ನೋವು ಎಂಬುದು ಏನು ?
This text was machine-transcribed from the printed book and may contain errors. Select the words and choose “Report a mistake”.
ಈ ವಿಷಯವನ್ನು ನಾವು ಆಳವಾಗಿ ಪರೀಕ್ಷಿಸೋಣ, ನೋವು ಶಾರೀರಿಕವಾಗಿರಬಹುದು, ಮಾನಸಿಕವಾಗಿರಬಹುದು ಅಥವಾ ಭಾವನಾತ್ಮಕವಾಗಿರಬಹುದು.
ಶಾರೀರಿಕ ನೋವಿನ ಬಗ್ಗೆ ನಾವು ಚಿಂತಿಸಬೇಕಾಗೇ ಇಲ್ಲ, ಅದು ಒಂದು ವಿಧವಾಗಿ ಶರೀರದ ಮೂಲಭೂತ ಅವಶ್ಯಕತೆ. ಸ್ವಲ್ಪ ಯೋಚನೆ ಮಾಡಿ ನೋಡಿ - ನಮ್ಮ ದೇಹಕ್ಕೆ ನೋವೆಂಬುದು ಎಂದಿಗೂ ಉಂಟಾಗದಿದ್ದರೆ ನಾವು ನಮ್ಮ ಕೂದಲನ್ನು ಹೇಗೆ ಬೇರೆ ಬೇರೆ ರೀತಿಯಲ್ಲಿ ಹೇರ್ ಸ್ಟೈಲ್ ಮಾಡಿಕೊಳ್ಳುತ್ತೀವೋ ಅದೇ ತರಹ ನಾವು ನಮ್ಮ ಮುಖ ಕೈಕಾಲುಗಳನ್ನೂ ಬೇರೆ ಬೇರೆ ವಿಧವಾಗಿ ಸ್ಟೈಲ್ ಮಾಡಿಕೊಳ್ಳುತ್ತಿದ್ದೆವು. ಈಗಿನ ಕಾಲದ ಯುವಕರು ಫ್ಯಾಷನ್ಗಾಗಿ ಏನು ಮಾಡುತ್ತಾರೋ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ! ಇದು ಒಂದು ತಮಾಷೆಯ ಮಾತು - ಆದರೆ ನಿಜ ಏನೆಂದರೆ, ನೋವು ಶಾರೀರಿಕ ವಿವೇಕದ ಒಂದು ಪ್ರತೀಕ. ಈ ಶಾರೀರಿಕ ನೋವೇ ನಮ್ಮನ್ನು ಸಂಪೂರ್ಣ ಮಾನವರನ್ನಾಗಿ ಉಂಟು ಮಾಡುತ್ತದೆ.
ನಾವು ನಂಬಿಕೊಂಡಿರುವುದರ ಹಾಗೆ ನಮ್ಮಲ್ಲಿ ಹೆಚ್ಚಿನವರು ತಮ್ಮ ಸಂಪೂರ್ಣ ದೇಹದಲ್ಲಿ ವಾಸ ಮಾಡುತ್ತಾ ಇಲ್ಲ. ನಾವು ಕೇವಲ ಶರೀರದ ಮೇಲಿನ ಭಾಗಗಳಲ್ಲಿ ವಾಸ ಮಾಡುತ್ತಿದ್ದೇವೆ ಮತ್ತು ಕೆಳಗಿನ ಭಾಗಗಳನ್ನು ಉಪೇಕ್ಷಿಸುತ್ತಿದ್ದೇವೆ. ನಾನು ಹೇಳುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒಂದು ಕೆಲಸ ಮಾಡಿ : ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು, ನಿಮ್ಮನ್ನು ನೀವೇ ಕಲ್ಪನೆ ಮಾಡಿಕೊಳ್ಳಿ. ನಿಮ್ಮ ಹೆಸರಿಟ್ಟು ಕರೆಯಿರಿ. ಶರೀರದ ಯಾವ ಭಾಗ ನಿಮ್ಮ ಮನಸ್ಸಿಗೆ ಜ್ಞಾಪಕ ಬರುವುದು ? ಖಂಡಿತ ನಿಮ್ಮ ಮುಖ, ಕೈಗಳು ಮತ್ತು ಎಲ್ಲಾ ಮೇಲಿನ ಭಾಗಗಳು ನಿಮ್ಮ ಮನಸ್ಸಿಗೆ ಬಂದಿರುವುದು - ನಿಮ್ಮ ಶರೀರದ ಕೆಳಗಿನ ಭಾಗಗಳು ನಿಮಗೆ ಖಂಡಿತ ಜ್ಞಾಪಕ ಬಂದಿರುವುದಿಲ್ಲ. ಈ ಪ್ರಯೋಗವು, ನಾವು ಪ್ರತಿ ಒಂದು ಅಂಗದಲ್ಲಿ ಪ್ರತಿ ಒಂದು ಜೀವಕಣದಲ್ಲಿ ಸಂಪೂರ್ಣವಾಗಿ ಜೀವಂತರಾಗಿಲ್ಲ ಎಂದು ತೋರಿಸುತ್ತದೆ - ನಮ್ಮ ಮನಸ್ಸಿನಲ್ಲಿ ಕೂಡ ನಾವು ಈ ವ್ಯತ್ಯಾಸವನ್ನು ಮಾಡುತ್ತಾ ಇದ್ದೇವೆ. ಮೇಲಿನ ಭಾಗಗಳು ಒಡೆಯರಾಗಿರುತ್ತವೆ ಮತ್ತು ಕೆಳಗಿನ ಭಾಗಗಳು ಸೇವಕರಾಗಿರುತ್ತವೆ. ಈ ವ್ಯತ್ಯಾಸವನ್ನು ನೀವು ಗೊತ್ತಿಲ್ಲದೆ ಮಾಡಿದರೂ ನಿಮ್ಮ ಚೈತನ್ಯವು (ಎನರ್ಜಿಯು), ಕೇವಲ ನೀವು ಏಕಾಗ್ರ ಗುರಿ ಇಟ್ಟಿದ್ದ ಶರೀರದ ಭಾಗಗಳಿಗೆ ಮಾತ್ರ ತಲುಪುವುದು. ನಿಮ್ಮ ಕೆನ್ನೆಯನ್ನು ಸ್ವಲ್ಪ ಸ್ಪರ್ಶಿಸಿ ನೋಡಿ - ಬಹಳ ಜೀವಂತವಾಗಿ ಇದೆ, ಸೂಕ್ಷ್ಮವಾಗಿ ಇದೆ ಅಲ್ಲವೆ? ಈಗ ನಿಮ್ಮ ಪಾದವನ್ನು ಮುಟ್ಟಿ ನೋಡಿ - ನಿಮ್ಮ ಪಾದವು ನಿಮ್ಮ ಕೆನ್ನೆಯಷ್ಟು ಸೂಕ್ಷ್ಮವಾಗಿ ಇಲ್ಲ ಅಂತ ಗೊತ್ತಾಗಿರಬೇಕು. ಅದು ಏಕೆ? ನಿಮಗೆ ನಂಬುವುದಕ್ಕೆ ಸ್ವಲ್ಪ ಕಷ್ಟವಾಗಬಹುದು - ಆದರೆ ಅದು ಏಕೆಂದರೆ ನೀವು ಆ ಭಾಗಕ್ಕೆ ಸಾಕಷ್ಟು ಗಮನ ಕೊಡುವುದಿಲ್ಲ.