ಆಧ್ಯಾತ್ಮ ಏಕೆ?
This text was machine-transcribed from the printed book and may contain errors. Select the words and choose “Report a mistake”.
‘ಆಧ್ಯಾತ್ಮ’ ಎಂದೊಡನೆ ಯಾವುದೋ ಅಲೌಕಿಕವಾದ ತತ್ವಜ್ಞಾನ ವೆಂದೂ, ಜಗತ್ತಿನ ಆಚೆಗಿರುವಂತಹುದೆಂದೂ ಕೆಲವರಿಗೆ ಮಾತ್ರ ಸೀಮಿತವಾದದ್ದೆಂದೂ ಭಾವಿಸುತ್ತೇವೆ. ಆಧುನಿಕ ಸಮಾಜದಲ್ಲಿ, ಅದರಲ್ಲಿಯೂ ಪಾಶ್ಚಿಮಾತ್ಯರಲ್ಲಿ ಆಧ್ಯಾತ್ಮಿಕತೆಯು ಭಾರತದ ಋಷಿ ಮುನಿಗಳಿಗೋ, ಪುರಾತನ ಕ್ರೈಸ್ತ ಸಂತರಿಗೋ, ಆಧುನಿಕ ಯುಗದ ಪ್ರವೀಣರಿಗೋ ಸೇರಿರುವಂತಹದೆಂಬ ಭಾವನೆ.
‘ಆಧ್ಯಾತ್ಮ’ ಎಂದೊಡನೆ ಧರ್ಮಗಳು ಹೇಳುವ ದೇವರನ್ನು ಅಥವಾ ಆತ್ಮಜ್ಞಾನವನ್ನು ಹೊಂದಲು ತೀವ್ರ ಸಾಧನೆ ಮಾಡಿದವರನ್ನೂ ಪುರಾತನಯೋಗಿಗಳನ್ನೂ ಮತ್ತು ಸಂತರ ಕಥೆಗಳನ್ನೂ ನೆನೆಯುತ್ತೇವೆ. ದಯಾಮಯಿಯೂ ಜ್ಞಾನ ಭಂಡಾರವೂ ಆದ ಬುದ್ಧನನ್ನೋ, ಕಾಳಿಮಾತೆಯ ಪರಮಭಕ್ತರಾದ ರಾಮಕೃಷ್ಣರನ್ನೋ, ದಣಿವಿಲ್ಲದೆ ನಿಸ್ವಾರ್ಥ ಸೇವೆ ಮಾಡಿದ ತೆರೆಸಾ ಮಾತೆಯನ್ನೋ ಸ್ಮರಿಸುತ್ತೇವೆ.
ಆದರೆ, ಲೌಕಿಕ ಜೀವನ ನಡೆಸುವ ಸಾಮಾನ್ಯ ಜನರಿಗೆ ಆಧ್ಯಾತ್ಮವು ಕೈಗೆಟುಕಬಹುದೆಂದು ನಾವು ಯೋಚಿಸುವುದೇ ಇಲ್ಲ.
ಹಲವರು ನನ್ನನ್ನು ಕೇಳುತ್ತಾರೆ, "ಇಂದಿನ ಕಾಲದಲ್ಲಿ ಆಧ್ಯಾತ್ಮವು ಪ್ರಸ್ತುತವೆ? ಆಧುನಿಕ ಯುಗದಲ್ಲಿ ಅದು ಬಹಳ ಅವ್ಯವಹಾರಿಕವಲ್ಲವೆ? ಇಷ್ಟಕ್ಕೂ ಆಧ್ಯಾತ್ಮವೆಂದರೇನು? ನಾನು ಕೇವಲ ಸಾಮಾನ್ಯ ಮನುಷ್ಯ. ನನ್ನಲ್ಲಿ ಇದನ್ನೆಲ್ಲ ಅಭ್ಯಾಸ ಮಾಡುವ ಶಕ್ತಿಯಿಲ್ಲ" ಎಂದು.
ನಾನವರಿಗೆ ಯಾವಾಗಲೂ ಹೇಳುವುದು, "ಆಧ್ಯಾತ್ಮವು ಪ್ರಸ್ತುತ ಮಾತ್ರವೇ ಅಲ್ಲ; ಅವಶ್ಯಕವೂ ಕೂಡ! ಅದು ಬಹಳ ಯಾವುದೋ ಮೂಲೆಯಲ್ಲಿರುವ ಮಠಗಳಲ್ಲಿ ಅಭ್ಯಾಸ ಮಾಡುವ ಗೂಢ ತತ್ತ್ವಜ್ಞಾನವಲ್ಲ. ಆಧ್ಯಾತ್ಮಿಕತೆಯು ಒಂದು ಜೀವನಶೈಲಿ. ಅದು ಜೀವನವನ್ನೂ, ನಿಮ್ಮನ್ನೂ, ಇತರರನ್ನೂ ಆದರಿಸುವ ಆನಂದದ ಸರಳ ಮನೋವೃತ್ತಿ. ದೈನಂದಿನ ಕಾರ್ಯಗಳಲ್ಲಿ ತೊಡಗಿರುವಾಗ ನಿಮ್ಮನ್ನು ಚುರುಕಾಗಿಸಿ, ಅರಿವು ಮೂಡಿಸುವ ಸ್ವಭಾವಸಿದ್ಧ ಪರಿಜ್ಞಾನ." ಎಂದು.
ಆಧ್ಯಾತ್ಮವು ಅನುಭವಾತ್ಮಕ ತಂತ್ರಗಳನ್ನು ಸೃಷ್ಟಿಸಿರುವ ವಿಜ್ಞಾನ. ಅದು ನಿಮ್ಮ ಎಲ್ಲಾ ಸಹಜವಾದ ಬುದ್ಧಿವಂತಿಕೆ, ಶಕ್ತಿ ಸಾಮರ್ಥ್ಯಗಳೂ, ಸಾಧ್ಯತೆಗಳೂ ಆತ್ಮದ ಅನುಭವಗಳೂ ಉಳಿಸಿಕೊಂಡಿರುವ ಸಹಜವಾದ ನಿಮ್ಮಡೆಗೆ ನಿಮ್ಮನ್ನು ಕೊಂಡೊಯ್ಯುವ ಶಕ್ತಿಯನ್ನು ಕೊಡುತ್ತದೆ.
ನಮ್ಮಲ್ಲಿ ಅಸಾಧ್ಯವಾದ ಚೈತನ್ಯವಿದೆ. ಆದರೆ ಅದನ್ನು ವ್ಯಕ್ತಪಡಿಸಲೂ, ನಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲೂ, ಅಸಮರ್ಥ ರಾಗಿದ್ದೇವೆ.
ಆಧ್ಯಾತ್ಮವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಈಗಿರುವುದಕ್ಕಿಂತ ಉತ್ತಮರಾಗುವಿರೆಂದು ನಾನು ಭರವಸೆ ನೀಡುತ್ತೇನೆ. ವೃತ್ತಿ, ಬಾಂಧವ್ಯಗಳಲ್ಲಿ ಪ್ರಗತಿಗಳಿಸುವುದಲ್ಲದೆ ನಿಮ್ಮ ನಿಜ ಸ್ವರೂಪವನ್ನರಿತು ಸಹಜ ಆನಂದವನ್ನು ಹೊಂದಬಹುದು.
ಜೀವನದ ಈ ಎಲ್ಲಾ ಮುಖಗಳಿಗೂ ನಿಕಟ ಸಂಬಂಧವಿದೆ. ನೀವು ಆತ್ಮ ಸಹಕಾರ ನೀಡಿದಷ್ಟೂ, ನಿಮ್ಮಲ್ಲಿ ನೀವು ಏಕೀಕೃತರಾದಷ್ಟೂ, ನಿಮ್ಮ ಆತ್ಮಬಲ, ಕ್ರಿಯಾಶೀಲತೆ ಹೆಚ್ಚುತ್ತದೆ ಹಾಗೂ ನೀವು ಪ್ರೇಮಮಯರಾಗುತ್ತೀರಿ.
ಸದ್ಯದಲ್ಲಿ ನಾವು ನಮ್ಮ ನಿಜಸಾಮರ್ಥ್ಯದ ಹೊರವಲಯದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಹೊರವಲಯದ ದೈನಂದಿನ ಚಟುವಟಿಕೆಗಳಲ್ಲೇ ತಲ್ಲೀನರಾಗಿದ್ದೇವೆ. ನಮ್ಮ ಮನಸ್ಸು ಪ್ರತಿನಿತ್ಯವೂ ಒಂದೇ ರೀತಿ ಯೋಚಿಸುತ್ತದೆ. ಏಕೆಂದರೆ ನಮ್ಮ ಅಭ್ಯಾಸಗಳು ಸ್ಥಿರವೂ ಪುನರಾವೃತ್ತಿಗೊಳ್ಳುವುವೂ ಆಗಿವೆಯಾದ್ದರಿಂದ ನಮ್ಮ ಮನೋ ರೂಢಿಯನ್ನು ಬದಲಾಯಿಸಲು ಆಂತರಿಕ ಸ್ಥಳಾವಕಾಶವೇ ಇಲ್ಲವಾಗಿದೆ. ನಮ್ಮ ಈಗಿನ ಜೀವನಶೈಲಿಯಲ್ಲಿ ನಾವು ಸಿಕ್ಕಿಕೊಂಡಿದ್ದೇವೆ. ನಮಗೆ ಉಸಿರು ಕಟ್ಟಿದಂತಾಗುತ್ತದೆ. ನಮಗೆ ಸೆರೆ ಸಿಕ್ಕಂತೆ ಭಾಸವಾಗುತ್ತದೆ.
ಪ್ರತಿದಿನ ಬೆಳಗ್ಗೆ ಎದ್ದೊಡನೆ ನಮ್ಮನ್ನು ಅದೇ ಭಾವನೆಗಳು ಆವರಿಸುತ್ತವೆ. ಎದ್ದು ಕೆಲಸಕ್ಕೆ ತೊಡಗಲು ಹಿಂದೇಟು. ನಂತರ ಕಾಫಿಯನ್ನು ಕುಡಿಯುತ್ತಾ ವಾರ್ತೆಗಳನ್ನು ಕೇಳುವಾಗ ಅದೇ ಭಾವನೆಗಳು ಮತ್ತು ಅದೇ ಜಡತ್ವವು ನಮ್ಮಲ್ಲಿ ಮತ್ತೆ ಮತ್ತೆ ಮೂಡುತ್ತವೆ. ಅಭ್ಯಾಸಬಲದಿಂದ ಯಾವುದೋ ಗ್ರಹಿಸಲಾಗದ
ಯಾಂತ್ರಿಕತೆ ನಮ್ಮನ್ನು ಅದೇ ದಾಟಿಯಲ್ಲಿ ಮತ್ತೆ ನಡೆಸುತ್ತದೆ. ಒಂದು ಸೂಕ್ಷ್ಮವಾದ ಅಸಂತುಷ್ಟಿ ಹಾಗೂ ಚಡಪಡಿಕೆ-ಎಲ್ಲವೂ ಹಳೆಯದೇ. ನಮ್ಮ ಸಂಗಾತಿಯನ್ನು ಮಾತಾಡಿಸುವ ಕಂಠಸ್ವರವೂ ಒಂದೇ ರೀತಿ! ನಿಜ! ಮತ್ತೆ ಆಫೀಸಿಗೆ ಹೋಗುವ ದಾರಿಯಲ್ಲಿ ಕಂಡು ಬರುವ ಜಾಹೀರಾತುಗಳಿಂದ ನಮ್ಮದಲ್ಲದ ಎಷ್ಟೋ ಭಾವನೆಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಏನಾದರೂ, ಅನಿವಾರ್ಯವೆಂದು ಒಪ್ಪಿಕೊಳ್ಳುವ ಮನೋಭಾವದಿಂದ ಸಮಾಜವು ನಮ್ಮನ್ನು ನಿರೀಕ್ಷಿಸುವ ರೀತಿಯಲ್ಲಿ ಜೀವನವನ್ನು ಸಾಗಿಸುತ್ತೇವೆ.
ಆದರೆ ಸದಾ ಯಾವುದೋ ಅಸಂತುಷ್ಟಿಯ ಭಾವನೆ. ಹೇಗೋ ನಮ್ಮ ಒಂದು ಭಾಗವು 'ನನ್ನಗಿನ್ನೇನೋ ಉತ್ತಮವಾದದ್ದು ಕಾದಿದೆ. ಅದೇನೆಂದು ತಿಳಿದಿಲ್ಲ. ಆದರೆ ಉತ್ತಮವಾದದ್ದೊಂದಿದೆ ಎಂದು ಗೊತ್ತಿದೆ'! ಎಂದು ಹೇಳುತ್ತಿರುತ್ತದೆ.
ನೋಡಿರಿ, ನಮ್ಮೊಳಗಿರುವ ಒಂದು ಮೌನಪ್ರಜ್ಞೆಗೆ ನಮಗೆ ಈಗ ಇರುವುದಕ್ಕಿಂತ ಉತ್ತಮವಾದ, ಹೆಚ್ಚಿನದೇನೋ ಇದೆ ಎಂಬ ಅರಿವಿದೆ. ಆ ಮೌನಪ್ರಜ್ಞೆಯ ಗುಣಮಟ್ಟವನ್ನು ನಮ್ಮ ಜೀವನದಲ್ಲಿ ಸಾಧಿಸಿಲ್ಲ ಇದು ಮೂಡಬೇಕಾಗಿದೆ.
ನಮ್ಮ ಈ ಭಾಗವನ್ನು 'ಆತ್ಮ' ಎನ್ನುವುದು.
ನಮ್ಮ 'ಆತ್ಮ' ದೊಂದಿಗೆ ಸಂಬಂಧ ಬೆಳೆಸಿದಾಗ ನಾವು ಊಹಿಸಲಾಗದ ಆನಂದ, ಶಕ್ತಿ, ಸಾಮರ್ಥ್ಯ, ಸೃಜನಶೀಲತೆ ಮತ್ತು ಸಕಾರಾತ್ಮಕ ಪ್ರವೃತ್ತಿ ನಮ್ಮಲ್ಲಿ ಅರಳುತ್ತದೆ. ಈ ಪ್ರಚಂಡ ಸಾಮರ್ಥ್ಯವನ್ನು ಬಳಸಿಕೊಂಡಾಗ ನಮ್ಮನ್ನು ನಾವೇ ಸಂಪೂರ್ಣವಾಗಿ ನವೀಕರಿಸಿಕೊಳ್ಳಲು ಸಮರ್ಥರಾಗುತ್ತೇವೆ.
ಆದರೆ ನಾವು ಕ್ರಮಬದ್ಧವಾಗಿ ಮಾಡುವುದಾದರೂ ಏನು? ನಮ್ಮ ಅಸಂತೃಪ್ತಿಯನ್ನು ಗಮನಿಸಲು ನಿರಾಕರಿಸುತ್ತೇವೆ. ನಮ್ಮನ್ನು ನಾವೇ ಮುಚ್ಚಿಟ್ಟುಕೊಂಡು ಆಂತರಿಕ ಜಗತ್ತಿನಲ್ಲಿ ಒಡಕು ಮೂಡಿಸುತ್ತೇವೆ. ಒಂದು ಭಾಗವು ಅಸಂತುಷ್ಟಿಯಿಂದ ಕೊರಗುತ್ತಲೇ ಇರುತ್ತದೆ. ಇನ್ನೊಂದು ಭಾಗವು ಏನೂ ಆಗಿಲ್ಲವೆಂಬಂತಿರುತ್ತದೆ. ನಾವಾಗ ಖಿನ್ನರಾಗುತ್ತೇವೆ- ಅಥವಾ ಖಿನ್ನತೆಯನ್ನೇ ಮುಂದುವರೆಸುತ್ತೇವೆ. ಏಕೆಂದರೆ ನಾವು ಸಮಗ್ರತೆಯನ್ನು ಹೊಂದಿರುವುದಿಲ್ಲ. ಇದು ನಮ್ಮೆಲ್ಲರಿಗೂ ಆಗುವ ಅನುಭವ.
ಇಷ್ಟು ಮಾತ್ರ ಸ್ಪಷ್ಟ-ನಿಮ್ಮ ಈ ಅನಿಸಿಕೆಗಳನ್ನು, ಈ ಜೀವನಕ್ರಮವನ್ನು ಪ್ರಶ್ನಿಸಲು ನೀವು ಮೊದಲು ಮಾಡಿದ್ಧರೆ, ನಿಮ್ಮಲ್ಲಿ ಆಧ್ಯಾತ್ಮವು ಅಂಕುರಿಸಿದಂತೆಯೇ! ನೀವೀಗ ನಿಮ್ಮ ಅವ್ಯಕ್ತ ಸಾಮರ್ಥ್ಯವನ್ನು ಹೊರಗೆಡವಲು ಸಿದ್ಧರಾಗಿದೀರಿ. ನೀವು ಸರಿಯಾದ ಹಾದಿಗೆ ಬರಲು ಅರ್ಹರಾಗಿದ್ದೀರಿ. ನಿಮ್ಮ ಜೀವನದ ಉದ್ದೇಶವೇ ಅದು.