KAILASA Library/ಕರ್ಮ/ಕರ್ಮ ಎಂದರೇನು?Sign in
ಕರ್ಮ

ಕರ್ಮ ಎಂದರೇನು?

This text was machine-transcribed from the printed book and may contain errors. Select the words and choose “Report a mistake”.

ನಾವೆಲ್ಲರೂ ಕರ್ಮ ಎಂಬ ಪದವನ್ನು ಕೇಳಿಯೇ ಇರುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಪುಸ್ತಕಗಳನ್ನೋದಿಯೋ, ಬೇರೆಯವರಿಂದ ಕೇಳಿಯೋ ಅದು ಏನೆಂಬುದನ್ನು ಸ್ವಲ್ಪಮಟ್ಟಿಗೆ ತಿಳಿದುಕೊಂಡಿರುತ್ತೇವೆ. ಅದು ಜನನ-ಮರಣಗಳ ಚಕ್ರಕ್ಕೆ ಬುನಾದಿಯಾಗಿರುವುದರಿಂದ ಅದನ್ನು ಸರಿಯಾಗಿ ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. ಅದು ಆನಂದಮಯ ಜೀವನಕ್ಕೆ ತಳಹದಿ.

ಕರ್ಮವು ನಮ್ಮಲ್ಲಿ ಉಳಿದಿರುವ ಪೂರೈಸದೇ ಹೋದ ಅನುಭವಗಳ ಕಂತೆ ಮತ್ತು ಅವುಗಳನ್ನು ಪೂರೈಸಿಕೊಳ್ಳುವಂತೆ ಎಡೆಬಿಡದೆ ಎಳೆದಾಡುವ ಅಂಶ. ಈ ಅಪರಿಪೂರ್ಣವಾದ ಅನುಭವಗಳು ನಮ್ಮಲ್ಲಿ ಮನೆಮಾಡಿರುವುದು ಏಕೆಂದರೆ, ನಾವು ಕೆಲವು ಕ್ರಿಯೆಗಳನ್ನು ಸಾಕಷ್ಟು ತೀವ್ರವಾಗಿಯೂ ಆಳವಾಗಿಯೂ ಮಾಡದೇ ಇರುವುದರಿಂದ. ತೀವ್ರವಾಗಿಯೂ ಆಳವಾಗಿಯೂ ಮಾಡಿದ ಯಾವುದೇ ಕ್ರಿಯೆಯು ಯಾವಾಗಲೂ ನಮ್ಮ ಜೀವನದ ಪರಿಧಿಯನ್ನು ಅತಿಕ್ರಮಿಸಿ, ನಮ್ಮನ್ನು ಮುಕ್ತವಾಗಿಸುತ್ತದೆ. ಪೂರ್ಣವಾದ ಸಂತೃಪ್ತಿಯನ್ನು ಪಡೆಯದ ನಮ್ಮ ಸಂಪೂರ್ಣ ಶಕ್ತಿ, ಗಮನ ಮತ್ತು ಅರಿವುಗಳನ್ನು ಹೊಂದದ ಯಾವುದೇ ಅಪರಿಪೂರ್ಣವಾದ ಅನುಭವಗಳು ಕರ್ಮವಾಗಿ ನಮ್ಮಲ್ಲಿ ಉಳಿಯುತ್ತದೆ.

ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ ಓಂ ಶಾಂತಿಃ ಶಾಂತಿಃ ಶಾಂತಿಃ

ಪೂರ್ಣದಿಂದ ಪೂರ್ಣ ಉದಿಸುತ್ತದೆ ಪೂರ್ಣದಿಂದ ಪೂರ್ಣವನ್ನು ಕಳೆದರೂ ಪೂರ್ಣವೇ ಉಳಿಯುತ್ತದೆ ಓಂ ಶಾಂತಿಃ ಶಾಂತಿಃ ಶಾಂತಿಃ

ಇದರರ್ಥವೇನೆಂದರೆ, ನಮ್ಮ ಸಹಜ ಸ್ವಭಾವವೇ ಪೂರ್ಣತ್ವ ಅಥವಾ ಸಂತೃಪ್ತಿ. ನಾವು ಏನೇ ಮಾಡಿದರೂ ಅದರಲ್ಲಿ ಸಂತೃಪ್ತಿಯನ್ನು ಅರಸುತ್ತೇವೆ. ನಾವು ಸ್ವಲ್ಪ ಕರ್ಮವನ್ನು ಹೊತ್ತಿದ್ದರೂ ಸಹ, ಮೂಲತಃ ನಾವು ಪೂರ್ಣ ಸಂತೃಪ್ತರು, ಹಾಗೂ ಸಂಪೂರ್ಣರು. ಆದುದರಿಂದ, ಸಂತೃಪ್ತಿಗೊಳ್ಳದ ಯಾವುದೇ ಕರ್ಮವು ನಮ್ಮಲ್ಲಿ ಬಹಳ ಕಾಲ ಉಳಿಯುವುದಿಲ್ಲ.

ಅದು ತನ್ನನ್ನು ಪೂರೈಸಿಕೊಳ್ಳಲು ಮಿತಿಮೀರಿದ ಪ್ರಯತ್ನವನ್ನು ಮಾಡುತ್ತದೆ. ಅದು ತನ್ನ ಪೂರೈಕೆಗಾಗಿ ನಮ್ಮನ್ನು ಪುನಃ ಪುನಃ ಮಾಡಿದ್ದೇ ಕಾರ್ಯಗಳನ್ನು ಮಾಡುವಂತೆ ಪ್ರಚೋದಿಸುತ್ತದೆ. ನಮ್ಮ ವ್ಯವಸ್ಥೆಯಲ್ಲಿ ಯಾವುದೇ ಆಸೆ ಅಥವಾ ಅನುಭವವು ಪೂರ್ಣವಾಗದಿದ್ದರೂ ಅದು ಕರ್ಮವಾಗಿ ಉಳಿಯುತ್ತದೆ ಮತ್ತು ಅದು ಪೂರ್ಣವಾಗುವವರೆವಿಗೂ ನಮ್ಮನ್ನು ಪುನಃ ಪುನಃ ಅದೇ ಅನುಭವಗಳಿಗೆ ತಳ್ಳುತ್ತದೆ.

ಜೀವನದಲ್ಲಿ ನಾವು ಎಡೆಬಿಡದೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಈ ನಿರ್ಣಯಗಳು ನಮ್ಮ ಜೀವನದ ಪ್ರಧಾನವಾದ ಘಟನೆಗಳಿಗೆ ಮಾತ್ರವಲ್ಲ; ನಾವು ಸಾಧಾರಣವಾಗಿ ಆಡುವ ಮಾತುಗಳಿಗೂ, ಮಾಡುವ ಆಲೋಚನೆಗಳಿಗೂ ಅನ್ವಯಿಸುತ್ತವೆ. ನಮ್ಮ ಎಲ್ಲ ಆಲೋಚನೆಗಳು, ನುಡಿಗಳು ಮತ್ತು ಕ್ರಿಯೆಗಳೂ ಒಟ್ಟುಗೂಡಿ ಕರ್ಮದ ಹೊರೆಗೆ ಹೊಣೆಯಾಗುತ್ತವೆ. ಏಕೆಂದರೆ, ಅವು ಯಾವುವೂ ನಮ್ಮಲ್ಲಿ ಸಂತೃಪ್ತಿಯನ್ನುಂಟು ಮಾಡುವುದಿಲ್ಲ ಹಾಗೂ, ಅವು ಯಾವಾಗ ನಮ್ಮಲ್ಲಿ ಸಂತೃಪ್ತಿಯನ್ನುಂಟುಮಾಡುವುದಿಲ್ಲವೋ ಅವು ಕರ್ಮದ ಹೊರೆಯಾಗಿ, ಅವನ್ನು ಹೇಗಾದರೂ ಈಡೇರಿಸಿಕೊಳ್ಳಲು ಪ್ರೇರಿಸುತ್ತವೆ. ನಾವು ಅಸ್ಪಷ್ಟವಾಗಿಯೂ, ಅತೃಪ್ತಿಯಿಂದಲೂ, ಅಜ್ಞಾನದಿಂದಲೂ, ಯೋಚಿಸುತ್ತಲೂ, ಮಾತನಾಡುತ್ತಲೂ, ಕೆಲಸಗಳನ್ನು ನಿರ್ವಹಿಸುತ್ತಿರುತ್ತೇವೆ. ಹೀಗೆ ಮಾಡುವಾಗ, ಪೂರ್ಣತ್ವವೆಂಬ ನಮ್ಮ ಸಹಜಸ್ವಭಾವವು ತೊಳಲಾಡಲು ಪ್ರಾರಂಭವಾಗುತ್ತದೆ. ಆದುದರಿಂದ ನಮ್ಮವೇ ಆದ ಆಲೋಚನೆಗಳು, ನುಡಿಗಳು ಮತ್ತು ಕಾರ್ಯ ಗಳು ನಮ್ಮ ಕರ್ಮವಾಗಿ ಹೇಗಾದರೂ ಸಂತೃಪ್ತಿಯನ್ನು ಪಡೆಯಲು ಪ್ರೇರಿಸುತ್ತವೆ.

ಸ್ಪಷ್ಟವಾಗಿ ತಿಳಿದುಕೊಳ್ಳಿರಿ-ಈಗ ನೀವು ಇಲ್ಲಿರುವುದು, ನನ್ನ ಪ್ರವಚನವನ್ನು ಕೇಳುತ್ತಿರುವುದು, ನೀವು ಹಿಂದೆ ಮಾಡಿದ ತೀರ್ಮಾನಗಳಿಂದಲೇ. ನೀವು ಕಂಡ ಪ್ರಕಟಣೆಗೆ ಗಮನ ಕೊಡಲು ನಿರ್ಧರಿಸಿದ್ದಿರಿ. ಇನ್ನೂ ಹೆಚ್ಚಿನ ವಿಷಯವನ್ನು ತಿಳಿಯುವ ನಿರ್ಧಾರಮಾಡಿದ್ದಿರಿ. ನಿಮ್ಮ ಕಾರಿನಲ್ಲಿ ಕುಳಿತು ಅದನ್ನು ನಡೆಸುವ ನಿರ್ಧಾರಮಾಡಿದ್ದಿರಿ. ನಿಮ್ಮ ಕಾರನ್ನು ಇಲ್ಲಿ ನಿಲ್ಲಿಸುವ ನಿರ್ಧಾರ ಮಾಡಿದ್ದಿರಿ. ಒಳಗೆ ಬಂದು ಕುಳಿತುಕೊಳ್ಳುವ ನಿರ್ಧಾರ ಮಾಡಿದ್ದಿರಿ. ಇದುವರೆವಿಗೂ ಕುಳಿತಿರುವ ನಿರ್ಧಾರವನ್ನು ಮಾಡಿದ್ದಿರಿ. ಈ ಎಲ್ಲ ನಿರ್ಧಾರಗಳ ಒಟ್ಟು ಮೊತ್ತವು ನೀವು ಇಲ್ಲಿ ಕುಳಿತಿರುವುದಕ್ಕೆ ನೆರವಾಗಿವೆ. ಈ ಎಲ್ಲಾ ಹಿಂದಿನ ನಿರ್ಧಾರಗಳಿಂದ, ನಿಮ್ಮ ವರ್ತಮಾನವಾಗಿದೆ. ಈಗ, ಇದೇ ತರ್ಕದ ಅನ್ವಯದಿಂದ, ಈಗಿನ ತೀರ್ಮಾನಗಳ ಮೊತ್ತವೇ ನಿಮ್ಮ ಭವಿಷ್ಯವಾಗುತ್ತದೆ.

ಕರ್ಮದ ಸಿದ್ಧಾಂತವೆಂಬುದೆಲ್ಲವೂ ಇದೇ : ನಿಮ್ಮ ಗತಕಾಲದ ಒಟ್ಟುಮೊತ್ತವೇ ವರ್ತಮಾನ, ಹಾಗೂ ವರ್ತಮಾನದ ಒಟ್ಟುಮೊತ್ತವೇ ಭವಿಷ್ಯತ್ತು.