ನಿಮ್ಮಲ್ಲಿ ನೀವು ಸ್ಥಿರವಾಗುವುದು ಹೇಗೆ?
This text was machine-transcribed from the printed book and may contain errors. Select the words and choose “Report a mistake”.
ನಿಮ್ಮಲ್ಲೇ ನೀವು ಸ್ಥಾಪಿತವಾಗಲು ನಿಮ್ಮೊಳಕ್ಕೆ ನೀವು ಹೆಚ್ಚು ಹೆಚ್ಚು ಆಳಕ್ಕೆ ಹೋಗಬೇಕು.
ಸಂಪೂರ್ಣ ಸಮಸ್ಥಿತಿಯನ್ನು ಹೊಂದುವವರೆಗೂ ನಿಮ್ಮ ಆಲೋಚನೆಗಳನ್ನೂ, ಭಾವನೆಗಳನ್ನೂ ಸಾಕ್ಷಿಭಾವದಿಂದ ನೋಡುವುದನ್ನು ಅಭ್ಯಾಸ ಮಾಡಿರಿ. ಅನತಿಕಾಲದಲ್ಲಿ ನಿಮ್ಮ ಯತ್ನವು ಅಪ್ರಯತ್ನವಾಗುತ್ತದೆ.
ನೀವು ನಿಮ್ಮ ನಿಜ ಅಸ್ತಿತ್ವವನ್ನು ಹೊಂದುತ್ತೀರಿ – ಆ 'ನೀನು' ಎಂಬುದು ಸಾಮಾಜಿಕ ನಿಯಮಗಳಿಂದಾಗಲೀ ಪೂರ್ವಾನುಭವಗಳ ಸಮೂಹದಿಂದಾಗಲೀ ರೂಪಿಸಲ್ಪಟ್ಟಿರುವುದಿಲ್ಲ.
ಪ್ರಸ್ತುತ ನೀವು ಮೂರು ವ್ಯಕ್ತಿಗಳಾಗಿರುವಿರಿ. ಹೊರಗಿನವರ ದೃಷ್ಟಿಯಲ್ಲಿ ನೀವು, ನಿಮ್ಮ ದೃಷ್ಟಿಯಲ್ಲಿ ನೀವು, ನಿಜವಾಗಿಯೂ ಇರುವ ನೀವು.
ಆದರೆ, ನಿಜವಾಗಿಯೂ ನೀವು ಯಾರು?
ನಿಮ್ಮನ್ನು ಸಮಾಜವು ಗುರುತಿಸುವ, ಪ್ರಧಾನಾಧಿಕಾರಿಯೋ, ಕೂಲಿಕಾರನೋ, ವೈದ್ಯನೋ ಅಥವಾ ಶಾಲೆ ಬಿಟ್ಟವನೋ? ನೀವು ಖಿನ್ನಳಾದ ಪತ್ನಿಯೋ ಅಥವಾ ಗೌರವಾನ್ವಿತ ತಂದೆಯೋ/ ನೀವು ಮೊದಲಸ್ಥಾನ ಪಡೆದ ವಿದ್ಯಾರ್ಥಿಯೋ ಅಥವಾ ಅಪರಾಧಿಯೋ? ನೀವು ಉದಾರ ಮನೋಭಾವದ ಗಂಡನೋ, ಅಥವಾ ಒತ್ತಡಕ್ಕೊಳಗಾದ CEOನೋ? ಅನುಕರಣೀಯ ವ್ಯಕ್ತಿಯೋ? ನೀವು ಇವುಗಳು ಮಾತ್ರವೇ?
ಸಮಾಜವು ಪ್ರಸ್ತುತ ನಿಮ್ಮನ್ನು ಯಾರೆಂದು ಆರೋಪಿಸಿದೆಯೋ ಅದೇ ನೀವೆಂದು ಬಗೆದು ಮೆಲುಕು ಹಾಕಲು ಮೊದಲು ಮಾಡುತ್ತೀರಿ. ಅದು ನೀವೇ ಆಗಿ, ನೀವು ಒಂದು ವ್ಯಕ್ತಿತ್ವದಲ್ಲಿ ಸಿಕ್ಕಿ ಹಾಕಿಕೊಂಡು ಆ ವ್ಯಕ್ತಿತ್ವವೇ ನಿಮ್ಮದಾಗಿ ಅದೇ ನಿಮ್ಮ ಸೆರೆಯಾಗುತ್ತದೆ. ಹರಿಯಬೇಕಾದ ನಿಮ್ಮ ಜೀವ ಶಕ್ತಿಯು ಗಡ್ಡೆಕಟ್ಟುತ್ತದೆ. ಅಲ್ಲಿಂದ ಮುಂದೆ ವಿಕಸನವೂ ಆಗದು; ಏಕೆಂದರೆ ಬದಲಾವಣೆ ಸಂಭವಿಸಲು ಸ್ಥಳಾವಕಾಶವೇ ಇರುವುದಿಲ್ಲ.
ಇಷ್ಟು ಮಾತ್ರ ಸ್ಪಷ್ಟ- ನಿಮ್ಮ ಸಂಗಾತಿಯನ್ನು ಬದಲಿಸಿ ಪ್ರಯೋಜನವಿಲ್ಲ. ವಿಹಾರ ಹೋಗುವುದರಲ್ಲಿ ಪ್ರಯೋಜನವಿಲ್ಲ. ಹೊಸ ಕಾರನ್ನು ಕೊಳ್ಳುವುದಾಗಲೀ, ಮಾನಸಿಕ ಚಿಕಿತ್ಸೆಯಿಂದಾಗಲೀ, ಹೊರಗಿನ ಯಾವುದೇ ಬದಲಾವಣೆಯಿಂದಾಗಲಿ ಪ್ರಯೋಜನವಿಲ್ಲ.
ನೀವೀಗಿರುವ ಸ್ಥಿತಿಯಿಂದ ಅಂತರಂಗದಲ್ಲಿ ಪರಿವರ್ತನೆ ಮೂಡಿಸಲು ಪ್ರಯತ್ನ ಮಾಡಲು ಮೊದಲಿಟ್ಟಾಗ ನಿಮಗೆ ನೀವೇ ನೆರವಾಗಬಲ್ಲಿರಿ.
ಆಧ್ಯಾತ್ಮಿಕತೆ ಎಂದರೆ ನಿಮ್ಮ ನಿಜ ಸ್ಥಿತಿಗೆ ಮರಳುವುದು ಮತ್ತು ನಿಮ್ಮೊಂದಿಗೆ ನೀವು ಜೊತೆಗೂಡುವುದು.
ತಮ್ಮ ಅಸ್ತಿತ್ವವು ಸಾಮಾಜಿಕ ಗುರುತು ಹಾಗೂ ಭೌತಿಕ ಸಂಪತ್ತುಗಳಿಗೆ ಮೀರಿದ್ದು ಎಂದು ಅರಿತವರೇ ನಿಜವಾದ ಆಧ್ಯಾತ್ಮಿಕರು. ಅವರು ತಾವಾಗಿಯೇ ಪೂರ್ತಿಯಾಗಿ ತಾನೇ ತಾನಾಗಲು ಸಾಮಾಜಿಕ ನಿಯಮಗಳನ್ನು ಮೀರಿ ಹೋಗುವವರು. ಆಧ್ಯಾತ್ಮಿಕತೆ ಸಂಭವಿಸಬೇಕು ಎಂದೊಡನೆ ಎಲ್ಲಾ ಬಾಧ್ಯತೆಗಳನ್ನು ತೊರೆದು ದೂರದ ಕಾಡಿಗೆ ಹೋಗಬೇಕೆಂಬ ಭಾವನೆಯನ್ನು ತೊಡೆದುಹಾಕಿರಿ.
ಮಾನಸಿಕ ವೀಕ್ಷಣೆಯಲ್ಲಿ ಸರಳವಾದ ಬದಲಾವಣೆ ಮಾತ್ರ ಸಾಕು.