ಮುಂದಾಳುತನವು ಒಂದು ಅಂತಸ್ತಲ್ಲ, ಸ್ಥಿತಿ
This text was machine-transcribed from the printed book and may contain errors. Select the words and choose “Report a mistake”.
ಅನ್ಯರಿಗೆ ಜವಾಬ್ದಾರರಾದಾಗ ನಾವು ಕೇವಲ
ನಮ್ಮ ಬಗ್ಗೆ ಮಾತ್ರ ಯೋಚಿಸುವವರಾಗಿರುವುದಿಲ್ಲ.
ಅನ್ಯರ ಸೇವೆ ಮಾಡಲು ಮುಂದೆ ಬರುತ್ತೇವೆ. ಅನ್ಯರ
ಸೇವೆಯೇ ಮುಂದಾಳುತನ ಅಥವಾ ಮುಖಂಡತ್ವ.
ನಮ್ಮವೇ ಆದ ಅಗತ್ಯಗಳನ್ನು ಪೂರೈಸುತ್ತಾ ಅನ್ಯರ
ಬಗ್ಗೆ ಮುತುವರ್ಜಿ ಇಲ್ಲದಿರುವುದೆಂದರೆ
ಮುಂದಾಳುತನ ಇಲ್ಲದೇ ಇರುವುದು.
ಹಿನ್ನೆಲೆ
ಒಂದು ಸಂಸ್ಥೆಯನ್ನು ಯಶಸ್ವಿಯಾಗಿಸುವುದರಲ್ಲಿ
ಮುಂದಾಳುತನದ ಪಾತ್ರ ಎಷ್ಟು ಪ್ರಧಾನವಾದುದು
ಎಂಬುದರ ಬಗ್ಗೆ ಇತ್ತೀಚೆಗೆ ಅನೇಕ ಪುಸ್ತಕಗಳು
ಬಂದಿವೆ. ಸಂಸ್ಥೆಗಳಲ್ಲಿ ಮುಂದಾಳುತನವನ್ನು
‘ಅಭಿವೃದ್ಧಿ’ಗೊಳಿಸಲು, ತರಬೇತಿ ನೀಡಲು ಮತ್ತು
ಬೋಧನೆ ಮಾಡಲು ‘ಗುರು’ಗಳು
ಎಂದೆನಿಸಿಕೊಂಡವರು ಎಷ್ಟೋ ಮಂದಿ.
ಇಷ್ಟಾದರೂ ಲಾಭಗಳಿಸಲೆಂದೇ ಇರುವ
ಸಂಸ್ಥೆಗಳಲ್ಲಾಗಲೀ ಅಥವಾ ಸರ್ಕಾರದ
ಸೇವೆಗಳಲ್ಲಾಗಲೀ ಅಥವಾ ಸಾಮಾಜಿಕ ಸೇವೆಗಳ
ಕ್ಷೇತ್ರಗಳಲ್ಲಾಗಲೀ ನಿಜವಾದ ಮುಂದಾಳು-
ಗಳಿರುವುದು ವಿರಳ.
ಯಾವುದೇ ಸಂಸ್ಥೆಯನ್ನು ನೀವು ಗಮನಿಸಿದರೆ, ಶೇಕಡ ಒಂದು ಭಾಗಕ್ಕಿಂತ ಕಡಿಮೆ ಜನರು ಮಾತ್ರ ಮುಂದಾಳು ಎನಿಸಿಕೊಳ್ಳಬಲ್ಲವರಿರುತ್ತಾರೆ. ನೀವು ವ್ಯಾಪಾರೀ ಸಂಸ್ಥೆಗಳನ್ನು ಗಮನಿಸಿದರೆ, ಕೇವಲ ಶೇಕಡ ಒಂದು ಭಾಗ ಮಾತ್ರ ಲಾಭಗಳಿಸುವುದರಲ್ಲಿ, ಒಳ್ಳೆಯ ಉತ್ಪಾದನೆ ಮತ್ತು ಸೇವೆ ನೀಡುವುದರಲ್ಲಿ, ಸಾಮಾಜಿಕ ಸೇವೆ ಸಲ್ಲಿಸುವುದರಲ್ಲಿ, ತಮ್ಮ ಕಾರ್ಮಿಕರಿಗೆ ತೃಪ್ತಿ ನೀಡುವುದರಲ್ಲಿ, ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ಶ್ರೇಷ್ಠ ಮಟ್ಟವನ್ನು ಗಳಿಸಿ, ತಮ್ಮ ಕ್ಷೇತ್ರದಲ್ಲಿ ನಿಜವಾದ ಮುಖಂಡ ಸಂಸ್ಥೆಗಳು ಎಂದು ಕರೆಯಲು ಯೋಗ್ಯವಾಗಿರುತ್ತವೆ.
ಆದುದರಿಂದ ನಿಜವಾದ ಮುಖಂಡರೆಂದರೆ ಶೇಕಡ ಒಂದರಷ್ಟು ಸಂಸ್ಥೆಗಳಲ್ಲಿನ ಶೇಕಡ ಒಂದರಷ್ಟು ಜನರು ಮಾತ್ರ. ಅಂದರೆ, ಒಟ್ಟಾರೆ ಕೆಲಸದಲ್ಲಿರುವ ಜನಸಂಖ್ಯೆಯ ಶೇಕಡ 0.01 ಮಾತ್ರ, ನಿಜವಾದ ಮುಂದಾಳುತನದ ಗುಣಗಳುಳ್ಳವರಾಗಿರುತ್ತಾರೆ! ಇತರ ಕ್ಷೇತ್ರಗಳಲ್ಲಿಯೂ ಇದೇ ರೀತಿ ಇರುತ್ತದೆ ಎಂದು ನಾವು ಹೇಳಬಹುದು.
ನಿಜವಾದ ಮುಂದಾಳುತನವು ವಿರಳ ಎಂದು ನಾನು ಹೇಳುವುದು ಇದರಿಂದಲೇ.
ಇಬೇಕೆ ಈ ರೀತಿ ಇದೆ ಎಂಬುದನ್ನು
ತಿಳಿದುಕೊಳ್ಳಲು ಪ್ರಯತ್ನಿಸೋಣ. ಇದಕ್ಕಾಗಿ ಈ
ಕೆಳಗಿನವುಗಳನ್ನು ಅರ್ಥಮಾಡಿಕೊಳ್ಳಬೇಕು.
1. ಮುಖಂಡತ್ವ ಎಂದರೇನು?
2. ಮುಖಂಡರನ್ನು ಸೃಷ್ಟಿಸಬಹುದೇ? ಅಥವಾ ನೀವು ಮುಖಂಡರಾಗಿಯೇ ಹುಟ್ಟಬೇಕೆ?
3. ಯಶಸ್ವಿಯಾದ ಮುಖಂಡನನ್ನು ರೂಪಿಸುವ ಪ್ರಧಾನ ಅಂಶಗಳಾವುವು?
4. ಏಕೆ ಕೆಲವು ವ್ಯಕ್ತಿಗಳು ನಿರಾಯಾಸವಾಗಿ
ಮತ್ತು ಸಹಜವಾಗಿ ಮುನ್ನಡೆಸುವುದು ಮತ್ತು
ಅನೇಕರು ಹೆಣಗಾಡುವರು?
5. ಮುಂದಾಳಾಗಲು ನಮ್ಮ ವೈಯಕ್ತಿಕ ಪಯಣವನ್ನು ಯಾವ ರೀತಿ ಪ್ರಾರಂಭಿಸಬೇಕು?
ಈಗ ಈ ಎಲ್ಲಾ ಅಂಶಗಳನ್ನು ಹಂತ ಹಂತವಾಗಿ ಅರ್ಥಮಾಡಿಕೊಳ್ಳೋಣ.
ಮುಖಂಡತ್ವ ಎಂದರೇನು?
'ನಿರ್ವಹಣಾ ತಂತ್ರಜ್ಞಾನ'ದ ಗುರುಗಳು,
ಪ್ರಾಧ್ಯಾಪಕರು ಹಾಗೂ ಸಮಾಲೋಚಕರು
ಮುಂದಾಳುತನದ ವಿಷಯವನ್ನು ಕುರಿತ ಎಷ್ಟೆಷ್ಟೋ
ಗ್ರಂಥಗಳನ್ನು ಬರೆದಿದ್ದಾರೆ. ಅವರಲ್ಲಿ ಬಹುಪಾಲು
ಜನರು ಯಶಸ್ವಿಯಾದ ಒಬ್ಬ ಮುಖಂಡನು
ಹೇಗಿರಬೇಕು ಎಂಬುದರ ಬಗ್ಗೆ ಹೇಳಿದ್ದಾರೆ.
ಮುಂದಾಳುತನ ಮತ್ತು ಒಟ್ಟಾಗಿ ಕೆಲಸ ಮಾಡುವುದು
ಮುಂತಾದುವುಗಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು
ಸಂಸ್ಥೆಗಳು ನಡೆಸುತ್ತವೆ.
ಸಂಸ್ಥೆಗಳಿಂದ ಬಂದ ನನ್ನ ಕೆಲವು ಶಿಷ್ಯರು ಈ ಕಾರ್ಯಕ್ರಮಗಳ ಬಗ್ಗೆ ನನಗೆ ತಿಳಿಸಿದ್ದಾರೆ. ಅವುಗಳನ್ನು ಹೇಗೆ ನಡೆಸುತ್ತಾರೆ, ಮತ್ತು ಈ ಕಾರ್ಯಕ್ರಮಗಳಿಂದ ಏನನ್ನು ಸಾಧಿಸಲು ಪ್ರಯತ್ನಿಸುತ್ತಾರೆ ಎಂಬುದರ ಬಗ್ಗೆ ವಿವರಿಸಿದ್ದಾರೆ. ಈ ಕಾರ್ಯಕ್ರಮಗಳು ಅವರಿಗೆ ಸಹಾಯಕವಾಗಿದ್ದರೂ ಸಹ, ಅವುಗಳ ಪ್ರಭಾವ ಕಾರ್ಯಕ್ರಮ ಮುಗಿದ ಕೆಲವೇ ದಿನಗಳಲ್ಲಿ ಕ್ಷೀಣಿಸಿಹೋಗುತ್ತದೆ ಎಂಬುದನ್ನೂ ಹೇಳಿದ್ದಾರೆ.
ವಾರಾಂತ್ಯದ ಮನರಂಜನಾ ಶಿಬಿರಗಳಲ್ಲಿ, ಹಗ್ಗ ಹಿಡಿದು ಮೇಲೇರುವುದು, ಆಟಗಳನ್ನಾಡುವುದು, ಸ್ನೇಹ ಭಾವವನ್ನು ಮೂಡಿಸುವುದು ಮುಂತಾದುವುಗಳ ಮೂಲಕ ಸಾಂಘಿಕ ಮನೋಭಾವನೆಯನ್ನು ಮೂಡಿಸುತ್ತಾರೆ ಎಂದು ನನಗೆ ತಿಳಿಸಿದ್ದಾರೆ. ನನ್ನ ಶಿಷ್ಯರು ಹೇಳಿದುದರಲ್ಲಿ ನಾನು ಗ್ರಹಿಸಿದ ಸಾರಾಂಶವೆಂದರೆ, ಈ ಕಾರ್ಯಕ್ರಮಗಳಲ್ಲಿ ಹೊರಗಿನ ಗುಣಲಕ್ಷಣಗಳ ಮೇಲೆ ಕೆಲಸ ಮಾಡುತ್ತಾರೆ, ಆದರೆ ಅವು 'ಒಳಗಿನ ಸಾಫ್ಟ್ವೇರ್' (ಒಳಗಿನ ತಂತ್ರಾಂಶವನ್ನು) ಮಾರ್ಪಾಡಾಗಿಸಿ ಅದರಿಂದ ಮುಂದಾಳುತನವನ್ನು ಹೊಮ್ಮಿಸುವ ಕಾರ್ಯಕ್ರಮಗಳಾಗುವುದಿಲ್ಲ ಎಂದು. ನನ್ನ ಪ್ರಕಾರ, ಮುಂದಾಳುತನ ಒಂದು ಗುಣವಲ್ಲ, ಅದು ವೈಯಕ್ತಿಕ ಅಭಿವೃದ್ಧಿ ಹಾಗೂ ಪರಿವರ್ತನೆಯನ್ನು ಅನುಭವಿಸಿರುವ ವ್ಯಕ್ತಿಯಿಂದ ಹೊರಹೊಮ್ಮುವ ಒಂದು ಅನುಭವ.
ಸಾಂಪ್ರದಾಯಿಕವಾಗಿ ಮುಂದಾಳುತನವನ್ನು
ಹೇಗೆ ವಿವರಿಸಲಾಗಿದೆ ಎಂದು ನಿಮಗೆ ಕೆಲವು
ವಿವರಗಳನ್ನು ಹೇಳುತ್ತೇನೆ. ಇಂಟರ್ನೆಟ್ನಲ್ಲಿ
‘ಮುಂದಾಳುತನ’ ಮತ್ತು ‘ಮುಖಂಡ’ ಎಂಬ
ಪದಗಳನ್ನು ಉದ್ದೇಶಿಸಿದ ವಿಷಯಗಳನ್ನು
ನೋಡಿದಾಗ, ಬರುವ ಮಿಲಿಯನ್ಗಟ್ಟಲೆ
ಮಾಹಿತಿಗಳನ್ನು ಕಂಡು ನೀವು ಬೆರಗಾಗುವಿರಿ!
ಇತ್ತೀಚೆಗಷ್ಟೆ ನಾನು ‘ಮುಂದಾಳುತನ’ ಎಂಬ
ಪದವನ್ನು ‘ಗೂಗಲ್’ನಲ್ಲಿ ಹುಡುಕಿದಾಗ 156
ಮಿಲಿಯನ್ ವಿವರಗಳು ಇದ್ದವು. ‘ಮುಖಂಡ’
ಎಂಬುದಕ್ಕೆ 278 ಮಿಲಿಯನ್ ವಿವರಗಳಿದ್ದವು!
ಆದುದರಿಂದ ಈ ವಿಷಯದ ಬಗ್ಗೆ ಏನೇನು ಹೇಳಬಹುದೋ, ಏನೇನು ಬರೆಯಬಹುದೋ ಅವೆಲ್ಲವನ್ನೂ ಹೇಳಿದ್ದಾಗಿದೆ! ಆದುದರಿಂದ ನಿಮಗೆ ಮಾರ್ಗದರ್ಶನಕೊಡುವ ನಿರ್ವಹಣಾ ತಂತ್ರದ ಗುರುಗಳು ಒಬ್ಬ ಮುಖಂಡನ ಬಗ್ಗೆ ನೀಡಿರುವ ಕಲ್ಪನೆ ಮತ್ತು ಅದಕ್ಕಿಂತ ಹೆಚ್ಚಾಗಿ, ವೈಯಕ್ತಿಕ ಪರಿವರ್ತನೆಯಾಗಿ ಮುಂದಾಳುತನವನ್ನು ಯಾರು ಬೇಕಾದರೂ ಹೊಂದಲು ಬೇಕಾದ ನಿಜವಾದ ಸಲಕರಣೆಗಳನ್ನು ಮತ್ತು ಉಪಾಯಗಳನ್ನು ನೀಡಲು, ಕೆಲವು ಉದಾಹರಣೆಗಳನ್ನು ನೀಡಲು ನಾನಿಲ್ಲಿದ್ದೇನೆ!
ತಿಳಿಯಿರಿ, ಪ್ರತಿ ವ್ಯಕ್ತಿಯೂ ಒಬ್ಬ ಸಂಭಾವ್ಯ
ಮುಖಂಡನೇ. ಪ್ರಸ್ತುತವಾಗಿ ಕಂಡಂತೆ ಮತ್ತು
ತಿಳಿದಂತೆ ಮುಂದಾಳುತನದ ಗುಣ ಕೆಲವರಿಗೆ
ಮಾತ್ರವೇ ಹುಟ್ಟಿನಿಂದಲೇ ಬಂದಿರುವುದು ಎಂಬಂತೆ
ಅಲ್ಲ. ಪ್ರತಿಯೊಬ್ಬ ವ್ಯಕ್ತಿಯೂ
ಮುಖಂಡನಾಗಬಹುದು ಮತ್ತು ಮುಂದಾಳುತನದ
ಒಂದು ನಿರ್ದಿಷ್ಟ ಗುಣವು ಯಾವುದೇ ಸಂಸ್ಥೆಯ
ಅಥವಾ ಪರಿಸ್ಥಿತಿಯ ಅಥವಾ ನಿರ್ದಿಷ್ಟ ಗುಂಪಿನ
ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯದಿಂದ
ಹುಟ್ಟುವುದು.
ಮುಖಂಡರನ್ನು ಸೃಷ್ಟಿಸಬಹುದೇ ಅಥವಾ ನೀವು ಮುಖಂಡರಾಗಿಯೇ ಹುಟ್ಟಬೇಕೇ?
ಮುಖಂಡರು ಹೇಗಿರಬೇಕು ಎಂದು ಬಹಳ
ಜನರು ಬಹಳಷ್ಟು ಹೇಳಿದ್ದಾರೆ. ಆದರೆ ಆ ಸ್ಥಿತಿಗೆ
ತಲುಪಲು ಹೇಗೆ ಸಾಧ್ಯ ಎಂಬುದನ್ನು ಹೇಳಿಲ್ಲ.
ನಾನು ಹೇಳುತ್ತಿರುವುದರ ಸರಿಯಾದ ಅರ್ಥವೇನು?
ಮುಂದಾಳುತನವು ಜನ್ಮತಃ ಬರಬೇಕಾದದ್ದೇ
ಅಥವಾ ಅದನ್ನು ಬೆಳೆಸಿಕೊಳ್ಳಬಹುದೇ?
ಮುಂದಾಳುತ್ವದ ಕುಶಲತೆಯನ್ನು ಹೇಗೆ
ಬೆಳೆಸಿಕೊಳ್ಳುವುದು? ವೈಯಕ್ತಿಕವಾಗಿ
ಗೊಂದಲಗಳಲ್ಲಿ ಅಥವಾ ಸಂಘರ್ಷದಲ್ಲಿರುವವನು
ಒಂದು ಸಂಸ್ಥೆಯನ್ನು ನಿಜವಾಗಿಯೂ
ಮುನ್ನಡೆಸಬಲ್ಲನೇ?
ಈ ವಿವರಗಳಿಗೆ ಹೋಗುವ ಮೊದಲು,
ಮುಂದಾಳುತನವನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು
ಹೇಳುತ್ತೇನೆ. ಇದು ಮುಖಂಡನಾದಾಗ ಬರುವ
ಅಂತಸ್ಸಿನ ಬಗ್ಗೆಯಲ್ಲ, ಇದು ಮುಖಂಡನ
ಪ್ರಜ್ಞಾಸ್ಥಿತಿಯನ್ನು ಗಳಿಸುವ ಬಗ್ಗೆ.
ನೀವು ಇದನ್ನು ಓದಿದಾಗ, ನಾನು ನಿಮ್ಮನ್ನು
ಒಂದು ಆಧ್ಯಾತ್ಮಿಕ ಪಯಣಕ್ಕೆ
ಕರೆದೊಯ್ಯುತ್ತಿದ್ದೇನೆಂದು ಭಾವಿಸಬೇಡಿರಿ! ನಾನು
ನಿಮ್ಮನ್ನು ಕೊಂಡೊಯ್ಯುವ ಪ್ರಕ್ರಿಯೆಯು ಬಹಳ
ಕಾಲದಿಂದ ಸಮರ್ಥನೆಯಾಗಿರುವ ವೈಯಕ್ತಿಕ
ಪರಿವರ್ತನೆಯ ಒಂದು ವಿಜ್ಞಾನ. ಇದು ಹತ್ತು
ಸಾವಿರ ವರ್ಷಗಳ ಸಂಶೋಧನೆ ಮತ್ತು
ಅಭಿವೃದ್ಧಿಯಿಂದ ಲಭಿಸಿದ ಪ್ರಾಚ್ಯ ಅಂತರಂಗ
ವಿಜ್ಞಾನದ ಒಂದು ಉತ್ಪನ್ನ. ನಾನು
ಹೇಳುತ್ತಿರುವುದರ ಅರ್ಥವೇನು?
ಮೊದಲನೆಯದಾಗಿ, ಪ್ರತಿ ನಾಗರೀಕತೆಯೂ ತನ್ನ ಶಕ್ತಿಗಳನ್ನು ನಿರ್ದಿಷ್ಟ ಕ್ಷೇತ್ರಗಳಿಗೆ ಕೇಂದ್ರೀಕರಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿರಿ. ಪಾಶ್ಚಿಮಾತ್ಯ ಜಗತ್ತಿನಲ್ಲಿ ಸುಖ ಮತ್ತು ಜೀವನ ಶೈಲಿಯ ಉನ್ನತಿಗಾಗಿ ಉತ್ಪನ್ನಗಳು ಮತ್ತು ಸೇವೆಗಳನ್ನು ಸೃಷ್ಟಿಸಲು, ಮತ್ತು ಬಾಹ್ಯ ವಿಜ್ಞಾನ, ಆವಿಷ್ಕರಣ ಮತ್ತು ಅನ್ವೇಷಣೆಗಳಲ್ಲಿ ತಮ್ಮ ಪರಿಶ್ರಮಗಳನ್ನು ಕೇಂದ್ರೀಕರಿಸಿದರು. ಈ ಹೊರ ಪ್ರಪಂಚದ ವಿಜ್ಞಾನಿಗಳು ಕಂಡುಹಿಡಿದ ಅನೇಕ ಉತ್ಪಾದನೆಗಳಿಂದ ಮತ್ತು ಸೇವಾ ವ್ಯವಸ್ಥೆಗಳಿಂದ ಪ್ರಪಂಚದಲ್ಲೆಲ್ಲಾ ಜನರ ಜೀವನ ಶೈಲಿ ಸುಧಾರಿಸಿದೆ ಹಾಗೂ ಮಹತ್ತರವಾದ ಲಾಭವಾಗಿದೆ.
ಬಾಹ್ಯ ಪ್ರಪಂಚದ ವಿಜ್ಞಾನದಂತೆಯೇ, ನಮ್ಮೊಳಗೇ ಇರುವ ಒಂದು ಅಗಾಧವಾದ ಒಳ ಪ್ರಪಂಚದ ವಿಜ್ಞಾನವೂ ಇದೆ. ಈ ಒಳಪ್ರಪಂಚದ ವಿಜ್ಞಾನಿಗಳು ಅಥವಾ ಋಷಿಗಳು ನಮ್ಮ ಭಾವನೆಗಳನ್ನು ಮತ್ತು ಮನಸ್ಸನ್ನು ನಿಭಾಯಿಸುವ ಅನೇಕ ಉಪಕರಣಗಳ ಮತ್ತು ತಂತ್ರಗಳ ಮೇಲೆ ಕೆಲಸ ಮಾಡಿದ್ದಾರೆ. ಹತ್ತು ಸಾವಿರ ವರ್ಷಗಳಿಂದ ಈ ಒಳಪ್ರಪಂಚದ ವಿಜ್ಞಾನಿಗಳು ನಾವು ಅನುಭವಿಸುವ ಅನೇಕ ರೀತಿಯ ಭಾವನೆಗಳನ್ನು ಹಾಗೂ ಭಾವನೆಗಳಿಂದ ಉಂಟಾಗುವ ಖಿನ್ನತೆ ಮತ್ತು ಒತ್ತಡಗಳನ್ನು ನಿಭಾಯಿಸಲು ಉಪಕರಣಗಳನ್ನು ಮತ್ತು ತಂತ್ರಗಳನ್ನು ಸೃಷ್ಟಿಸಿದ್ದಾರೆ. ನಾವು ನಮ್ಮೊಡನೆ ಆನಂದದಿಂದ ಬಾಳಲು ತಂತ್ರಗಳನ್ನು ಸೃಷ್ಟಿಸಿದ್ದಾರೆ. ಈ ಉಪಕರಣಗಳನ್ನು ಮತ್ತು ತಂತ್ರಗಳನ್ನೇ ನಾನು ಧ್ಯಾನದ ತಂತ್ರಗಳು ಎನ್ನುತ್ತೇನೆ.
ಆದುದರಿಂದಲೇ, ಬಹುಮಟ್ಟಿಗೆ
ಮುಂದಾಳುತನದ ನನ್ನ ಸಂವಾದಗಳೆಲ್ಲವೂ
ಮನುಷ್ಯನ ಭಾವನೆಗಳು, ಮನಸ್ಸನ್ನು ಹೇಗೆ
ಅರಿತುಕೊಳ್ಳಬಹುದು ಮತ್ತು ಒಳಪ್ರಪಂಚದ
ವಿಜ್ಞಾನಿಗಳಿಂದ ಬಂದಿರುವ ಈ ಸರಳವಾದ
ತಿಳಿವಳಿಕೆಗಳನ್ನು ಹೇಗೆ ಅಳವಡಿಸಿಕೊಂಡು
ಯಶಸ್ವಿಯಾಗಿ ಮತ್ತು ಪರಿಪೂರ್ಣವಾಗಿ
ಜೀವನವನ್ನು ನಡೆಸಲು ಸಹಾಯಪಡೆಯಬಹುದು
ಎಂಬುದರಲ್ಲಿ ಕೇಂದ್ರೀಕೃತವಾಗಿರುತ್ತವೆ.
ಬಹಳಷ್ಟು ಸಂಸ್ಥೆಗಳಲ್ಲಿ ಮುಖಂಡರು,
'ಮುಖಂಡ' ದರ್ಜೆಯನ್ನು ಪಡೆದಿರುತ್ತಾರೆ. ಆದರೆ,
ಅವರು ಮುಖಂಡನ ಸ್ಥಿತಿಯನ್ನು
ಗಳಿಸಿರಬೇಕೆಂದೇನಿಲ್ಲ. ನಾನು ಹೇಳುತ್ತಿರುವುದರ
ಅರ್ಥವೇನು? ಇದನ್ನು ಅರ್ಥಮಾಡಿಕೊಳ್ಳ-
ಬೇಕಾದರೆ, ಒಬ್ಬ ಯಶಸ್ವಿಯಾದ ಮುಖಂಡನನ್ನು
ರೂಪಿಸುವ ಪ್ರಧಾನವಾದ ಅಂಶಗಳನ್ನು ಮೊದಲು
ನಾವು ಅರ್ಥಮಾಡಿಕೊಳ್ಳೋಣ.
ಯಶಸ್ವಿಯಾದ ಮುಖಂಡನನ್ನು ರೂಪಿಸುವ ಪ್ರಧಾನ ಅಂಶಗಳಾವುವು?
ಒಂದು ಸಣ್ಣ ಕಥೆ:
ಒಂದಾನೊಂದು ಕಾಲದಲ್ಲಿ ಎರಡು ದೇಶಗಳ
ನಡುವೆ ಒಂದು ಮಹಾಯುದ್ಧ ನಡೆಯುತ್ತಿತ್ತು. ಈ
ಯುದ್ಧವು ಸಾಕಷ್ಟು ಸಮಯದಿಂದ ನಡೆಯುತ್ತಲೇ
ಇತ್ತು ಮತ್ತು ಈ ದೀರ್ಘಕಾಲದ ಹೋರಾಟದಿಂದ
ಸೈನಿಕರು ಬಳಲಲು ಪ್ರಾರಂಭಿಸಿದ್ದರು.
ಒಂದು ಬಿಸಿಲಿನ ಮಧ್ಯಾಹ್ನ ಒಂದು ದೊಡ್ಡ ಹಳ್ಳವನ್ನು ಅಗಿಯುತ್ತಿದ್ದ ಸೈನಿಕರ ಗುಂಪೊಂದನ್ನು ದಾಟಿಕೊಂಡು ನಾಗರೀಕ ಉಡುಪನ್ನು ಧರಿಸಿದ್ದ ವ್ಯಕ್ತಿಯೊಬ್ಬನು ಕುದುರೆ ಸವಾರಿಮಾಡಿಕೊಂಡು ಹೋದನು. ಆ ಗುಂಪಿನ ಮುಖಂಡನು ಕೂಗಾಡುತ್ತಾ ಒಂದು ಗಂಟೆಯಲ್ಲಿ ಕೆಲಸ ಮುಗಿಸದಿದ್ದರೆ ದಂಡ ವಿಧಿಸುವೆನೆಂದು ಆಜ್ಞಾಪಿಸುತ್ತಿದ್ದನು.
ಕುದುರೆ ಸವಾರಿ ಮಾಡುತ್ತಿದ್ದ ಆಗಂತುಕನು,
'ಮಾನ್ಯರೆ, ನೀವು ಏಕೆ ಕೇವಲ ಆಜ್ಞಾಪಿಸುತ್ತಾ
ಕೂಗಾಡುತ್ತಿರುವಿರಿ? ನೀವೇ ಏಕೆ ಅವರಿಗೆ
ಸಹಾಯಮಾಡಬಾರದು?' ಎಂದು ವಿಚಾರಿಸಿದನು.
ಆ ಗುಂಪಿನ ಮುಖಂಡನು ಆತನನ್ನು ನೋಡಿ,
'ನೀನು ಹೇಳುತ್ತಿರುವುದೇನು? ನಾನು ಮುಖಂಡ.
ಈ ಆಳುಗಳು ನಾನು ಹೇಳಿದ್ದನ್ನು ಮಾಡುತ್ತಾರೆ'
ಎಂದನು. ಮತ್ತೆ ಮುಂದುವರೆಯುತ್ತಾ ಆತನು,
'ಅವರಿಗೆ ಸಹಾಯ ಮಾಡಬೇಕೆಂದು ಅಷ್ಟು
ಪ್ರಬಲವಾಗಿ ನಿನಗೆ ಅನ್ನಿಸಿದರೆ, ನೀನೇ ಬಂದು
ಸಹಾಯಮಾಡಲು ನಿನಗೆ ಸ್ವಾಗತ' ಎಂದನು.
ಆ ವ್ಯಕ್ತಿಯು ಕುದುರೆಯಿಂದಿಳಿದು ಕೆಲಸ
ಮಾಡುತ್ತಿರುವವರ ಬಳಿಗೆ ಹೋದನು. ಗುಂಪಿನ
ಆ ಮುಖಂಡನಿಗೆ ಆಘಾತವಾಯಿತು. ಆ ವ್ಯಕ್ತಿಯು
ಸಲಕರಣೆಗಳನ್ನು ತೆಗೆದುಕೊಂಡು ಆ ಸೈನಿಕರಿಗೆ
ಸಹಾಯ ಮಾಡಲು ಪ್ರಾರಂಭಿಸಿ ಕೆಲಸ
ಮುಗಿಯುವವರೆಗೂ ಅವರೊಂದಿಗೆ ಕೆಲಸ
ಮಾಡಿದನು!
ಹೊರಡುವ ಮುನ್ನ ಆ ವ್ಯಕ್ತಿಯು ಸೈನಿಕರನ್ನು ಕೆಲಸ ಮಾಡಿದುದ್ದಕ್ಕಾಗಿ ಅಭಿನಂದಿಸಿ ಗುಂಪಿನ ಮುಖಂಡನ ಹತ್ತಿರ ಬಂದನು. 'ಮುಂದೇನಾದರೂ ನಿನ್ನ ಜನರಿಗೆ ಸಹಾಯ ಮಾಡಲು ನಿನ್ನ ಅಂತಸ್ತು ಅಡ್ಡ ಬಂದರೆ, ನೀನು ನಿನ್ನ ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು, ಹಾಗೂ ನಾನು ಅದಕ್ಕೆ ಇನ್ನೂ ಶಾಶ್ವತವಾದ ಪರಿಹಾರವನ್ನು ನೀಡುತ್ತೇನೆ' ಎಂದನು.
ಈಗ ಆ ಗುಂಪಿನ ಮುಖಂಡನಿಗೆ ಬಹಳ ಆಶ್ಚರ್ಯವಾಯಿತು. ಹತ್ತಿರ ಹೋಗಿ ಆ ವ್ಯಕ್ತಿಯನ್ನು ನೋಡಿದನು ಮತ್ತು ಆತನು ಸೈನ್ಯದ ಪ್ರಧಾನ ದಂಡನಾಯಕ ಎಂಬುದನ್ನು ಮನಗಂಡನು.
ಆ ಗುಂಪಿನ ಮುಖಂಡನ ಗುಣಗಳನ್ನು ವ್ಯಕ್ತಪಡಿಸುವ ಎಷ್ಟು ಮಂದಿ ಸಂಸ್ಥೆಗಳಲ್ಲಿ ಮುಖಂಡರೆನಿಸಿಕೊಂಡಿರುವವರಿದ್ದಾರೆ ಮತ್ತು ಎಷ್ಟು ಮಂದಿ ಸೈನ್ಯದ ಪ್ರಧಾನ ದಂಡನಾಯಕನ ಗುಣಗಳನ್ನು ವ್ಯಕ್ತಪಡಿಸುತ್ತಾರೆ ಎಂದು ನಮ್ಮಲ್ಲೇ ವಿಚಾರಮಾಡಬೇಕು.
ಸಂಸ್ಥೆಗಳಲ್ಲಿ ಮುಖಂಡರೆನಿಸಿಕೊಂಡ
ಬಹುಪಾಲು ಮಂದಿ ಯಾವುದೇ ಅಂತಸ್ತಿನಲ್ಲಿದ್ದರೂ,
ಆ ಗುಂಪಿನ ಮುಖಂಡನ ಗುಣಗಳನ್ನು
ವ್ಯಕ್ತಪಡಿಸುತ್ತಿರುತ್ತಾರೆ. ಅವರು ಮುಖಂಡನ
ಅಂತಸ್ತನ್ನು ಗಳಿಸಿರುತ್ತಾರೇ ಹೊರತು
ಮುಖಂಡನ ಸ್ಥಿತಿಯನ್ನಲ್ಲ.
ಕಾರ್ಯಸಾಧನೆಗೆ ಸಹಾಯ ನೀಡಲು ಸಿದ್ಧವಾಗಿರುವವರು ವಿರಳ.
ನಿಜವಾದ ಒಬ್ಬ ಮುಖಂಡನಿಗೆ ಬೇಕಾದ
ಮುಖ್ಯವಾದ ಗುಣಗಳನ್ನು ಆ ಸೈನ್ಯದ ಪ್ರಧಾನ
ದಂಡನಾಯಕನು ವ್ಯಕ್ತಪಡಿಸಿದನು:
1. ಪ್ರಾಮಾಣಿಕತೆ ಮತ್ತು ಜವಾಬ್ದಾರಿ
2. ಜನರ ಬಗ್ಗೆ ನಿಜವಾದ ಕಳಕಳಿ
3. ಆತ್ಮ ವಿಶ್ವಾಸ
4. ದಕ್ಷತೆ ಮತ್ತು ಅಂತರ್ಗತವಾಗಿ ಯೋಚಿಸುವ ಕೌಶಲ್ಯ
5. ವಿವರಗಳಿಗೆ ಗಮನ ನೀಡುವುದು
6. ದಕ್ಷತೆ ಮತ್ತು ಪರಿಣಾಮಕಾರಿತ್ವ
7. ವಿಶಾಲ ತಳಹದಿಯ ಆಲೋಚನೆ ಮತ್ತು ಕಾರ್ಯ ಸಾಧನೆ
ಈ ಲಕ್ಷಣಗಳನ್ನು ಮುಂದಿನ ವಿಭಾಗಗಳಲ್ಲಿ ಇನ್ನೂ ವಿಶದವಾಗಿ ವಿಚಾರ ಮಾಡುತ್ತೇನೆ.