮನಸ್ಸಿನಲ್ಲಿ ಬಂದಿದ್ದೆಲ್ಲವನ್ನೂ, ಅಂತೆಯೇ, ಸರಿಪಡಿಸದೆಯೇ, ಬರೆಯಬೇಕೆಂದು ಅವರಿಗೆ ಹೇಳಿದೆ. ಅದೇ ಇಪ್ಪತ್ತು ನಿಮಿಷಗಳಲ್ಲಿ ಆಧ್ಯಾತ್ಮಿಕತೆಗೆ ತೆರೆದುಕೊಂಡಿಲ್ಲದ ಮತ್ತೊಂದು ಗುಂಪಿನವರನ್ನು ಸಹ ತಮ್ಮ ಮನಸ್ಸಿನಲ್ಲಿ ಬಂದಿದ್ದೆಲ್ಲವನ್ನೂ, ಅಂತೆಯೇ ಸರಿಪಡಿಸದೆಯೇ ಬರೆಯಬೇಕೆಂದು ಹೇಳಿದೆ. ನನ್ನ ಅಧ್ಯಯನದ ಫಲಿತಾಂಶವು ನನ್ನನ್ನು ದಿಗ್ಭ್ರಮೆಗೊಳಿಸಿತು.
ಆಧ್ಯಾತ್ಮಿಕತೆಗೆ ತೆರೆದುಕೊಳ್ಳದಿದ್ದವರ
ವಿಷಯದಲ್ಲಿ, ಅವರು ನೂರು ಆಲೋಚನೆಗಳನ್ನು
ಬರೆದಿದ್ದರೆ, ಅದರಲ್ಲಿ ಶೇಕಡಾ ಎಂಬತ್ತಕ್ಕಿಂತಲೂ
ಹೆಚ್ಚಾದುವು ಅವರನ್ನು ಖಿನ್ನತೆಗೆ ನಿರ್ದೇಶಿಸುವ
ಆಲೋಚನೆಗಳಾಗಿದ್ದವು. ಕೇವಲ ಇಪ್ಪತ್ತು
ಆಲೋಚನೆಗಳು ಸ್ವಯಂ ಗುಣಕಾರಕವಾದುವು
ಅಥವಾ ಖಿನ್ನತೆಯಿಂದ
ಹೊರತೆಗೆಯುವಂತಹದಾಗಿದ್ದವು. ಆದರೆ
ಆಧ್ಯಾತ್ಮಿಕತೆಗೂ, ಧ್ಯಾನಕ್ಕೂ ತೆರೆದುಕೊಂಡವರ
ವಿಷಯದಲ್ಲಿ, ಅವರ ಶೇಕಡಾ ಅರವತ್ತಕ್ಕೂ ಹೆಚ್ಚು
ಆಲೋಚನೆಗಳು ಸ್ವಯಂ ಗುಣಕಾರಕವಾಗಿದ್ದನ್ನು
ನಾನು ಕಂಡೆನು! ಶೇಕಡಾ ನಲವತ್ತರಷ್ಟು ಮಾತ್ರ
ಖಿನ್ನತೆಗೆ ಎಳೆಯುವಂತಹವುಗಳಾಗಿದ್ದವು. ಧ್ಯಾನದ
ಪ್ರಭಾವ ಇದು! ಅದು ನಿಮ್ಮನ್ನು ಸಮಗ್ರವಾಗಿ
ಆರೋಗ್ಯವಾಗಿಡುತ್ತದೆ.
ಖಿನ್ನತೆಯನ್ನು ಹೊಡೆದೋಡಿಸುವ ಶಾಸ್ತ್ರ-ಶಸ್ತ್ರಗಳು
ಸತ್ಯದ ಅರಿವನ್ನೇ ನಾನು ಶಾಸ್ತ್ರ ಶಸ್ತ್ರವೆಂದು ಕರೆಯುವುದು, ಶಾಸ್ತ್ರವೆಂದರೆ ಸತ್ಯ, ಜ್ಞಾನ.
ಶಸ್ತ್ರವೆಂದರೆ ಆಯುಧ. ಶಾಸ್ತ್ರ-ಶಸ್ತ್ರಗಳು ನಿಮ್ಮ ಅಸ್ತಿತ್ವದ ಖಿನ್ನತೆಯನ್ನು ನಾಶಪಡಿಸುವ ಸತ್ಯದ ಆಯುಧಗಳು. ನೀವು ಎಷ್ಟು ಹೆಚ್ಚು ಜ್ಞಾನದ ಆಯುಧಗಳನ್ನಿಟ್ಟುಕೊಂಡಿರುತ್ತೀರೋ, ಖಿನ್ನತೆಯು ನಿಮ್ಮನ್ನು ಕಂಡು ಅಷ್ಟು ಹೆಚ್ಚು ಭಯಪಡುತ್ತದೆ! ನಿಮ್ಮ ಬಳಿ ಒಂದು ದೊಡ್ಡ ಸೈನ್ಯವಿದ್ದರೆ ಸಹಜವಾಗಿಯೇ ನಿಮ್ಮ ಶತ್ರು ದೇಶವು ನಿಮ್ಮ ಮೇಲೆ ಆಕ್ರಮಣಮಾಡಲು ಹೆದರುತ್ತದೆ. ನೀವು ಶೇಖರಿಸಿಟ್ಟಿರುವ ಆಯುಧಗಳ ರಾಶಿಗಳನ್ನು ನೋಡಿದ ಮಾತ್ರಕ್ಕೇ ಪರದೇಶವು ನಿಮ್ಮನ್ನಾಕ್ರಮಿಸುವ ಯೋಜನೆಯನ್ನು ಪುನರ್ವಿಮರ್ಶಿಸುತ್ತದೆ. ಅದೇ ರೀತಿ, ಎಷ್ಟು ಹೆಚ್ಚು ಸ್ವಯಂ - ಗುಣಕಾರಕ ಆಲೋಚನೆಗಳನ್ನು, ಜ್ಞಾನಾಯುಧಗಳನ್ನು ನಿಮ್ಮ ಅಸ್ತಿತ್ವದಲ್ಲಿ ಕೂಡಿಡುತ್ತೀರೋ ಅಷ್ಟು ಹೆಚ್ಚು ಖಿನ್ನತೆಯು ನಿಮ್ಮ ಬಳಿ ಬರಲು ಹೆದರುತ್ತದೆ.
ಸ್ವಾತಂತ್ರ್ಯ
ಧ್ಯಾನದಿಂದ ನೀವು ನಿಮ್ಮ ಜೀವನವನ್ನು ಇನ್ನೂ ಉತ್ತಮ ರೀತಿಯಲ್ಲಿ ಜೀವಿಸಬಹುದು - ಹೆಚ್ಚು ಸ್ಪಷ್ಟತೆಯಿಂದ ಹಾಗೂ ಹೆಚ್ಚು ತೀವ್ರತೆಯಿಂದ. ನೀವು ಇನ್ನೂ ಹೆಚ್ಚು ಅರಿವುಳ್ಳವರೂ, ಸೃಜನಾತ್ಮಕರೂ ಆಗುವಿರಿ. ಆದರೂ ಅಂತರಂಗದಲ್ಲಿ ಒಂದು ಆಳವಾದ ಹಾಗೂ ಶಾಂತಿಯುತವಾದ ಮೌನವನ್ನು ಅನುಭವಿಸುವಿರಿ.
> ಶಾಸ್ತ್ರ-ಶಸ್ತ್ರಗಳು
> ಜೀವನದ
> ಖಿನ್ನತೆಯನ್ನು
> ನಾಶಪಡಿಸುವ ಸತ್ಯದ
> ಆಯುಧಗಳು.
ಇನ್ನು ನೀವು
ಮಾಡುತ್ತಿದ್ದೀರ ಎಂಬ ಭಾವನೆ ಇರುವುದಿಲ್ಲ.
ಬದಲಿಗೆ, ನೀವು ಕೇವಲ ಮಾಡುತ್ತಿರುವವನ
ಸಾಕ್ಷಿಯಾಗಿರುವಿರಿ. ಇದೇ ಇಡೀ ಧ್ಯಾನದ ಗುಟ್ಟು
- ವೀಕ್ಷಕರಾಗುವುದು, ನಿಮ್ಮ ಕಾರ್ಯಗಳಿಗೂ ಭಾವನೆಗಳಿಗೂ ಸಾಕ್ಷಿಯಾಗಿರುವುದು.
ಕ್ರಿಯಾಶೀಲವಾಗಿರುವುದಾಗಲೀ ಕೋಪಿಸಿ-
ಕೊಳ್ಳುವವರಾಗಲೀ ಆಘಾತಕ್ಕೊಳಗಾಗುವವರಾಗಲೀ
ಅಥವಾ ಖಿನ್ನತೆಗೊಳಗಾಗುವವರಾಗಲೀ, ನಿಜವಾದ
'ನೀವು' ಅಲ್ಲವೆಂದು, ಒಮ್ಮೆ ನಿಮಗೆ ಅರಿವಾದರೆ,
ಆಗ ನೀವು ಮಹತ್ತರವಾದ ಸ್ವಾತಂತ್ರ್ಯವನ್ನು
ಅನುಭವಿಸುತ್ತೀರಿ. ಇದು ಧ್ಯಾನದಿಂದ
ಸಂಭವಿಸುತ್ತದೆ. ಇದೇ ನಿಜವಾದ ಸ್ವಾತಂತ್ರ್ಯ.
ಜೀವನದುದ್ದಕ್ಕೂ ನಾವು ಸ್ವಾತಂತ್ರ್ಯವನ್ನು ಹುಡುಕುತ್ತೇವೆ. ಇದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆಯೋ, ಇಲ್ಲವೋ, ನಮ್ಮಲ್ಲಿ ಪ್ರತಿಯೊಬ್ಬರೂ ಸ್ವಾತಂತ್ರ್ಯವನ್ನೇ ಹುಡುಕುತ್ತಿರುವುದು. ನಮ್ಮ ಸ್ವಾತಂತ್ರ್ಯವು ಬೇರೆಯವರ ಮೇಲೆ ಆಧಾರವಾಗಿದೆ ಎಂದು ನಾವು ಅಂದುಕೊಳ್ಳುತ್ತೇವೆ. ನಿಮ್ಮ ಸ್ವಾತಂತ್ರ್ಯಕ್ಕೆ ಬೇರೆಯವರೂ ಯಾವ ರೀತಿಯಲ್ಲೂ ಸಂಬಂಧಿಸಿಲ್ಲವೆಂದು ಈಗ ನಿಮಗೆ ಅರಿವಾಗಿರುತ್ತದೆ.
> ಮೊಟ್ಟ-
> ಮೊದಲನೆಯದಾಗಿ,
> ಕಾರಣವೇ ಇಲ್ಲದೆ
> ಪ್ರೀತಿಸುವು-
> ದೆಂದರೇನೆಂಬುದು
> ಧ್ಯಾನದಿಂದ
> ತಿಳಿಯುತ್ತದೆ.
ಕಾರಣವೇ ಇಲ್ಲದ ಪ್ರೀತಿ ಮತ್ತು ಸಂತೋಷ
ಧ್ಯಾನದಿಂದ ಮೊಟ್ಟ ಮೊದಲನೆಯದಾಗಿ, ಕಾರಣವೇ ಇಲ್ಲದೆ ಪ್ರೀತಿಸುವುದು ಎಂದರೇಕೆ ಎಂಬುದನ್ನು ನೀವು ತಿಳಿಯುತ್ತೀರಿ. ಮೊಟ್ಟ ಮೊದಲ ಬಾರಿಗೆ ನೀವು ಯಾರಿಗಾದರೂ ಏನಾದರೂ ಕೊಡುವುದು, ಅವರಿಂದ ಏನನ್ನಾದರೂ ಪಡೆಯುವ ಸಲುವಾಗಿಯೇ ಇರುವುದಿಲ್ಲ. ನೀವು ಪ್ರೀತಿಯನ್ನು ಧಾರೆ ಎರೆಯುತ್ತೀರಿ, ಏಕೆಂದರೆ ನಿಮ್ಮಲ್ಲಿ ಕೊಡಲು ಅಪಾರವಾಗಿದೆ! ಮೋಡವು ಭೂಮಿಯ ಮೇಲೆ ಮಳೆಗರೆಯುವಂತೆ, ಅಥವಾ ಒಂದು ಹೂವು ತನ್ನ ಸುಗಂಧವನ್ನು ಸಹಜವಾಗಿಯೇ ಸುತ್ತಲೂ ಬೀರುವಂತೆ, ನೀವು ಪ್ರೀತಿಯನ್ನು ಪ್ರಪಂಚಕ್ಕೆ ಸುರಿಯುತ್ತೀರಿ. ನೀವು ಪ್ರೀತಿಯನ್ನು ಸುರಿಸುವುದೆೇಕೆಂದರೆ, ನೀವು ಸಂಪೂರ್ಣರಾಗಿದ್ದು, ಉಕ್ಕಿ ಹರಿಯುತ್ತಿರುತ್ತೀರಿ!
ಆಟದಂತೆ ಕೆಲಸ
ಕೇವಲ ಇದನ್ನು ಪ್ರಯತ್ನಿಸಿರಿ: ಏನೇ ಮಾಡಿದರೂ ಅರಿವಿನಿಂದ ಮಾಡಿರಿ. ತಿನ್ನುತ್ತಿದ್ದರೆ ಅರಿವಿನಿಂದ ತಿನ್ನಿರಿ. ಇದನ್ನು ಮಾಡಲು ಪ್ರತ್ಯೇಕವಾದ ಸಮಯ ಬೇಕಾಗಿಲ್ಲ. ನಿಜವಾಗಿ ನೋಡಿದರೆ, ತಿನ್ನಲು ಕಡಿಮೆ ಸಮಯವೇ ಸಾಕಾಗುತ್ತದೆ. ಏಕೆಂದರೆ, ಅರಿವಿನಿಂದ ತಿಂದಾಗ, ಗಂಟಲಲ್ಲಿ ಬರೀ ಊಟ ತುರುಕಿ ಕಂಠಪೂರ್ತಿ ಉಣ್ಣುವ ಬದಲಾಗಿ, ನಿಮ್ಮ ದೇಹಕ್ಕೆ ಎಷ್ಟು ಅವಶ್ಯಕವೋ ಅಷ್ಟನ್ನು ಮಾತ್ರ ನೀವು ತಿನ್ನುತ್ತೀರಿ.
ಅರಿವಿಗೆ ಪ್ರಚಂಡ ಜ್ಞಾನವಿದೆ. ಅರಿವು ನಿಮ್ಮ ಎಲ್ಲಾ ಯೋಜನೆಗಳಿಗಿಂತಲೂ ಮಿಗಿಲಾದ ಪವಾಡಗಳನ್ನು ಮಾಡಬಲ್ಲದು. ಅರಿವು ಯೋಜನೆಗಳನ್ನು ವಿರೋಧಿಸುವುದಿಲ್ಲ. ಅವುಗಳಿಗೆ ಪೂರಕವಾಗಿರುತ್ತದೆ. ಅರಿವು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ನೀವು ಅರಿವಿನಲ್ಲಿದ್ದಾಗ, ‘ನೀವು’ ಎಂಬುದಿರುವುದಿಲ್ಲ. ಅರಿವು ಇದ್ದಾಗ ನಿಮ್ಮ ಅಹಂಭಾವವು ಇರಲಾರದು. ನಿಮ್ಮ ಅಹಂಭಾವವು ಇದ್ದಾಗ, ಅರಿವು ಇರಲಾರದು. ‘ನಿಮ್ಮ ಇಲ್ಲದಿರುವಿಕೆ’ಯು ನಿಮ್ಮನ್ನು ಜೀವನ್ಮುಕ್ತನಾಗಿಸುತ್ತದೆ.
ನೀವು ಅರಿವಿನಿಂದಿದ್ದಾಗ, ಅತ್ಯುತ್ತಮವಾಗಿ ಕೆಲಸವನ್ನು ಮಾಡುತ್ತೀರಿ, ಅಲ್ಲದೆ ನಿಮ್ಮ ಚೈತನ್ಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸುತ್ತೀರಿ. ಹೀಗಾಗಿ, ದಿನದ ಕೊನೆಗೂ ಬೆಳಗ್ಗೆ ನೀವು ಎಷ್ಟು ಉತ್ಸಾಹದಿಂದಿದ್ದಿರೋ, ಅಷ್ಟೇ ಉಲ್ಲಾಸದಿಂದಿರುತ್ತೀರಿ. ನೋಡಿ, ನೀವು ಬಳಲುವುದು ಕೆಲಸದಿಂದಲ್ಲ; ನಿಮ್ಮ ಮನಸ್ಸಿನಿಂದ, ನಿಮ್ಮ ಮನೋವೃತ್ತಿಯಿಂದ. ಧ್ಯಾನದ ಲೀಲೆಯೆಲ್ಲವೂ, ಕಾರ್ಯಗತ ಮನಸ್ಸಿನಿಂದ ಹೊರಬಂದು, ಜೀವನದ ಪ್ರತಿಕ್ಷಣವನ್ನೂ ಸುಂದರವಾದ ದೈವಲೀಲೆಯಂತೆ ನೋಡುವುದೇ ಆಗಿದೆ.
ಧ್ಯಾನವನ್ನು ಯಾವಾಗ ಮಾಡಬೇಕು?
ಮುಂದಿನ ಪ್ರಶ್ನೆ, ಧ್ಯಾನವನ್ನು ಯಾವಾಗ
ಮಾಡಬೇಕೆಂಬುದು. ಇದು ಯಾವಾಗಲೂ
ವಿವಾದಾತ್ಮಕವಾದ ಪ್ರಶ್ನೆಯೇ! ಯುವಕರೆಲ್ಲರೂ
ಆಲೋಚಿಸುತ್ತಾರೆ, 'ನನ್ನ ಜೀವನವನ್ನೆಲ್ಲಾ
ಸಂತೃಪ್ತಿಯಿಂದ ಕಳೆದ ನಂತರ ಹಾಗೂ
ಮಾಡಲಿನ್ನೇನೂ ಇಲ್ಲದೇ ಹೋದಾಗ ನನ್ನ
ಮುದಿತನದಲ್ಲಿ ಇದನ್ನು ಮಾಡಬಲ್ಲೆ' ಎಂದು. ಎಲ್ಲಾ
ವಯಸ್ಸಾದವರು ಯೋಚಿಸುತ್ತಾರೆ, 'ನಾನು ಇದನ್ನು
ಚಿಕ್ಕವನಾಗಿದ್ದಾಗಲೇ, ಉಲ್ಲಾಸದಿಂದಲೂ,
ಶಕ್ತಿವಂತನಾಗಿಯೂ ಇದ್ದಾಗಲೇ
ಮಾಡಿರಬೇಕಾಗಿತ್ತು' ಎಂದು.
ಹೀಗಾಗಿ ಧ್ಯಾನವನ್ನು ಪ್ರತಿದಿನವೂ ಎಷ್ಟು ಕಾಲ ಮಾಡಬೇಕೆಂಬುದು ಮಾತ್ರವಲ್ಲ, ಧ್ಯಾನವನ್ನು ಪ್ರಾರಂಭಿಸುವ ತೀರ್ಮಾನವನ್ನು ಯಾವಾಗ ಮಾಡಬೇಕು ಎಂಬುದು ಪ್ರಶ್ನೆ. ದಯವಿಟ್ಟು ತಿಳಿದುಕೊಳ್ಳಿರಿ, ಧ್ಯಾನವು ಪ್ರತಿಯೊಬ್ಬ ವ್ಯಕ್ತಿಗೂ ಇರುವ ಮೂಲಭೂತ ಅವಶ್ಯಕತೆ. ಅದೊಂದು ಆಯ್ಕೆಯಲ್ಲ. ಅದು ಮೂಲಭೂತ ಅವಶ್ಯಕತೆ.
ಧ್ಯಾನದಿಂದಾಗುವ ಪ್ರಯೋಜನಗಳು
ಆರೋಗ್ಯ
ಧ್ಯಾನವು ಸಮಗ್ರ ಆರೋಗ್ಯವನ್ನು
ಫಲಿತಾಂಶವಾಗಿ ನೀಡುತ್ತದೆ. ಅದು ದೈಹಿಕ,
ಮಾನಸಿಕ ಹಾಗೂ ಭಾವನಾತ್ಮಕ ಸ್ತರಗಳಲ್ಲಿ ಒಳ್ಳೆಯ
ಆರೋಗ್ಯವನ್ನುಂಟುಮಾಡುತ್ತದೆ. ಧ್ಯಾನ ಮಾಡುವ
ಕೆಲವರ ನಿರ್ದಿಷ್ಟ ಆರೋಗ್ಯ ಪರಿಣಾಮಗಳು
ಹೀಗಿವೆ:
1. ಕಡಿಮೆ ಅಥವಾ ಅಧಿಕ ರಕ್ತದೊತ್ತಡ, ಸಕ್ಕರೆ
ಖಾಯಿಲೆ, ದೇಹದ ಶಾಖ ಮತ್ತು ಹೃದಯ
ಬಡಿತಗಳ ನಿಯಂತ್ರಣ.
2. ಮಾನಸ್ಸು, ಶರೀರದ ಮಿಡಿತಗಳ ಸಮತೋಲನ.
3. ಸ್ನಾಯುಗಳ ಉದ್ವೇಗದ ಇಳಿತ,
ಬಲಶಾಲಿಯಾದ ಮೂಳೆಗಳು, ಖಾಯಿಲೆಯ
ಸೋಂಕಿನಿಂದ ರಕ್ಷಣೆ.
4. ಶುದ್ಧೀಕರಣ - ದೇಹದ ವಿಷಗಳು ಮತ್ತು ದೇಹದ ಕಲ್ಮಶಗಳನ್ನು ಬೇಗನೆ ಹೊರಹಾಕುವುದು.
5. ನಿದ್ರೆಯಿಲ್ಲದ ರೋಗ ದೂರವಾಗುವುದು, ನಿದ್ರೆಯ ಗುಣಮಟ್ಟವನ್ನು ಉನ್ನತವಾಗಿಸುವುದು.
6. ಶಕ್ತಿವರ್ಧನೆ, ಕೆಲಸದ ಸಾಮರ್ಥ್ಯದ ಹೆಚ್ಚಳ.
7. ಆಯುರ್ವೃದ್ಧಿ, ಉತ್ತಮ ಜೀರ್ಣಶಕ್ತಿ,
ಮತ್ತು ದೀರ್ಘ ಜೀವಾವಧಿಯುಳ್ಳ ಜೀವಕಣಗಳ
ಹೊಂದುವಿಕೆ.
8. ಉತ್ತಮ ಆರೋಗ್ಯದ ದ್ರವಗಳ ಸ್ರಾವ
- ಸಹಜ ನಿರುತ್ಸಾಹ ತಡೆಯುವ ದ್ರವಗಳ ಸ್ರಾವದ ಹೆಚ್ಚಳ, ಎಂಡಾರ್ಫಿನ್ಸ್ - ದೇಹದ ಸಂತೋಷಕರ ದ್ರವಗಳ ಹೆಚ್ಚಳ.
9. ಸಂಬಂಧಗಳು - ಧ್ಯಾನವು ಅದಾಗಿಯೇ
ನಿಮ್ಮನ್ನು ನಿಮ್ಮೊಂದಿಗೂ, ಇತರರೊಂದಿಗೂ,
ಸಾಮರಸ್ಯದಿಂದಿಡುತ್ತದೆ. ಇದರ ನೇರವಾದ
ಫಲಿತಾಂಶವೆಂದರೆ ಕುಟುಂಬದವರೊಂದಿಗೂ,
ಸ್ನೇಹಿತರೊಂದಿಗೂ, ಅಲ್ಲದೆ ದಿನನಿತ್ಯದ
ಜೀವನದಲ್ಲಿ ಎದುರಾಗುವ ಪ್ರತಿಯೊಬ್ಬರೊಂದಿಗೂ
ಆಳವಾದ ಹೆಚ್ಚು ಅರ್ಥಗರ್ಭಿತವಾದ, ಪರಸ್ಪರ
ಸಂಬಂಧ.
10. ಬುದ್ಧಿಶಕ್ತಿ - ದಕ್ಷತೆಯಿಂದ ಕಾರ್ಯನಿರ್ವಹಿಸಲು ಬುದ್ಧಿಶಕ್ತಿಯ ಅವಶ್ಯಕತೆ ಇದೆ. ಧ್ಯಾನವು ನಿಮ್ಮ ಹುಟ್ಟಿನಿಂದಲೇ ಬಂದ ಬುದ್ಧಿಶಕ್ತಿಯನ್ನು ಉದ್ದೀಪನಗೊಳಿಸಿ ಹೆಚ್ಚು ಅರಿವುಳ್ಳವರನ್ನಾಗಿಯೂ, ಚುರುಕಾಗಿರುವಂತೆಯೂ ಮಾಡುತ್ತದೆ. ಇದರ ಸಹಜ ಪರಿಣಾಮವೆಂದರೆ, ಏನೇ ಮಾಡಿದರೂ, ಉತ್ತಮವಾದ, ದಕ್ಷತೆಯ ಮತ್ತು ಅಪ್ರಯತ್ನವಾದ ಕಾರ್ಯಸಾಧನೆ.
11. ಸೃಜನ ಶೀಲತೆ - ನಿಮ್ಮಲ್ಲಿ ಪ್ರತಿಯೊಬ್ಬರೂ ಸುಪ್ತವಾದ ಪ್ರತಿಭೆಯ ಹಾಗೂ ಸಾಮರ್ಥ್ಯದ ಖಜಾನೆಯನ್ನು ಇಟ್ಟುಕೊಂಡಿದ್ದೀರಿ. ಧ್ಯಾನವು ನಿಮ್ಮ ಪ್ರತಿಭೆಗಳನ್ನೂ ಸುಪ್ತ ಸೃಜನಶೀಲತೆಯನ್ನೂ ಹೊರಗೆ ತಂದು, ಅವುಗಳನ್ನು ಪೂರೈಸಲು ಸಹಾಯಮಾಡುತ್ತದೆ.
12. ವಿಶ್ವಾಸಾರ್ಹತೆ - ಧ್ಯಾನವು ನೀವು
ನಿಜವಾಗಿಯೂ ಯಾರು ಎಂಬುದನ್ನು ನಿಮ್ಮ ಅರಿವಿಗೆ
ತಂದು ನಿಮ್ಮ ಅನನ್ಯತೆಯನ್ನು ಅರಿತುಕೊಳ್ಳುವಂತೆ
ಮಾಡುತ್ತದೆ. ಆತ್ಮವಿಶ್ವಾಸವು ಸಹಜವಾಗಿಯೇ
ಒಂದು ಉಪಫಲವಾಗಿ ಲಭಿಸುತ್ತದೆ.
13. ಸಮತೋಲನ-ನೀವೆಲ್ಲರೂ ರೋಲರ್ ಕೋಸ್ಟರ್ ರೈಡ್ ಎಂದರೆ, ಏಳು ಬೀಳಿನ ರೈಲಿನಲ್ಲಿರುವಂತೆ ಜೀವಿಸುತ್ತೀರಿ. ನೀವು ಹಿಡಿತವೇ ಇಲ್ಲದ ಚಿಂತೆ, ಅಸೂಯೆ, ಅತೃಪ್ತಿ, ಭಯ, ಕೋಪ, ತಪ್ಪಿತಸ್ಥತೆ, ಮುಂತಾದ ಭಾವನೆಗಳ ಹೊಯ್ದಾಟದಲ್ಲಿ ಸಿಲುಕಿದ್ದೀರಿ. ಧ್ಯಾನವು ನಿಮ್ಮಲ್ಲೇ ನೀವು ಕೇಂದ್ರೀಕೃತರಾಗಿ, ಭದ್ರವಾದ ಆಂತರ್ಯದ ಸಮತೋಲತೆಯನ್ನುಂಟುಮಾಡಿ, ಆ ಮೂಲಕ ನಿಮ್ಮ ಮೇಲಿನ ಪ್ರಭುತ್ವವನ್ನು ನೀವೇ ಹೊಂದುವಂತೆ ಮಾಡುತ್ತದೆ.
14. ವಿಶ್ರಾಂತಿ, ಶಾಂತಿ, ಆನಂದ - ನೀವು
ಜೀವನ ಪರ್ಯಂತವೂ ಪ್ರಯತ್ನಿಸುವುದು ಒಂದು
ವಿಷಯಕ್ಕಾಗಿ, ಅದು ಧ್ಯಾನದ ಸಹಜ ಉಪಫಲವಾದ
ಆಂತರಿಕ ವಿಶ್ರಾಂತಿ ಮತ್ತು ಶಾಂತಿಯನ್ನು
ಪಡೆಯುವುದು. ಧ್ಯಾನದಿಂದ ಸಹಜವಾಗಿ ನೀವು
ಭಯ, ದುರಾಸೆ ಮತ್ತು ಒತ್ತಡಗಳ ದುಷ್ಟ
ವರ್ತುಲದಿಂದ ಹೊರಬಂದು, ಆನಂದದ
ವರ್ತುಲವನ್ನು ಪ್ರವೇಶಿಸುವುದು.
15. ಸಮಗ್ರ ಆಧ್ಯಾತ್ಮಿಕ ಬೆಳವಣಿಗೆ - ಬುದ್ಧಿಮತ್ತೆಯನ್ನು ಅಳತೆಮಾಡಲು ನಿಗದಿತ ಪರೀಕ್ಷೆಗಳಿಂದ ಅಳತೆಮಾಡುವ IQ ಅಥವಾ ಇಂಟೆಲಿಜೆನ್ಸ್ ಕೋಷೆಂಟ್ (ಬುದ್ಧಿಮತ್ತೆಯ ಅಂಕ) ಎನ್ನುವುದಿದೆ. ಇತ್ತೀಚೆಗೆ, EQ ಎಂದರೆ ಎಮೋಷನಲ್ ಕೋಷೆಂಟ್ (ಭಾವನಾ ಅಂಕ) ಎಂಬ ಮತ್ತೊಂದು ಅಳತೆಯು ಪ್ರಾಮುಖ್ಯತೆಯನ್ನು ಗಳಿಸುತ್ತಿದೆ. ಹೇಗಾದರೂ, ದಿನದ ಕೊನೆಯಲ್ಲಿ ಆಂತರಿಕ ತೃಪ್ತಿ ಮತ್ತು ಸಫಲತೆಯನ್ನು ಗಳಿಸುವುದೇ ಜೀವನದ ಅತ್ಯಂತ ಮುಖ್ಯವಾದ ಅಂಶ. ಧ್ಯಾನವು ಜೀವನದ ಅತಿಮುಖ್ಯ ಅಂಶವಾದ SQ ಅಥವಾ ಸ್ಪಿರಿಚ್ಯುಯಲ್ ಕೋಷಂಟನ್ನು ವೃದ್ಧಿಸುವುದಲ್ಲದೇ, IQ ಮತ್ತು EQ ಗಳನ್ನು ವೃದ್ಧಿಸುತ್ತದೆ.
16. ಜೀವನ – ಈಗ ನಮ್ಮ ಮನಸ್ಸಿನ ಕಾರ್ಯವಿಧಾನವು ಗಡುಸಾದುದು ಮತ್ತು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಇದರಿಂದಾಗಿ, ನಮ್ಮ ಮನಸ್ಸಿನಲ್ಲಿ ಹೊತ್ತಿರುವ ಈ ಆತ್ಮಚಿತ್ರಣದಿಂದ ಜೀವನದಲ್ಲಿ ಬಹಳ ತೊಂದರೆಗಳನ್ನು ಎದುರಿಸುತ್ತೇವೆ ಹಾಗೂ ಜೀವನವನ್ನು ಸಂಪೂರ್ಣವಾಗಿ ಸವಿಯಲು ಸಾಧ್ಯವಾಗುತ್ತಿಲ್ಲ. ಧ್ಯಾನವು ಸುಲಭವಾಗಿ ಮನಸ್ಸಿನ ‘ಸಾಫ್ಟ್ವೇರನ್ನು ರಿ ಪ್ರೋಗ್ರಾಂ’ (ನಿಯಂತ್ರಣಾ ಸೂಚನೆಗಳ ಪುನರ್ಯೋಜನೆ) ಮಾಡಿ ಜೀವನವನ್ನು ಸಂಪೂರ್ಣವಾಗಿ ಜೀವಿಸುವಂತೆ ಮಾಡುತ್ತದೆ.
17. ಅಂತಿಮ ಸಾಮರ್ಥ್ಯ – ನೀವು ಹಾರುವ ಸಾಮರ್ಥ್ಯವಿರುವ ಒಂದು ವಿಮಾನದಂತಿರುವಿರಿ. ಆದರೆ ನೀವು ಒಂದು ಎತ್ತಿನ ಬಂಡಿ ಎಂದು ಕೊಳ್ಳುವಿರಿ. ಏಕೆಂದರೆ ನಿಮ್ಮ ಸಾಮರ್ಥ್ಯವನ್ನು ನೀವು ವಾಸ್ತವೀಕರಿಸಿಲ್ಲ. ಧ್ಯಾನವು, ನೀವು ನಿಜವಾಗಿಯೂ ಯಾರು ಎಂಬುದನ್ನೂ, ಜನ್ಮತಃ ಪಡೆದು ಬಂದಿರುವ ನಿಮ್ಮ ಅಗಾಧವಾದ ಸಾಮರ್ಥ್ಯಗಳನ್ನೂ, ಅರಿತುಕೊಳ್ಳುವಂತೆಯೂ, ಅನುಭವಿಸುವಂತೆಯೂ, ಮಾಡುತ್ತದೆ.
ಧ್ಯಾನದ ವಿಧಗಳು
ಧ್ಯಾನದಲ್ಲಿ ಮೂರು ಬಗೆಗಳಿವೆ:
ಮೊದಲನೆಯದು, ನಿಮ್ಮ ಜೀವನದೊಳಗೆ ಸತ್ಯವನ್ನು ಅಥವಾ ಅರಿವನ್ನು ತಂದುಕೊಳ್ಳುವುದು.
ಈ ಧ್ಯಾನವು ದಿನದ ಇಪ್ಪತ್ತನಾಲ್ಕು ಗಂಟೆಗಳೂ
ಮಾಡಬಹುದಾದಂತಹದು. ವಿಪಾಸ್ಯನದಂತಹ
ಉಸಿರಾಟಕ್ಕೆ ಸಂಬಂಧಿಸಿದ ತಂತ್ರ ಅಥವಾ
ಸದಾಕಾಲವೂ ಅರಿವನ್ನು ವರ್ತಮಾನ ಕ್ಷಣಕ್ಕೆ
ತಂದುಕೊಳ್ಳುವಂತಹ ತಂತ್ರಗಳು ಈ ವರ್ಗಕ್ಕೆ
ಸೇರಿದುವು. ಅದು ನಿಮ್ಮ ದಿನಚರಿಯ ಭಾಗವಲ್ಲ;
ಅದು ನಿಮ್ಮ ದಿನಚರಿಯ ಗುಣವೇ ಆಗಿಬಿಡಬೇಕು.
ನೀವು ಏನೇ ಕೆಲಸವನ್ನು ಮಾಡುತ್ತಿರಬಹುದು,
ಬರೆಯುವುದು, ಓದುವುದು, ಅಡಿಗೆಮಾಡುವುದು,
ವಿಚಾರಮಾಡುತ್ತಿರುವುದು ಮುಂತಾದುವು – ಆದರೆ,
ಈ ಧ್ಯಾನದ ಎಳೆಯೂ ಜೊತೆ ಜೊತೆಗೆ
ಗುಪ್ತವಾಹಿನಿಯಂತೆ ನಡೆಯುತ್ತಲೇ ಇರಬೇಕು.
ಎರಡನೆಯ ರೀತಿಯ ಧ್ಯಾನದಲ್ಲಿ, ನೀವು ಒಂದು
ನಿರ್ದಿಷ್ಟವಾದ ಕಾಲದಲ್ಲಿ, ಎಂದರೆ ಬೆಳಗಿನ ಒಂದು
ಗಂಟೆ ಅಥವಾ ಸಂಜೆ ಒಂದು ಗಂಟೆ ಅಥವಾ ಬೇರೆ
ಯಾವುದೇ ಅನುಕೂಲಕರವಾದ ವೇಳೆಯಲ್ಲಿ
ಧ್ಯಾನಕ್ಕಾಗಿ ಕಾಲವನ್ನು ಮೀಸಲಿಡುವ ಅಗತ್ಯವಿದೆ.
ಈ ವರ್ಗದ ಧ್ಯಾನಕ್ಕೆ, ಕೆಲವು ನಿಮಿಷಗಳು
‘ಮ್’ಕಾರಮಾಡಿ, ನಂತರ ಕೆಲ ನಿಮಿಷಗಳಕಾಲ
ಸಾಕ್ಷೀಭಾವದಲ್ಲಿರುವಂತಹ ‘ಮಹಾಮಂತ್ರ’ ಧ್ಯಾನ
ತಂತ್ರ ಒಂದು ಉದಾಹರಣೆ! ನಿತ್ಯಧ್ಯಾನವು ಇಂತಹ
ಧ್ಯಾನಕ್ಕೆ ಮತ್ತೊಂದು ಉದಾಹರಣೆಯಾಗುತ್ತದೆ.
ಏಕೆಂದರೆ ಇದನ್ನು ಪ್ರತಿದಿನವೂ ಒಂದು
ನಿರ್ದಿಷ್ಟವಾದ ಅವಧಿಯಲ್ಲಿ ಮಾಡಬೇಕು.
ನಂತರ ಮೂರನೆಯ ರೀತಿಯ ಧ್ಯಾನತಂತ್ರದಲ್ಲಿ ಕೇವಲ ಆ ತಂತ್ರದ ನೆನೆಪೇ ಸಾಕು.
ಇದಕ್ಕೆ ಉದಾಹರಣೆಗಳೆಂದರೆ ಕಾಲಾತೀತವಾದ
ಪರಮ ಸತ್ಯಗಳ ಸಿದ್ದಾಂತಗಳು. ನೀವು ಚೆನ್ನಾಗಿ
ಪಕ್ವವಾದ ಸ್ಥಿತಿಯಲ್ಲಿದ್ದಾಗ ಯಾವುದೇ ಪ್ರತ್ಯೇಕ
ತಂತ್ರವು ಬೇಕಾಗುವುದಿಲ್ಲ. ದಿನವಿಡೀ ಆಗಲೀ,
ನಿಯತ ಕಾಲದಲ್ಲಾಗಲೀ ಅಭ್ಯಾಸ
ಮಾಡಬೇಕಾದುದಿಲ್ಲ. ಈ ಸತ್ಯಗಳ ನೆನಪೇ ನಿಮ್ಮನ್ನು
ಉನ್ನತವಾದ ಸ್ಥಿತಿಗೆ ಒಯ್ಯುತ್ತದೆ. ಇದು ಮೂರನೆಯ
ರೀತಿಯ ಧ್ಯಾನ. ಇದರ ಉದಾಹರಣೆಗಳೇ
ಸೊಗಸಾದ ಝೆನ್ ‘ಕೋನ್’ಗಳು. ಅವು
ಸಂಕ್ಷಿಪ್ತವಾಗಿ ಬರೆದ ಗಹನವಾದ ಸತ್ಯಗಳು. ಕೇವಲ
ಅವುಗಳ ನೆನಪೇ ನಿಮ್ಮನ್ನು ಸತ್ಯದ ವಲಯಕ್ಕೆ
ಕೊಂಡೊಯ್ಯುತ್ತದೆ!
ಉಪನಿಷತ್ತಿನ ಒಂದು ಸುಂದರವಾದ ಕಥೆಯಲ್ಲಿ, ಒಬ್ಬ ಶಿಷ್ಯನು ಗುರುಗಳ ಬಳಿಗೆ ಬಂದು ಸಾಕ್ಷಾತ್ಕಾರಕ್ಕೆ ಒಂದು ತಂತ್ರ ಅಥವಾ ರೀತಿಯನ್ನು ಅನುಗ್ರಹಿಸಬೇಕೆಂದು ಕೇಳಿಕೊಳ್ಳುವ ಸೊಗಸಾದ ಕಥೆ. ಗುರುಗಳು ಕೇವಲ, ‘ತತ್ ತ್ವಂ ಅಸಿ, ತತ್ ತ್ವಂ ಅಸಿ, ತತ್ ತ್ವಂ ಅಸಿ’, ಎಂದು ಹೇಳುತ್ತಾರೆ. ‘ನೀನು ಅದೇ ಆಗಿದ್ದೀಯೇ, ನೀನು ಅದೇ ಆಗಿದ್ದೀಯೇ, ನೀನು ಅದೇ ಆಗಿದ್ದೀಯೇ’, ಎಂದು ಹೇಳುತ್ತಾರೆ. ಕಥೆಯು ಹೇಳುತ್ತದೆ, ಶಿಷ್ಯನು ಜೀವನ್ಮುಕ್ತಿಯನ್ನು ಪಡೆದನು!
ಇದು ಒಂದು ವಿಚಿತ್ರವಾದ ಕಥೆ ಎಂದೆನಿಸುತ್ತದೆ.
ಗುರುಗಳು ಕೇವಲ ಕೆಲವು ಪದಗಳನ್ನು
ಪುನರುಚ್ಚರಿಸುತ್ತಾರೆ. ಶಿಷ್ಯನು ತಕ್ಷಣವೇ
ಜೀವನ್ಮುಕ್ತಿಯನ್ನು ಪಡೆಯುತ್ತಾನೆ. ಅದು ಹೇಗೆ
ಸಾಧ್ಯ? ಅದು ನಂಬಲಾಗುವುದಿಲ್ಲ!
ವಾಸ್ತವವಾಗಿಯೂ ಅದು ಹಾಗಲ್ಲ. ನಾವು ಮೊದಲ
ಎರಡು ರೀತಿಯ ತಂತ್ರಗಳನ್ನು ಎಂದರೆ ದಿನವಿಡೀ
ಮಾಡಬೇಕಾದ ತಂತ್ರವನ್ನೂ, ಒಂದು
ನಿಯತಕಾಲದಲ್ಲಿ ಮಾಡಬೇಕಾದ ತಂತ್ರವನ್ನೂ
ಮಾಡಿದ್ದರೆ, ಆಗ ಆ ಸಾಧನೆಯಿಂದ ಉಂಟಾದ
ಪಕ್ವತೆಯ ಪರಿಣಾಮವಾಗಿ, ಗುರುಗಳಿಂದ ಸತ್ಯವನ್ನು
ಕೇಳಿದಾಕ್ಷಣವೇ ಅದನ್ನು ಅನುಭವಿಸುವ
ಅನುಭವಿಸುವಂತಾಗುತ್ತದೆ.
ನಿಜಸ್ಥಿತಿಯು ಕನಸಿನಂತೆ
ನೀವು ಆಶ್ಚರ್ಯಪಡಬಹುದು, ‘ಅದು ಹೇಗೆ ಪ್ರತಿದಿನವೂ ನಾನು ಪುನಃ ಎಚ್ಚರದ ಸ್ಥಿತಿಗೆ ಬಂದಾಗ, ನನಗೆ ಅದೇ ಪ್ರಪಂಚವು ಗೋಚರಿಸುತ್ತದೆ. ಆದರೆ ಪ್ರತಿರಾತ್ರಿಯೂ, ಕನಸಿನ ಲೋಕಕ್ಕೆ ಹೋದಾಗ ಅದೇ ಪ್ರಪಂಚವನ್ನು ನೋಡುವುದಿಲ್ಲವಲ್ಲಾ? ಹಾಗಾದರೆ ಇದನ್ನು ಒಂದು ಮಾಪನವಾಗಿ ಉಪಯೋಗಿಸಬಹುದೆ? ಇದರಿಂದ ಈ ಪ್ರಪಂಚದ ಎಚ್ಚರದ ಸ್ಥಿತಿಯನ್ನು ನಿಜವೆನ್ನಬಹುದೆ?’ ಎಂದು.
ಒಂದು ರಾತ್ರಿಯ ಕನಸನ್ನು ವಿಮರ್ಶಿಸೋಣ:
ಉದಾಹರಣೆಗೆ, ಹದಿನಾಲ್ಕನೆಯ ತಾರೀಖಿನ ರಾತ್ರಿ
ನೀವು ನಿದ್ದೆ ಹೋಗುತ್ತೀರಿ, ಎಂದಿಟ್ಟುಕೊಳ್ಳೋಣ.
ನೀವು ಹತ್ತು ಗಂಟೆಗಳ ಕಾಲ ಮಲಗಿದ್ದು,
ಹದಿನೈದರಂದು ಬೆಳಗ್ಗೆ ಎದ್ದಿರಿ
ಎಂದಿಟ್ಟುಕೊಳ್ಳೋಣ. ನಿಮ್ಮಲ್ಲಿ ಎಷ್ಟೋ ಜನ
ಹತ್ತು ಗಂಟೆಗಳ ಕಾಲಾವಧಿಯಲ್ಲಿ, ನಿಮ್ಮ ಜೀವನದ
ಹತ್ತೋ ಇಪ್ಪತ್ತೋ ವರ್ಷಗಳ ಜೀವನವನ್ನು ಕಳೆದ
ಅನುಭವವನ್ನು ಖಂಡಿತವಾಗಿ ಪಡೆದಿರುವಿರಿ.
ಕನಸು ಬಹುಶಃ ನಿಮ್ಮ ಕಾಲೇಜಿನ ದಿನಗಳಿಂದ ಪ್ರಾರಂಭವಾಗಿ ಹಂತ ಹಂತವಾಗಿ, ನಿಮ್ಮ ಮದುವೆ, ಮಗನು ಹುಟ್ಟಿದುದು, ಮಗನ ಮದುವೆ, ಮುಂತಾದುವೆಲ್ಲಾ ನಿಧಾನವಾಗಿ ಸಾಗುತ್ತವೆ. ಈ ರೀತಿಯಲ್ಲಿ ನಿಮ್ಮ ಒಂದು ರಾತ್ರಿಯ ಕನಸಿನಲ್ಲಿ ನಿಮ್ಮ ಇಪ್ಪತ್ತು ವರ್ಷಗಳ ಜೀವನವನ್ನು ನಡೆಸಿರುತ್ತೀರಿ. ನಾನು ಹೇಳುವುದು ಸರಿಯೇ? ನೀವಿದನ್ನು ಒಮ್ಮೆಯಾದರೂ ಅನುಭವಿಸಿದ್ದರೆ, ನಾನೀಗ ಹೇಳ ಹೋಗುವುದನ್ನು ಬಹಳ ಸರಿಯಾಗಿ ತಿಳಿದುಕೊಳ್ಳುವಿರಿ.
ನೋಡಿ, ನಿದ್ರಿಸುವಾಗ, ನಾವು ಕನಸಿನ ಸ್ಥಿತಿ ಹಾಗೂ ಗಾಢ ನಿದ್ರಾಸ್ಥಿತಿಗಳಿಗೆ ಹೋಗುತ್ತೇವೆ. ಸುಮಾರು ಅರ್ಧಗಂಟೆ ಕಾಲ ಗಾಢ ನಿದ್ರಾಸ್ಥಿತಿಯಲ್ಲಿರುತ್ತೇವೆ. ನಂತರ ಕನಸಿನ ಸ್ಥಿತಿಗೆ ಹೋಗಿ ಕೆಲವು ಕನಸುಗಳನ್ನು ಕಾಣುತ್ತೇವೆ. ಪುನಃ ಗಾಢ ನಿದ್ರಾಸ್ಥಿತಿಯಲ್ಲಿ ಸುಮಾರು ಇಪ್ಪತ್ತು ನಿಮಿಷಗಳಿರುತ್ತೇವೆ. ನಂತರ ಮತ್ತೊಮ್ಮೆ ಕನಸಿನ ಸ್ಥಿತಿಗೆ ಬರುತ್ತೇವೆ. ಈ ರೀತಿ, ನೀವು ಕನಸಿನ
ಸ್ಥಿತಿಯಿಂದ ಗಾಢನಿದ್ರಾಸ್ಥಿತಿಗೂ, ಹಿಂದಕ್ಕೂ ಬರುತ್ತಿರುತ್ತೀರಿ.
ತಿಳಿಯಿರಿ, ಒಂದು ರಾತ್ರಿಯಲ್ಲಿ ನೀವು ನಿಮ್ಮ ಜೀವನದ ಇಪ್ಪತ್ತು ವರ್ಷಗಳನ್ನು ಕಳೆದಂತೆ ಕನಸುಕಾಣುತ್ತೀರಿ. ನಿಮ್ಮ ಕನಸಿನ ಮೊದಲ ಪ್ರಸಂಗದಲ್ಲಿ ಕಾಲೇಜಿನಲ್ಲಿರುತ್ತೀರಿ. ಸ್ವಲ್ಪಕಾಲ ಗಾಢನಿದ್ರೆಯಲ್ಲಿದ್ದ ನಂತರ, ಕನಸಿನ ಸ್ಥಿತಿಗೆ ಬಂದಾಗ ಎರಡನೆಯ ಪ್ರಸಂಗದಲ್ಲಿ, ನಿಮಗೆ ಮದುವೆಯಾಗುತ್ತದೆ. ಕನಸಿನ ಮೂರನೆಯ ಪ್ರಸಂಗದಲ್ಲಿ ನಿಮಗೊಬ್ಬ ಮಗನಾಗಿರುತ್ತಾನೆ. ಬಹುಶಃ ನಿಮ್ಮ ನಾಲ್ಕನೆಯ ಪ್ರಸಂಗದಲ್ಲಿ ಮಗನ ಮದುವೆಯನ್ನು ನೋಡುತ್ತೀರಿ.
ನೀವು ತಿಳಿದುಕೊಳ್ಳಬೇಕಾದ ಒಂದು ಮುಖ್ಯವಾದ ವಿಷಯ: ನೀವು ಗಾಢ ನಿದ್ರಾಸ್ಥಿತಿಗೆ ಹೋದಾಗ ಮತ್ತು ಕನಸಿನ ಸ್ಥಿತಿಗೆ ಹಿಂದಿರುಗಿದಾಗ ಮತ್ತು ಈ ಪ್ರಕ್ರಿಯೆಯನ್ನು ಪದೇ ಪದೇ ಮಾಡಿದಾಗ, ಈ ವಿವಿಧ ಪ್ರಸಂಗಗಳಲ್ಲಿ, ಕನಸಿನಲ್ಲಿಯೂ ಅದೇ ಪ್ರಪಂಚವನ್ನೇ ನೋಡುತ್ತೀರಿ. ನಾನು ಹೇಳಿದ್ದು ಸರಿ, ಅಲ್ಲವೆ?
ತಿಳಿಯಿರಿ, ಇದೊಂದು ಸೂಕ್ಷ್ಮವಾದ ವಿಷಯ.
ಬಹಳ ಸೂಕ್ಷ್ಮವಾದ ತಿಳಿವಳಿಕೆ. ನಿಮಗೆ ಇದನ್ನು
ಗ್ರಹಿಸಲಾದರೆ, ಅದು ನಿಮ್ಮನ್ನು ಉನ್ನತವಾದ
ಸ್ಪಷ್ಟತೆಗೆ ಒಯ್ಯಬಲ್ಲದು. ಆ ಸ್ಪಷ್ಟತೆಯಿಂದ,
ನಿಮ್ಮಲ್ಲಿ ನಿಮ್ಮ ಜೀವನದ ಬಗ್ಗೆ ಇರುವ
ತಿಳಿವಳಿಕೆಯು ಸಂಪೂರ್ಣವಾಗಿ ಬದಲಾಗುವುದು.
ಜೀವನದ ಸಮಸ್ಯೆಗಳನ್ನು ಯಾವ ರೀತಿ
ಪರಿಹರಿಸಿಕೊಳ್ಳಬಹುದು ಎಂಬುದರ ಬಹಳ
ಹೆಚ್ಚಾದ ಸ್ಪಷ್ಟತೆಗೆ ಕೊಂಡೊಯ್ಯುತ್ತದೆ.
ಒಬ್ಬಾತನು ಕನಸುಕಾಣುತ್ತಿದ್ದಾನೆ ಎಂದು ಕಲ್ಪಿಸಿಕೊಳ್ಳಿರಿ. ಕನಸಿನಲ್ಲಿ ಒಂದು ಹುಲಿ ಅಟ್ಟಿಸಿಕೊಂಡು ಬರುತ್ತಿರುವುದನ್ನು ನೋಡುತ್ತಾನೆ ಮತ್ತು ಕೂಗಿಕೊಳ್ಳಲಾರಂಭಿಸುತ್ತಾನೆ, 'ಓ, ಒಂದು ಹುಲಿ ನನ್ನನ್ನಟ್ಟಿಸಿ ಕೊಂಡು ಬರುತ್ತಿದೆ! ಕಾಪಾಡಿ, ಕಾಪಾಡಿ!' ಎಂದು. ಆತನ ಹೆಂಡತಿಯು ಪಕ್ಕದಲ್ಲಿ ನಿದ್ರಿಸುತ್ತಿರುತ್ತಾಳೆ, ಆಕೆಗೆ ಎಚ್ಚರವಾಗಿ, ಗಂಡನು ಕೂಗಿಕೊಳ್ಳುತ್ತಿರುವುದನ್ನು ಕೇಳುತ್ತಾಳೆ! ಆಕೆಗೆ 'ನಾನೀಗೇನು ಮಾಡಬೇಕು' ಎಂದು ತಳಮಳವಾಗುತ್ತದೆ. ಆಕೆಯು ಬರೀ 'ಎದ್ದೇಳು!' ಎಂದು ಹೇಳಬೇಕು ಅಷ್ಟೆ. ಅದರ ಬದಲಿಗೆ, ಆ ಕನಸಿನ ಹುಲಿಯನ್ನು ಕೊಲ್ಲಲು ಯಾವುದಾದರೂ ಆಯುಧವನ್ನು ಅವನ ಕೈಗೆ ಕೊಟ್ಟರೆ ಏನಾಗುತ್ತದೆ? ಆತನು ತನ್ನನ್ನೇ ಕೊಂದುಕೊಳ್ಳಬಹುದು ಅಥವಾ ಆಕೆಯನ್ನು ಕೊಲ್ಲಲೂಬಹುದು! ಆಕೆಯು ಬೇರೆ ಯಾವುದೇ ಉಪಾಯವನ್ನು ಮಾಡಿದರೂ ಅದು ಇನ್ನೂ ದೊಡ್ಡ ಸಮಸ್ಯೆಗಳಿಗೂ ಕಷ್ಟಗಳಿಗೂ ಕಾರಣವಾಗುತ್ತದೆ. ಗಂಡನು ಮಾಡಬೇಕಾದುದು ಏನೆಂದರೆ, ಎಚ್ಚರಗೊಳ್ಳುವುದು, ಅಷ್ಟೆ.
ಈ ಮೂಲಭೂತವಾದ ವಿಷಯಗಳನ್ನು
ತಿಳಿದುಕೊಂಡರೆ, ಕೂಡಲೇ ನೀವು ತೀರ್ಮಾನಿಸುವ
ರೀತಿಯೇ ಬದಲಾಗಿ ಹೋಗುತ್ತದೆ. ನಿಮ್ಮಲ್ಲಿ ಒಂದು
ಸ್ಥಿತ್ಯಂತರವಾಗಿಬಿಡುತ್ತದೆ. ನೀವು ಆಲೋಚಿಸುವ
ರೀತಿ, ನೀವು ತೀರ್ಮಾನಿಸುವ ರೀತಿ, ನಿಮ್ಮ
ಸಮಸ್ಯೆಗಳಿಗೆ ಹುಡುಕುವ ಪರಿಹಾರಗಳು, ಎಲ್ಲವೂ
ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಸರಿಯಾದ
ಪರಿಣಾಮಗಳಿಗಾಗಿ ಕಾರ್ಯನಿರ್ವಹಣೆ ಮಾಡಲು
ಪ್ರಾರಂಭಿಸುತ್ತೀರಿ.
ಕನಸು ಕಾಣುತ್ತಿರುವಾಗ, ಹತ್ತು ಗಂಟೆಗಳ ಅವಧಿಯಲ್ಲಿ ನೀವು ಆರಾಮವಾಗಿ ಇಪ್ಪತ್ತು ವರ್ಷಗಳು ಜೀವಿಸುವಿರಿ. ಎಷ್ಟೋಬಾರಿ ಗಾಢ ನಿದ್ರೆಗೆ ಹೋಗುತ್ತೀರಿ, ಕನಸಿನಲೋಕಕ್ಕೆ ಹಿಂದಿರುಗುತ್ತೀರಿ. ಗಾಢನಿದ್ರೆಯಿಂದ ಕನಸಿನ ಸ್ಥಿತಿಗೆ ಬಂದಾಗಲೆಲ್ಲಾ, ಹಿಂದಿನ ಕನಸಿನಿಂದ ಒಂದು ವಿರಾಮ ಆಗಿದ್ದರೂ ಸಹ, ನೀವು ಅದೇ ಪ್ರಪಂಚವನ್ನು ನೋಡುವಿರಿ. ಆದುದರಿಂದ, ನೀವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದುದೇನೆಂದರೆ, ವಿರಾಮವಾದನಂತರ ಅದೇ ಪ್ರಪಂಚವನ್ನು ಕಾಣುವ ಗುಣದಿಂದ ಆ ಪ್ರಪಂಚವು ಸತ್ಯವೆಂದು ನಿರೂಪಿಸಲಾಗುವುದಿಲ್ಲ, ಎಂದು. ನಿದ್ರೆಯಿಂದೆದ್ದಾಗಲೇ ನಿಮಗೆ ನೀವು ಇಪ್ಪತ್ತು ವರ್ಷಗಳ ಜೀವನವನ್ನು ಕೇವಲ ಹತ್ತುಗಂಟೆಗಳಲ್ಲಿ ಕಳೆದೆನೆಂಬುದು ಅರಿವಿಗೆ ಬರುವುದು. ಅದೇ ರೀತಿಯಲ್ಲಿ, ಈಗ ಜೀವಿಸುತ್ತಿರುವ 'ಎಚ್ಚರದ ಕನಸಿನ' ಸ್ಥಿತಿಯಿಂದ ಎಚ್ಚರಗೊಂಡಾಗ ಮಾತ್ರ ಆಕೂಡಲೇ ನಿಮ್ಮ ಬಹುಶಃ ತೊಂಬತ್ತು ವರ್ಷಗಳ ಜೀವನವನ್ನೂ ಕೆಲವೇ ಗಂಟೆಗಳಲ್ಲಿ ಕಳೆದೆವೆಂಬ ಅರಿವುಂಟಾಗುತ್ತದೆ! ಈ ಎಚ್ಚರದ ಸ್ಥಿತಿಯು ಮತ್ತೊಂದು ದೀರ್ಘ ಕನಸಾಗಿರಬಹುದು!
ನೀವು ಒಂದು ಕನಸು ಕಾಣುತ್ತಿರುವಾಗ, ಕನಸನ್ನು
ನಿಜವೆಂದುಕೊಂಡಿರುತ್ತೀರಿ. ಆ ಕ್ಷಣಕ್ಕೆ
ನೀವೆಲ್ಲಿರುವಿರೋ ಅದೇ ಸತ್ಯ. ಅದಕ್ಕೆ ಬೇರೆ
ಮಾಪನವಿಲ್ಲ. ಕನಸಿನಲ್ಲಿ ನೀವು ಅದೊಂದು
ಕನಸು ಎಂದು ಕಲ್ಪಿಸಿಕೊಳ್ಳಲು ಆಗುವುದಿಲ್ಲ.
ಎಚ್ಚರವಾಗಿರುವಾಗ ಇದು ಇನ್ನೊಂದು ಕನಸು
ಎಂದು ಊಹಿಸಿಕೊಳ್ಳಲೂ ಆಗುವುದೇ ಇಲ್ಲ.
ಕನಸಿನಿಂದ ಹೊರಬಂದಾಗಲೇ ಅದು ಕನಸು ಎಂದು
ತಿಳಿಯುವುದು, ಆದರೆ ಕನಸಿನಲ್ಲೇ ಇರುವಾಗ ಅದು
ಕನಸಿನಂತೆ ಕಾಣುವುದಿಲ್ಲ.
ಕನಸಿನಲ್ಲಿ ನಿಮ್ಮ ನಿಜ ಜೀವನವನ್ನು
ನೆನೆಸಿಕೊಂಡರೂ, ಅದು ಕನಸೆಂದುಕೊಳ್ಳುವಿರಿ;
ಎಚ್ಚರದ ಸ್ಥಿತಿಯಲ್ಲಿ ಕನಸಿನ ಬಗ್ಗೆ ನೆನಪಾದರೂ
ಅದು ಕನಸೆಂದುಕೊಳ್ಳುತ್ತೀರಿ. ಆದುದರಿಂದ ಅದು
ಕೇವಲ ನೀವಿರುವ ಕಂಪನದ ಸ್ಥಿತಿಯ ಮೇಲೆ
ಆಧಾರವಾಗಿರುತ್ತದೆ. ಯಾವುದು ನಿಜ ಅಥವಾ
ಯಾವುದು ಕನಸು ಎಂದು ವಿವರಿಸುವ ಬೇರೆ ಯಾವ
ಮಾಪನವೂ ಇಲ್ಲ.
ಈ ಎಚ್ಚರದ ಸ್ಥಿತಿಯು ಮತ್ತೊಂದು ದೊಡ್ಡ ಕನಸಾಗಿರಲು ಸಾಧ್ಯ ಎಂದು ಅರಿತು ಅರ್ಥಮಾಡಿಕೊಳ್ಳುವುದು, ನಿಮ್ಮ ಗಮನವನ್ನೂ ಜಾಗೃತಿಯನ್ನೂ ಅಂತಃಸತ್ಯದೆಡೆಗೆ, ನಿಮ್ಮ ಪ್ರಜ್ಞೆಯೆಡೆಗೆ, ಅಂತಿಮ ಸತ್ಯದೆಡೆಗೆ ತಿರುಗಿಸುತ್ತದೆ. ಈ ಜಾಗೃತ ಸ್ಥಿತಿಯ ಕಂಪನದ ಮಟ್ಟವನ್ನು ಮೀರಿ ಹೋದಾಗ, ಅದೂ ಸಹ ಮತ್ತೊಂದು ಕನಸಿನಂತೆ ತೋರುತ್ತದೆ.
ಇದು ಆಧ್ಯಾತ್ಮಿಕತೆಯ ಮೊದಲನೆಯ ಹಂತ. ಇದು ಮಾನಸಿಕ ಪರಿವರ್ತನೆಯ ಮೊದಲ ಹಂತ.
ಪುನಃ ಪುನಃ ನಿಮ್ಮ ವೇದನೆಯು ಒಂದು ಸ್ಪಷ್ಟ
ನಿರೂಪಣೆಯನ್ನು ಮಾಡುತ್ತದೆ: ನೀವು
ವಾಸ್ತವಿಕತೆಯಲ್ಲಿ ಬಾಳುತ್ತಿಲ್ಲ, ಎಂದು.
ಇದೇ ಧಾಟಿಯಲ್ಲಿ ಎಷ್ಟೋ ಬಾರಿ ಜನರು ನನ್ನಲ್ಲಿ ಮತ್ತೊಂದು ಪ್ರಶ್ನೆ ಕೇಳುತ್ತಾರೆ: ‘ಈ ಪ್ರಪಂಚವನ್ನು ನಾನು ಮಾತ್ರವೇ ನೋಡುತ್ತಿಲ್ಲ, ನನ್ನ ಸುತ್ತಮುತ್ತಲಿನವರೂ ಇದೇ ಪ್ರಪಂಚವನ್ನು ನೋಡುತ್ತಿದ್ದಾರೆ, ಇದನ್ನು ಕನಸೆಂದು ಹೇಗೆ ಹೇಳುವಿರಿ?’ ಎಂದು.
ತಿಳಿಯಿರಿ; ಕನಸಿನಲ್ಲಿ ಒಂದು ನಿರ್ದಿಷ್ಟವಾದ
ಪಟ್ಟಣವನ್ನು ನೋಡುತ್ತಿರುವಿರಾದರೆ ಹಾಗೂ ಆ
ಕನಸಿನಲ್ಲಿ ನಿಮ್ಮ ಇಡೀ ಕುಟುಂಬದವರೊಡಗೂಡಿ
ಅದೇ ಪಟ್ಟಣಕ್ಕೆ ಹೋಗುತ್ತಿದ್ದೀರಾದರೆ, ಆಗ ನೀವು
ಮಾತ್ರವಲ್ಲ, ನಿಮ್ಮ ಕನಸಿನೊಳಗೆ ಇರುವ ನಿಮ್ಮ
ಕುಟುಂಬವೂ ಅದೇ ಪಟ್ಟಣವನ್ನು ನೋಡುತ್ತದೆ.
ಏಕೆಂದರೆ ಅವರೂ ನಿಮ್ಮ ಮನಸ್ಸಿನ ಕಲ್ಪನೆಗಳೇ!
ಆದುದರಿಂದ ಕೇವಲ ನಿಮ್ಮ ಸುತ್ತಮುತ್ತಲಿನವರು
ನೀವು ನೋಡಿದಂತಹ ದೃಶ್ಯವನ್ನು ನೀವು
ನೋಡಿದಂತೆಯೇ ನೋಡಿದರೆ, ದೃಶ್ಯವು
ನಿಜವಾದುದೆಂದರ್ಥವಲ್ಲ. ನಿಮ್ಮ ಸುತ್ತಲಿನವರು
ಅದೇ ದೃಶ್ಯದ ಕಲ್ಪನೆಯೂ ಆಗಿರಬಹುದು!
ಕಟ್ಟಕಡೆಯ ಸತ್ಯವೆಂದರೆ, ಯಾವ ವಸ್ತುವಿನಿಂದ
ನಿಮ್ಮ ಕನಸಿನ ಪ್ರಪಂಚವು ಮಾಡಲ್ಪಟ್ಟಿದೆಯೋ,
ಈ ಎಚ್ಚರದ ಪ್ರಪಂಚವೂ ಅದೇ ವಸ್ತುವಿನಿಂದ
ಮಾಡಲ್ಪಟ್ಟಿದೆ.
ನಿಮ್ಮ ಗಮನವು ವಸ್ತುವಿನಲ್ಲಿ
ಕೇಂದ್ರೀಕೃತವಾಗಿದ್ದರೆ, ಸಹಜವಾಗಿಯೇ ಆಂತರಿಕ
ಉಪಶಮನವಾಗಲು ಸಾಧ್ಯವಿಲ್ಲ. ನಿಮ್ಮ ಗಮನವು
ನಿಮ್ಮ ಪ್ರಜ್ಞೆಯ ಮೇಲೆಯೂ, ವಸ್ತುವಿನ ಮೇಲೆಯೂ
ಸಮಾನವಾಗಿ ಹಂಚಿಹೋಗಿದ್ದಲ್ಲಿ ಅದನ್ನೇ ನಾನು
ಆರೋಗ್ಯವಾದ ಜೀವನ, ಸಮತೋಲನದ ಜೀವನ
ಎನ್ನುವುದು. ನಿಮಗೆ ದೈಹಿಕ ಆರೋಗ್ಯ, ಮಾನಸಿಕ
ಆರೋಗ್ಯ ಹಾಗೂ ಒಂದು ಲವಲವಿಕೆಯುಳ್ಳ
ಜೀವನವಿರುತ್ತದೆ.
ಈ ಜಗತ್ತುಗಳನ್ನು ಮಾಡಲ್ಪಟ್ಟಿರುವ ವಸ್ತುವಿನ
ಮೇಲಿರದೆ, ನಿಮ್ಮ ಗಮನವು ಸಂಪೂರ್ಣವಾಗಿ
ಪ್ರಜ್ಞೆಯ ಮೇಲೆಯೇ ಕೇಂದ್ರೀಕೃತವಾಗಿದ್ದರೆ,
ಅದನ್ನೇ ನಾನು ಜೀವನ್ಮುಕ್ತಿ ಎಂದು ಕರೆಯುವುದು.
ನಿಮಗೆ ಜೀವನ್ಮುಕ್ತಿ ಬೇಕೋ ಬೇಡವೋ ಎಂಬುದು ಮುಖ್ಯವಲ್ಲ. ನಿಮ್ಮ ಗಮನವನ್ನು 'ನಾನು' ಎಂಬ ಪ್ರಜ್ಞೆಯ ಕಡೆಗೆ, ಸತ್ಯದ ಕಡೆಗೆ, ನಿಮ್ಮ ಕೇಂದ್ರದ ಕಡೆಗೆ, ಸ್ವಲ್ಪಮಟ್ಟಿಗೆ ತಿರುಗಿಸಿದರೆ, ಇದ್ದಕ್ಕಿದ್ದಂತೆ ಅದ್ಭುತವಾದ ಆಂತರಿಕ ಉಪಶಮನವಾಗುವುದನ್ನು ಕಾಣುವಿರಿ.
ತಿಳಿಯಿರಿ, ಉದಾಹರಣೆಗೆ, ಯಾವುದೋ ದೊಡ್ಡ ಕಷ್ಟ ಅಥವಾ ಖಿನ್ನತೆಯನ್ನು ಎದುರಿಸಬೇಕಾಗಿ ಬಂದರೆ, ಈ ಸರ್ವವೂ ಒಂದು ಕನಸೆಂದು ಬಹಳ ಸ್ಪಷ್ಟವಾಗಿಯೂ, ಪ್ರಜ್ಞಾಪೂರಿತವಾಗಿಯೂ ಅರಿತುಕೊಂಡರೆ, ಬಹಳ ಹಾಯಾದ ಅನುಭವ ಅಥವಾ ಆಂತರಿಕ ಉಪಶಮನವನ್ನು ಪಡೆಯುತ್ತೀರಿ. ಆ ಆಂತರಿಕ ಗುಣಹೊಂದುವಿಕೆಯನ್ನೇ ನಾನು ಧ್ಯಾನ ಎನ್ನುವುದು. ನಾನು ನಿಮ್ಮಲ್ಲಾಗುವ ಆ ವಿಶ್ರಾಂತ ಅರಿವನ್ನು 'ಸತೋರಿ', ಸಮಾಧಿಯ ಮೊದಲ ನೋಟ, ಎಂದು ಕರೆಯುತ್ತೇನೆ.
ನೀವು ನೋಡುತ್ತಿರುವುದು
ನೀವಂದುಕೊಂಡಿರುವ ಹಾಗೆ ನಿಜವಲ್ಲದಿರಬಹುದು
ಎಂಬ ಮೂಲಭೂತ ಅರಿವಿನ ಬದಲಾವಣೆ ಅಥವಾ
ಮಾನಸಿಕ ಪರಿವರ್ತನೆಯು, ನಿಮ್ಮಲ್ಲಿ ಅಪಾರವಾದ
ಆಂತರಿಕ ಉಪಶಮನವನ್ನು ತರಲು ಸಾಧ್ಯ,
ನಿಮ್ಮೊಳಗೆ ಆಳವಾದ ವಿಶ್ರಾಂತಿಯ ಅನುಭವವನ್ನು
ತರಲು ಸಾಧ್ಯ.