ಕರ್ಮವನ್ನು ಮೀರಲು ತಂತ್ರಗಳು
This text was machine-transcribed from the printed book and may contain errors. Select the words and choose “Report a mistake”.
ನೆಮ್ಮದಿಗಾಗಿ ಪುನಃ ಜೀವಿಸುವುದು
ಇಲ್ಲಿಯವರೆಗೂ, ನಾವು ವಿಮರ್ಶಿಸಿದುದೆಲ್ಲಾ
ಕರ್ಮವನ್ನು ತಡೆಗಟ್ಟುವ ಕ್ರಮಗಳು. ಈಗ
ಕರ್ಮವನ್ನು ಹೋಗಲಾಡಿಸಲು ಒಂದು
ಸುಲಭವಾದ ತಂತ್ರವನ್ನು ಹೇಳುತ್ತೇನೆ. ಈ
ಕ್ಷಣದಿಂದಲೇ ನಿಮ್ಮ ಜೀವನದಲ್ಲಿ ನಡೆದ ಎಲ್ಲಾ
ಘಟನೆಗಳನ್ನೂ ನೆನಪಿಸಿಕೊಳ್ಳಿರಿ. ಈ ದಿನದಿಂದ
ನಿಮ್ಮ ಬಾಲ್ಯದವರೆಗೂ ಹಿಂದಕ್ಕೆ ಯೋಚಿಸಿ,
ಸಾಧ್ಯವಾದಷ್ಟನ್ನೂ ನೆನೆಪಿಸಿಕೊಳ್ಳಿರಿ.
ನೆನೆಯಲಾಗದುದರ ಬಗ್ಗೆ ಚಿಂತಿಸಬೇಡಿರಿ. ಅರ್ಥಮಾಡಿಕೊಳ್ಳಿ, ನೆನಪು ಬರದೇ ಇದ್ದದ್ದು ಕೇವಲ ಆ ಘಟನೆಯ ನಂತರ ನಿಮ್ಮಲ್ಲುಳಿದ ಭಾವನೆ ಅಷ್ಟೆ. ಅದು ನಿಮ್ಮನ್ನು ಆಳವಾಗಿ ಮುಟ್ಟಿಯೇ ಇರುವುದಿಲ್ಲ. ಹಾಗಾಗಿಯೇ ಅದು ನೆನಪಿನಲ್ಲಿ ಉಳಿಯುವುದಿಲ್ಲ. ಒಂದು ವರ್ಷ ಕಾಲ ಈ ತಂತ್ರವನ್ನು ಅಭ್ಯಾಸಿಸಿರಿ. ಪುನರ್ಜೀವಿಸುವುದು ನೆಮ್ಮದಿ ನೀಡುವ ಸುಂದರ ಮಾರ್ಗ.
ನಮ್ಮ ನಿತ್ಯಾನಂದ ಸ್ಪುರಣ ಪ್ರೋಗ್ರಾಂ
(ಎನ್.ಎಸ್.ಪಿ) ಈ ರೀತಿ ಕರ್ಮಗಳನ್ನು
ಅಳಿಸುವುದರ ಮೇಲೆ ಕೇಂದ್ರೀತವಾಗಿದೆ. ಅದು ಒಬ್ಬ
ಆತ್ಮಜ್ಞಾನಿಯಾದ ಗುರುಗಳ ಸನ್ನಿಧಿಯಲ್ಲಿ ಮಾಡುವ
ಒಂದು ಸಂಪೂರ್ಣ ಆಧ್ಯಾತ್ಮಿಕ ಸ್ನಾನದಂತೆ.
ದೇವತಾಮೂರ್ತಿಗಳು ಮತ್ತು ಆತ್ಮಜ್ಞಾನಿಗಳು - ನಿಮ್ಮ ಕರ್ಮಗಳನ್ನಳಿಸುವ ಮಾರ್ಗಗಳು
ಕರ್ಮಗಳನ್ನು ಸಂಗ್ರಹಿಸಬಾರದು ಹಾಗೂ
ಹಳೆಯ ಕರ್ಮಗಳ ಪ್ರಭಾವವಿಲ್ಲದೆಯೇ
ಬದುಕಬೇಕೆಂದು ನಮಗೆ ಮತ್ತೆ ಮತ್ತೆ ನೆನಪಿಸುವ
ಮಾರ್ಗವೊಂದಿದೆ. ಒಂದು ಉನ್ನತ ಪ್ರಜ್ಞೆಯ
ಸನ್ನಿಧಿಯಲ್ಲಿ ಕರ್ಮವು ಬಲಹೀನವಾಗುತ್ತದೆ ಎಂದು
ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು ಮೊದಲ
ಹೆಜ್ಜೆ.
ಸಾಮಾನ್ಯರಿಗೂ ಆತ್ಮಜ್ಞಾನಿಗಳಿಗೂ ಒಂದು
ಮುಖ್ಯವಾದ ವ್ಯತ್ಯಾಸವಿದೆ. ಸಾಮಾನ್ಯ ಮನುಷ್ಯನು
ಇಚ್ಛಾಮಾತ್ರದಿಂದ ತನ್ನ ದೇಹವನ್ನು ಜೀವಂತವಾಗಿ
ಇರಿಸಿಕೊಳ್ಳಲಾರ. ಆತನ ದೇಹವು ಸಜೀವ ಅಥವಾ
ನಿರ್ಜೀವವಾಗಿರುತ್ತದೆ, ಅಷ್ಟೇ. ಅದು ಆತನ
ಹತೋಟಿಯಲ್ಲಿರುವುದಿಲ್ಲ.
ಆದರೆ ಆತ್ಮಜ್ಞಾನಿಗೆ ಅದು
ಹತೋಟಿಯಲ್ಲಿರುತ್ತದೆ. ಆತನು ತನ್ನ ದೇಹವನ್ನು
ಜೀವಂತವಾಗಿಸಲೂಬಹುದು, ವಿರಮಿಸಲೂ-
ಬಹುದು. ಈ ಸಾಮರ್ಥ್ಯದಿಂದಾಗಿ ಆತನು
ಇನ್ನೊಂದು ದೇಹವನ್ನೂ ಜೀವಂತಗೊಳಿಸಬಹುದು!
ಆತ್ಮಜ್ಞಾನಿಯು ಲೋಹ ಅಥವಾ ಶಿಲೆಗೆ
ಶಕ್ತಿತುಂಬಲು ನಿಶ್ಚಯಿಸಿದರೆ, ಆ ಶಿಲೆ ಅಥವಾ
ಲೋಹವು ಆತನ ಪ್ರತಿರೂಪವೇ ಆಗಿಬಿಡುತ್ತದೆ.
ನಮ್ಮಲ್ಲಿ ಸಾಂಪ್ರದಾಯಿಕವಾದ ಪ್ರಮುಖ
ದೇವಾಲಯಗಳ ಮೂರ್ತಿಗಳೆಲ್ಲವೂ
ಆತ್ಮಜ್ಞಾನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟವುಗಳೇ.
ತಿರುವಣ್ಣಾಮಲೈಯಲ್ಲಿ ಅರುಣಗಿರಿ ಯೋಗೀಶ್ವರ,
ಚಿದಂಬರಂನಲ್ಲಿ ಪತಂಜಲಿ, ತಂಜಾವೂರಿನಲ್ಲಿ
ಕರೂರರ್, ತಿರುಪತಿಯಲ್ಲಿ ಕೊಂಗನವರ್,
ಮಧುರೈಯಲ್ಲಿ ಮೀನಾಕ್ಷಿ ಮುಂತಾದ ಜ್ಞಾನಿಗಳು
ಈ ದೇವರುಗಳಿಗೆ ಶಕ್ತಿ ತುಂಬಿದ್ದಾರೆ.
ಹಾಗಾಗಿ ದೇವರುಗಳು ಆತ್ಮಜ್ಞಾನಿಗಳ
ಶರೀರವೆಂದೇ ಭಾವಿಸಲಾಗಿದೆ. ಗುರುವು ದೇಹವನ್ನು
ತ್ಯಜಿಸಿದ ಮೇಲೆಯೂ ಶಿಷ್ಯರು ಈ ದೇವರುಗಳನ್ನು
ಆರಾಧಿಸುತ್ತಿರುತ್ತಾರೆ. ಆ ದೇವರ ಮೂರ್ತಿಯೇ
ಗುರುವಿನ ಶರೀರವೆಂದು ಭಾವಿಸುತ್ತಾರೆ. ಆ
ಕಾರಣದಿಂದಾಗಿಯೇ ಆತ್ಮಜ್ಞಾನಿಯಾದ ಗುರುವಿಗೆ
ನೀಡಿದ ಗೌರವವನ್ನೇ ಆ ದೇವರ ಮೂರ್ತಿಗೂ
ನೀಡುತ್ತಾರೆ.
ಉದಾಹರಣೆಗೆ, ಅರುಣಗಿರಿ ಯೋಗೀಶ್ವರರಿಂದ ದೀಕ್ಷೆಯನ್ನು ಪಡೆದ ಎಲ್ಲಾ ಶಿಷ್ಯರೂ ಅರುಣಾಚಲ ದೇವಾಲಯದಲ್ಲಿ ವಂಶಪಾರಂಪರ್ಯವಾಗಿ ಪೂಜೆಗಳನ್ನು ನಡೆಸುತ್ತಾ ಬಂದಿದ್ದಾರೆ. ಗುರುವಿಗೆ ಅರ್ಪಿಸುವುದನ್ನೇ ದೇವರಿಗೂ ಅರ್ಪಿಸುವುದನ್ನು ಇಲ್ಲಿ ಕಾಣಬಹುದು.
ಗುರುಗಳು ದೇಹವನ್ನು ತ್ಯಜಿಸಿದ ಮೇಲೆಯೂ
ತಾವು ಶಕ್ತಿ ಪ್ರತಿಷ್ಠಾಪನೆ ಮಾಡಿದ ಮೂರ್ತಿಗಳ
ಮೂಲಕ ಶಿಷ್ಯರಿಗೆ ಸದಾಕಾಲವೂ
ಲಭ್ಯರಾಗಿರುತ್ತಾರೆ. ಉದಾಹರಣೆಗೆ, ನನ್ನ
ಜೀವಿತಕಾಲದಲ್ಲಿ ನಾನು ಎಲ್ಲೆಡೆಯಲ್ಲೂ ಒಮ್ಮೆಲೇ
ಇರಲು ಸಾಧ್ಯವಿಲ್ಲ. ಆದ್ದರಿಂದ ಈ ಮೂರ್ತಿಗಳು
ಸ್ವತಃ ನಾನು ಅಲ್ಲಿಲ್ಲದಿರುವಾಗಲೂ ನನ್ನ
ಕಾರ್ಯವನ್ನು ಮಾಡಲು ಪ್ರೋಗ್ರಾಂ ಮಾಡಲಾಗಿವೆ.
ಅವು ನನ್ನ ಪ್ರತಿನಿಧಿಗಳು!
ದೇವತಾ ಮೂರ್ತಿಗಳಿಗೆ ತಮ್ಮದೇ ಆದ ಜ್ಞಾನವಿರುತ್ತದೆ. ಮೂರ್ತಿಗಳಿಗೆ ಶಕ್ತಿ ಪ್ರತಿಷ್ಠಾಪನೆ ಮಾಡುವುದು ಒಂದು ದೊಡ್ಡ ವಿಧಾನ. ಅದು ಒಂದು ಮಗುವಿಗೆ ಜನ್ಮ ಕೊಟ್ಟಂತೆ. ಹಾಗೆ ಪ್ರತಿಷ್ಠಾಪನೆಗೊಳಿಸಿದ ಮೂರ್ತಿಗಳು ನಿಮ್ಮ ಪ್ರಾರ್ಥನೆಗೆ ನೇರವಾಗಿ ಪ್ರತಿಸ್ಪಂದಿಸುತ್ತವೆ. ಅವುಗಳಿಗೆ ತೆರೆದ ಮನಸ್ಸಿನಿಂದ ಸಂಪರ್ಕವೇರ್ಪಡಿಸಿಕೊಂಡರೆ, ಅವೂ ನೇರವಾಗಿ ಪ್ರತಿಸ್ಪಂದಿಸುತ್ತವೆ.
ನಮ್ಮ ಆಶ್ರಮದ ಪೂಜಾ ಕೈಂಕರ್ಯಗಳನ್ನು ಗಮನಿಸಿದರೆ, ಮುಂಜಾನೆ ಉದಯರಾಗದೊಂದಿಗೆ ದೇವರನ್ನು ಎಬ್ಬಿಸಲಾಗುತ್ತದೆ. ನಂತರ ಆತನ ಕೂದಲಿಗೆ ಸಣ್ಣ ಬಟ್ಟಲಿನಲ್ಲಿ ಎಣ್ಣೆ ಹಾಗೂ ಹಲ್ಲುಜ್ಜಲು ಸಣ್ಣ ಬಟ್ಟಲಿನಲ್ಲಿ ಹಲ್ಲು ಪುಡಿಯನ್ನು ಕೊಡುತ್ತಾರೆ. ನಂತರ ಸ್ನಾನ ಮಾಡಿಸಿ, ಇಸ್ತ್ರಿ ಮಾಡಿದ ಸ್ವಚ್ಛ ವಸ್ತ್ರಗಳನ್ನು ಗುರುವಿಗೆ ನೀಡುವಂತೆಯೇ ನೀಡುತ್ತಾರೆ. ನೈವೇದ್ಯವನ್ನು ಅರ್ಪಿಸಿ ಸಂಜೆ ಆರತಿಯನ್ನು ಬೆಳಗುತ್ತಾರೆ. ರಾತ್ರಿ ಶಯನೋತ್ಸವವನ್ನೂ ಮಾಡುತ್ತಾರೆ.
ಅರ್ಥಮಾಡಿಕೊಳ್ಳಿ, ಇದೆಲ್ಲದರಿಂದಲೂ ಆ
ದೇವತಾಮೂರ್ತಿಗಳಿಗಾಗಲೀ, ಗುರುಗಳಿಗಾಗಲೀ
ಏನೂ ಲಾಭವಿಲ್ಲ. ಅದು ಕೇವಲ ನಮ್ಮ ಗಳಿಕೆ!
ದೇವರೊಂದಿಗೆ ಜೀವಿಸುವುದೆಂದರೆ ಅದೇ. ದೇವರ
ಸನ್ನಿಧಾನವನ್ನು ಅನುಷ್ಠಾನ ಮಾಡುವ ರೀತಿ ಇದೇ.
ಗುರುವಿನ ಸನ್ನಿಧಾನದ ಅನುಷ್ಠಾನವೇ ಪೂಜೆ.
ಪೂಜೆಯನ್ನು ನಿತ್ಯವೂ ಮಾಡುವುದೇಕೆಂದರೆ, ಅದು
ದೇವರ ಸನ್ನಿಧಾನದ ಸ್ಮರಣೆಯನ್ನು ನಿತ್ಯವೂ
ಮಾಡಲೆಂದು ಇರುವ ತಂತ್ರ.
ನಿತ್ಯಂ-ಧ್ಯಾನಂ-ಆನಂದಂ
ಆಗಾಮ್ಯ ಕರ್ಮವನ್ನು ಸಂಗ್ರಹಿಸದಿರಲು
ಬೇಕಾದ ಜೀವನದ ಪರಿಹಾರಗಳನ್ನೇ ನಾನು
'ನಿತ್ಯಂ' ಎಂದು ಕರೆಯುವುದು. ಏಕೆಂದರೆ ಅವನ್ನು
ನಿತ್ಯವೂ ಅಭ್ಯಾಸ ಮಾಡಬೇಕು. ಈ ಜನ್ಮದ
ಕರ್ಮಗಳನ್ನು ಅಳಿಸಲು ಬೇಕಾದುದು ಧ್ಯಾನ. ಅದೇ
'ಧ್ಯಾನಂ'. ಹಾಗಾಗಿಯೇ ನಮ್ಮ ಅನೇಕ ಧ್ಯಾನಗಳು
ಉಸಿರಾಟದ ಮೇಲೆ ಆಧಾರಿತವಾಗಿವೆ.
ಉಸಿರಾಟವನ್ನು ಹೆಚ್ಚಿಸುವುದು, ನಿಧಾನಿಸುವುದು,
ಹಿಡಿಯುವುದು ಹೀಗೆ ನಮ್ಮ ಸಾಕಷ್ಟು
ಧ್ಯಾನತಂತ್ರಗಳು ಉಸಿರಾಟದ ನಿಯಂತ್ರಣಕ್ಕೆ
ಸಂಬಂಧಪಟ್ಟದ್ದಾಗಿವೆ. ಇಡೀ ಕರ್ಮವನ್ನು
ನಾಶಗೊಳಿಸುವುದು ಕೇವಲ ಗುರುವಿನ ಅನುಗ್ರಹ
ಮಾತ್ರವೇ. ಅದೇ ಆನಂದ.
ಹೀಗೆ ಕರ್ಮ ಎಂಬುದು ಆಳವಾದ
ಅಜ್ಞಾನದಿಂದ ಏಳುವ ಆಲೋಚನೆಗಳ ಹಾಗೂ
ನಡೆ-ನುಡಿಗಳ ಪರಿಣಾಮ. ಹಾಗೂ ಅದು ನಿಮಗೆ
ಪುನಃ ಪುನಃ ಅದೇ ಕಷ್ಟಗಳ ಸರಮಾಲೆಯನ್ನೇ
ತೊಡಿಸುತ್ತದೆ. ಈ ಚಕ್ರದಿಂದ ಹೊರಬರುವ
ಮಾರ್ಗವೆಂದರೆ ಗುರುವು ನೀಡಿದ ತಿಳಿವಳಿಕೆಗಳ
ಅನುಸಾರವಾಗಿ ಉನ್ನತ ಪ್ರಜ್ಞಾವಲಯದಲ್ಲಿ ಜೀವನ
ನಡೆಸುವುದೊಂದೇ.
ಕರ್ಮದ ಬಗ್ಗೆ ಕಲ್ಪನೆಗಳು
ಸಮಾಜ ಸೇವೆಯಿಂದ ಕರ್ಮವನ್ನು ಅಳಿಸಬಹುದೇ?
ಯಾವುದೇ ಸೇವೆ ಮಾಡಲೂ
ಪ್ರೇರೇಪಣೆಯೇನೆಂಬುದೇ ಮುಖ್ಯ. ನಿಸ್ಪೃಹವಾಗಿ
ನಿಮ್ಮನ್ನು ನೀವೇ ನೋಡಿಕೊಳ್ಳಿರಿ. ಆ ಸೇವೆಯಿಂದ
ನಿಮಗೇನು ಬೇಕಾಗಿದೆ?
ಒಳ್ಳೆಯ ಕಾರ್ಯಗಳನ್ನು ಮಾಡದಿದ್ದರೆ ನರಕಕ್ಕೆ
ಹೋಗಬೇಕಾಗುವುದೆಂಬ ಭಯವೇ? ಸಮಾಜದಲ್ಲಿ
ಹೆಸರು, ಕೀರ್ತಿಯನ್ನು ಗಳಿಸುವ ಆಸೆಯೇ? ಕೇವಲ
ಕಾಲ ಕಳೆಯಲು ಒಂದು ಮಾರ್ಗವೇ?
ಮರಣಾನಂತರ ಒಳಿತಾಗಲಿ ಎಂದೇ? ಮುಂದಿನ
ಜನ್ಮವು ಚೆನ್ನಾಗಿರಲಿ ಎಂದೇ?
ದುರಾಸೆ-ಭಯಗಳಿಂದ ಪ್ರೇರೇಪಿತರಾಗಿ
ಮಾಡುವ ಕಾರ್ಯಗಳಲ್ಲಿ ನಿಮಗೆ ಆನಂದ
ಸಿಗುವುದಿಲ್ಲ. ಒಂದು ಭಾಗವು ಕಾರ್ಯ
ಮಾಡುತ್ತಿರುತ್ತದೆ. ಇನ್ನೊಂದು ಭಾಗವು ಅದರ
ಫಲವನ್ನು ಅಳೆಯುತ್ತಿರುತ್ತದೆ. ಆ ಕಾರ್ಯದಲ್ಲಿ
ನೀವು ಪೂರ್ಣವಾಗಿ ತೊಡಗಿರುವುದಿಲ್ಲ. ಹಾಗಾಗಿ
ಅದರಿಂದ ನಿಮಗೆ ಸಂತೃಪ್ತಿ ಸಿಗುವುದಿಲ್ಲ.
ಇಂತಹ ಕಾರ್ಯವೂ ಬಂಧನವೇ.
ಹೊರನೋಟಕ್ಕೆ ಇದು ಬಂಧನರಹಿತವಾದ ಒಳ್ಳೆಯ
ಕಾರ್ಯದಂತೆ ಕಾಣಬಹುದು. ಆದರೆ ನಿಮ್ಮ
ಅಂತರಾಳದಲ್ಲಿ ಅದು ಹಾಗಲ್ಲವೆಂದು ನೀವೇ
ಬಲ್ಲಿರಿ. ಇಡೀ ಮಾನವಕುಲವೇ ಫಲಕ್ಕಾಗಿ ಮಾತ್ರ
ಕಾರ್ಯಮಾಡುತ್ತಿದೆ. ಇದು ಸಮಾಜ ಸೇವೆಗೂ
ಅನ್ವಯಿಸುತ್ತದೆ. ಸೇವೆ ಮಾಡುವಾಗಲಾದರೂ ಹಣ
ಕೀರ್ತಿಗಳ ಬಗ್ಗೆ ಚಿಂತಿಸದಿರಿ. ಯಾರನ್ನೋ
ಸಂತೋಷಪಡಿಸಬೇಕೆಂಬ ಬಯಕೆ ಬೇಡ. ನಿಮ್ಮ
ಅಸ್ತಿತ್ವದ ಅರಿವು ಇನ್ನೊಬ್ಬರಿಗೆ ತಿಳಿಯುವುದೇ
ಬೇಡ.
ಕಾರ್ಯವನ್ನು ಕೇವಲ ಕಾರ್ಯದ ಸಲುವಾಗಿ
ಮಾಡಿರಿ! ಏನೋ ಯೋಜನೆ ಹೂಡದಿರಿ. ಎಲ್ಲಿ
ಅವಶ್ಯವಿದೆಯೋ ಅಲ್ಲಿ ಸೇವೆಯನ್ನು ಮಾಡಿರಿ.
ಇಂತಹ ಸೇವೆಯು ನಿಮಗೆ ಅತಿಶಯವಾದ
ಆತ್ಮಬಲವನ್ನು ನೀಡುತ್ತದೆ. ದಿನಕ್ಕೆ ಅರ್ಧ
ಘಂಟೆಯಾದರೂ ನಿಸ್ವಾರ್ಥ ಸೇವೆಯನ್ನು ಮಾಡಿರಿ.
ಆಗ ಸೇವೆಯ ನಿಜ ಆನಂದವನ್ನು ಅನುಭವಿಸುವಿರಿ.
ಕರ್ಮವು ಅಳಿಯಲು ಗಾಢವಾದ ಅರಿವು,
ಜಾಗೃತಿ ಮತ್ತು ಪ್ರಜ್ಞೆಯ ಒಂದು ಮಿಂಚು
ನೋಟವಾದರೂ ಆಗಬೇಕು.
ಆತ್ಮಹತ್ಯೆ ಅಥವಾ ಅಪಘಾತದಿಂದ ಅಕಾಲ ಮರಣವಾದಾಗ ಏನಾಗುತ್ತದೆ?
ಅಕಾಲಮೃತ್ಯುವಾದಾಗ, ಆತ್ಮವು ಹೊಸ
ಶರೀರವನ್ನು ಪಡೆಯಲು ತನ್ನ ಜೀವಿತದ ನಿಗದಿತ
ಸಮಯದ ಅಂತ್ಯದವರೆಗೂ ಕಾಯಬೇಕಾಗುತ್ತದೆ.
ಆತ್ಮಹತ್ಯೆ ಮಾಡಿಕೊಂಡಾಗ, ಜೀವಿಯು ಬದುಕಿದ್ದರೆ
ಅನುಭವಿಸಬೇಕಾದುದಕ್ಕಿಂತ ಅತಿ ತೀವ್ರವಾದ
ನೋವನ್ನು ಅನುಭವಿಸಬೇಕಾಗುತ್ತದೆ. ನಿಮ್ಮ
ಮುಂದೆ ಔತಣದ ಊಟವಿದ್ದರೂ ಅದನ್ನು
ಸವಿಯಲು ಕೈ ಅಥವಾ ದೇಹವೇ ಇಲ್ಲದಂತೆ!
ಅಪಘಾತವಾದಾಗ ಜೀವಿಯು ದೇಹವಿಲ್ಲದೆ
ಇರಬೇಕಾಗುತ್ತದೆ. ಆದರೆ ಆತ್ಮಹತ್ಯೆಯಂತೆ
ನೋವಿರುವುದಿಲ್ಲ. ಆತ್ಮವು ತಾನು
ಜೀವಂತವಾಗಿದ್ದರೆ ಯಾವ ಸ್ಥಿತಿಯಲ್ಲಿರುತ್ತಿತ್ತೋ
ಅದೇ ಸ್ಥಿತಿಯಲ್ಲಿರುತ್ತದೆ. ಕೇವಲ ಮುಂದಿನ
ಶರೀರವನ್ನು ಪಡೆಯುವುದಕ್ಕೆ ಕಾಯುತ್ತದೆ.
ಹಿಂದಿನ ಜನ್ಮದ ಪ್ರತ್ಯಾವರ್ತನೆಯು ಉಪಯುಕ್ತವೇ? ಕ್ಷೇಮವೇ?
ಒಬ್ಬ ಜ್ಞಾನಿಯ ವಿನಃ ಬೇರಾರೂ ಹಿಂದಿನ
ಜನ್ಮದ ಪ್ರತ್ಯಾವರ್ತನೆಯನ್ನು ಮಾಡಬಾರದು. ಈ
ಜನ್ಮವನ್ನೂ ಬದಲಾಯಿಸಬಲ್ಲ ಗಾಢವಾದ ಶಕ್ತಿ
ಅದಕ್ಕಿದೆ. ಉದಾಹರಣೆಗೆ, ಹಿಂದಿನ ಜನ್ಮದಲ್ಲಿ
ಒಂದು ವೇಳೆ ನೀವು ಅಂಧರಾಗಿದ್ದರೆ, ಈ
ನಿವರ್ತನೆಯಿಂದ ಈ ಜನ್ಮದಲ್ಲೂ
ಅಂಧತೆಯುಂಟಾಗಬಹುದು!
ಆತ್ಮಜ್ಞಾನಿಯಲ್ಲದ ವ್ಯಕ್ತಿಯು
ಪ್ರತ್ಯಾವರ್ತನೆಯನ್ನು ಮಾಡಿದರೆ, ಯಾರಿಗಾಗಿ
ಅದನ್ನು ಮಾಡುತ್ತಿದ್ದಾನೋ ಆತನ ಕರ್ಮವನ್ನೂ
ಅನುಭವಿಸುತ್ತಾನೆ.
ಹಿಂದಿನ ಜನ್ಮದ ಪ್ರತ್ಯಾವರ್ತನೆಯನ್ನು
ನಿಭಾಯಿಸಲು, ಮುಕ್ತಗೊಳಿಸಲು ಹಾಗೂ ಹಳೆಯ
ಸಂಸ್ಕಾರಗಳನ್ನು ಯಾವ ರೀತಿಯಲ್ಲಿ ತೀರಿಸಬೇಕೆಂಬ
ಅರಿವಿರಬೇಕು.
ಗುರುಗಳು ಕರ್ಮಗಳನ್ನು ತೀರಿಸಿದಾಗ ನೋವನ್ನು ಅನುಭವಿಸಬೇಕಾಗುತ್ತದೆಯೇ?
ಗುರುಗಳು ಕರ್ಮಗಳನ್ನು ತೀರಿಸಿದಾಗ, ನೀವದನ್ನು ನೋವೆಂದು ಕರೆಯುತ್ತೀರಿ. ವಾಸ್ತವವಾಗಿ, ಅನೇಕ ಜನ್ಮಗಳಲ್ಲಿ ತೀರಿಸಬೇಕಾಗಿದ್ದ ಕರ್ಮವನ್ನು ಗುರುಗಳು ಕ್ಷಣಮಾತ್ರದಲ್ಲಿ ಅಳಿಸಿರುತ್ತಾರೆ. ಆ ಲೆಕ್ಕದಲ್ಲಿ ಈ ನೋವು ಏನೂ ಅಲ್ಲವೆಂದೇ ಹೇಳಬೇಕು.
ಶಾರದಾ ದೇವಿಯವರು ಹೇಳುತ್ತಾರೆ,
'ಗುರುಗಳು ನಮ್ಮ ಸಂಸ್ಕಾರಗಳನ್ನು ತೆಗೆಯುವುದು,
ಮೂಳೆ ಮುರಿದ ನೋವನ್ನು ಅನುಭವಿಸುವುದರ
ಬದಲಿಗೆ ಮುಳ್ಳು ಚುಚ್ಚಿಸಿಕೊಂಡಂತೆ!'