ಆಧ್ಯಾತ್ಮಿಕತೆ ಹಾಗೂ ಸೇವೆ
This text was machine-transcribed from the printed book and may contain errors. Select the words and choose “Report a mistake”.
ಆಧ್ಯಾತ್ಮಿಕತೆಯು ಕೇವಲ ವೈಯಕ್ತಿಕವಾದುದಲ್ಲ. ಅದು ಸಮಾಜದ ಮೇಲೆಯೂ ಗಾಢವಾದ ಪರಿಣಾಮ ಬೀರಬಲ್ಲದು. ಆಧ್ಯಾತ್ಮಿಕತೆಯು ಕೇವಲ ಆಚಾರವಲ್ಲ, ಅನುಕಂಪವೂ ಹೌದು. ಅದು ಸಮಾಜದ ಸೇವೆ; ಅದು ಮಾನವಕುಲದ ಸುಖಕ್ಕಾಗಿ ಇರುವ ಗಾಢವಾದ ಪ್ರೇಮ ಮತ್ತು ಅನುಕಂಪ.
ಬಂಗಾಳದ ಸಂತರಾದ, ರಾಮಕೃಷ್ಣ ಪರಮಹಂಸರ ಶಿಷ್ಯರಾದ ವಿವೇಕಾನಂದರು ಸುಂದರವಾಗಿ ಹೇಳಿದ್ದಾರೆ- 'ಆತ್ಮನೊ ಮೋಕ್ಷಾರ್ಥಂ ಜಗತ್ ಹಿತಾಯಚ' – ಆತ್ಮ ಸಾಕ್ಷಾತ್ಕಾರಕ್ಕಾಗಿಯೂ ಜಗತ್ತಿನ ಹಿತಕ್ಕಾಗಿಯೂ ಇರುವುದೇ ಆಧ್ಯಾತ್ಮ.
ಸಮಾಜಕ್ಕೆ ಮಾಡುವ ನಿಸ್ವಾರ್ಥ ಸೇವೆಯು ವ್ಯಕ್ತಿಯನ್ನು ಉನ್ನತ ಮಟ್ಟದ ಪ್ರಜ್ಞೆಯನ್ನು ತಲುಪಲು ಉತ್ತೇಜಿಸುತ್ತದೆ. ನಮ್ಮಲ್ಲಿ ಸುಪ್ತವಾಗಿರುವ ದೈವೀಕತೆಯನ್ನು ಜಾಗೃತಗೊಳಿಸುವ ಶಕ್ತಿ ಮತ್ತು ಧೈರ್ಯಗಳನ್ನು ನೀಡುತ್ತದೆ. ನಿಸ್ವಾರ್ಥ ಸೇವೆಯ ಪ್ರತಿ ಅವಕಾಶವೂ
ಭಗವಂತನ ಕೊಡುಗೆಯೇ. ಧನ್ಯತಾಭಾವದಿಂದ ಮಾಡುವ ನಿಸ್ವಾರ್ಥ ಸೇವೆಯು ಮೋಕ್ಷದೆಡೆಗೆ ಕೊಂಡೊಯ್ಯುತ್ತದೆ. ಹೇಗೆಂದರೆ ಇದು ಅಹಂಕಾರವನ್ನಳಿಸಿ, ಪ್ರೇಮ ತಾಳ್ಮೆಗಳನ್ನು ಮೂಡಿಸಿ ನಮಗೂ ಇತರರಿಗೂ ಆನಂದವನ್ನು ನೀಡುವ ಸಾಮರ್ಥ್ಯ ಹೊಂದಿದೆ. ನಿಜವಾಗಿಯೂ ಆಧ್ಯಾತ್ಮಿಕತೆಯ ಹಾದಿಯಲ್ಲಿ ನಿಸ್ವಾರ್ಥ ಸೇವೆಯೇ ಮೊದಲ ಹಾಗೂ ಕೊನೆಯ ಹೆಜ್ಜೆ.
ನವಯುಗದ ಮಾನವನನ್ನು ಸೃಷ್ಟಿಸುವ ಪರಿಕಲ್ಪನೆಯೇನೆಂದರೆ - ಯಾರು ತಾನೇ ಆನಂದವೆಂಬ ಅರಿವಿರುವವನೋ ಪ್ರಾಪಂಚಿಕ ಜೀವನದಲ್ಲಿ ಆಧ್ಯಾತ್ಮಿಕತೆಯ ಸಾರವನ್ನು ಹೊಂದಿರುವನೋ, ಕೇವಲ ಪಾರಂಗತನಲ್ಲದೆ ಪರಿಪೂರ್ಣನಾಗಿರುವನೋ, ಈ ವಿಶ್ವವು ಅಸ್ತವ್ಯಸ್ತವಾಗಿ ತೋರಿದರೂ, ಇದರಲ್ಲಿ ವಿಸ್ಮಯಕರವಾದ ವ್ಯವಸ್ಥೆ ಇದೆಯೆಂದು ಅರಿತವನೋ. ಎಲ್ಲವನ್ನೂ ಸಾಕ್ಷೀಭಾವದಿಂದ ಸ್ವೀಕರಿಸುವನೋ - ಅಂತಹ ಮಾನವನನ್ನು ನಿರ್ಮಿಸುವುದು. ಅವನು ಪರಮಹಂಸ ಅಥವಾ ಆತ್ಮಜ್ಞಾನಿಯಂತೆಯೂ ಜೀವನ ನಡೆಸುವನು. ಆತನ ಜೀವನವೇ ಧ್ಯಾನಮಯವಾಗಿರುತ್ತದೆ. ವಿಶ್ವಚೈತನ್ಯದಲ್ಲಿ ಆಳವಾಗಿ ಬೇರೂರಿ, ತನಗೂ ಇತರರಿಗೂ ಆಶ್ರಯ ನೀಡಬಲ್ಲ ವೃಕ್ಷದಂತೆ, ದೈವ ಘಟನೆಯ ಬಲದಿಂದ ನಿಸ್ವಾರ್ಥ ಸೇವೆಯನ್ನು ಮಾಡುತ್ತ ನಿರಂತರವಾಗಿ ಪರಿಣಾಮವನ್ನು ಕೊಡುವಂತಹ ಚೈತನ್ಯವಾಗಿರುತ್ತಾನೆ.
ಇಂತಹ ವ್ಯಕ್ತಿಯು ಸಹಜವಾಗಿಯೇ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾನೆ. ಜವಾಬ್ದಾರಿಯೆಂದರೆ, ಯಾವುದೇ ಪರಿಸ್ಥಿತಿಗೆ ಸ್ವಯಂಪ್ರೇರಿತವಾಗಿ ಸ್ಪಂದಿಸುವಂತಹ ಗುಣ. ಜವಾಬ್ದಾರಿಯೇ ವಿಸ್ತರಣೆಯ ಸಂಕೇತ. ನೀವು ಜವಾಬ್ದಾರಿಯನ್ನು ಹೊತ್ತರೆ ಸಹಜವಾಗಿಯೇ ಮುಂದಾಳಾಗುತ್ತೀರಿ. ಚೈತನ್ಯವನ್ನು ಉತ್ಪಾದಿಸುತ್ತೀರಿ.
ನೀವು ಸೆರೆಯಾಳಾಗಿ ದುಡಿಯುತ್ತಿರುವಂತೆ ನಿಮಗೆ ಭಾಸವಾದರೆ ನಿಮ್ಮಲ್ಲಿ ಜವಾಬ್ದಾರಿಯಿಲ್ಲವೆಂದರ್ಥ! ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದಾಗ ನೀವು ಮುಂದಾಳಾಗುತ್ತೀರಿ. ನಿಮ್ಮ ಅಂತರಾತ್ಮವು ವಿಶಾಲವಾದಾಗ ಇಡೀ ಜಗತ್ತಿನ ಜವಾಬ್ದಾರಿಯನ್ನು ಹೊರಬಲ್ಲಿರಿ! ಆಗ ದಿವ್ಯಶಕ್ತಿಯು ಸಹಜವಾಗಿಯೇ ನಿಮ್ಮ ಮೂಲಕ ಹರಿಯ ಲಾರಂಭಿಸುತ್ತದೆ.
ನಿಮ್ಮ ಸುತ್ತಲಿನ ಪರಿಸರದಲ್ಲಿ ನಡೆಯುತ್ತಿರುವ ಎಲ್ಲ ವಿಷಯಗಳ ಬಗ್ಗೆ ಉನ್ನತ ಮಟ್ಟದಲ್ಲಿ ಜವಾಬ್ದಾರಿಯನ್ನು ನೀವು ನಿಮ್ಮಲ್ಲಿ ಹೊಂದಿದರೆ ಸಹಜವಾಗಿಯೇ ಸಾಮಾಜಿಕ ಜವಾಬ್ದಾರಿಯೂ ಉಂಟಾಗುತ್ತದೆ. ನೀವಾಗ ಜ್ಞಾನಿಯಾದ CEO ಆಗುತ್ತೀರಿ! ಜ್ಞಾನಿಯಾದ CEO ಆಗಿ ನೀವು ಮೊದಲು ಮಾಡುವ ಎಲ್ಲ ಸಂಸ್ಥೆಗಳೂ ಸಹಜವಾಗಿಯೇ ಸಾಮಾಜಿಕ ಜವಾಬ್ದಾರಿಯುಳ್ಳ ಉಪ ಉತ್ಪನ್ನಗಳಾಗುತ್ತವೆ. ಕೇವಲ ಲಾಭ-ನಷ್ಟಗಳನ್ನು ಮುಂದಿಟ್ಟುಕೊಂಡು ಮಾನವನನ್ನೂ, ಭೂಮಿಯನ್ನೂ, ಪ್ರಕೃತಿಯನ್ನೂ ನಿರಾದರಗೊಳಿಸುವ ಸಂಸ್ಥೆಗಳಲ್ಲ. ನಿರ್ಧನರನ್ನು ಪೀಡಿಸಿಯಾದರೂ ಧನಗಳಿಸುವ ಬಯಕೆಯಿರುವುದಿಲ್ಲ. ಸಾಮಾಜಿಕ, ಪರಿಸರ ಅಥವಾ ಆರ್ಥಿಕ ತೊಂದರೆಗಳನ್ನು ಸೃಷ್ಟಿಸುವುದರ ಬದಲು ಸಮಾಜಕ್ಕೆ ಅಗಾಧ ಸಕಾರಾತ್ಮಕ ಪ್ರಭಾವವನ್ನು ಬೀರಿ, ವಿಶ್ವವನ್ನು ಎಲ್ಲರಿಗೂ ಇನ್ನೂ ಉತ್ತಮ ಸ್ಥಾನವನ್ನಾಗಿ ಮಾಡುತ್ತವೆ.